ಕಾರವಾರದ ಕಪ್ಪು ಮರಳಿನ ಕಡಲತೀರಕ್ಕೆ ಸೇತುವೆ ಭಾಗ್ಯ ಯಾವಾಗ?
ಕಾರವಾರ, ಮಾರ್ಚ್ 02: ರಾಜ್ಯದ ಏಕೈಕ ಕಪ್ಪು ಮರಳಿನ ಕಡಲತೀರ ಎನ್ನುವ ಖ್ಯಾತಿ ಪಡೆದಿರುವ ಕಾರವಾರ ತಾಲ್ಲೂಕಿನ ಮಾಜಾಳಿಯ ತೀಳ್ ಮಾತಿಯ ಅಭಿವೃದ್ಧಿಗೆ ಇನ್ನೂ ಕಾಲ ಕೂಡಿಬರುತ್ತಿಲ್ಲ.
ಐದು ವರ್ಷಗಳ ಹಿಂದೆ ಈ ತೀರಕ್ಕೆ ಸಂಪರ್ಕ ಕಲ್ಪಿಸಲು ಯೋಜಿಸಿದ್ದ ತೂಗು ಸೇತುವೆಯ ಕಾಮಗಾರಿ ಇನ್ನೂ ಆರಂಭವಾಗದೇ ನೆನೆಗುದಿಗೆ ಬಿದ್ದಿದ್ದು, ಇದು ಪ್ರವಾಸೋದ್ಯಮಕ್ಕೂ ಹಿನ್ನಡೆಯಾದಂತಾಗಿದೆ.
ತೀಳ್ ಮಾತಿ ಕಡಲತೀರಕ್ಕೆ ಮಾಜಾಳಿಯಿಂದ ಗುಡ್ಡ ಹತ್ತಿ ಸುಮಾರು ಅರ್ಧ ಕಿಲೋಮೀಟರ್ ನಡೆದು ಸಾಗಬೇಕು. ಈ ಹಿಂದೆ ಪ್ರವಾಸೋದ್ಯಮ ಸಚಿವರಾಗಿದ್ದ ಆರ್.ವಿ.ದೇಶಪಾಂಡೆ 2014 ರಲ್ಲಿ ಕಡಲತೀರಕ್ಕೆ ಸಂಪರ್ಕ ಕಲ್ಪಿಸಲು ತೂಗು ಸೇತುವೆ ನಿರ್ಮಾಣಕ್ಕೆ ಹಣ ಮಂಜೂರು ಮಾಡಿದ್ದರು.

ಸೇತುವೆ ನಿರ್ಮಿಸಲು ಬಂದ ಹಣ ವಾಪಸ್ ಹೋಗಿತ್ತು
ಸುಮಾರು 5 ಕೋಟಿ ರುಪಾಯಿ ವೆಚ್ಚದಲ್ಲಿ ತೂಗು ಸೇತುವೆ ನಿರ್ಮಿಸಿ, ಪ್ರವಾಸಿಗರು ಸುಂದರ ಕಡಲತೀರಕ್ಕೆ ತೂಗು ಸೇತುವೆಯಲ್ಲಿ ಸಾಗಿ ಎಂಜಾಯ್ ಮಾಡಿಕೊಂಡು ವಾಪಸ್ ಬರುವ ಅವಕಾಶ ಮಾಡಿಕೊಡಲು ಯೋಜಿಸಲಾಗಿತ್ತು. ಇನ್ನೇನು ಕಾಮಗಾರಿ ಪ್ರಾರಂಭವಾಗುತ್ತದೆ ಎಂದು ಸಹ ಹೇಳಲಾಗಿತ್ತು.
ಆದರೆ, ಹಣ ಮಂಜೂರಾಗಿ ಐದು ವರ್ಷಗಳೇ ಕಳೆದರೂ ಇಂದಿಗೂ ಕಾಮಗಾರಿ ಪ್ರಾರಂಭಿಸಿಲ್ಲ. ಇದರಿಂದ ಅನುದಾನ ಸಹ ವಾಪಸ್ ಹೋಗಿದ್ದು, ವಿಶಿಷ್ಟ ಕಡಲತೀರ ಅಭಿವೃದ್ಧಿಯಾಗದೇ ಉಳಿಯುವಂತಾಗಿದೆ.

ಈ ಕಪ್ಪು ಮರಳಿನ ತೀರದಲ್ಲಿ ಸಿನಿಮಾ ಶೂಟಿಂಗ್ ನಡೆಯುತ್ತೆ
ತೀಳ್ ಮಾತಿ ಕಡಲತೀರದಲ್ಲಿ ಸಾಕಷ್ಟು ಚಲನಚಿತ್ರಗಳ ಶೂಟಿಂಗ್ ಸಹ ನಡೆದಿದ್ದು, ನಾನಾ ಭಾಗದಿಂದ ಪ್ರವಾಸಿಗರು ಕಡಲತೀರದತ್ತ ಬರುತ್ತಾರೆ. ಆದರೆ, ಸರಿಯಾದ ರಸ್ತೆ ಇಲ್ಲದ ಕಾರಣ ತೂಗು ಸೇತುವೆ ನಿರ್ಮಾಣಕ್ಕೆ ಆಗಿನ ಸಚಿವರು ಆಸಕ್ತಿ ವಹಿಸಿ ಹಣ ಬಿಡುಗಡೆ ಮಾಡಿದ್ದರೂ ಅಧಿಕಾರಿಗಳ ನಿರ್ಲಕ್ಷತನದಿಂದ ಹಣ ವಾಪಸ್ ಹೋಗಿದೆ.
ಅನೇಕ ಬಾರಿ ಕಾಮಗಾರಿಗಳಿಗೆ ಕೆಲಸ ಮಾಡಿದರೂ ಹಣ ಬಿಡುಗಡೆ ಆಗಿಲ್ಲ ಎನ್ನುತ್ತಾರೆ. ಆದರೆ, ಇಲ್ಲಿ ಹಣ ಬಿಡುಗಡೆಯಾದರೂ ಕೆಲಸ ಕೈಗೆತ್ತಿಕೊಳ್ಳದೇ ನಿರ್ಲಕ್ಷತನ ವಹಿಸಿದ್ದರಿಂದ ಇಂದಿಗೂ ಕೆಲಸ ಪ್ರಾರಂಭವಾಗಿಲ್ಲ ಎನ್ನುವುದು ಸ್ಥಳೀಯರ ಆರೋಪ.

ಅನುಮೋದನೆ ಸಿಕ್ಕ ಬಳಿಕ ಕಾಮಗಾರಿ ಪ್ರಾರಂಭ
ಈ ಬಗ್ಗೆ ಜಿಲ್ಲಾಧಿಕಾರಿಗಳನ್ನು ಕೇಳಿದರೆ, ತೀಳ್ ಮಾತಿಗೆ ತೆರಳುವ ಮಾರ್ಗ ಬಂದರು ಹಾಗೂ ಅರಣ್ಯ ಇಲಾಖೆಗೆ ಸೇರಿದ ಜಾಗದಲ್ಲಿ ಹಾದು ಹೋಗಿದ್ದರಿಂದ ಕಾಮಗಾರಿಗೆ ಅಡ್ಡಿಯಾಗಿತ್ತು. ಇದೀಗ ಎಲ್ಲಾ ಸಮಸ್ಯೆ ಪರಿಹಾರವಾಗಿದ್ದು, ಸೇತುವೆ ನಿರ್ಮಾಣಕ್ಕೆ ಪುನಃ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದಿದ್ದಾರೆ.
ಹೊಸದಾಗಿ 1.20 ಕೋಟಿ ರೂ. ವೆಚ್ಚದಲ್ಲಿ ತೂಗುಸೇತುವೆಗೆ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದು, ಅನುಮೋದನೆ ಸಿಕ್ಕ ಬಳಿಕ ಕಾಮಗಾರಿ ಪ್ರಾರಂಭವಾಗಲಿದೆ. ನೆರೆಯ ಗೋವಾ ರಾಜ್ಯಕ್ಕಿಂತ ಕಾರವಾರದಲ್ಲಿ ಉತ್ತಮ ಕಡಲತೀರಗಳನ್ನು ಹೊಂದಿದ್ದರೂ ಅಭಿವೃದ್ಧಿ ಇಲ್ಲದೇ ಪ್ರವಾಸೋದ್ಯಮಕ್ಕೆ ಹಿನ್ನಡೆಯಾಗುವಂತಾಗಿದ್ದು, ಆದಷ್ಟು ಬೇಗ ತೀಳ್ ಮಾತಿ ಕಡಲತೀರವನ್ನು ಅಭಿವೃದ್ಧಿ ಪಡಿಸಬೇಕು ಎನ್ನುವುದು ಸ್ಥಳೀಯರ ಆಗ್ರಹವಾಗಿದೆ.

ಅರಣ್ಯ, ಬಂದರು ಇಲಾಖೆ ಅಡ್ಡ ಬಂದಿದ್ದರಿಂದ ಹಣ ವಾಪಸ್ಸಾಗಿತ್ತು
ತೀಳ್ ಮಾತಿ ಕಡಲತೀರಕ್ಕೆ ಚಾರಣದ ರೂಪದಲ್ಲಿ ಹೋಗಬೇಕಾಗಿರುವುದರಿಂದ ದಾರಿ ನಿರ್ಮಾಣ ಮಾಡಬೇಕು ಎನ್ನುವ ಬೇಡಿಕೆಯಿಂದಾಗಿ ತೂಗುಸೇತುವೆ ಯೋಜನೆ ರೂಪಿಸಲಾಗಿತ್ತು.
ಆದರೆ, ದಾರಿ ಮಧ್ಯದಲ್ಲಿ ಅರಣ್ಯ ಇಲಾಖೆ, ಬಂದರು ಇಲಾಖೆ ಭೂಮಿ ಅಡ್ಡ ಇದ್ದಿದ್ದರಿಂದ ಕಳೆದ ಬಾರಿಯ ಹಣ ವಾಪಸ್ಸಾಗುವಂತಾಗಿತ್ತು. ಇದೀಗ ಎಲ್ಲ ಸಮಸ್ಯೆ ಪರಿಹಾರವಾಗಿದ್ದು, ಸರ್ಕಾರದಿಂದ ಅನುಮೋದನೆ ಬಂದ ಕೂಡಲೇ ಕಾಮಗಾರಿ ಪ್ರಾರಂಭಿಸುತ್ತೇವೆ. ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ತಿಳಿಸಿದ್ದಾರೆ.












Click it and Unblock the Notifications