ಅಳ್ನಾವರ-ದಾಂಡೇಲಿ ರೈಲು ಸೇವೆ ಮತ್ತೆ ಆರಂಭಕ್ಕೆ ಕೇಂದ್ರ ಸಚಿವರ ಪತ್ರ
ಕಾರವಾರ, ಜನವರಿ 28: ಅಳ್ನಾವರ-ದಾಂಡೇಲಿ ನಡುವೆ ಪ್ರಯಾಣಿಕ ರೈಲು ಸಂಚಾರವನ್ನು ಪುನಃ ಆರಂಭಿಸಬೇಕು ಎಂಬ ಬೇಡಿಕೆಗೆ ಕೇಂದ್ರ ಸಚಿವರು ಸಹ ಸ್ಪಂದಿಸಿದ್ದಾರೆ. ಈ ಕುರಿತು ನೈಋತ್ಯ ರೈಲ್ವೆ ಅಧಿಕಾರಿಗಳಿಗೆ ಪತ್ರವನ್ನು ಸಹ ಬರೆಯಲಾಗಿದೆ.
ಧಾರವಾಡ ಸಂಸದ, ಕೇಂದ್ರ ಸಂಸದೀಯ ವ್ಯವಹಾರ ಮತ್ತು ಕಲ್ಲಿದ್ದಲು, ಗಣಿ ಸಚಿವರಾದ ಪ್ರಹ್ಲಾದ್ ಜೋಶಿ ನೈಋತ್ಯ ರೈಲ್ವೆ ವ್ಯವಸ್ಥಾಪಕ ನಿರ್ದೇಶಕ ಸಂಜೀವ್ ಕಿಶೋರ್‌ಗೆ ಪತ್ರವನ್ನು ಬರೆದಿದ್ದಾರೆ.

ಹಳಿಯಾದ ಕಾಂಗ್ರೆಸ್ ಶಾಸಕ ಆರ್. ವಿ. ದೇಶಪಾಂಡೆ ಬರೆದ ಪತ್ರವನ್ನು ಉಲ್ಲೇಖಿಸಿ ಪ್ರಹ್ಲಾದ್ ಜೋಶಿ ಪತ್ರವನ್ನು ಬರೆದಿದ್ದಾರೆ. ಧಾರವಾಡ-ಅಳ್ನಾವರ-ದಾಂಡೇಲಿ (ಅಂಬೇವಾಡಿ) ನಡುವೆ ರೈಲು ಸಂಚಾರ ನಡೆಸಬೇಕು ಎಂಬುದು ಬಹು ಕಾಲದ ಬೇಡಿಕೆಯಾಗಿದೆ ಎಂದು ಹೇಳಿದ್ದಾರೆ.
ಆರ್. ವಿ. ದೇಶಪಾಂಡೆ ಪೋಸ್ಟ್; ಮಾಜಿ ಸಚಿವ, ಹಳಿಯಾಳದ ಶಾಸಕ ಆರ್. ವಿ. ದೇಶಪಾಂಡೆ ಈ ಕುರಿತು ಫೇಸ್‌ಬುಕ್ ಪೋಸ್ಟ್ ಸಹ ಹಾಕಿದ್ದಾರೆ. '2019 ರಲ್ಲಿ ದಾಂಡೇಲಿಯಲ್ಲಿ ಪ್ಯಾಸೆಂಜರ್ ರೈಲ್ವೆ ಪರಿಚಯಿಸುವ ಮೂಲಕ ದಾಂಡೇಲಿ ಭಾಗದ ಜನರ ದಶಕಗಳ ಹಿಂದಿನ ಕನಸು ನನಸಾಗಿತ್ತು' ಎಂದು ಹೇಳಿದ್ದಾರೆ.
'ದುರದೃಷ್ಟವಶಾತ್ ಕೋವಿಡ್ ಸಾಂಕ್ರಾಮಿಕ ಅವಧಿಯಲ್ಲಿ ರೈಲ್ವೆ ಸೇವೆಯನ್ನು ನಿಲ್ಲಿಸಲಾಗಿದ್ದು, ಸದ್ಯ ರೈಲು ಮಾರ್ಗದ ವಿದ್ಯುದೀಕರಣ ಪೂರ್ಣಗೊಂಡು ವಿದ್ಯುತ್ ಇಂಜಿನ್‌ಗಳ ಪ್ರಾಯೋಗಿಕ ಚಾಲನೆಯನ್ನು ಸಹ ಯಶಸ್ವಿಯಾಗಿ ನಡೆಸಲಾಗಿದೆ' ಎಂದು ತಿಳಿಸಿದ್ದಾರೆ.
'ಅಂಬೇವಾಡಿ ನಿಲ್ದಾಣದ ಹೆಸರನ್ನು ದಾಂಡೇಲಿ ರೈಲ್ವೆ ನಿಲ್ದಾಣ ಎಂದು ಬದಲಾಯಿಸುವ ಪ್ರಕ್ರಿಯೆಯು ಸಹ ಪೂರ್ಣಗೊಂಡಿದ್ದು ಸಂತಸದ ಸಂಗತಿ. ಈ ಬಹು ನಿರೀಕ್ಷಿತ ದಾಂಡೇಲಿ ರೈಲು ಸೇವೆಯನ್ನು ಪುನರಾರಂಭಿಸಲು ಸ್ಥಳೀಯ ಸಂಘ ಸಂಸ್ಥೆಗಳು, ಸಾರ್ವಜನಿಕರು ಹಲವು ದಿನಗಳಿಂದ ಹೋರಾಟ ನಡೆಸುತ್ತಾ ಬಂದಿದ್ದಾರೆ' ಎಂದು ಪತ್ರದಲ್ಲಿ ಆರ್. ವಿ. ದೇಶಪಾಂಡೆ ವಿವರಿಸಿದ್ದಾರೆ.
'ಹಚ್ಚ ಹಸರಿನ ಕಾಡುಗಳೊಂದಿಗೆ ದಾಂಡೇಲಿಯು ಪ್ರವಾಸಿ ತಾಣವಾಗಿರುವುದರಿಂದ ರಾಜ್ಯದ ಹಾಗೂ ದೇಶದ ವಿವಿಧ ಭಾಗಗಳಿಂದ ಪ್ರವಾಸಿಗರು ದಾಂಡೇಲಿಗೆ ಭೇಟಿ ನೀಡುತ್ತಾರೆ. ಈ ನಿಟ್ಟಿನಲ್ಲಿ ರೈಲು ಮರು ಪ್ರಾರಂಭಿಸುವುದು ಸೂಕ್ತವೆಂದು ಈ ಮೊದಲು ನಾನು ಕೇಂದ್ರ ಸಚಿವರಿಗೆ ಹಾಗೂ ನೈರುತ್ಯ ರೈಲ್ವೆ ಅಧಿಕಾರಿಗಳಿಗೆ ಪತ್ರ ಮುಖೇನ ಹಲವಾರು ಬಾರಿ ಮನವಿ ಮಾಡಿದ್ದೇನೆ' ಎಂದು ತಿಳಿಸಿದ್ದಾರೆ.
'ಸದ್ಯ ಪ್ರವಾಸೋದ್ಯಮ ಚಟುವಟಿಕೆ ಹಾಗೂ ವ್ಯಾಪಾರ ಚಟುವಟಿಕೆಗಳು ಸಹಜ ಸ್ಥಿತಿಗೆ ಮರಳಿದ್ದು, ಸ್ಥಳೀಯರಿಗೆ ಮತ್ತು ದಾಂಡೇಲಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಅನುಕೂಲವಾಗುವಂತೆ ಅಳ್ನಾವರ ದಾಂಡೇಲಿ ರೈಲ್ವೆ ಸೇವೆಯನ್ನು ಪುನರರಾಂಭಿಸಲು ಆದ್ಯತೆಯ ಮೇರೆಗೆ ವಿಷಯವನ್ನು ಪರಿಗಣಿಸಲು ವಿನಂತಿಸುತ್ತೇನೆ' ಎಂದು ಮನವಿ ಮಾಡಿದ್ದಾರೆ.
'ದಿನಾಂಕ 29/12/2023ರಂದು ಕೇಂದ್ರ ಸಚಿವರಾದ ಮಾನ್ಯ ಪ್ರಹ್ಲಾದ್ ಜೋಶಿಯವರು ಸಹ ನೈರುತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕರಿಗೆ ಪತ್ರ ಬರೆದು ಶೀಘ್ರವಾಗಿ ಪರಿಗಣಿಸುವಂತೆ ತಿಳಿಸಿದ್ದಾರೆ' ಎಂದು ಆರ್. ವಿ. ದೇಶಪಾಂಡೆ ಹೇಳಿದ್ದಾರೆ.
ಹೆಸರು ಬದಲಾವಣೆ; 2023ರ ಡಿಸೆಂಬರ್‌ನಲ್ಲಿ ರೈಲ್ವೆ ಸಚಿವಾಲಯ ಉತ್ತರ ಕನ್ನಡ ಜಿಲ್ಲೆಯ 'ಅಂಬೇವಾಡಿ' ರೈಲು ನಿಲ್ದಾಣದ ಹೆಸರನ್ನು'ದಾಂಡೇಲಿ' ಎಂದು ಬದಲಾವಣೆ ಮಾಡಲು ಒಪ್ಪಿಗೆ ನೀಡಿತ್ತು. ಇಂಗ್ಲಿಶ್‌ನಲ್ಲಿ DANDELI ಎಂದು ಕನ್ನಡದಲ್ಲಿ ದಾಂಡೇಲಿ ಎಂದು ಇನ್ನು ಮುಂದೆ ರೈಲು ನಿಲ್ದಾಣದ ಹೆಸರು ಬದಲಿಸಿ ಸುತ್ತೋಲೆ ಹೊರಡಿಸಲಾಗಿತ್ತು.
ಇದು ಕರ್ನಾಟಕದ ಐತಿಹಾಸಿಕ ರೈಲು ನಿಲ್ದಾಣಗಳಲ್ಲಿ ಒಂದಾಗಿದೆ. ಬ್ರಿಟಿಷರು ಸ್ಥಾಪನೆ ಮಾಡಿದ ಕರ್ನಾಟಕದ ರೈಲು ಮಾರ್ಗದಲ್ಲಿ ಅಂಬೇವಾಡಿ ರೈಲು ನಿಲ್ದಾಣ ಬರುತ್ತದೆ. ರೈಲು ನಿಲ್ದಾಣವಿದ್ದರೂ ಸಹ ಇಲ್ಲಿಗೆ ಪ್ರಯಾಣಿಕರ ರೈಲು ಬರುವುದಿಲ್ಲ.
ದಟ್ಟ ಕಾಡು ಹೊಂದಿರುವ ದಾಂಡೇಲಿಯಿಂದ ಮರದ ದಿಮ್ಮಿಗಳನ್ನು ಸಾಗಣೆ ಮಾಡಲು ಬ್ರಿಟಿಷರು ಈ ರೈಲು ಮಾರ್ಗವನ್ನು ನಿರ್ಮಾಣ ಮಾಡಿದ್ದರು. ಈ ಮಾರ್ಗ ಗೋವಾ ರಾಜ್ಯದಲ್ಲಿರುವ ವಾಸ್ಕೋ ಬಂದರು ಸಂಪರ್ಕಿಸುತ್ತದೆ.
ಬ್ರಿಟಿಷರು ಮೀಟರ್ ಗೇಜ್ ಮಾರ್ಗವನ್ನು ನಿರ್ಮಾಣ ಮಾಡಿದ್ದರು. ಬಳಿಕ ಅದನ್ನು ಬ್ರಾಡ್ ಗೇಜ್ ಮಾರ್ಗವಾಗಿ ಅಭಿವೃದ್ಧಿ ಮಾಡಲಾಗಿದೆ. 2019ರಲ್ಲಿ ಅಳ್ನಾವರ-ಅಂಬೇವಾಡಿ ರೈಲು ಸಂಚಾರ ಆರಂಭಗೊಂಡಿತ್ತು. ಆದರೆ ಕೋವಿಡ್ ಸಂದರ್ಭದಲ್ಲಿ ರೈಲು ನಿಂತಿತು, ಬಳಿಕ ರೈಲು ಸೇವೆ ಪ್ರಾರಂಭವಾಗಿಲ್ಲ.












Click it and Unblock the Notifications