ನನ್ನ ಮಗನ ಕಿಡ್ನಾಪ್ ಯತ್ನ, ನನಗೆ ಜೀವ ಬೆದರಿಕೆ: ಶಾಸಕಿ ರೂಪಾಲಿ ನಾಯ್ಕ
ಚುನಾವಣೆ ಹತ್ತಿರದಲ್ಲೇ ಕಾರವಾರದ ಬಿಜೆಪಿ ಶಾಸಕಿ ರೂಪಾಲಿ ನಾಯ್ಕ ತಮಗೆ ಜೀವ ಬೆದರಿಕೆ ಒಡ್ಡಲಾಗುತ್ತಿದೆ ಎಂದು ಕಹಿ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಅಲ್ಲದೇ ನನ್ನ ಮಗ, ಅಕ್ಕನ ಮಕ್ಕಳನ್ನು ಕಿಡ್ನಾಪ್ ಮಾಡಲು ಕೆಲವರು ಯತ್ನಿಸಿದ್ದರು ಎಂದು ಆರೋಪಿಸಿದ್ದಾರೆ.
ಕಾರವಾರ, ಮಾರ್ಚ್ 8: ನನ್ನ ಮಗ, ಅಕ್ಕನ ಮಕ್ಕಳನ್ನು ಕಿಡ್ನಾಪ್ ಮಾಡಲು ಕೆಲವರು ಯತ್ನಿಸಿದ್ದರು. ನಮಗೆ ಸಹಕಾರ ನೀಡಿ, ಇಲ್ಲದಿದ್ದರೆ ಸಾಯಿಸುತ್ತೇವೆ ಎಂದು ಬೇದರಿಕೆ ಒಡ್ಡಲಾಗುತ್ತಿದೆ ಎಂದು ಶಾಸಕಿ ರೂಪಾಲಿ ನಾಯ್ಕ ಆತಂಕ ವ್ಯಕ್ತಪಡಿಸಿದ್ದಾರೆ.
ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳು ಭರ್ಜರಿ ತಯಾರಿ ನಡೆಸಿದ್ದು, ಆರೋಪ ಪ್ರತ್ಯಾರೋಪಗಳ ಮೂಲಕ ಚುನಾವಣಾ ಕಣ ಮತ್ತಷ್ಟು ರಂಗೇರುವಂತೆ ಮಾಡಿದ್ದಾರೆ. ಆದರೆ ಚುನಾವಣೆ ಹತ್ತಿರದಲ್ಲೇ ಕಾರವಾರದಲ್ಲಿ ಶಾಸಕಿ ರೂಪಾಲಿ ನಾಯ್ಕ ತಮಗೆ ಜೀವ ಬೆದರಿಕೆ ಒಡ್ಡಲಾಗುತ್ತಿದೆ ಎಂದು ಈ ಬಗ್ಗೆ ಖುದ್ದು ಶಾಸಕಿ ತಮಗಾಗಿರುವ ಕಹಿ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಶಾಸಕಿಯಾಗುವ ಪೂರ್ವದಿಂದಲೂ ನನಗೆ ಜೀವ ಬೆದರಿಕೆ ಇತ್ತು. ಟಿಕೆಟ್ ಸಿಗುವ ಪೂರ್ವದಿಂದಲೇ ಬೆದರಿಕೆ ಇದೆ. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನನಗೆ ಜೀವ ಬೆದರಿಕೆ ಇದ್ದು, ಗನ್ ಲೈಸೆನ್ಸ್ ನೀಡಬೇಕೆಂದು ಮನವಿ ಮಾಡಿಕೊಂಡಾಗಲೂ ತುಂಬಾ ವಿಳಂಬ ಮಾಡಿ ಲೈಸೆನ್ಸ್ ಮಂಜೂರು ಮಾಡಿದ್ದರು ಎಂದರು.
ಕೇರಳ, ಪಶ್ಚಿಮ ಬಂಗಾಳ ಮತ್ತಿತರ ರಾಜ್ಯದ ನೋಂದಣಿ ಸಂಖ್ಯೆಯ ಕಾರು, ಟ್ರಕ್‌ಗಳು ರಾತ್ರಿಯ ವೇಳೆಯಲ್ಲಿ ನನ್ನ ಕಾರುಗಳನ್ನು ಹಿಂಬಾಲಿಸಿ ಬರುತ್ತಿವೆ. ನಂಬರ್ ಪ್ಲೇಟ್ ಇಲ್ಲದ, ಹೆಲ್ಮೆಟ್ ಹಾಕಿಕೊಂಡು ಬೈಕ್‌ಗಳಲ್ಲಿ ನನ್ನ ಕಾರುಗಳನ್ನ ಹಿಂಬಾಲಿಸುವ ಮೂಲಕ ನನಗೆ ಬೆದರಿಕೆ ಒಡ್ಡುವ ಘಟನೆಗಳು ನಡೆದಿವೆ. ಮಧ್ಯರಾತ್ರಿ ನನ್ನ ಮನೆಯ ಓಣಿಗಳಲ್ಲಿನ ಕರೆಂಟ್‌ಗಳನ್ನ ತೆಗೆದು, ಬೈಕ್‌ಗಳಲ್ಲಿ ಮನೆಯ ಸುತ್ತ ಅಪರಿಚಿತರು ತಿರುಗಾಡುವ ಘಟನೆಗಳೂ ನಡೆದಿವೆ ಎಂದಿದ್ದಾರೆ.
ನನ್ನ ಮಗ, ಅಕ್ಕನ ಮಕ್ಕಳನ್ನು ಕಿಡ್ನಾಪ್ ಮಾಡಲು ಕೆಲವರು ಯತ್ನಿಸಿದ್ದರು. 'ನಮಗೆ ಸಹಕಾರ ನೀಡಿ, ಇಲ್ಲದಿದ್ದರೆ ಸಾಯಿಸ್ತೇವೆ' ಎಂದು ನನಗೆ ಮೆಸೇಜ್ ಕೂಡ ಕಳುಹಿಸಿದ್ದಾರೆ. ರಾಜಕಾರಣದಲ್ಲಿ ಯಾರು ಶತ್ರು, ಯಾರು ಮಿತ್ರುವೆಂದು ಊಹಿಸಲು ಕೂಡ ಅಸಾಧ್ಯ. ಕೆಲ ಹತಾಶರಾದ ರಾಜಕಾರಣಿಗಳೂ ಇದರ ಹಿಂದೆ ಇರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ಸಿಎಂ, ಗೃಹ ಸಚಿವರಿಗೂ ದೂರು ನೀಡಿದ್ದೇನೆ: ರೂಪಾಲಿ ನಾಯ್ಕ
ಇವೆಲ್ಲ ಬಹಳ ಸಮಯದಿಂದ ನಡೆಯುತ್ತಿದ್ದರೂ ನಾನು ಇಷ್ಟು ದಿನ ಸುಮ್ಮನಿದ್ದೆ. ಶಾಸಕಳಾದ ನನಗೆ ಇಷ್ಟು ಬೆದರಿಕೆ ಇದೆ ಎಂದು ಗೊತ್ತಾದರೆ ಕ್ಷೇತ್ರದ ಜನತೆಗೂ ಹೆದರಿಕೆ ಉಂಟಾಗಲಿದೆಯೆಂದು ನಾನು ಕೂಡ ಇಂತಹ ಸಂದರ್ಭದಲ್ಲಿ ಧೈರ್ಯಗೆಡದೆ ಎದುರಿಸಿದ್ದೆ. ಈ ಹಿಂದೆ ಮಹಿಳಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ ಪೆನ್ನೇಕರ್ ಅವರಿದ್ದಾಗ ಮನೆ ಕಡೆಗಳಲ್ಲಿ ಪೊಲೀಸರನ್ನು ಗಸ್ತು ಹಾಕಿದ್ದರಿಂದ ಸದ್ಯ ಇಂಥವೆಲ್ಲ ಕಡಿಮೆಯಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳು, ಗೃಹ ಸಚಿವರಿಗೂ ದೂರು ನೀಡಿದ್ದೇನೆ. ಕಾರವಾರ ನನ್ನ ಅವಧಿಯಲ್ಲಿ ಬಹಳ ಶಾಂತವಾಗಿತ್ತು. ಆದರೆ ಮತ್ತೆ ಇಲ್ಲಿನ ಶಾಂತಿಯನ್ನು ಹಾಳು ಮಾಡಲು ಪ್ರಯತ್ನ ನಡೆಯುತ್ತಿದೆ. ಅದಕ್ಕೆ ನಾನು ಬಿಡುವುದಿಲ್ಲ. ಇಂಥ ಬೆದರಿಕೆಗಳಿಗೆ ಹೆದರುವುದೂ ಇಲ್ಲ ಎಂದಿದ್ದಾರೆ.
ಶಾಸಕಿಗೆ ಬೇದರಿಕೆ ಹಾಕುವುದು ಹೇಡಿಗಳ ಲಕ್ಷಣ
ಇನ್ನು ಶಾಸಕಿಗೆ ಈ ರೀತಿ ಬೇದರಿಕೆ ಹಾಕುವುದು ಹೇಡಿಗಳ ಲಕ್ಷಣ. ಇಂತಹ ಬೆದರಿಕೆ ವಿರುದ್ಧ ಪೊಲೀಸ್ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಬೇಕು. ಶಾಸಕಿ ಜೊತೆ ಭಾರತೀಯ ಜನತಾ ಪಾರ್ಟಿ ನಿಲ್ಲಲಿದೆ. ಇಂತಹ ದಮ್ಕಿ ಹಾಗೂ ಬೇದರಿಕೆ ಒಡ್ಡುವವರಿಗೆ ಕಾನೂನಾತ್ಮಕವಾಗಿ ತಕ್ಕ ಶಿಕ್ಷೆಯಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಆಗ್ರಹಿಸಿದ್ದಾರೆ.
ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕಿ ರೂಪಾಲಿ ನಾಯ್ಕ ಮೊದಲ ಬಾರಿ ಸ್ಪರ್ಧಿಸಿದ ವೇಳೆಯೇ ಗೆದ್ದು ಬಿಜೆಪಿಯಿಂದ ಶಾಸಕರಾದವರು. ಮಹಿಳಾ ಶಾಸಕಿಯಾಗಿ ಸಾಕಷ್ಟು ಜನಪ್ರಿಯತೆ ಗಳಸಿಕೊಂಡಿರುವ ಅವರು ಸದನದಲ್ಲಿಯೂ ಹಲವು ಚರ್ಚೆ ವೇಳೆ ವಿರೋಧ ಪಕ್ಷದ ನಾಯಕರ ವಿರುದ್ಧವೂ ಧ್ವನಿ ಎತ್ತಿ ಸಾಕಷ್ಟು ಚರ್ಚೆಗೂ ಕಾರಣರಾದವರು. ಆದರೆ ಇದೀಗ ಶಾಸಕಿ ತಮಗೆ ಹಾಗೂ ತಮ್ಮ ಕುಟುಂಬಕ್ಕೆ ಜೀವ ಬೇದರಿಕೆ ಒಡ್ಡಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದು ಜನ ಕೂಡ ಆತಂಕಕ್ಕೆ ಒಳಗಾಗುವಂತಾಗಿದೆ.
ಒಟ್ಟಾರೆ ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆ ರಂಗೇರಿದ ಬೆನ್ನಲ್ಲೇ ಇದೀಗ ಶಾಸಕಿ ರೂಪಾಲಿ ನಾಯ್ಕ ಅವರಿಗೆ ಬೆದರಿಕೆ ಕರೆ ಬಂದಿರುವುದು ಆತಂಕಕ್ಕೆ ಕಾರಣವಾಗಿದೆ. ಅಲ್ಲದೆ ಶಾಸಕರಿಗೆ ಈ ರೀತಿ ಬೆದರಿಕೆ ಒಡ್ಡಿದ್ದರೂ ತಮ್ಮದೇ ಸರ್ಕಾರ ದೂರು ದಾಖಲಿಸದೆ ಇರುವುದು ಕೂಡ ಚರ್ಚೆಗೆ ಕಾರಣವಾಗಿದೆ.












Click it and Unblock the Notifications