ಕಾರವಾರ ಜಿಲ್ಲಾಸ್ಪತ್ರೆ ಡಯಾಲಿಸಿಸ್ ಕೇಂದ್ರಕ್ಕೆ ನುಗ್ಗಿದ ಮಳೆ ನೀರು
ಕಾರವಾರ, ಆಗಸ್ಟ್ 15: ಉತ್ತರ ಕನ್ನಡದಲ್ಲಿ ಮತ್ತೆ ಮಳೆ ಹೆಚ್ಚಾಗುತ್ತಿದೆ. ಜಿಲ್ಲಾ ಕೇಂದ್ರ ಕಾರವಾರದಲ್ಲಿ ಜಿಲ್ಲಾ ಆಸ್ಪತ್ರೆಯ ಡಯಾಲಿಸಿಸ್ ಕೇಂದ್ರಕ್ಕೆ ಮಳೆಯ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ.
ಆಸ್ಪತ್ರೆಯ ಆವರಣದಲ್ಲಿ ನೀರು ನಿಂತ ಪರಿಣಾಮ ಅದು ಗೋಡೆಗಳಲ್ಲಿನ ಕೆಲವು ರಂಧ್ರಗಳ ಮೂಲಕ ಡಯಾಲಿಸಿಸ್ ಕೇಂದ್ರಕ್ಕೆ ನುಗ್ಗಿದೆ. ಸುಮಾರು ಒಂದೂವರೆ ಅಡಿಯಷ್ಟು ನೀರು ಕೇಂದ್ರದೊಳಗೆ ನಿಂತಿದ್ದು, ಆಸ್ಪತ್ರೆಯ ಸಿಬ್ಬಂದಿ ನೀರನ್ನು ಖಾಲಿ ಮಾಡುವುದರಲ್ಲಿ ನಿರತರಾಗಿದ್ದಾರೆ.
ನೀರು ನುಗ್ಗಿದ ಸಂದರ್ಭ ಕೇಂದ್ರದಲ್ಲಿ ರೋಗಿಗಳಾರೂ ಇರಲಿಲ್ಲ. ಡಯಾಲಿಸಿಸ್ ಯಂತ್ರಗಳು ಮಾತ್ರ ಇದ್ದವು. ಕೆಲವಷ್ಟು ಔಷಧಿಗಳು, ಚಿಕಿತ್ಸಾ ಸಾಮಗ್ರಿಗಳು ನೀರಲ್ಲಿ ಬಿದ್ದು ಹಾಳಾಗಿವೆ.

ಆಸ್ಪತ್ರೆಯ ಆವರಣದಲ್ಲಿ ನೀರು ನಿಂತಿರುವುದೇ ಇಷ್ಟೆಲ್ಲ ಅವಾಂತರಕ್ಕೆ ಕಾರಣವಾಗಿದೆ. ಮಳೆಯ ನೀರು ನೇರವಾಗಿ ಆವರಣದಲ್ಲಿ ಬೀಳುವುದರಿಂದ ನೀರು ಸಂಗ್ರಹಗೊಳ್ಳುತ್ತಿದೆ. ಇದರಿಂದಾಗಿ ಇತರ ವಾರ್ಡ್ ಗಳಿಗೆ ನೀರು ಗೋಡೆಗಳ ರಂಧ್ರದ ಮೂಲಕ ನುಗ್ಗುತ್ತಿದೆ.
ಅಗ್ನಿಶಾಮಕ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಯಿಸಲಾಗಿದ್ದು, ಆವರಣದಲ್ಲಿನ ನೀರನ್ನು ಪಂಪ್ ಸೆಟ್ ಬಳಸಿ ಖಾಲಿ ಮಾಡಲಾಗುತ್ತಿದೆ.












Click it and Unblock the Notifications