ಬಸ್ ನಲ್ಲಿ ಸಿಕ್ಕಿಬಿದ್ದ ಈ ಇಬ್ಬರ ಕೈಲಿ ಅಂಥದ್ದೇನಿತ್ತು?
ಕಾರವಾರ, ನವೆಂಬರ್ 14: ಕಾರವಾರದಲ್ಲಿ ಸಾರಿಗೆ ಬಸ್ಸೊಂದನ್ನು ತಡೆದ ಪೊಲೀಸರು, ಬಸ್ ನಲ್ಲಿ ಕೂತಿದ್ದ ಇಬ್ಬರು ವ್ಯಕ್ತಿಗಳನ್ನು ಏಕಾಏಕಿ ಬಂಧಿಸಿದ್ದಾರೆ. ಇದೇನು ಎಂದು ಎಲ್ಲರೂ ನೋಡುವಷ್ಟರಲ್ಲೇ ಅವರ ಬ್ಯಾಗ್ ನಲ್ಲಿದ್ದ ವಸ್ತು ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೊಟ್ಟಿದೆ.
ಐದಲ್ಲ, ಹತ್ತಲ್ಲ, ಬರೋಬ್ಬರಿ ಎಂಬತ್ತು ಲಕ್ಷ ಹಣವನ್ನು ಈ ಇಬ್ಬರಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಕ್ರಮವಾಗಿ ವಿದೇಶಿ ಹಣ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ನಗರ ಠಾಣೆಯ ಪೊಲೀಸರು ಮಂಗಳವಾರ ರಾತ್ರಿ ವಶಕ್ಕೆ ಪಡೆದಿದ್ದಾರೆ. ಭಟ್ಕಳದ ಆಝಾದ್ ನಗರದ ಸಿರಾಜ್ ಕತ್ತಾರ್ ಹಾಗೂ ಅಬ್ದುಲ್ ನಜೀರ್ ಎಂಬುವವರನ್ನು ಬಂಧಿಸಿದ್ದು, ಅವರಿಂದ ಇಂಗ್ಲೆಂಡ್, ಯುರೋಪ್, ಆಸ್ಟ್ರೇಲಿಯಾ ಸೇರಿದಂತೆ ಹತ್ತು ದೇಶಗಳ ಕರೆನ್ಸಿಗಳನ್ನು ಜಪ್ತಿ ಮಾಡಲಾಗಿದೆ.
ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಸಿಪಿಐ ಸಂತೋಷ್ ಶೆಟ್ಟಿ ಹಾಗೂ ನಗರ ಠಾಣೆಯ ಪಿಎಸ್ ಐ ಸಂತೋಷ್ ಎಂ., ಸಾರಿಗೆ ಬಸ್‌ನಲ್ಲಿ ಭಟ್ಕಳಕ್ಕೆ ತೆರಳುತ್ತಿದ್ದ ಇಬ್ಬರನ್ನೂ ನಗರದ ಸುಭಾಷ್ ವೃತ್ತದ ಬಳಿ ವಶಕ್ಕೆ ಪಡೆದಿದ್ದಾರೆ. ಡಿವೈಎಸ್ ಪಿ ಶಂಕರ್ ಮಾರಿಹಾಳ ಅವರು ವಿಚಾರಣೆ ನಡೆಸಿ, ಕೆಲವು ಮಾಹಿತಿಗಳನ್ನು ಕಲೆ ಹಾಕಿದ್ದಾರೆ.

ಸಿಕ್ಕಿಬಿದ್ದದ್ದು ಹೇಗೆ?: ಆರೋಪಿ ಅಬ್ದುಲ್ ನಜೀರ್ ನ.10ರಂದು ಸಂಜೆ ಭಟ್ಕಳದಿಂದ ರೈಲಿನ ಮೂಲಕ ಪನ್ವೇಲ್ ಗೆ ತೆರಳಿದ್ದ. ನ.11ರಂದು ಸಂಜೆ ಅಲ್ಲಿಂದ ಲೋಕಲ್ ಟ್ರೇನ್ ಮೂಲಕ ಬೆಂಡಿ ಬಝಾರ್ ತಲುಪಿ, ಮುಂಬೈನಲ್ಲಿ ವಾಸ ಮಾಡುತ್ತಿದ್ದ ಭಟ್ಕಳ ಮೂಲದ ತಾಲೀಬ್ ಎನ್ನುವವನಿಗೆ 40 ಲಕ್ಷ ರೂ. ಭಾರತೀಯ ಹಣ ನೀಡಿ, ಆತನಿಂದ ಅಷ್ಟೇ ಮೌಲ್ಯದ ವಿದೇಶಿ ಕರೆನ್ಸಿ ಪಡೆದಿದ್ದಾನೆ.
ತಾಲೀಬ್ ಪತ್ನಿ ಭಟ್ಕಳದಲ್ಲಿದ್ದು, ಆಕೆಗೆ ವಿದೇಶಿ ಕರೆನ್ಸಿ ತಲುಪಿಸುವಂತೆ ತಾಲೀಬ್ ಅಬ್ದುಲ್ ನಜೀರ್ ಗೆ ತಿಳಿಸಿದ್ದ. ಅದರಂತೆ ಅಬ್ದುಲ್ ನಜೀರ್, ಮುಂಬೈಯಿಂದ ಮಡಗಾಂವ್‌ಗೆ ರೈಲಿನ ಮೂಲಕ ಬಂದು, ಅಲ್ಲಿಂದ ನ.12ರಂದು ಭಟ್ಕಳಕ್ಕೆ ಬರಲು ಮಡಗಾಂವ್- ಸವಣೂರು ಸಾರಿಗೆ ಬಸ್ ಹತ್ತಿದ್ದ. ಇನ್ನು, ಸಿರಾಜ್ ಕತ್ತಾರ್ ಕೂಡ ನ.12 ರಂದು ಬೆಳಿಗ್ಗೆ ಭಟ್ಕಳದಿಂದ ಮಡಗಾಂವ್‌ಗೆ ಸಾರಿಗೆ ಬಸ್‌ನಲ್ಲಿ ತೆರಳಿ, ತನ್ನಲ್ಲಿದ್ದ 40 ಲಕ್ಷ ರೂ. ಭಾರತೀಯ ಕರೆನ್ಸಿಯನ್ನು, ಮಡಗಾಂವ್‌ನಲ್ಲಿ ನೆಲೆಸಿದ್ದ ಭಟ್ಕಳ ಮೂಲದ ನಿವಾಸಿ ಅಬ್ದುಲ್ ಎನ್ನುವವನಿಗೆ ಕೊಟ್ಟು, ಅಷ್ಟೇ ಮೌಲ್ಯದ ವಿವಿಧ ದೇಶದ ಕರೆನ್ಸಿ ಪಡೆದುಕೊಂಡಿದ್ದ. ಈತ ಅಬ್ದುಲ್ ನಜೀರ್ ನ ಸ್ನೇಹಿತನಾಗಿದ್ದು, ಇಬ್ಬರೂ ಮಡಗಾಂವ್ ನಿಂದ ಸವಣೂರಿಗೆ ತೆರಳುವ ಸಾರಿಗೆ ಬಸ್‌ನಲ್ಲಿ ಭಟ್ಕಳಕ್ಕೆ ತೆರಳುತ್ತಿದ್ದರು. ಇದೇ ವೇಳೆ ಖಚಿತ ಮಾಹಿತಿ ಪಡೆದ ನಗರ ಠಾಣೆಯ ಪೊಲೀಸರು, ಕಾರವಾರದ ಸುಭಾಷ್ ವೃತ್ತದ ಬಳಿ ಬಸ್‌ನಲ್ಲಿದ್ದ ಇಬ್ಬರನ್ನೂ ವಶಕ್ಕೆ ಪಡೆದುಕೊಂಡಿದ್ದಾರೆ.
ಇಡಿಗೆ ಹಸ್ತಾಂತರ: 'ಪ್ರಕರಣವನ್ನು ಜಾರಿನಿರ್ದೇಶನಕ್ಕೆ (ಇಡಿ) ಹಸ್ತಾಂತರ ಮಾಡಲಾಗಿದೆ. ಅವರೇ ವಿಚಾರಣೆ ಕೈಗೊಳ್ಳಲಿದ್ದಾರೆ. ಹೆಚ್ಚಿನ ಮೊತ್ತದ ಹಾಗೂ ವಿದೇಶಿ ಹಣ ಆಗಿರುವುದರಿಂದ ಪ್ರಕರಣವನ್ನು ಅವರಿಗೆ ಹಸ್ತಾಂತರಿಸಲಾಗುತ್ತಿದೆ' ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ತಿಳಿಸಿದ್ದಾರೆ.
ಹವಾಲಾ ಹಣ ಸಾಧ್ಯತೆ!: 'ಇದು ಹವಾಲಾ ಹಣವಾಗಿರುವ ಸಾಧ್ಯತೆ ಇದೆ. ಆರೋಪಿಗಳಿಬ್ಬರೂ ನೆಟ್ವರ್ಕ್ ಏಜೆಂಟರಂತೆ ಕಾರ್ಯನಿರ್ವಹಿಸುತ್ತಿದ್ದರು ಎಂಬ ಶಂಕೆ ಇದೆ. ಹೆಚ್ಚಿನ ಮಾಹಿತಿ ಪೂರ್ಣ ತನಿಖೆಯ ಬಳಿಕವೇ ತಿಳಿದು ಬರಬೇಕಿದೆ' ಎಂದು ತಿಳಿಸಿದ್ದಾರೆ.












Click it and Unblock the Notifications