ಹೊಸ ವರ್ಷಾಚರಣೆ: ಟ್ಯಾಗೋರ್ ತೀರದಲ್ಲಿ ಡ್ರೋನ್ ಕಣ್ಗಾವಲು
ಕಾರವಾರ, ಡಿಸೆಂಬರ್ 31: ಹೊಸ ವರ್ಷಾಚರಣೆ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದ್ದು, ಇದರ ಭಾಗವಾಗಿ ರವೀಂದ್ರನಾಥ್ ಟ್ಯಾಗೋರ್ ಕಡಲತೀರದಲ್ಲಿ ಪೊಲೀಸ್ ಇಲಾಖೆ ಡ್ರೋನ್ ಕಣ್ಗಾವಲು ಇರಿಸಲು ಸಜ್ಜಾಗಿದೆ.
ಕಾರವಾರ ನಗರದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಯಾವುದೇ ಸಾರ್ವಜನಿಕ ಪ್ರದೇಶಗಳಲ್ಲಿ ಡಿ.31 ರಂದು ಸಂಜೆ 4 ಗಂಟೆಯಿಂದ ಜನ ಸೇರುವಂತಿಲ್ಲ. ಮುಖ್ಯವಾಗಿ ಕಾರವಾರ ನಗರದ ರವೀಂದ್ರನಾಥ ಕಡಲತೀರದಲ್ಲಿ ಯಾರೂ ಆಗಮಿಸದಂತೆ ಸೂಚಿಸಲಾಗಿದೆ.
ಹೀಗಾಗಿ ಕಡಲತೀರಕ್ಕೆ ಆಗಮಿಸುವವರನ್ನು ಪತ್ತೆ ಹಚ್ಚಲು ಡ್ರೋನ್ ಬಳಸಲಾಗುತ್ತಿದ್ದು, ಗುರುವಾರ ಸಂಜೆ 4 ಗಂಟೆಯಿಂದ ಬೀಚ್‌ನಲ್ಲಿ ಪೊಲೀಸರು ಗಸ್ತು ತಿರುಗಲಿದ್ದಾರೆ. ಜೊತೆಗೆ ಸೂಕ್ತ ಬಂದೋಬಸ್ತ್ ಕೈಗೊಳ್ಳಲಾಗಿದೆ.

ಈ ಹಿನ್ನೆಲೆಯಲ್ಲಿ ಮೀನುಗಾರಿಕೆ ನಡೆಸುವವರು ಮೀನುಗಾರಿಕೆಗೆ ಹೊರತುಪಡಿಸಿ ಬೇರೆ ಯಾರೂ ಹೊಸ ವರ್ಷಾಚರಣೆಗೆ ಅಥವಾ ಇನ್ಯಾವುದೇ ಕಾರಣದ ಮೋಜು- ಮಸ್ತಿಗೆ ಕಡಲತೀರದತ್ತ ಬರಕೂಡದು ಎಂದು ಜಿಲ್ಲಾ ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.

ಒಂದು ವೇಳೆ ನಿಯಮ ಉಲ್ಲಂಘಿಸಿದರೆ ಅಂತವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪೊಲೀಸ್ ಇಲಾಖೆ ಎಚ್ಚರಿಸಿದೆ.












Click it and Unblock the Notifications