ಬಿಜೆಪಿ ಆಡಳಿತಾವಧಿಯಲ್ಲಿ ಹಣವಿಲ್ಲದಿದ್ದರೂ ಕಾಮಗಾರಿ: ದಿವಾಳಿಯತ್ತ ಕಾರವಾರ ನಗರಸಭೆ!
ಕಾರವಾರ, ನವೆಂಬರ್ 07: ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ ಎನ್ನುವ ಆರೋಪಗಳು ಮೊದಲಿಂದಲೂ ಕೇಳಿ ಬರುತ್ತಲೇ ಇದೆ. ಇದರ ನಡುವೆ ಕಳೆದ ಕೆಲ ವರ್ಷಗಳಿಂದ ಕಾಮಗಾರಿಗಳಲ್ಲಿ ಪರ್ಸೆಂಟೇಜ್ ಆರೋಪ ಪ್ರತ್ಯಾರೋಪಗಳು ಕೂಡ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ. ಆದರೆ ಕಾರವಾರ ನಗರಸಭೆಯೊಂದರಲ್ಲಿ ಕಳೆದ ಅವಧಿಯಲ್ಲಿ ಹಣವೇ ಇಲ್ಲದಿದ್ದರೂ ನಡೆಸಿದ ಕೊಂಟ್ಯಾಂತರ ರೂಪಾಯಿ ಕಾಮಗಾರಿಯಿಂದಾಗಿ ಇದೀಗ ಗುತ್ತಿಗೆದಾರರಿಗೆ ಮಾತ್ರವಲ್ಲದೆ ನಗರಸಭೆ ವಾಹನಗಳಿಗೆ ಡಿಸೇಲ್ ತುಂಬಿಸುವುದಕ್ಕೂ ಹಣವಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರಸಭೆಯಲ್ಲಿ ಇಂತಹದೊಂದು ಶೋಚನೀಯ ಸ್ಥಿತಿ ಅಧಿಕಾರಿಗಳ ಬೇಜವಬ್ದಾರಿಯಿಂದ ಎದುರಾಗಿದೆ. ನಗರಸಭೆಯಲ್ಲಿ ಅನುದಾನಕ್ಕಿಂತ ಹೆಚ್ಚಿನ ಮೊತ್ತದ ಕಾಮಗಾರಿಗಳನ್ನು ಮಾಡಿಸಿದ ಪರಿಣಾಮ ಪೂರ್ಣಗೊಂಡ ಕಾಮಗಾರಿಗಳ ಹತ್ತಾರು ಕೋಟಿ ರೂಪಾಯಿ ಬಿಲ್ ಪಾವತಿಗೆ ನಗರಸಭೆ ಪರದಾಡುತ್ತಿದೆ.

ಅಲ್ಲದೇ ಕಳೆದ ಕೆಲ ವರ್ಷಗಳಿಂದ ನಗರಸಭೆ ವ್ಯಾಪ್ತಿಯಲ್ಲಿನ ಮಳಿಗೆಗಳು, ಅಂಗಡಿಗಳು ಹಾಗೂ ಮನೆಗಳಿಂದ ತೆರಿಗೆ ಸಂಗ್ರಹ ಕಾರ್ಯ ಸರಿಯಾಗಿ ಆಗದ ಪರಿಣಾಮ ನಗರಸಭೆಯ ಆದಾಯ ಕುಂಠಿತವಾಗಿದೆ. ಇದರಿಂದಾಗಿ ಇದೀಗ ನಗರಸಭೆಯ ಕಸ ಸಂಗ್ರಹಣೆ, ನೀರು ಪೂರೈಕೆ ಸೇರಿದಂತೆ ಅಗತ್ಯ ಸೇವೆಗಳ ವಾಹನಗಳ ಇಂಧನ ಹಾಕಿಸಲೂ ಸಹ ಹಣವಿಲ್ಲದಂತಾಗಿದೆ. ಇದರಿಂದ ಬಂಕ್ ಮಾಲೀಕರ ಹಣ ಇಲ್ಲ ಇಂಧನ ನೀಡಲು ನಿರಾಕರಿಸಿದ್ದಾರೆ.
ನಗರಸಭೆ ಕಾಮಗಾರಿ ನಡೆಸಿದ ಗುತ್ತಿಗೆದಾರರಿಗೆ 11 ಕೋಟಿ ಪಾವತಿಸಬೇಕಾಗಿದೆ. ಬೀದಿ ದೀಪ ನಿರ್ವಹಣೆ ಬಿಲ್ ಕೂಡ ಬಾಕಿ ಇದೆ. ಇದೀಗ ನಗರಸಭೆ ಬಾಕಿ ಉಳಿಸಿಕೊಂಡಿರುವವರಿಗೆ ಕಾಡಿ ಬೇಡಿಯಾದರೂ ತೆರಿಗೆ ವಸೂಲಿ ಮಾಡುವುದು ಅನಿವಾರ್ಯವಾಗಿದೆ. ಅಲ್ಲದೆ ಈಗಾಗಲೇ ಜಿಲ್ಲಾಧಿಕಾರಿ ನಗರಸಭೆ ಅಧಿಕಾರಿಗಳಿಗೆ ಕರ ವಸೂಲಿಗೆ ಖಡಕ್ ಸೂಚನೆ ನೀಡಿದ್ದಾರೆ.

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಾರವಾರ ನಗರಸಭೆಯಲ್ಲಿಯೂ ಬಿಜೆಪಿ ಆಡಳಿತ ಇತ್ತು. ಅಧ್ಯಕ್ಷರ ಎರಡುವರೆ ವರ್ಷದ ಅವಧಿ ಮುಗಿದಿದ್ದರಿಂದ ಮೀಸಲಾತಿ ಸಮಸ್ಯೆಯಾಗಿ ಆರು ತಿಂಗಳಿಂದ ಆಡಳಿತಾಧಿಕಾರಿ ನೇಮಕವಾಗಿದೆ. ಹಿಂದಿನ ಅವಧಿಯಲ್ಲಿ ಹಣ ಇಲ್ಲದೆ ಇದ್ದರೂ ಕಾಮಗಾರಿ ನಡೆಸಿದ್ದರಿಂದ ನಗರಸಭೆಯಲ್ಲಿ ಖಜಾನೆ ಖಾಲಿಯಾಗಿದೆ. ಸದ್ಯ ಜಿಲ್ಲಾಧಿಕಾರಿ ಅವರೇ ಆಡಳಿತಾಧಿಕಾರಿಯಾಗಿದ್ದಾರೆ. ಅಧಿಕಾರಿಗಳ ಸಭೆ ನಡೆಸಿರುವ ಅವರು ಇದು ಅಧಿಕಾರಿಗಳ ನಿರ್ಲಕ್ಷ್ಯತನದಿಂದ ಆಗಿರುವುದನ್ನು ಒಪ್ಪಿರುವ ಅವರು ಇದೀಗ ತೆರಿಗೆ ಸಂಗ್ರಹಣೆಗೆ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅಲ್ಲದೆ ಈ ಬಗ್ಗೆ ತನಿಖೆಗೂ ಆದೇಶ ನೀಡಿದ್ದಾರೆ.












Click it and Unblock the Notifications