ಕಾರವಾರಕ್ಕೆ ಸಿಸಿ ಟಿವಿ ಕಣ್ಗಾವಲು; ವಾಹನ ಸವಾರರೇ ಎಚ್ಚರ
ಕಾರವಾರ, ಆಗಸ್ಟ್ 22; ಕಾರವಾರ ನಗರದಲ್ಲಿನ ವಾಹನ ಸಂಚಾರ ದಟ್ಟಣೆ ನಿಯಂತ್ರಿಸಲು, ಸಂಚಾರಿ ನಿಯಮ ಉಲ್ಲಂಘನೆಗೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದೆ. ನಗರದ 4 ಪ್ರಮುಖ ವೃತ್ತದಲ್ಲಿ ಅಳವಡಿಸಿರುವ ಅತ್ಯಾಧುನಿಕ ಕ್ಯಾಮೆರಾಗಳನ್ನು ಹಾಗೂ ಸಂಚಾರ ನಿರ್ವಹಣಾ ಕೇಂದ್ರವನ್ನು ಉದ್ಘಾಟಿಸಲಾಗಿದೆ.
ನಗರದ ಸುಭಾಷ್ ಸರ್ಕಲ್, ಸವಿತಾ ಹೋಟೆಲ್ ಸರ್ಕಲ್, ಹೂವಿನ ಚೌಕ ಹಾಗೂ ಶಿವಾಜಿ ಸರ್ಕಲ್‌ಗಳಲ್ಲಿ ಅತ್ಯಾಧುನಿಕ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇವುಗಳ ನಿರ್ವಹಣೆ ಮಾಡಲು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಾರಂಭಿಸಿರುವ ಸಂಚಾರ ನಿರ್ವಹಣಾ ಕೇಂದ್ರವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಉದ್ಘಾಟಿಸಿದರು.
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಈಗಾಗಲೇ ನಗರದಲ್ಲಿ ಕಾರವಾರ ನಗರಸಭೆ ವತಿಯಿಂದ 23 ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇವುಗಳೊಂದಿಗೆ ಒಟ್ಟು 4 ವೈರ್‌ಲೆಸ್ ಕ್ಯಾಮೆರಾಗಳು ಹಾಗೂ ಅದಕ್ಕೆ ಪಬ್ಲಿಕ್ ಅಡ್ರೆಸ್ ಸಿಸ್ಟಮ್ ಅಳವಡಿಸಲಾಗಿದೆ" ಎಂದರು.

"ಈ ಕ್ಯಾಮೆರಾಗಳು 360 ಡಿಗ್ರಿ ತಿರುಗಲಿವೆ. ಸಂಚಾರ ನಿರ್ವಹಣಾ ಕೇಂದ್ರದಿಂದಲೇ ಕ್ಯಾಮೆರಾ ಝೂಮ್ ಮಾಡಿ, ಸಂಚಾರ ನಿಯಮ ಉಲ್ಲಂಘಿಸಿದ ವಾಹನಗಳ ಫೋಟೊ ತೆಗೆದು ಸಾಕ್ಷಿ ಸಮೇತ ವಾಹನ ಮಾಲೀಕರಿಗೆ ನೋಟಿಸ್ ಕಳುಹಿಸಲು ಇವು ಸಹಕಾರಿಯಾಗಿವೆ" ಎಂದರು.
"4 ಕ್ಯಾಮೆರಾಗಳು ದಿನದ 24 ಗಂಟೆ ಕೂಡ ವೀಕ್ಷಣೆಗೆ ಲಭ್ಯವಿರುತ್ತವೆ. ನಿರ್ವಹಣಾ ಕೇಂದ್ರದಲ್ಲಿ ಶಿಫ್ಟ್‌ಗೆ ಇಬ್ಬರಂತೆ ಸಿಬ್ಬಂದಿ ನೇಮಿಸಲಾಗಿದ್ದು, ಅವರು ದೃಶ್ಯಾವಳಿಗಳ ಮೂಲಕ ಸಂಚಾರ ನಿಯಮ ಉಲ್ಲಂಘನೆ ಮಾಡುವವರನ್ನು ಕಚೇರಿಯಲ್ಲೇ ಪತ್ತೆ ಹಚ್ಚುವ ಕಾರ್ಯ ಮಾಡುತ್ತಾರೆ" ಎಂದು ಹೇಳಿದರು.
"ಸಂಚಾರ ನಿರ್ವಹಣೆಗಷ್ಟೇ ಅಲ್ಲದೇ, ಅಪರಾಧ ಕೃತ್ಯಗಳನ್ನು ಪತ್ತೆ ಹಚ್ಚಲು ಕೂಡ ಸಾಧ್ಯವಾಗುತ್ತದೆ. ಲೈವ್ ಇರದೇ ಹೋದರೂ ರೆಕಾರ್ಡ್ ಲಭ್ಯ ವಿರುತ್ತದೆ. ಅಲ್ಲದೇ ಕ್ಯಾಮೆರಾ ಬಳಿ ಧ್ವನಿವರ್ಧಕ ಅಳವಡಿಸಿದ್ದು, ಸಂಚಾರ ದಟ್ಟಣೆ ಇರುವ ಸಂದರ್ಭದಲ್ಲಿ ಸಂಚಾರ ನಿರ್ವಹಣಾ ಕೇಂದ್ರದಿಂದಲೇ ಸಾರ್ವಜನಿಕರಿಗೆ ಧ್ವನಿರ್ವಧಕದಿಂದ ಸಂಚಾರ ನಿಯಮದ ಬಗ್ಗೆ ಅರಿವು ಮೂಡಿಸುವ ಕಾರ್ಯ ಮಾಡಲಾಗುತ್ತದೆ" ಎಂದು ವಿವರಣೆ ನೀಡಿದರು.

ಕಾರವಾರದಲ್ಲಿ ಈ ಪ್ರಯೋಗ ನಡೆಸುತ್ತಿದ್ದು, ಮುಂದಿನ ದಿನದಲ್ಲಿ ಶಿರಸಿ ಹಾಗೂ ಭಟ್ಕಳದಲ್ಲಿ ಸಹ ಕ್ಯಾಮರಾ ಹಾಕಲಾಗುತ್ತದೆ. ಇದಾದ ನಂತರ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರದಲ್ಲಿ ಅಳವಡಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಕ್ಯಾಮೆರಾ ಮೂಲಕ ದಿನದ 24 ಗಂಟೆಯೂ ಪೊಲೀಸರು ಕಣ್ಗಾವಲು ಹಾಕುವುದರಿಂದ ಸಂಚಾರ ದಟ್ಟಣೆ, ನಿಯಮ ಉಲ್ಲಂಘನೆ ತಡೆಯಲು ಸಹಕಾರಿಯಾಗಲಿದೆ.
ಪಾರ್ಕಿಂಗ್ ವ್ಯವಸ್ಥೆ; "ಕಾರವಾರ ನಗರದಲ್ಲಿ ಪಾರ್ಕಿಂಗ್ ವ್ಯವಸ್ಥೆ ಸರಿಪಡಿಸಬೇಕೆಂಬ ಯೋಜನೆ ಇದ್ದು, ಸಂಚಾರ ನಿರ್ವಹಣಾ ಕೇಂದ್ರವು ನಮಗೆ ಎಲ್ಲಿ, ಹೇಗೆ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕಂಬ ಒಂದು ಚಿತ್ರಣವನ್ನು ನೀಡಲು ಸಹಕಾರಿಯಾಗಲಿದೆ" ಎಂದು ಶಿವಪ್ರಕಾಶ್ ದೇವರಾಜು ಹೇಳಿದ್ದಾರೆ.
"ಈಗಾಗಲೇ ನಗರದಲ್ಲಿ ಪಾರ್ಕಿಂಗ್ ವ್ಯವಸ್ಥೆ ಸರಿಪಡಿಸಲು ಯಾವ ರೀತಿ ಕ್ರಮ ಕೈಗೊಳ್ಳಬೇಕು ಎನ್ನುವ ಯೋಜನೆಯೊಂದನ್ನು ಜಿಲ್ಲಾಧಿಕಾರಿಗಳಿಗೆ ನೀಡಿದ್ದು, ಅದಕ್ಕೆ ಶೀಘ್ರದಲ್ಲೇ ಸಮ್ಮತಿ ಸಿಗುವ ಸಾಧ್ಯತೆ ಇದೆ. ಆಟೋ, ಬಸ್ಸು, ಕಾರುಗಳು ಎಲ್ಲೆಲ್ಲಿ ನಿಲ್ಲಬೇಕು ಎಂದು ನಿಗದಿತ ಸ್ಥಳ ಸೂಚನೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚಿಸಲಾಗಿದೆ" ಎಂದರು.
"ಮುಂದಿನ ದಿನದಲ್ಲಿ ಕಾರವಾರ ಇನ್ನಷ್ಟು ಬೆಳೆಯುವುದರಿಂದ ವಾಹನ ಸಂಚಾರ ದಟ್ಟಣೆ, ಪಾರ್ಕಿಂಗ್ ವ್ಯವಸ್ಥೆ ಬಗ್ಗೆ ಸಾಕಷ್ಟು ಸಮಸ್ಯೆ ಎದುರಾಗಲಿದ್ದು, ಅದನ್ನ ಬಗೆಹರಿಸಲು ಪಾರ್ಕಿಂಗ್ ವ್ಯವಸ್ಥೆ ಸರಿಪಡಿಸಲು ಇಲಾಖೆ ಕ್ರಮ ಕೈಗೊಳ್ಳಲಿದೆ" ಎಂದು ತಿಳಿಸಿದರು.












Click it and Unblock the Notifications