Heavy Rain: ಉತ್ತರ ಕನ್ನಡ ಜಿಲ್ಲೆಯಲ್ಲಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ನದಿಗಳು, ಇಂದು ಕೂಡ ಶಾಲಾ- ಕಾಲೇಜುಗಳಿಗೆ ರಜೆ
ಕಾರವಾರ, ಜುಲೈ, 25: ಉತ್ತರಕನ್ನಡ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ನಿರಂತರವಾಗಿ ಮಳೆರಾಯ ಆರ್ಭಟಿಸುತ್ತಲೇ ಇದ್ದಾನೆ. ನದಿಗಳು ಅಪಾಯ ಮಟ್ಟ ಮೀರಿ ಹರಿದು ಪ್ರವಾಹ ಸೃಷ್ಟಿಯಾಗಿದೆ. ಅದರಲ್ಲಿಯೂ ಅಘನಾಶಿನಿ ನದಿಯ ನೆರೆಗೆ ಹಲವು ಗ್ರಾಮಗಳು ಜಲಾವೃತವಾಗಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ. ಮುಂಜಾಗೃತಾ ಕ್ರಮವಾಗಿ ಮಂಗಳವಾರವೂ ಕೂಡ ಜಿಲ್ಲಾದ್ಯಂತ ಶಾಲಾ-ಕಾಲೇಜುಗಳಿಗೆ ರಜೆ ವಿಸ್ತರಣೆ ಮಾಡಲಾಗಿದೆ.
ಜಿಲ್ಲೆಯ ಅಘನಾಶಿನಿ, ಗಂಗಾವಳಿ, ಶರಾವತಿ, ವರದಾ ಕಾಳಿ ನದಿ ತುಂಬಿ ಹರಿಯಲಾರಂಭಿಸಿವೆ. ಘಟ್ಟದ ಮೇಲ್ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿರುವ ಕಾರಣ, ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಅಲ್ಲದೆ ಗಂಗಾವಳಿ ಹಾಗೂ ಅಘನಾಶಿನಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತುವೆ. ಇದರಿಂದಾಗಿ ನದಿ ತೀರದ ಪ್ರದೇಶಗಳು ಬಹುತೇಕ ಜಲಾವೃತವಾಗಿದ್ದು, ಜನಜಾನುವಾರುಗಳ ಸ್ಥಳಾಂತರ ಕಾರ್ಯ ನಡೆಯುತ್ತಿದೆ.

ಇನ್ನು ಅಘನಾಶಿನಿ ನದಿ ಕೂಡ ಅಪಾಯದ ಮಟ್ಟ ಮೀರಿ ಹರಿಯಲಾರಂಭಿಸಿದೆ. ಸಿದ್ದಾಪುರ ಭಾಗದಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾದ ಕಾರಣ ನೀರಿನ ಪ್ರಮಾಣ ಕ್ಷಣ ಕ್ಷಣಕ್ಕೂ ಏರಿಕೆಯಾಗುತ್ತಿರುವುದು ನದಿ ತೀರದ ನಿವಾಸಿಗಳ ಆತಂಕಕ್ಕೆ ಕಾರಣವಾಗಿದೆ. ಸೆಂಟ್ರಲ್ ವಾಟರ್ ಕಮಿಷನ್ ಮಾಹಿತಿಯ ಪ್ರಕಾರ, ಅಘನಾಶಿನಿಯ ಅಪಾಯ ಮಟ್ಟ 17 ಮೀಟರ್ ಎಂದು ನಿಗದಿಪಡಿಸಲಾಗಿದ್ದು, ಸೋಮವಾರ ಈ ಮಟ್ಟ 17.60 ಮೀಟರ್‌ಗೆ ಏರಿಕೆಯಾಗಿದೆ.
ಶಿರಸಿ- ಕುಮಟಾ ರಸ್ತೆಯ ರಾಗಿಹೊಸಳ್ಳಿ ಬಳಿ ಗುಡ್ಡದ ಮಣ್ಣು ರಸ್ತೆಗೆ ಕುಸಿಯುತ್ತಿರುವುದು ಸಂಚಾರಕ್ಕೆ ಅಡೆತಡೆಯಾಗಿದೆ. ಸದ್ಯ ಈ ಮಾರ್ಗದಲ್ಲಿ ಭಾರೀ ವಾಹನಗಳ ಓಡಾಟ ಕಷ್ಟವಿದ್ದು, ಲಘು ವಾಹನಗಳಿಗೆ ಸಂಚರಿಸಲು ಪೊಲೀಸರು ಅವಕಾಶ ಮಾಡಿಕೊಡುತ್ತಿದ್ದಾರೆ. ಅಲ್ಲದೆ ಶಿರಸಿ ಮತ್ತು ಕುಮಟಾದಿಂದ ಸಾಗುವವರಿಗೆ ಬದಲಿ ಮಾರ್ಗಗಳನ್ನು ಬಳಸುವಂತೆಯೂ ಸೂಚಿಸಲಾಗಿದೆ.
ಅಲ್ಲದೆ ಹವಮಾನ ಇಲಾಖೆ ಇನ್ನೂ ಐದು ದಿನಗಳವರೆಗೆ ಭಾರೀ ಮಳೆಯಾಗುವ ಸಾಧ್ಯತೆ ಬಗ್ಗೆ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳಿಗೆ ಮಂಗಳವಾರವೂ ರಜೆ ಘೋಷಣೆ ಮಾಡಲಾಗಿದೆ.
ಸದ್ಯ ಜಿಲ್ಲಾಡಳಿತದಿಂದ ಅಘನಾಶಿನಿಯಿಂದ ಪ್ರವಾಹ ಬಾಧಿತ ಪ್ರದೇಶಗಳ ಜನರಿಗಾಗಿ 4 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. ಹೊನ್ನಾವರದಲ್ಲಿಯೂ ಶರಾವತಿ ನದಿ ಉಕ್ಕಿ ಹರಿಯುತ್ತಿದ್ದು, ಒಟ್ಟು 5 ಕಡೆ ಕಾಳಜಿ ಕೇಂದ್ರ ತೆರೆದು ವ್ಯವಸ್ಥೆ ಮಾಡಲಾಗಿದೆ. ಜೋಯಿಡಾದಲ್ಲಿ ಮಳೆ ಶಾಲೆಯೊಂದು ಕುಸಿದು ಬಿದ್ದಿದೆ. ಅದೃಷ್ಟವಸಾತ್ ಶಾಲೆಗೆ ರಜೆ ನೀಡಿದ್ದರಿಂದ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.
ಕಾಲೇಜಿಗೆ ರಜೆ ಇದ್ದ ಹಿನ್ನೆಯಲ್ಲಿ ಹೊನ್ನಾವರ ಪಟ್ಟಣದ ರಾಮತೀರ್ಥಕ್ಕೆ ಈಜಲು ತೆರಳಿದ್ದ ವಿದ್ಯಾರ್ಥಿಯೊರ್ವ ಮೃತಪಟ್ಟಿದ್ದಾನೆ. ಮೃತಪಟ್ಟ ವಿದ್ಯಾರ್ಥಿ ಮಣಿಕಂಠ ಮಂಜುನಾಥ ನಾಯ್ಕ (17) ಪಟ್ಟಣದ ರಾಯಲಕೇರಿ ನಿವಾಸಿಯಾಗಿದ್ದಾನೆ. ಈತನು ಪಟ್ಟಣದ ಸರ್ಕಾರಿ ಮೋಹನ ಕೆ.ಶೆಟ್ಟಿ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿ.ಯುಸಿ ವಿದ್ಯಾರ್ಥಿಯಾಗಿದ್ದು, ಸೋಮವಾರ ಮಳೆಯ ಕಾರಣದಿಂದ ಕಾಲೇಜಿಗೆ ರಜೆ ಇರುವುದರಿಂದ ಈಜಲು ತೆರಳಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.
ನಂತರ ಪೊಲೀಸರು ಸಾರ್ವಜನಿಕರ ಸಹಕಾರದಿಂದ ಶವ ಮೇಲೆತ್ತಿ ತಾಲೂಕ ಆಸ್ಪತ್ರೆಯಲ್ಲಿ ಮರಣೊತ್ತರ ಪರೀಕ್ಷೆ ಮಾಡಿಸಿದ್ದಾರೆ. ಬಳಿಕ ಶವವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ. ಈ ಸಂಬಂಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications