ಕಾರವಾರದಲ್ಲಿ ಮತ್ತೆ ಬಸ್ ಅಪಘಾತ: ಕಂಡಿಷನ್ ಇಲ್ಲದ ಬಸ್‌ಗಳನ್ನು ರಸ್ತೆಗಿಳಿಸದಂತೆ ಸ್ಥಳೀಯರ ಆಕ್ರೋಶ!
ಕಾರವಾರ, ಜನವರಿ 04: ಶಕ್ತಿ ಯೋಜನೆ ಜಾರಿಯಾದ ಬೆನ್ನಲ್ಲೇ ಉಚಿತ ಪ್ರಯಾಣದಿಂದಾಗಿ ಸಾರಿಗೆ ಬಸ್‌ಗಳಲ್ಲಿ ಓಡಾಡುವ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ. ಬಹುತೇಕ ಬಸ್‌ಗಳು ನಿತ್ಯವೂ ತುಂಬಿಯೇ ಓಡಾಡುತ್ತಿದ್ದರೂ ಕೂಡ ಈವರೆಗೂ ಹೆಚ್ಚುವರಿ ಅಥವಾ ಹೊಸ ಬಸ್ ಆಗಲಿ ಬಿಡುವ ಕೆಲಸವಾಗಿಲ್ಲ. ಆದರೆ ಗಡಿ ಜಿಲ್ಲೆ ಕಾರವಾರದಲ್ಲಿ ಬಸ್ ಕಂಡಿಷನ್ ಇಲ್ಲದೆ ಇದ್ದರೂ ಬಸ್ ತುಂಬ ಜನರನ್ನು ತುಂಬಿಕೊಂಡು ತೆರಳುತ್ತಿದ್ದ ಬಸ್‌ಗಳು ಪದೇ ಪದೇ ಅಪಘಾತಕ್ಕೊಳಗಾಗುತ್ತಿರುವುದು ಇದೀಗ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ರಾಜ್ಯದ ಗಡಿ ಜಿಲ್ಲೆ ಕಾರವಾರದಲ್ಲಿ ಕಂಡಿಷನ್ ಇಲ್ಲದ ಸರ್ಕಾರಿ ಬಸ್ಸುಗಳ ಓಡಾಟಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ ಎನ್ನುವ ಆರೋಪ ಕೇಳಿಬರುತ್ತಿದೆ. ಅದರಂತೆ ಇಂದು ಮುಂಜಾನೆ ಕಾರವಾರದಿಂದ ನೌಕಾನೆಲೆಗೆ ಕಾರ್ಮಿಕರನ್ನು ಕೊಂಡೊಯ್ಯುತ್ತಿದ್ದ ಬಸ್ಸೊಂದು ರಾಷ್ಟ್ರೀಯ ಹೆದ್ದಾರಿ 66 ರ ಬಳಿ ಸಂಕ್ರಭಾಗ ಘಟ್ಟದಲ್ಲಿ ಕಂದಕಕ್ಕೆ ಉರುಳಿದ್ದು ಚಾಲಕ ಸೇರಿ ಐದು ಮಂದಿ ಗಂಭೀರ ಗಾಯಗೊಂಡಿದ್ದಾರೆ.

ಅದೃಷ್ಟವಶಾತ್ ಬಸ್‌ನಲ್ಲಿದ್ದ 30ಕ್ಕೂ ಹೆಚ್ಚು ಕಾರ್ಮಿಕರು ಪ್ರಾಣಪಾಯದಿಂದ ಪಾರಾಗಿದ್ದಾರೆ. ಇನ್ನು ಮಳೆಯಿಂದಾಗಿ ಬಸ್ ಸ್ಕಿಡ್ ಆಗಿ ಘಟನೆ ಸಂಭವಿಸಿದೆ ಎನ್ನಲಾಗಿದೆ.
ಇನ್ನು ಕಳೆದ ಎರಡು ದಿನ ಹಿಂದೆಯೂ ಕಾರವಾರದಿಂದ ಮಲ್ಲಾಪುರಕ್ಕೆ ತೆರಳುತ್ತಿದ್ದ ಐವತ್ತಕ್ಕೂ ಅಧಿಕ ಜನರಿದ್ದ ಬಸ್ಸು ಬಸ್ ನಿಲ್ದಾಣದಿಂದ ಒಂದೆರಡು ಕಿಲೋ ಮೀಟರ್ ಸಂಚರಿಸುತ್ತಿರುವಾಗಲೇ ಎಕ್ಸೆಲ್ ಬ್ಲೇಡ್ ತುಂಡಾಗಿ ಅಪಘಾತಕ್ಕೊಳಗಾಗಿತ್ತು. ಬಸ್ಸು ರಸ್ತೆ ಮಧ್ಯದಲ್ಲಿಯೇ ಪಲ್ಟಿಯಾಗುವ ಹಂತಕ್ಕೆ ತಲುಪಿತ್ತು. ಇನ್ನು ಸ್ಥಳೀಯರು ಇದನ್ನು ಗಮನಿಸಿ ಪಲ್ಟಿಯಾಗುತ್ತಿದ್ದ ಬಸ್ಸನ್ನು ಎತ್ತಿ ಹಿಡಿದು ಜಾಕ್ ನೀಡಿ ಸಂಭವನೀಯ ಅವಘಡ ತಪ್ಪಿಸಿದ್ದರು.
ಘಟನೆಯಲ್ಲಿ ಬಸ್‌ನಲ್ಲಿ ಪ್ರಯಾಣಿಕರು ಸೇರಿದಂತೆ ರಸ್ತೆಯಲ್ಲಿದ್ದವರು ಅದೃಷ್ಟವಶಾತ್ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಜಿಲ್ಲಾ ಕೇಂದ್ರದಲ್ಲಿಯೇ ಇಂತಹ ಗುಜರಿ ಬಸ್‌ಗಳನ್ನು ಬಿಡಲಾಗುತ್ತಿದೆ. ಇದರಿಂದ ಪ್ರಯಾಣಿಕರಿಗೆ ಸುರಕ್ಷತೆಯೇ ಇಲ್ಲದಂತಾಗಿದೆ. ಕೂಡಲೇ ಇಲಾಖೆ ಈ ಬಗ್ಗೆ ಗಮನ ಹರಿಸಿ ಕಂಡೀಷನ್ ಇಲ್ಲದ ಬಸ್‌ಗಳನ್ನು ಗುಜರಿಗೆ ಹಾಕಿ ಒಳ್ಳೆಯ ಬಸ್‌ಗಳನ್ನು ಕಲ್ಪಿಸಬೇಕು ಎಂದು ಸೈಯದ್ ಆಗ್ರಹಿಸಿದ್ದಾರೆ.

ಇನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ 6 ಬಸ್ ಡಿಪೋಗಳಿದೆ. ಶಿರಸಿ ವಿಭಾಗದಲ್ಲಿರುವ 510 ಬಸ್ ಗಳ ಪೈಕಿ ಜಿಲ್ಲೆಯಾದ್ಯಂತ ಪ್ರತಿನಿತ್ಯ ನಿಗದಿತ ಮಾರ್ಗಗಳಿಗೆ 477 ಬಸ್ ಸಂಚಾರ ನಡೆಸುತ್ತವೆ. ಬದಲಿ ವ್ಯವಸ್ಥೆ ಬಳಕೆಗಾಗಿ 30 ಬಸ್ ಮೀಸಲಿಡಲಾಗಿದೆ. ಗ್ರಾಮೀಣ ಪ್ರದೇಶಕ್ಕೆ 212 ಹಾಗೂ ತಾಲ್ಲೂಕು, ಜಿಲ್ಲೆಗಳಿಗೆ ತೆರಳುವ ವೇಗದೂತ ಬಸ್‌ಗಳು 235 ಇದೆ.
ಇನ್ನು ಹೆಚ್ಚುವರಿಯಾಗಿ 100 ಬಸ್ ಗಳ ಬೇಡಿಕೆ ಇದೆ. ಆದರೆ ಈ ಬಸ್ ಗಳಪೈಕಿ ಹತ್ತು ವರ್ಷ ಮೀರಿರುವ ಬಸ್‌ಗಳ ಸಂಖ್ಯೆ- 70ಕ್ಕೂ ಹೆಚ್ಚು ಇದೆ. 120 ಕ್ಕೂ ಹೆಚ್ಚು ಚಾಲಕ, ನಿರ್ವಾಹಕರು ಅಗತ್ಯತೆ ಇರುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ ಎಲ್ಲಿಯೋ ನಗರ ಪ್ರದೇಶಗಳಲ್ಲಿ ಓಡಿ ಹಳೆಯದಾದ ಬಸ್ ಗಳನ್ನು ಜಿಲ್ಲೆಗೆ ನೀಡಲಾಗುತ್ತಿದೆ. ಆದರೆ ಇವುಗಳ ಕಂಡಿಷನ್ ಸರಿ ಇಲ್ಲದೆ ಇದ್ದರೂ ಓಡಾಡಕ್ಕೆ ಬಿಡುತ್ತಿರುವ ಕಾರಣ ಇದೀಗ ಅಪಘಾತಗಳ ಸಂಖ್ಯೆ ಹೆಚ್ಚಲು ಕಾರಣ ಎನ್ನಲಾಗುತ್ತಿದೆ.
ಇನ್ನು ಶಕ್ತಿ ಯೋಜನೆ ಬಂದ ನಂತರ ಕಾರವಾರದಲ್ಲಿ ಬಸ್ಸಿನಲ್ಲಿ ಸಂಚರಿಸುವವರ ಸಂಖ್ಯೆ ಸಹ ಹೆಚ್ಚಾಗಿದೆ. ಕಂಡಿಷನ್ ಇಲ್ಲದ ಬಸ್ಸನ್ನು ಓಡಾಟಕ್ಕೆ ಬಿಡದೆ ಸುರಕ್ಷಿತ ಪ್ರಯಾಣಕ್ಕೆ ಉತ್ತಮ ಬಸ್ ಬಿಡಬೇಕು. ಇಲ್ಲವಾದಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗಲಿದೆ ಎಂದು ಸ್ಥಳೀಯರಾದ ಯಶೋಧಾ ಆಗ್ರಹಿಸಿದ್ದಾರೆ.

ಇನ್ನು ಕಂಡಿಷನ್ ಇಲ್ಲದೇ ಈ ರೀತಿ ಓಡಾಟಕ್ಕೆ ಕಳಿಸಿ ದಾರಿ ಮಧ್ಯದಲ್ಲಿ ಅನಾಹುತ ಆಗಿರುವ ಹಲವು ಘಟನೆ ಕಾರವಾರದಲ್ಲಿ ನಡೆದಿದೆ. ಆದರೂ ಸಹ ಇದನ್ನು ಕಾರವಾರದ ಡಿಫೋ ಮ್ಯಾನೇಜರ್ ಸೌಮ್ಯಾ ಅವರ ಬಳಿ ಕೇಳಿದಾಗ ಪ್ರತಿಕ್ರೀಯೆ ನೀಡಲು ನಿರಾಕರಣೆ ಮಾಡಿದ್ದಾರೆ. ತಾವು ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳೋದಾಗಿ ಜಾರಿಕೊಳ್ಳುತ್ತಿದ್ದಾರೆ.
ಒಟ್ಟಿನಲ್ಲಿ ಸರ್ಕಾರ ಒಂದೆಡೆ ಶಕ್ತಿ ಯೋಜನೆ ಮೂಲಕ ಬಸ್ಸಿನಲ್ಲಿ ಒಡಾಡುವ ಪ್ರಯಾಣಿಕರ ಸಂಖ್ಯೆ ಹೆಚ್ಚಿಗೆ ಮಾಡುತ್ತಿದ್ದರೆ ಇನ್ನೊಂದೆಡೆ ಕಂಡಿಷನ್ ಇಲ್ಲದ ಬಸ್ಸಿನ ಓಡಾಟಕ್ಕೆ ಅವಕಾಶ ಮಾಡಿಕೊಡುವ ಮೂಲಕ ಅಪಘಾತಕ್ಕೆ ಆಹ್ವಾನ ಮಾಡುವಂತಿದ್ದು ಸಾರಿಗೆ ಇಲಾಖೆ ಸಚಿವರು ಈ ಬಗ್ಗೆ ಗಮನಹರಿಸಿ ಕಂಡಿಷನ್ ಇಲ್ಲದ ಬಸ್ಸಿನ ಓಡಾಟವನ್ನು ನಿಲ್ಲಿಸಿ ಮುಂದಾಗುವ ಅನಾಹುತಕ್ಕೆ ಬ್ರೇಕ್ ಹಾಕಬೇಕಾಗಿದೆ.












Click it and Unblock the Notifications