Karwar Constituency : ಬಿಜೆಪಿ-ಕಾಂಗ್ರೆಸ್ ಫೈಟ್ ನಡುವೆ, ಜೆಡಿಎಸ್ ಗೆಲುವಿನ ಲೆಕ್ಕಾಚಾರ
ಕಾರವಾರ, ಮಾರ್ಚ್ 20: ತನ್ನ ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾಗಿರುವ ಉತ್ತರ ಕನ್ನಡ ಜಿಲ್ಲೆಯ ಕಾರವಾರ ವಿಧಾನಸಭಾ ಕ್ಷೇತ್ರ ತನ್ನ ಅನೇಕ ವಿಶೇಷತೆಗಳಿಂದ ಕರ್ನಾಟಕದಲ್ಲಿ ಮಾನ್ಯತೆ ಪಡೆದಿದೆ. ಉತ್ತರ ಕನ್ನಡದ ಜಿಲ್ಲಾ ಕೇಂದ್ರವಾಗಿರುವ ಕಾರವಾರ ಕೃಷಿ, ಉತ್ಪಾದನೆ, ಮತ್ತು ಪ್ರವಾಸೋದ್ಯಮದಿಂದಲೇ ಹೆಚ್ಚು ಜನಪ್ರಿಯತೆ ಗಳಿಸಿದೆ.
ಕಾರವಾರ ಪಶ್ಚಿಮ ಕರಾವಳಿಯಲ್ಲಿ ಸುಂದರ ನಗರವಾಗಿದ್ದು, ಇದರ ಪೂರ್ವಕ್ಕೆ ಪಶ್ಚಿಮ ಘಟ್ಟಗಳಿವೆ. ಕಾರವಾರ ಕೈಗಾ ಅಣುವಿದ್ಯುತ್ ಸ್ಥಾವರ, ಕದಂಬ ನೌಕೌನೆಲೆಯಂತರ ಮಹತ್ವದ ಸ್ಥಳಗಳನ್ನು ಹೊಂದಿದೆ. ಅಷ್ಟೇ ಅಲ್ಲದೇ ಕಾಳಿ ನದಿಯ ವರದಾನವಾಗಿರುವ ಈ ಕ್ಷೇತ್ರದಲ್ಲಿ ಭತ್ತ, ಅಡಿಕೆ ಸೇರದಂತೆ ಇತರ ಬೆಳೆಗಳಿಗೆ ಸೂಕ್ತವಾದ ಹವಾಗುಣವನ್ನು ಸಹ ಹೊಂದಿದೆ.

ಪ್ರಕೃತಿ ಸೌಂದರ್ಯದಿಂದಲೇ ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಈ ತಾಣವು, ಇಂದಿಗೂ ಬುಡಕಟ್ಟು ಜನಾಂಗದವರಿಗೆ ಆಶ್ರಯ ತಾಣವಾಗಿದೆ. ಪದ್ಮಶ್ರೀ ಪುರಸ್ಕೃತರಾದ ಹಾಡುಹಕ್ಕಿ ಸುಕ್ರಿ ಬೊಮ್ಮಗೌಡ ಹಾಗೂ ವೃಕ್ಷಮಾತೆ ತುಳಿಸಿಗೌಡ ಈ ಭಾಗದವರಾಗಿರುವುದು ವಿಶೇಷ.
ಕಾರವಾರ ರಾಜಕೀಯ ವಿಶ್ಲೇಷಣೆ
ಸದ್ಯ ಬಿಜೆಪಿ ಭದ್ರಕೋಟೆಯಾಗಿರುವ ಕಾರವಾರದಲ್ಲಿ ಶಾಸಕಿ ರೂಪಾಯಿ ನಾಯ್ಕ್ ಶಾಸಕಿಯಾಗಿ ಅಧಿಕಾರ ನಡೆಸುತ್ತಿದ್ದಾರೆ. ಕಾರವಾರ-ಅಂಕೋಲಾದಲ್ಲಿ ಒಮ್ಮೆ ಗೆದ್ದವರು ಮತ್ತೆ ಗೆದ್ದಿರುವುದು ಕಡಿಮೆ. ಆದರೆ ಮತ್ತೊಮ್ಮೆ ಬಿಜೆಪಿ ಟಿಕೆಟ್ ನಿರೀಕ್ಷೆಯಲ್ಲಿ ಹಾಲಿ ಶಾಸಕಿ ರೂಪಾಲಿ ನಾಯ್ಕ ಓಡಾಟ ನಡೆಸಿ, ಸಭೆ ಚುರುಕುಗೊಳಿಸಿದ್ದಾರೆ.
ಇನ್ನು ಮಾಜಿ ಶಾಸಕ ಸತೀಶ್ ಸೈಲ್ ಮತ್ತೆ ಕಾಂಗ್ರೆಸ್‌ನಿಂದ ಸ್ಪರ್ಧೆಗೆ ಮುಂದಾಗಿದ್ದು, ಹಲವು ಆಕಾಂಕ್ಷಿಗಳ ನಡುವೆ ಟಿಕೆಟ್ ಗಿಟ್ಟಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ. ಆದರೆ ಕಳೆದ ಬಾರಿ ಜೆಡಿಎಸ್‌ನಿಂದ ಸ್ಪರ್ಧಿಸಿ ವೈಯಕ್ತಿಕ ವರ್ಚಸ್ಸಿನೊಂದಿಗೆ ರೂಪಾಲಿ ನಾಯ್ಕ ವಿರುದ್ಧ 15 ಸಾವಿರ ಮತಗಳ ಅಂತರದಿಂದ ಪರಾಜಿತಗೊಂಡಿದ್ದ ಆನಂದ್ ಅಸ್ನೋಟಿಕರ್ ಈವರೆಗೂ ಸ್ಪರ್ಧೆಯ ಗುಟ್ಟು ಬಿಟ್ಟುಕೊಟ್ಟಿಲ್ಲ.
ಕಳೆದ ಬಾರಿ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತಾದರೂ ಬಿಜೆಪಿ ಹಿಂದೂಪರ ಅಲೆಯಲ್ಲಿ ಕಾಂಗ್ರೆಸ್ ಜೆಡಿಎಸ್ ವಿರುದ್ಧ ಭರ್ಜರಿ ಜಯ ಸಾಧಿಸಿತ್ತು. ಆದರೆ ಈ ಬಾರಿ ಬಿಜೆಪಿಗೆ ಅಷ್ಟು ಸುಲಭದಲ್ಲಿ ಕ್ಷೇತ್ರವಿಲ್ಲ. ಶಾಸಕಿ ರೂಪಾಲಿ ನಾಯ್ಕ ಅವರಿಗೆ ಟಿಕೆಟ್ ನೀಡಿದರೂ ಜಿಲ್ಲೆಯ ಸ್ವಪಕ್ಷೀಯ ಮುಖಂಡುರಗಳೊಂದಿನಿಗಿ ಅಂತರ, 40% ಕಮಿಷನ್ ಆರೋಪ, ಆಡಳಿತ ವಿರೋಧಿ ಅಲೆ ಹಾಗೂ ಸ್ವಪಕ್ಷೀಯರ ಕಡೆಗಣನೆ ಮುಳ್ಳಾಗುವ ಸಾಧ್ಯತೆ ಇದೆ.
ಇನ್ನು ಬಿಜೆಪಿಗೆ ಹೊಲಿಸಿದರೆ ಕಾಂಗ್ರೆಸ್ ಪ್ರಚಾರದಲ್ಲಿ ಇನ್ನು ಆಮೆ ನಡಿಗೆಯಲ್ಲಿಯೇ ಇದೆ ಎನ್ನಲಾಗಿದೆ. ಕಾಂಗ್ರೆಸ್ ಮಹಿಳಾ ಟಿಕೆಟ್ ಆಕಾಂಕ್ಷಿಯಾಗಿ ಜಿ.ಪಂ ಮಾಜಿ ಸದಸ್ಯೆ ಚೈತ್ರಾ ಕೊಠಾರಕರ್ ಕೂಡ ಒಡಾಟ ನಡೆಸಿದ್ದಾರೆ. ಒಂದೊಮ್ಮೆ ಕಾಂಗ್ರೆಸ್ ಮಹಿಳೆಗೆ ಮಣೆ ಹಾಕಿದಲ್ಲಿ ಸತೀಶ್ ಸೈಲ್ ಪಕ್ಷೇತರವಾಗಿ ಸ್ಪರ್ಧಿಸುವುದು ಬಹುತೇಖ ಖಚಿತವಾಗಲಿದೆ.
ಇನ್ನು ಜೆಡಿಎಸ್ ಮುಖಂಡ ಆನಂದ್ ಅಸ್ನೋಟಿಕರ್ ಕಳೆದ ಬಾರಿ ಸೋತ ಬಳಿಕ ಕ್ಷೇತ್ರದಲ್ಲಿ ಕಾಣಿಸಿಕೊಂಡಿರಲಿಲ್ಲ. ಆಗೊಮ್ಮೆ ಈಗೊಮ್ಮೆ ಪತ್ರಿಕಾ ಹೇಳಿಕೆ ನೀಡಿ ಇರುವಿಕೆ ಸಾಬಿತುಪಡಿಸುತ್ತಿದ್ದ ಅವರು ಕಳೆದ ಕೆಲ ತಿಂಗಳುಗಳ ಹಿಂದೆ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿ ಮತ್ತೆ ತೆರೆ ಮರೆಗೆ ಜಾರಿದ್ದಾರೆ. ಇದರಿಂದ ಅವರ ಬೆಂಬಲಿಗರು ಇನ್ನೂ ಗೊಂದಲದಲ್ಲಿಯೇ ಇದ್ದಾರೆ.
ಕಾರವಾರ ವಿಧಾನಸಭಾ ಕ್ಷೇತ್ರದಲ್ಲಿ ಹಾಲಕ್ಕಿ ಸಮುದಾಯ, ಕೋಮಾರಪಂಥ, ಮೀನುಗಾರರು ಪ್ರಬಲ ಸಮುದಾಯವಾಗಿದೆ. ಕ್ಷೇತ್ರದಲ್ಲಿ ಪ್ರತಿ ಬಾರಿ ಜಾತಿ ಲೆಕ್ಕಾಚರವು ಮುನ್ನೆಲೆಗೆ ಬಂದರೂ ಈವರೆಗೂ ಜಾತಿ ಆಧಾರದ ಮೇಲೆ ಆಯ್ಕೆಯಾದವರು ಇಲ್ಲ ಎನ್ನುವ ವಿಚಾರ ಮುಖ್ಯವಾಗಿದೆ.
ಕಾರವಾರ ವಿಧಾನಸಭಾ ಕ್ಷೇತ್ರದ ಮತದಾರರ ವಿವರ
ಒಟ್ಟು ಮತದಾರರು-2,16,138
ಪುರುಷರು-1,06,746
ಮಹಿಳೆಯರು-1,09,392
2018 ವಿಧಾನಸಭಾ ಚುನಾವಣಾ ಫಲಿತಾಂಶ
2018 ವಿಧಾನಸಭಾ ಚುನಾವಣೆಯಲ್ಲಿ ರೂಪಾಲಿ ನಾಯ್ಕ ಬಿಜೆಪಿಯಿಂದ ಸ್ಪರ್ಧಿಸಿ 60,339 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಸತೀಶ್ ಸೈಲ್ 45,071 ಮತಗಳನ್ನು ಪಡೆದಿದ್ದರು. ಇನ್ನು ಬಿಜೆಪಿಗೆ ಜಿದ್ದಾಜಿದ್ದಿಯ ಪೈಪೋಟಿ ನೀಡಿದ್ದ ಜೆಡಿಎಸ್ ಅಭ್ಯರ್ಥಿ 46,275 ಮತಗಳನ್ನು ಪಡೆದಿದ್ದರು.












Click it and Unblock the Notifications