ಉತ್ತರ ಕನ್ನಡ: ದುರಸ್ಥಿಯಾಗದ ತೂಗು ಸೇತುವೆ ಮೇಲೆ ಮೋಜು ಮಸ್ತಿ: ಅಪಾಯದ ಮುನ್ಸೂಚನೆ
ಕಾರವಾರ, ನವೆಂಬರ್ 2: ಗುಜರಾತ್‌ನ ಮೊರ್ಬಿಯಲ್ಲಿ ನಡೆದ ತೂಗು ಸೇತುವೆ ದುರಂತದಲ್ಲಿ ನೂರಾರು ಅಮಾಯಕ ಜೀವಗಳು ಬಲಿಯಾಗಿವೆ. ಒಂದು ಕ್ಷಣ ಮೈಮರೆತಿದ್ದಕ್ಕೆ ಭೀಕರ ದುರಂತವೊಂದು ನಡೆದುಹೋಗಿದೆ. ಆದರೆ ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ತೂಗು ಸೇತುವೆಗಳು ಪ್ರವಾಸಿಗರ ಫೆವರೇಟ್ ತಾಣಗಳಾಗಿದ್ದು, ಹೀಗೆ ಬಂದವರು ತೂಗು ಸೇತುವೆಗಳ ಮೇಲೆ ಮೋಜು ಮಸ್ತಿಯಲ್ಲಿ ತೊಡಗಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.
ಹೌದು, ಬಹುಭಾಗ ಅರಣ್ಯ ಪ್ರದೇಶಗಳಿಂದಲೇ ಕೂಡಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿನ ಬಹುತೇಕ ಹಳ್ಳಿಗಳಿರುವುದು ಗುಡ್ಡಗಾಡು ಪ್ರದೇಶಗಳಲ್ಲಿ. ಇಂತಹ ಕೆಲ ಹಳ್ಳಿಗಳಿಗೆ ಅಡ್ಡಲಾಗಿರುವ ನದಿಗಳಿಗೆ ದಶಕಗಳ ಹಿಂದೆ ತೂಗು ಸೇತುವೆ ನಿರ್ಮಿಸಲಾಗಿತ್ತು. ಆದರೆ ಈ ತೂಗು ಸೇತುವೆಗಳು ನಿರ್ವಹಣೆ ಇಲ್ಲದೆ ದುರಸ್ಥಿಗೆ ತಲುಪಿ ಹಲವು ವರ್ಷಗಳೇ ಕಳೆದಿದ್ದು ಇದೀಗ ಗುಜರಾತ್ ನ ಮೊರ್ಬಿ ತೂಗು ಸೇತುವೆ ದುರಂತದ ಬಳಿಕ ಜಿಲ್ಲೆಯಲ್ಲಿನ ತೂಗು ಸೇತುವೆ ಮೇಲಿನ ಸಂಚಾರ ಭಯ ಹುಟ್ಟಿಸುತ್ತಿದೆ.
Just in: ತೂಗು ಸೇತುವೆ ಮೇಲೆ ಕಾರು ಚಾಲನೆ; ಆರೋಪಿ ಬಂಧನ
ಶೇ. 75 ರಷ್ಟು ಅರಣ್ಯ ಪ್ರದೇಶದಿಂದಲೇ ಕೂಡಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿನ ಜನವಸತಿ ಪ್ರದೇಶಗಳ ಸಂಪರ್ಕಕ್ಕೆ ಜಿಲ್ಲೆಯ ವಿವಿಧೆಡೆ 6 ತೂಗು ಸೇತುವೆಗಳನ್ನು ನಿರ್ಮಾಣ ಮಾಡಲಾಗಿದೆ. ಇದರಿಂದ ಒಂದಿಷ್ಟು ಗ್ರಾಮಗಳಿಗೆ ಸಂಪರ್ಕ ಕಲ್ಪಿಸಲಾಗಿದ್ದು, ಅನಾದಿಕಾಲಗಳಿಂದ ದೋಣಿ, ತೆಪ್ಪಗಳ ಮೂಲಕ ಜೀವ ಕೈಯಲ್ಲಿ ಹಿಡಿದು ಓಡಾಡುತ್ತಿದ್ದವರಿಗೆ ಈ ಸಂಪರ್ಕ ವ್ಯವಸ್ಥೆ ಮುಖ್ಯವಾಹಿನಿಯೊಂದಿಗೆ ಬೆರೆಯುವುದಕ್ಕೂ ಅನುಕೂಲವಾಗಿದೆ.

ಹತ್ತಾರು ಗ್ರಾಮಗಳಿಗೆ ಸಂಚಾರ ಬಂದ್
ಆದರೆ 2019 ರಿಂದ ಸತತವಾಗಿ 3 ವರ್ಷ ಎದುರಾದ ಪ್ರವಾಹಕ್ಕೆ ಗಂಗಾವಳಿ ನದಿಗೆ ಅಡ್ಡಲಾಗಿ ಎರಡು ಹಾಗೂ ಅಘನಾಶಿನಿ ನದಿಗೆ ಬಡಾಳ ಬಳಿ ನಿರ್ಮಿಸಿದ್ದ ಒಂದು ಸೇತುವೆ ಕೊಚ್ಚಿ ಹೋಗಿದೆ. ಇದರಿಂದ ಸೇತುವೆ ಆಶ್ರಯಿಸಿಕೊಂಡಿರುವ ಹತ್ತಾರು ಗ್ರಾಮಗಳಿಗೆ ಮತ್ತೆ ದಶಕಗಳ ಹಿಂದಿನ ಸಮಸ್ಯೆ ಕಾಡತೊಡಗಿದೆ. ಪೇಟೆ ಪಟ್ಟಣ, ಮಕ್ಕಳ ವಿದ್ಯಾಭ್ಯಾಸ ಎಲ್ಲದಕ್ಕೂ ಇದೀಗ ಜೀವ ಕೈಯಲ್ಲಿ ಹಿಡಿದುಕೊಂಡು ದೋಣಿ ಆಶ್ರಯಿಸಬೇಕಾಗಿದೆ.

ಪ್ರವಾಸಿಗರ ಸೆಳೆಯುತ್ತಿರುವ ತೂಗು ಸೇತುವೆ
ಆದರೆ ಸದ್ಯ ಜಿಲ್ಲೆಯಲ್ಲಿ ಹೊನ್ನಾವರದ ಕರ್ಕಿಯ ಬಡಗಣಿ ಮತ್ತು ಕುದುರಗಿ ತೂಗು ಸೇತುವೆಗಳು ಹಾಗೂ ಯಲ್ಲಾಪುರದ ಶಿವಪುರ ತೂಗು ಸೇತುವೆಗಳು ಮಾತ್ರ ಇವೆ. ಪ್ರಕೃತಿ ಸೊಬಗಿನ ನಡುವೆ ಇರುವ ಈ ತೂಗು ಸೇತುವೆಗಳು ಪ್ರವಾಸಿಗರ ಪ್ರಮುಖ ಆಕರ್ಷಣೀಯ ಕೇಂದ್ರಗಳಾಗಿವೆ. ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ನಿರ್ಮಿಸಲಾದ ಸೇತುವೆಗಳ ನಿರ್ವಹಣೆಯನ್ನು ಸ್ಥಳೀಯ ಸಂಸ್ಥೆಗಳಿಗೆ ನೀಡಲಾಗಿದೆ.

ಅಪರಿಚರಿಂದ ಸೇತುವೇ ಮೇಲೆ ಕಾರು ಚಾಲನೆ ಮಾಡಿ ಉದ್ಧಟತನ
ಆದರೇ ಹಣದ ಕೊರತೆಯಿಂದ ಇವುಗಳ ನಿರ್ವಹಣೆಯನ್ನು ಮಾಡಲು ಸಾಧ್ಯವಾಗದೇ ತೂಗು ಸೇತುವೆಗಳು ಶಿಥಿಲಾವಸ್ಥೆಗೆ ತಲುಪಿವೆ. ತೂಗು ಸೇತುವೆಯ ರೋಪ್‌ಗಳು ತುಕ್ಕು ಹಿಡಿದಿದ್ದು, ಸೇತುವೆಯ ಲಿಂಕ್‌ಗಳು ಅಲ್ಲಲ್ಲಿ ಮುರಿದು ಹೋಗಿವೆ. ಇನ್ನು ಚಿಕ್ಕ ಸೇತುವೆಯಲ್ಲಿ ನಿರ್ಬಂಧವಿದ್ದರೂ ವಾಹನಗಳ ಸಂಚಾರ ಸಹ ಮಾಡುತ್ತಿವೆ. ನಿನ್ನೆಯಷ್ಟೆ ಶಿವಪುರ ಸೇತುವೆ ಮೇಲೆ ಅಪರಿಚಿತ ಪ್ರವಾಸಿಗರು ಕಾರು ಚಲಾಯಿಸಿ ಸ್ಥಳೀಯರು ಪ್ರಶ್ನಿಸಿದಾಗ ಉದ್ದಟತನ ಪ್ರದರ್ಶಿಸಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಟೀಕೆಗಳು ಕೇಳಿಬರುತ್ತಿವೆ.
ಇದೊಂದೆ ಅಲ್ಲ, ಜಿಲ್ಲೆಯ ಇತರೆ ತೂಗು ಸೇತುವೆಗಳ ಮೇಲೂ ಯುವಕರು ಮೋಜು ಮಸ್ತಿಗಾಗಿ ವಾಹನಗಳನ್ನು ಬೇಕಾಬಿಟ್ಟಿಯಾಗಿ ಚಲಾಯಿಸುತ್ತಿದ್ದಾರೆ. ನಿಗದಿತ ಭಾರಕ್ಕಿಂತ ಹೆಚ್ಚಿನದ್ದು ಸೇತುವೆ ಮೇಲೆ ಬೀಳುತಿದ್ದು ಇದರಿಂದಾಗಿ ತೂಗು ಸೇತುವೆಯ ಲಿಂಕ್ ಗಳು ಸಡಿಲವಾಗಿವೆ. ಯಾವಾಗ ಬೇಕಾದರೂ ತೂಗು ಸೇತುವೆ ಕಳಚಿ ಬೀಳುವ ಸ್ಥಿತಿ ತಲುಪಿದ್ದು ಆತಂಕ ಹುಟ್ಟಿಸುತ್ತಿದೆ ಎನ್ನುತ್ತಾರೆ ಶಿವಪುರದ ನಿವಾಸಿ ವಾಸುದೇವ ಗೌಡ.

ದುರಸ್ಥಿಗೆ ಕಾಯುತ್ತಿವೆ ಮೂರು ಸೇತುವೆಗಳು
ಇನ್ನೂ ತೂಗು ಸೇತುವೆಗಳಿಗೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ಅನುದಾನ ನೀಡಿದ್ದು ಉಡುಪಿಯ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಗಿರೀಶ್ ಭಾರದ್ವಜ್ ಅವರು ನಿರ್ಮಿಸಿದ್ದರು. ಆದರೆ ನಿರ್ವಹಣೆ ಸರ್ಕಾರವೇ ಮಾಡಬೇಕು ಎಂದು ಆಯಾ ಸ್ಥಳೀಯ ಸಂಸ್ಥೆಗಳಿಗೆ ವಹಿಸಿದ್ದರಾದರೂ ಸ್ಥಳೀಯ ಸಂಸ್ಥೆಗಳಲ್ಲಿ ಅನುದಾನವಿಲ್ಲದೆ ಸೇತುವೆ ನಿರ್ವಹಣೆ ಹಾಗೆ ಉಳಿದುಕೊಂಡಿದೆ. ಆದರೆ ಇದೀಗ ಮೂರು ಸೇತುವೆಗಳು ದುರಸ್ಥಿಗೆ ತಲುಪಿವೆ. ಸದ್ಯ ಶಿವಪುರ ತೂಗು ಸೇತುವೇ ದುರಸ್ಥಿಗೊಳಿಸಲಾಗಿದೆಯಾದರೂ ಇನ್ನೆರಡು ಸೇತುವೆಗಳು ತುಕ್ಕು ಹಿಡಿದು ಬೀಳುವ ಸ್ಥಿತಿಗೆ ತಲುಪಿವೆ.

ಜೀರ್ಣಾವಸ್ಥೆಗೆ ಅಗತ್ಯ ಕ್ರಮ
ಇನ್ನು ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಬಳಿ ಕೇಳಿದಾಗ ಸೇತುವೆ ಮೇಲೆ ಕಾರು ಚಲಾಯಿಸಿ ಸ್ಥಳೀಯರೊಂದಿಗೆ ವಾಗ್ವಾದ ನಡೆಸುವುದು ಗಮನಕ್ಕೆ ಬಂದಿದೆ. ಗುಜರಾತ್ ಘಟನೆ ಬಳಿಕ ಜಿಲ್ಲೆಯಲ್ಲಿನ ತೂಗು ಸೇತುವೆಗಳು ಪರಿಶೀಲಿಸಲು ಜಿಲ್ಲಾಧಿಕಾರಿ ಸಭೆ ನಡೆಸಲಾಗುವುದು. ಸ್ಥಳೀಯ ಸಂಸ್ಥೆಗಳಲ್ಲಿ ಹಣ ಇಲ್ಲದ ಕಾರಣ ಈ ಬಗ್ಗೆ ಜೀರ್ಣಾವಸ್ಥೆಗೆ ಅಗತ್ಯ ಕ್ರಮಗೊಳ್ಳುವುದಾಗಿ ತಿಳಿಸಿದ್ದಾರೆ.
ಒಟ್ಟಿನಲ್ಲಿ ಜನರ ಉಪಯೋಗಕ್ಕೆ ಎಂದು ನಿರ್ಮಿಸಿದ ತೂಗು ಸೇತುವೆಗಳು ಇದೀಗ ನಿರ್ವಹಣೆಯ ನಿರ್ಲಕ್ಷದಿಂದ ಜನರ ಬಲಿಗೆ ಕಾದು ನಿಂತಂತೆ ಜಿಲ್ಲೆಯ ತೂಗುಸೇತುವೆಗಳಿವೆ. ಊರಿಗೆ ಬೆಂಕಿ ಬಿದ್ದಮೇಲೆ ಬಾವಿ ತೋಡುವುದಕ್ಕಿಂತ ಸರ್ಕಾರ ಎಚ್ಚೆತ್ತು ಇವುಗಳನ್ನು ನಿರ್ವಹಣೆ ಮಾಡಿ ಸರಿಪಡಿಸಬೇಕಿದೆ.