700ಕ್ಕೂ ಹೆಚ್ಚು ಎಂಡೋಸಲ್ಫಾನ್ ಬ್ಯಾರಲ್‌ಗಳ ವಿಲೇವಾರಿ ಹೇಗೆ ಮಾಡಲಾಯ್ತು?- ಸ್ಕೋಡ್‌ವೇಸ್
ಕಾರವಾರ, ಜನವರಿ 13 : ಉತ್ತರ ಕನ್ನಡ ಜಿಲ್ಲೆಯಲ್ಲಿ ಎಂಡೋಸಲ್ಫಾನ್ ಪೀಡಿತರ ಸಂಖ್ಯೆ ಸಾಕಷ್ಟಿದ್ದರೂ ಸರಕಾರದ ಮಟ್ಟದಿಂದ ನಿರೀಕ್ಷಿತ ಸ್ಪಂದನೆ, ಸೌಲಭ್ಯ ದೊರಕುತ್ತಿಲ್ಲ. ಆದರೆ ಅಂದು 778 ಬ್ಯಾರೆಲ್‌ಗಳ ಪೈಕಿ ಸಂಬಂಧಪಟ್ಟ ಅಧಿಕಾರಿಗಳು ಕೇವಲ 20 ಬ್ಯಾರೆಲ್‌ಗಳನ್ನು ಮಾತ್ರ ಸಿಂಪಡನೆ ಮಾಡಿರುವುದಾಗಿ ಹಸಿರು ಪೀಠಕ್ಕೆ ವರದಿ ಸಲ್ಲಿಸಿದ್ದಾರೆ. ಆದರೆ ಬಳಕೆಯಾಗದೆ ಉಳಿದ ಬ್ಯಾರಲ್‌ಗಳು ಎಲ್ಲಿ ಹೇಗೆ ವಿಲೇವಾರಿ ಮಾಡಲಾಗಿದೆ ಎಂಬುದನ್ನು ತನಿಖೆ ಮಾಡುವಂತೆ ಇದೀಗ ಸ್ಕೋಡ್‌ವೇಸ್ ಸಂಸ್ಥೆ ಆಗ್ರಹಿಸಿದೆ.
ಎಂಡೋಸಲ್ಫಾನ್ ವಿಷಕಾರಿ ಕ್ರಿಮಿನಾಶಕ ಸಿಂಪಡಣೆಯಿಂದ ದಕ್ಷಿಣ ಕನ್ನಡದಲ್ಲಿ 3,607 ಜನರು, ಉಡುಪಿಯಲ್ಲಿ 1,514 ಜನರು, ಉತ್ತರಕನ್ನಡ ಜಿಲ್ಲೆಯಲ್ಲಿ 1,793 ಜನರು ಸೇರಿ ಒಟ್ಟು 6,914 ಜನರು ಬಹುವಿಧದ ಅಂಗವೈಕಲ್ಯಕ್ಕೆ ತುತ್ತಾಗಿದ್ದಾರೆ ಎಂದು ದಾಖಲೆಗಳು ಹೇಳುತ್ತವೆ. ಆದರೆ, ಗೇರು ನೆಡುತೋಪಿನ 5 ಕಿ.ಮೀ. ಸುತ್ತಳತೆಯಲ್ಲಿ ನಡೆಸಲಾದ ಸಮೀಕ್ಷೆಯೇ ಸರಿಯಾಗಿ ಆಗದ ಕಾರಣ ಇನ್ನೂ ಸಾವಿರಾರು ಜನ ಎಂಡೋ ಬಾಧಿತರ ಪಟ್ಟಿಯಲ್ಲಿ ಸೇರಿಲ್ಲ.

ಈ ಕಾರಣಕ್ಕಾಗಿ ಪಟ್ಟಿಯಲ್ಲಿ ಸೇರದ ಸಾವಿರಾರು ಎಂಡೋಸಲ್ಫಾನ್ ಬಾಧಿತರು ಸೌಲಭ್ಯದಿಂದ ವಂಚಿತರಾಗಿದ್ದಾರೆ. ಅಲ್ಲದೇ, ಈಗಾಗಲೇ ಸರಿಯಾದ ಸಮಯದಲ್ಲಿ ಚಿಕಿತ್ಸೆ ಹಾಗೂ ಸೌಲಭ್ಯ ಸಿಗದೇ ನೂರಾರು ಜನ ಸಾವನ್ನಪ್ಪಿದ್ದಾರೆ. ಈ ಕಾರಣದಿಂದ ಉತ್ತ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ನಡೆಸಿದಂತೆ ಜಿಲ್ಲೆ ಐದು ತಾಲೂಕುಗಳಲ್ಲಿಯೂ ಎಂಡೋಸಲ್ಫಾನ್ ಬಾಧಿತರ ಮರು ಸಮೀಕ್ಷೆಗೆ ಕ್ರಮ ಕೈಗೊಳ್ಳಬೇಕು ಎಂದು ಸ್ಕೋಡ್‌ವೇಸ್ ಸಂಸ್ಥೆ ಒತ್ತಾಯಿಸಿದೆ.
ತಾಲೂಕುವಾರು ಎಂಡೋಸಲ್ಫಾನ್ ಬಾಧಿತರ ಆರ್ಥಿಕ, ಸಾಮಾಜಿಕ ಸಬಲೀಕರಣಕ್ಕಾಗಿ ಇಲಾಖಾವಾರು ಗುರಿಯನ್ನು ನಿಗದಿಪಡಿಸಬೇಕು. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಎಂಡೋಸಲ್ಫಾನ್ ಬಾಧಿತರ ಚಿಕಿತ್ಸೆಗಾಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳೊಂದಿಗೆ ಒಪ್ಪಂದ ಮಾಡಿಕೊಂಡಂತೆ, ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಎಂಡೋಸಲ್ಫಾನ್ ಬಾಧಿತರಿಗಾಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಸ್ಥಾಪಿಸಬೇಕು ಅಥವಾ ಹಿಂದೆಯಿದ್ದ ಸುಸಜ್ಜಿತ ಫಿಸಿಯೋಥೆರಪಿ ಸಂಚಾರಿ ಆಸ್ಪತ್ರೆಯನ್ನು ಪುನರ್ ಜಾರಿಗೆ ತರಬೇಕು ಎಂದು ಸ್ಕೋಡ್‌ವೇಸ್ ಸಂಸ್ಥೆ ಯೋಜನಾ ವಿಭಾಗದ ಮುಖ್ಯಸ್ಥೆ ವರ್ಷ ಹೆಗಡೆ ಆಗ್ರಹಿಸಿದ್ದಾರೆ.
ಇನ್ನು ಕರ್ನಾಟಕ ಗೇರು ಅಭಿವೃದ್ಧಿ ನಿಗಮವು ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಏಳು ತಾಲೂಕುಗಳ ಸುಮಾರು 11,794.23 ಹೆಕ್ಟೇರ್ ಗೇರು ನೆಡುತೋಪಿನಲ್ಲಿ 1986 ರಿಂದ 2011 ರ ಅವಧಿಯಲ್ಲಿ ಗೇರುಬೀಜದ ಇಳುವರಿಗೆ ಅಡ್ಡಿಯಾಗುತ್ತಿದ್ದ ಟೀ ಸೊಳ್ಳೆಗಳನ್ನು ನಾಶಪಡಿಸಿಲು 57,000 ಲೀಟರ್ ಎಂಡೋಸಲ್ಫಾನ್ ಹಾಗೂ ಇತರ ಕ್ರಿಮಿನಾಶಕಗಳನ್ನು ಸಿಂಪಡಿಸಿದೆ.
ಮಾಲಿನ್ಯ ನಿಯಂತ್ರಣ ಮಂಡಳಿಯು ಹಸಿರು ನ್ಯಾಯ ಪೀಠಕ್ಕೆ ನೀಡಿದ ವರದಿಯಲ್ಲಿ 778 ಬ್ಯಾರೆಲ್‌ಗಳ ಮೂಲಕ ಕ್ರಿಮಿನಾಶಕ ಸಿಂಪಡಿಸಲಾಗಿತ್ತು. ಆದರೆ, ಸಂಬಂಧಪಟ್ಟ ಅಧಿಕಾರಿಗಳು ಕೇವಲ 20 ಬ್ಯಾರೆಲ್‌ಗಳನ್ನು ಮಾತ್ರ ತೋರಿಸಿದ್ದು, ಉಳಿದ ಬ್ಯಾರೆಲ್‌ಗಳು ಏನಾದವು ಎಂಬ ಬಗ್ಗೆ ಮಾಹಿತಿ ಇಲ್ಲ. ಎಂಡೋಸಲ್ಫಾನ್ ಕ್ರಿಮಿನಾಶಕದ ಬಗ್ಗೆ ಆಕ್ಷೇಪಗಳು ಬರುತ್ತಿದ್ದಂತೆ ಬಾಕಿಯಿದ್ದ ಕ್ರಿಮಿನಾಶಕ ಮತ್ತು ಅದರ ದಾಸ್ತಾನು ಪರಿಕರಗಳನ್ನು ಭೂಮಿಯಲ್ಲಿ ಹೂಳಲಾಗಿದೆ ಎಂದು ಕೆಲವು ಸಿಬ್ಬಂದಿಗಳ ಮಾಹಿತಿ.
ಈ ಕಾರಣದಿಂದ ಉತ್ತರಕನ್ನಡ ಜಿಲ್ಲೆಯಲ್ಲಿ ಗೇರು ಅಭಿವೃದ್ಧಿ ನಿಗಮವು ಬಳಕೆಯಾಗದೇ ಇರುವ ಎಂಡೋಸಲ್ಫಾನ್ ಹಾಗೂ ಇತರ ಕ್ರಿಮಿನಾಶಕಗಳನ್ನು ಯಾವ ರೀತಿ ವಿಲೇವಾರಿ ಮಾಡಿದ್ದಾರೆ ಹಾಗೂ ಎಲ್ಲೆಲ್ಲಿ ಹೂತಿದ್ದಾರೆ ಎಂಬ ಬಗ್ಗೆ ತನಿಖೆಗೆ ಆದೇಶಿಸಬೇಕು ಎಂದು ಸ್ಕೋಡ್‌ವೇಸ್ ಸಂಸ್ಥೆ ಒತ್ತಾಯಿಸಿದೆ.
ಅಲ್ಲದೇ, ಎಂಡೋಸಲ್ಫಾನ್ ಬಾಧಿತರ ಪುನರ್‌ವಸತಿ ವ್ಯವಸ್ಥೆ, ಕನಿಷ್ಠ 3 ತಿಂಗಳಿಗೊಮ್ಮೆಯಾದರೂ ಜಿಲ್ಲಾ ಮಟ್ಟದ ಎಂಡೋಸಲ್ಫಾನ್ ಬಾಧಿತರ ಕುಂದುಕೊರತೆಗಳ ಸಮಿತಿಯಿಂದ ಪ್ರಗತಿ ಪರಿಶೀಲನೆ, ಎಂಡೋ ಬಾಧಿತರ ಮನೆಯ ಸದಸ್ಯರಿಗೆ ಕೌಶಲ್ಯ ಅಭಿವೃದ್ಧಿ ಮುಂತಾದ ಹಲವು ಬೇಡಿಕೆಗಳನ್ನು ಈಡೇರಿಸಬೇಕೆಂದು ಸ್ಕೋಡ್‌ವೇಸ್ ಸಂಸ್ಥೆ ಕಾರ್ಯನಿರ್ವಾಹಕ ನಿರ್ದೇಶಕ ವೆಂಕಟೇಶ ನಾಯ್ಕ ಹೇಳಿದ್ದಾರೆ.
ಒಟ್ಟಿನಲ್ಲಿ ಎಂಡೋಸಲ್ಫಾನ್ ಪೀಡಿತರ ವಿಚಾರದಲ್ಲಿ ಸರ್ಕಾರ ಹೆಚ್ಚಿನ ಗಮನ ಹರಿಸಿ, ಅವರ ಬೇಡಿಕೆಗಳನ್ನು ಪೂರೈಸುವುದರ ಜೊತೆ ಎಂಡೋ ಪೀಡಿತರ ಕುಟುಂಬದ ಕಲ್ಯಾಣಕ್ಕೆ ಹೆಚ್ಚಿನ ಸೌಲ್ಯಭ್ಯ ಒದಗಿಸಬೇಕಿದೆ.












Click it and Unblock the Notifications