ದಶಕಗಳಿಂದ ಹೂಳು ತುಂಬಿದ ಮೀನುಗಾರಿಕಾ ಬಂದರು: ಸಮಸ್ಯೆಗೆ ಪರಿಹಾರ ಯಾವಾಗ..?
ಕಾರವಾರ, ನವೆಂಬರ್ 07: ಉತ್ತರ ಕನ್ನಡದಲ್ಲಿ ಪ್ರತಿ ವರ್ಷ ಕೋಟ್ಯಂತರ ರೂಪಾಯಿ ವಹಿವಾಟು ನಡೆಸಿ ಸರ್ಕಾರದ ಬೊಕ್ಕಸಕ್ಕೆ ಲಕ್ಷಾಂತರ ರೂ ಆದಾಯ ಹರಿಸುವ ಮೀನುಗಾರಿಕಾ ಬಂದರುಗಳಲ್ಲಿ ಹೂಳಿನ ಸಮಸ್ಯೆ ಮೀನುಗಾರರಿಗೆ ದೊಡ್ಡ ತಲೆನೋವಾಗಿದೆ.
ಸರ್ಕಾರ ಹಣ ಮಂಜೂರಿ ಮಾಡಿದ್ದರೂ ಕೂಡ ಸಿಆರ್‌ಜೆಡ್ ನಿಯಮಗಳು ಅಡ್ಡಿಯಾಗಿದ್ದು, ಪರಿಣಾಮ ದಶಕಗಳಿಂದ ತುಂಬಿಕೊಂಡ ಹೂಳಿನಲ್ಲಿ ದಿನದಿಂದ ದಿನಕ್ಕೆ ಬೋಟ್ ಸಂಚಾರ ದುಸ್ತರವಾಗತೊಡಗಿದೆ.

ರಾಜ್ಯದಲ್ಲಿಯೇ ಅತಿ ಉದ್ದದ ಕಡಲ ತೀರವನ್ನು ಒಳಗೊಂಡಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಏಂಟು ಪ್ರಮುಖ ಮೀನುಗಾರಿಕಾ ಬಂದರುಗಳಿವೆ. ಇದಲ್ಲದೆ, ಮಾವಿನಕುರ್ವೆ, ಬೆಳಾಂಬರ, ಮಂಜಗುಣಿಗಳಲ್ಲಿನ ಸಣ್ಣ ಬಂದರುಗಳಲ್ಲಿಯೂ ಪ್ರತಿ ವರ್ಷ ಕೋಟ್ಯಂತರ ರೂ ಮೀನುಗಾರಿಕಾ ವಹಿವಾಟು ನಡೆಸಲಾಗುತ್ತಿದೆ. ಅಲ್ಲದೆ ಸರ್ಕಾರರಕ್ಕೂ ಲಕ್ಷಾಂತರ ರೂ ಆದಾಯ ಸಂದಾಯವಾಗಲಿದೆ.
ಆದರೆ ಈ ಬಂದರುಗಳಲ್ಲಿ ದಶಕಗಳಿಗೂ ಹೆಚ್ಚು ಕಾಲದಿಂದ ಒಮ್ಮೆಯೂ ಹೂಳೇತ್ತಿಲ್ಲ. ಪರಿಣಾಮ ಹೂಳುತುಂಬಿಕೊಂಡ ಬಂದರುಗಳಲ್ಲಿ ಬೋಟ್‌ಗಳ ಸಂಚಾರವೇ ಇದೀಗ ದುಸ್ತರವಾಗತೊಡಗಿದೆ. ಸಮುದ್ರ ಇಳಿತದ ಸಂದರ್ಭದಲ್ಲಿ ಲಂಗರು ಹಾಕಿದ ಬೋಟ್‌ಗಳು ಬಂದರು ಪ್ರದೇಶಗಳಲ್ಲಿ ಸಿಲುಕಿಕೊಳ್ಳುತ್ತಿವೆ. ಮಾತ್ರವಲ್ಲದೆ ಚಂಡಮಾರುತ ಸೇರಿದಂತೆ ಇನ್ನಿತರ ಹವಮಾನ ವೈಪರಿತ್ಯದ ಸಂದರ್ಭಗಳಲ್ಲಿ ಬಂದರುಗಳಿಗೆ ಆಗಮಿಸುವ ಬೋಟ್‌ಗಳಿಗೆ ಲಂಗರು ಹಾಕಲು ಸೂಕ್ತ ಸ್ಥಳವೇ ಸಿಗದಂತಾಗುತ್ತಿದೆ.
ಇನ್ನು ಮೀನುಗಾರರ ಆಗ್ರಹದ ಮೇರೆಗೆ ಕಳೆದ ಬಾರಿ ಬಿಜೆಪಿ ಸರ್ಕಾರ ರಾಜ್ಯದ ಮೂರು ಜಿಲ್ಲೆಗಳ ಮೀನುಗಾರಿಕಾ ಬಂದರುಗಳಲ್ಲಿ ಹಂತ ಹಂತವಾಗಿ ಹೂಳು ತೆಗೆಯಲು ಇಪ್ಪತ್ತು ಕೋಟಿ ರೂಪಾಯಿ ಅನುದಾನ ಮಂಜೂರಿ ಮಾಡಿ ಬಿಡುಗಡೆ ಮಾಡಿತ್ತು. ಅಲ್ಲದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಹೂಳು ತೆಗೆಯಲು ಹಣ ಮೀಸಲು ಇಡುವ ಬಗ್ಗೆ ಬಜೆಟ್‌ನಲ್ಲಿ ಪ್ರಕಟಿಸಿದ್ದರು. ಆದರೆ ಇವರೆಗೂ ಯಾವುದೂ ಕೂಡ ಕಾರ್ಯರೂಪಕ್ಕೆ ಬಂದಿಲ್ಲ.

ಜಿಲ್ಲೆಯಲ್ಲಿ ಕಾರವಾರದ ಬೈತಖೋಲ, ಭಟ್ಕಳ, ಹೊನ್ನಾವರ, ತದಡಿ, ಬೆಲೆಕೇರಿ ಮುದಗಾದಲ್ಲಿಯೂ ಹೂಳು ತುಂಬಿಕೊಂಡ ಕಾರಣ ಮೀನುಗಾರರು ನಿತ್ಯವೂ ಪರದಾಡುವ ಸ್ಥಿತಿ ಇದೆ. ಆದರೆ ಈ ಬಗ್ಗೆ ಅಧಿಕಾರಿಗಳನ್ನು ಸದ್ಯ ಕಾರವಾರದ ಬೈತಕೋಲ್ ಹಾಗೂ ಭಟ್ಕಳದ ಬಂದರು ಹೂಳೆತ್ತಲಾಗುತ್ತಿದೆ. ಆದರೆ ಸಿಆರ್‌ಜೆಡ್ ನಿಯಮದಿಂದ ಬೈತಖೊಲ್ ಬಂದರು ಹೂಳೆತ್ತುವ ಪ್ರಕ್ರಿಯೇ ಪ್ರಾರಂಭಕ್ಕೆ ತಡವಾಗುತ್ತಿದೆ ಎನ್ನುತ್ತಾರೆ.
ಗುತ್ತಿಗೆ ಪಡೆದಿರುವ ಗೋವಾ ಮೂಲದ ವೈಭವಿ ಡ್ರೆಜ್ಜಿಂಗ್ ಕಂಪೆನಿ ಸಿಆರ್‌ಜೆಡ್ ಅನುಮತಿ ಪಡೆಯಲು ವಿಳಂಭ ಮಾಡುತ್ತಿದೆ. ಇದು ಹೀಗೆ ಮುಂದುವರಿದಲ್ಲಿ ಮೀನುಗಾರರಿಗೆ ಇನ್ನಷ್ಟು ಸಮಸ್ಯೆಯಾಗಲಿದ್ದು, ಕೂಡಲೇ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಹೂಳೆತ್ತಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಉತ್ತರಕನ್ನಡ ಜಿಲ್ಲಾ ಸಹಕಾರ ಮೀನು ಮಾರಾಟಗಾರರ ಫೆಡರೇಶನ್ ಅಧ್ಯಕ್ಷ ರಾಜು ತಾಂಡೇಲ್ ಆಗ್ರಹಿಸಿದ್ದಾರೆ.
ಸುರಕ್ಷಿತ ಬಂದರಿನಲ್ಲಿಯೂ ಲಂಗರಿಗೆ ಭಯ!
ಜಿಲ್ಲೆಯಲ್ಲಿಯೇ ಬೈತಖೋಲದ ಮೀನುಗಾರಿಕಾ ಬಂದರನ್ನು ಅತ್ಯಂತ ಸುರಕ್ಷಿತ ಬಂದರು ಎಂದು ಹೇಳಲಾಗುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಬಂದರುಗಳಲ್ಲಿಯೂ ಬೋಟ್‌ಗಳು ಸುರಕ್ಷಿತವಾಗಿ ನಿಲ್ಲಿಸಿಡಲು ಸಾಧ್ಯವಾಗದ ಸ್ಥಿತಿ ಇದೆ. ಅಲ್ಲದೆ ಹವಮಾನ ವೈಪರಿತ್ಯದ ಸಂದರ್ಭದಲ್ಲಿ ಹೊರ ರಾಜ್ಯ ಹಾಗೂ ಜಿಲ್ಲೆಗಳಿಂದ ಆಗಮಿಸುವ ಬೋಟ್‌ಗಳು ಕೂಡ ಲಂಗರು ಹಾಕಲು ಪರದಾಡಬೇಕಿದೆ. ಅಲ್ಲದೆ ಇಂತಹ ಸುರಕ್ಷಿತ ಬಂದರಿನಲ್ಲಿ ಲಂಗರು ಹಾಕಿದರೂ ಅಸುರಕ್ಷತೆ ಮೀನುಗಾರರನ್ನು ಕಾಡುವಂತಾಗಿದೆ. ಕೋಟ್ಯಂತರ ರೂ ವಹಿವಾಟು ನಡೆಸುವ ಅಲ್ಲದೆ ಅತಿ ಹೆಚ್ಚು ಆದಾಯ ಸರ್ಕಾರಕ್ಕೆ ನೀಡುವ ಬಂದರು ಪ್ರದೇಶದಲ್ಲಿ ಇರುವ ಅಡೆತಡೆಗಳನ್ನು ಸರ್ಕಾರ ಕೂಡಲೇ ಬಗೆಹರಿಸಿ ಹೂಳೆತ್ತಲು ಅವಕಾಶ ಮಾಡಿಕೊಬೇಕು ಎಂದು ರಾಜು ತಾಂಡೇಲ್ ಆಗ್ರಹಿಸಿದರು.
ಇನ್ನು ಈ ಬಗ್ಗೆ ಅಧಿಕಾರಿಗಳನ್ನು ಕೇಳಿದ್ರೆ ಈಗಾಗಲೇ ಭಟ್ಕಳ ಬಂದರಿನಲ್ಲಿ ಹೂಳೆತ್ತಲಾಗುತ್ತಿದೆ. ಆದರೆ ಬೈತಖೋಲ್ ಬಂದರು ಹೂಳೆತ್ತಲು ಗೋವಾದ ವೈಭವಿ ಡ್ರೆಜ್ಜಿಂಗ್ ಕಂಪೆನಿಗೆ 3.5 ಕೋಟಿಗೆ ಟೆಂಡರ್ ಆಗಿದೆ. ಸಿಆರ್‌ಜೆಡ್ ಪರವಾನಿಗೆಗೆ ಅರ್ಜಿ ಹಾಕಿದ್ದು ಇನ್ನು ರಾಜ್ಯ ಕಮಿಟಿಯಲ್ಲಿ ನಿರ್ಧಾರ ಆಗಿ ಬರಬೇಕಿದೆ. ಅದು ಸಿಕ್ಕ ಕೂಡಲೇ ಕಾಮಗಾರಿ ಪ್ರಾರಂಭಿಸುತ್ತೇವೆ ಎಂದು ಬಂದರು ಇಲಾಖೆ ಎಂಜಿನೀಯರ್ ರಾಜೀವ್ ಹೆಡೆ ಮಾಹಿತಿ ನೀಡಿದ್ದಾರೆ.












Click it and Unblock the Notifications