ಅಫ್ಘಾನ್‌ನಿಂದ ಸುರಕ್ಷಿತವಾಗಿ ವಾಪಸ್ಸಾದ ಕಾರವಾರಿಗ!
ಕಾರವಾರ, ಆಗಸ್ಟ್ 24: ಅಫ್ಘಾನಿಸ್ತಾನದಲ್ಲಿ ಉದ್ಯೋಗದಲ್ಲಿದ್ದ ಉತ್ತರ ಕನ್ನಡ ಜಿಲ್ಲೆ ಕಾರವಾರ ತಾಲೂಕಿನ ಸದಾಶಿವಗಡ ಮೂಲದ ಯುವಕ ಸುರಕ್ಷಿತವಾಗಿ ತಾಯ್ನಾಡಿಗೆ ವಾಪಸ್ಸಾಗಿದ್ದಾರೆ.
ಸದಾಶಿವಗಡ ತಾರೀವಾಡದ ರಾಜೇಶ್ ಪಡುವಳಕರ ಸುರಕ್ಷಿತವಾಗಿ ಕಾಬೂಲ್‌ನಿಂದ ಏರ್‌ಲಿಫ್ಟ್ ಮೂಲಕ ದೆಹಲಿಗೆ ಬಂದು, ಅಲ್ಲಿಂದ ಮಂಗಳವಾರ ಬೆಳಿಗ್ಗೆ ಕಾರವಾರಕ್ಕೆ ಮರಳಿದ್ದಾರೆ. ಮನೆಯ ಮಗನ ಸುರಕ್ಷಿತ ವಾಪಸ್ಸಾತಿಯಿಂದಾಗಿ ಕುಟುಂಬದಲ್ಲಿ ನೆಮ್ಮದಿ ಮೂಡಿದೆ.
ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್‌ನಲ್ಲಿ ರಾಜೇಶ್ ಅಮೆರಿಕದ ಇಕೋಲೋಗ್ ಕಂಪೆನಿಯಲ್ಲಿ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದ. ಈ ಕಂಪನಿಯಲ್ಲಿ 700ರಷ್ಟು ಸಿಬ್ಬಂದಿ ಕೆಲಸ ಮಾಡುತ್ತಿದ್ದರು. ಇದು ಅಮೆರಿಕ ಸೇನೆಗೆ ಕ್ಯಾಟರಿಂಗ್ ಸೇರಿದಂತೆ ಇನ್ನಿತರ ಅವಶ್ಯಕತೆಗಳನ್ನು ಪೂರೈಸುತ್ತಿತ್ತು.

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ದಾಳಿ ನಡೆಸಿ, ಕಾಬೂಲ್‌ಅನ್ನು ತನ್ನ ಸುಪರ್ದಿಗೆ ಪಡೆಯುವ ವೇಳೆ ರಾಜೇಶ್ ಅಮೆರಿಕ ಸೇನೆಯ ಆಶ್ರಯದಲ್ಲಿದ್ದ. ಅಮೆರಿಕ ಸೇನೆಯು ಭಾನುವಾರ ಕಾಬೂಲ್‌ನಿಂದ ಕತಾರ್‌ಗೆ ಅವರನ್ನು ಕರೆದೊಯ್ದು, ಅಲ್ಲಿಂದ ಭಾರತೀಯ ಸೇನೆಯು ತನ್ನ ವಿಮಾನದ ಮೂಲಕ ದೆಹಲಿಗೆ ಕರೆತಂದಿತ್ತು. ಅಲ್ಲಿಂದ ಮುಂಬೈ- ಗೋವಾ ಮಾರ್ಗವಾಗಿ ಇಂದು ಬೆಳಿಗ್ಗೆ ರಾಜೇಶ್ ಕಾರವಾರಕ್ಕೆ ತಲುಪಿದ್ದಾರೆ.
ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡ ಬಳಿಕ ಅಲ್ಲಿನ ಪರಿಸ್ಥಿತಿಯ ಬಗ್ಗೆ ಟಿವಿಗಳಲ್ಲಿ ಕಂಡು ರಾಜೇಶ್‌ನ ಕುಟುಂಬ ಆತಂಕಗೊಂಡಿತ್ತು. ಆದರೀಗ ಮನೆಯ ಮಗ ಸುರಕ್ಷಿತ ವಾಪಸ್ಸಾದ ಬಳಿಕ ಕುಟುಂಬದವರು ಸಂತಸ ವ್ಯಕ್ತಪಡಿಸಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ ರಾಜೇಶ್, "ನನ್ನೊಂದಿಗೆ ನೇಪಾಳ, ಉಗಾಂಡ, ಶ್ರೀಲಂಕಾದವರೂ ಕಂಪನಿಯಲ್ಲಿ ಉದ್ಯೋಗದಲ್ಲಿದ್ದರು. ಕಾಬೂಲ್‌ನಲ್ಲಿ ನಾವೆಲ್ಲರೂ ಕೆಲಸದಲ್ಲಿದ್ದ ವೇಳೆ ಆಗಸ್ಟ್ 14ರಂದು ಅಮೆರಿಕಾ ಸೇನೆಯವರು ನಮಗೆ ಸೂಚನೆಯೊಂದನ್ನು ನೀಡಿದ್ದರು. ಇಲ್ಲಿ ಸದ್ಯದ ಪರಿಸ್ಥಿತಿ ಸರಿಯಿಲ್ಲ ಎಂದು ತಿಳಿಸಿದ್ದರು. ತಾಲಿಬಾನಿಗಳು ಆಗಲೇ ಎಲ್ಲಾ ಪ್ರದೇಶಗಳನ್ನು ವಶಕ್ಕೆ ಪಡೆದಿದ್ದರು. ಆದರೆ ಕಾಬೂಲ್ ಮಾತ್ರ ಉಳಿದುಕೊಂಡಿತ್ತು. ಅಮೆರಿಕ ಸೇನೆಗೆ ತಾಲಿಬಾನ್ ಅಷ್ಟು ಬೇಗ ಕಾಬೂಲ್‌ನ್ನು ವಶಪಡಿಸಿಕೊಳ್ಳುವ ಬಗ್ಗೆ ಊಹೆಯೂ ಇರಲಿಲ್ಲ. ಆದರೆ ಕೇವಲ ಒಂದು ದಿನದಲ್ಲೇ ಕಾಬೂಲನ್ನು ತಾಲಿಬಾನಿಗಳು ತಮ್ಮ ಸುಪರ್ದಿಗೆ ಪಡೆದುಕೊಂಡರು,'' ಎಂದು ತಿಳಿಸಿದರು.

"ನಂತರದಲ್ಲಿ ನಮ್ಮ ಕಂಪನಿಯವರು ಕೂಡ ಕಂಪನಿ ಬಂದ್ ಮಾಡುತ್ತೇವೆ, ನೀವೆಲ್ಲ ಇಲ್ಲಿಂದ ಹೊರಡಬೇಕು. ಇಲ್ಲಿಯ ಪರಿಸ್ಥಿತಿ ಸರಿಯಿಲ್ಲ ಎಂದು ತಿಳಿಸಿದರು. ಈ ಬಗ್ಗೆ ಇಂಡಿಯನ್ ರಾಯಭಾರಿಗೂ ಅವರು ಭಾರತೀಯರನ್ನು ಕರೆದೊಯ್ಯುವಂತೆ ತಿಳಿಸಿದ್ದರು. ಆದರೆ ಆ ಸಂದರ್ಭದಲ್ಲಿ ಏರ್‌ಪೋರ್ಟ್‌ಗಳಲ್ಲಿ ಜನಜಂಗುಳಿ ಉಂಟಾಗಿತ್ತು. ವಿಮಾನಗಳು ಇಳಿಯಲೂ ಸಾಧ್ಯವಾಗದಷ್ಟು ಜನರು ಸೇರಿದ್ದರು. ಹೀಗಾಗಿ ನಮಗೆ ಎಲ್ಲಿಯೂ ಹೋಗಲಾಗದ ಪರಿಸ್ಥಿತಿ ಇದ್ದಾಗ ಅಮೆರಿಕ ಸೇನೆ ನೆರವಿಗೆ ಬಂದು, ನಮ್ಮನ್ನು ಕತಾರ್‌ಗೆ ಕೊಂಡೊಯ್ಯಿತು," ಎಂದು ತಿಳಿಸಿದರು.
ಅಫ್ಘಾನಿಸ್ತಾನದಲ್ಲಿ ಉದ್ಯೋಗದಲ್ಲಿದ್ದ ಕಾರವಾರ ತಾಲೂಕಿನ ಸದಾಶಿವಗಡ ಮೂಲದ ಯುವಕ ಸುರಕ್ಷಿತವಾಗಿ ತಾಯ್ನಾಡಿಗೆ ವಾಪಸ್ಸಾಗಿದ್ದಾರೆ. #AfghanistanCrisis #Karwar pic.twitter.com/YTM1jSPnnS
— oneindiakannada (@OneindiaKannada) August 24, 2021
Recommended Video
"ಹೊರಗಡೆ ಗನ್, ಫೈರ್‌ಗಳು ಆಗುವುದು ಕೇಳುತ್ತಿತ್ತು. ಒಂದು ರೀತಿಯ ಆತಂಕವೂ ಇತ್ತು. ನಮಗೆ ಹೊರ ಹೋದರೆ ಸಾಕು ಎನ್ನುವಂತಾಗಿತ್ತು. ಆದರೆ ಯಾವುದೇ ಕಷ್ಟದ ಪರಿಸ್ಥಿತಿ ನಮ್ಮಲ್ಲಿ ಉದ್ಭವವಾಗಿರಲಿಲ್ಲ," ಎಂದು ಕಾರವಾರ ತಾಲ್ಲೂಕಿನ ರಾಜೇಶ್ ತಮ್ಮ ಅಫ್ಘಾನಿಸ್ತಾನದ ಕರಾಳ ಅನುಭವವನ್ನು ಹಂಚಿಕೊಂಡರು.












Click it and Unblock the Notifications