ಉತ್ತರ ಕನ್ನಡ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕೂಗು: ಸದನದಲ್ಲಿ ಒಗ್ಗಟ್ಟಾಗದ ಶಾಸಕರ ನಿಲುವು
ಕಾರವಾರ, ಡಿಸೆಂಬರ್ 07: ಉತ್ತರ ಕನ್ನಡ ಜಿಲ್ಲೆಯ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಸಂಬಂಧ ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಜಿಲ್ಲೆಯ ಶಾಸಕರುಗಳು ಧ್ವನಿ ಎತ್ತಿದ್ದಾರೆ. ಆದರೆ ಆಸ್ಪತ್ರೆಯನ್ನು ತಮ್ಮದೇ ಕ್ಷೇತ್ರವ್ಯಾಪ್ತಿಯಲ್ಲಿ ಸ್ಥಾಪಿಸುವಂತೆ ಬೇಡಿಕೆ ಸಲ್ಲಿಸಿದ್ದು ಶಾಸಕರುಗಳ ನಡುವೆಯೇ ಒಮ್ಮತವಿಲ್ಲದಂತಾಗಿದೆ.
ಪ್ರಶ್ನೋತ್ತರ ವೇಳೆಯಲ್ಲಿ ಕಾರವಾರ ಶಾಸಕ ಸತೀಶ್ ಸೈಲ್ ಮಾತನಾಡಿ, ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಪ್ರಾರಂಭವಾಗಿ ಹಲವು ವರ್ಷ ಕಳೆದರು ಇನ್ನು ಕೂಡ ಸೂಕ್ತ ವ್ಯವಸ್ಥೆ ಇಲ್ಲ. ಸದ್ಯ ಇದೇ ಆಸ್ಪತ್ರೆಗೆ ಸೌಲಭ್ಯ ಕಲ್ಪಿಸುವ ಮೂಲಕ ಸೂಪರ್ ಸ್ಪೆಷಾಲಿಟಿಯಾಗಿ ಅಭಿವೃದ್ಧಿಪಡಿಸಬೇಕು ಎಂದು ಆಗ್ರಹಿಸಿದರು. ಗೋವಾದಲ್ಲಿ ಆಯುಷ್ಮಾನ್ ಭಾರತ್ ನಡೆಯುತ್ತಿಲ್ಲ. ಮಂಗಳೂರಿಗೆ ರೋಗಿಯನ್ನು ಕರೆದೊಯ್ದರೆ ಅವರನ್ನು ಹಾಗೆಯೇ ಮನೆಗೆ ತರಬೇಕಾದ ಪರಿಸ್ಥಿತಿ ಇದೆ. ಜಿಲ್ಲೆಯ ಜನರ ಪರಿಸ್ಥಿತಿ ಗಂಭೀರವಾಗಿದೆ ಎಂದರು.

ಆದರೆ ಕುಮಟಾ ಶಾಸಕ ದಿನಕರ ಶೆಟ್ಟಿ, ಕುಮಟಾದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಬೇಕು. ಈಗಾಗಲೇ ನಾವು ಜಾಗ ಗುರುತಿಸಿದ್ದೇವೆಪ ಎಂದರು. ಶಿರಸಿ ಶಾಸಕ ಭೀಮಣ್ಣ ನಾಯ್ಕ, ಜಿಲ್ಲೆಯಲ್ಲಿ ಶಿರಸಿ ವಿಭಾಗ ದೊಡ್ಡದಾಗುತ್ತದೆ. ಶಿರಸಿಯಲ್ಲೇ ಸೂಪರ್ ಸ್ಪೆಷಾಲಿಟಿ ಆಗಬೇಕು ಎಂದರು. ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್, ಉತ್ತರಕನ್ನಡ ಭೌಗೋಳಿಕವಾಗಿ ದೊಡ್ಡ ಜಿಲ್ಲೆ. ಘಟ್ಟದ ಮೇಲೆ ಶಿರಸಿಯಲ್ಲಿ, ಕರಾವಳಿಯಲ್ಲಿ ಕುಮಟಾದಲ್ಲೊಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಬೇಕು ಎಂದು ಆಗ್ರಹಿಸಿದರು.
ಬಳಿಕ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್ ಪ್ರತಿಕ್ರಿಯೆ ನೀಡಿ, ಇದು ಈ ಹಿಂದಿನಿಂದಲೂ ನಡೆಯುತ್ತಿರುವ ಚರ್ಚೆ. ಈಗಿರುವ ಕ್ರಿಮ್ಸ್ ನಲ್ಲೇ ಸೂಪರ್ ಸ್ಪೆಷಲಿಸ್ಟ್ ಗಳ ನೇಮಕಕ್ಕೆ ಎರಡು ಬಾರಿ ಆಹ್ವಾನಿಸಿದ್ದರೂ ಒಬ್ಬರೇ ಒಬ್ಬ ವೈದ್ಯರು ಅರ್ಜಿ ಸಲ್ಲಿಸಿಲ್ಲ. ಈಗ ಮತ್ತೊಮ್ಮೆ ಕರೆಯುತ್ತೇವೆ. ಮೊದಲು ಕ್ರಿಮ್ಸ್ ಆಸ್ಪತ್ರೆಯನ್ನೇ ಮೇಲ್ದರ್ಜೆಗೇರಿಸಿ ಬಳಿಕ ಮತ್ತೊಂದು ಸೂಪರ್ ಸ್ಪೆಷಾಲಿಟಿ ಕಟ್ಟುವ ಬಗ್ಗೆ ಯೋಚಿಸೋಣ ಎಂದರು.

ಸ್ಪೀಕರ್ ಯು.ಟಿ.ಖಾದರ್ ಕೂಡ, ಕಾರವಾರದಿಂದ ಮಂಗಳೂರಿನವರೆಗೆ ಒಂದೇ ಒಂದು ಟ್ರಾಮಾ ಸೆಂಟರ್ ಇಲ್ಲದಿರುವುದು ಬೇಸರದ ಸಂಗತಿ. ಈ ಮೊದಲು ಗಡಿ ಜಿಲ್ಲೆಗಳ ರೋಗಿಗಳಿಗೆ ಗಡಿ ರಾಜ್ಯಗಳ ಆಸ್ಪತ್ರೆಗಳಲ್ಲಿ ಆಯುಷ್ಮಾನ್ ಭಾರತ್ ನಡೆಯುತ್ತಿತ್ತು. ಇದೀಗ ಗೋವಾದಲ್ಲಿ ಅದು ಯಾಕೆ ಆಗುತ್ತಿಲ್ಲ ಎಂಬ ಬಗ್ಗೆ ವೈದ್ಯಕೀಯ ಶಿಕ್ಷಣ ಸಚಿವರು ಗಮನಹರಿಸುವಂತೆ ಕೋರಿದರು.












Click it and Unblock the Notifications