ಕಾರವಾರದ ಮಾಜಾಳ ಚೆಕ್‌ಪೋಸ್ಟ್ ಬಳಿ ದಾಖಲೆ ಇಲ್ಲದ 5.25 ಲಕ್ಷ ರೂಪಾಯಿ ಪತ್ತೆ
ಕಾರವಾರ, ಮಾರ್ಚ್, 30: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 5.25 ಲಕ್ಷ ರೂಪಾಯಿ ನಗದನ್ನು ಪೊಲೀಸರು ವಶಪಡಿಸಿಕೊಂಡ ಘಟನೆ ಕಾರವಾರದ ಮಾಜಾಳ ಚೆಕ್ ಪೋಸ್ಟ್ ಬಳಿ ನಡೆದಿದೆ.
ಕದ್ರಾ ಸಿಪಿಐ ಗೋವಿಂದರಾಜ ದಾಸರಿ, ಕದ್ರಾ ಪಿಎಸ್ಐಗಳಾದ ಉದ್ದಪ್ಪ ಅಶೋಕ ಧರೆಪ್ಪನವರ, ರವೀಂದ್ರ ಬಿರಾದಾದ, ಸಿಬ್ಬಂದಿಗಳಾದ ಮುಕುಂದ ನಾಯ್ಕ, ಸಂತೋಷ ಉರ್ಮಿ, ರಾಧಾ ಗೌಡ, ಸುರೇಶ್ ಹಾರಗೊಪ್ಪ ಹಾಗೂ ಜಿಲ್ಲಾ ಸಂಕ್ಯಾ ಸಂಗ್ರಹಣ ಅಧಿಕಾರ ಕಛೇರಿ ಅಧಿಕಾರಿಗಳ ಸಮ್ಮುಖದಲ್ಲಿ ಜಂಟಿಯಾಗಿ ಕಾರ್ಯಾಚರಣೆ ನಡೆಸಲಾಗಿದೆ. ಈ ವೇಳೆ ಗೋವಾದಿಂದ ಆಗಮಿಸುತ್ತಿದ್ದ ವಾಹನ ತಪಾಸಣೆ ನಡೆಸಲಾಗಿದ್ದು, ಯಾವುದೇ ದಾಖಲೆ ಇಲ್ಲದೆ 5 ಲಕ್ಷದ 25 ಸಾವಿರ ರೂಪಾಯಿ ನಗದು ಹಣ ಕಾರಿನಲ್ಲಿ ಪತ್ತೆಯಾಗಿದೆ.

ದಾಖಲೆಯಿಲ್ಲದ ಹಣ ಪತ್ತೆ
ಗೋವಾ ಕಾಣಕೋಣದ ಭಗತವಾಡದ ಸತ್ಯೇಂದ್ರ ಭಗತ ಎಂಬುವವರು ಈ ಹಣವನ್ನು ಸಾಗಿಸುತ್ತಿದ್ದವರಾಗಿದ್ದಾರೆ. ದಾಖಲೆಯಿಲ್ಲದ ಕಾರಣ ನಗದು ಹಣ ಹಾಗೂ ಹಣ ಸಾಗಾಟಕ್ಕೆ ಬಳಸಿದ ಕಾರನ್ನು ವಶಕ್ಕೆ ಪಡೆಯಲಾಗಿದೆ. ಅಲ್ಲದೆ ಈತನ ವಿರುದ್ಧ ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ.
ಜಾನುವಾರು ಸಾಗಾಟ, ಮೂವರ ವಿರುದ್ಧ ಕೇಸ್
ಕ್ರೂಸರ್ ವಾಹನದಲ್ಲಿ ಅಕ್ರಮವಾಗಿ ಗೋವಾ ಮದ್ಯ ಸಾಗಾಟ ಮಾಡುತ್ತಿದ್ದ ವೇಳೆ ಅಬಕಾರಿ ಅಧಿಕಾರಿಗಳು ಹಾಗೂ ರಾಜ್ಯ ವಿಚಕ್ಷಣ ದಳ ದಾಳಿ ನಡೆಸಿ ಸುಮಾರು 15.52 ಲಕ್ಷ ಮೌಲ್ಯದ ಸ್ವತ್ತುಗಳ ಜೊತೆ ಓರ್ವ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆಂಧ್ರಪ್ರದೇಶದ ಮೇದಕ್ ಜಿಲ್ಲೆಯ ಬಗೀಲಿ ಅಜಯ ಗೌಡ ಬಂಧಿತ ಆರೋಪಿತನಾಗಿದ್ದಾನೆ.
ರಾಜ್ಯ ವಿಧಾನಸಭಾ ಚುನಾವಣೆಗೆ ದಿನಾಂಕ ನಿಗಧಿಯಾದ ಹಿನ್ನೆಲೆ ರಾಜ್ಯದ ಗಡಿಯಲ್ಲಿ ಕಟ್ಟುನಿಟ್ಟಿನ ತಪಾಸಣೆ ಕೈಗೊಳ್ಳಲಾಗುತ್ತಿದೆ. ಅದರಂತೆ ಮಾಜಾಳಿ ಚೆಕ್‌ಪೋಸ್ಟ್‌ನಲ್ಲಿ ಅಬಕಾರಿ ಹಾಗೂ ವಿಚಕ್ಷಣ ದಳದ ಸಿಬ್ಬಂದಿ ವಾಹನಗಳನ್ನ ಪರಿಶೀಲನೆ ನಡೆಸುತ್ತಿದ್ದ ವೇಳೆ ಆಂಧ್ರಪ್ರದೇಶ ಮೂಲದ ಕ್ರೂಸರ್ ವಾಹನದಲ್ಲಿ ಅಕ್ರಮ ಗೋವಾ ಮದ್ಯ ಪತ್ತೆಯಾಗಿದೆ.

ಸುಮಾರು 17.5 ಲೀಟರ್ ಗೋವಾ ಮದ್ಯ, 3.75 ಲೀಟರ್ ಗೋವಾ ಫೆನ್ನಿ ಹಾಗೂ 3.75 ಲೀಟರ್ ಗೋವಾ ವೈನ್ ಪತ್ತೆಯಾಗಿದ್ದು, ಇವುಗಳ ಅಂದಾಜು ಮೌಲ್ಯ 52 ಸಾವಿರ ರೂಪಾಯಿ ಆಗಿದೆ. ಈ ವೇಳೆ ಅಕ್ರಮ ಮದ್ಯ ಸಾಗಾಟಕ್ಕೆ ಬಳಕೆ ಮಾಡಲಾದ 15 ಲಕ್ಷ ಮೌಲ್ಯದ ಕ್ರೂಸರ್ ವಾಹನ ಸೇರಿ ಒಟ್ಟು 15.52 ಲಕ್ಷ ಮೌಲ್ಯದ ಸ್ವತ್ತುಗಳನ್ನು ಜಪ್ತಿ ಮಾಡಲಾಗಿದ್ದು, ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅಬಕಾರಿ ಉಪ ನಿರೀಕ್ಷಕ ಪಿ.ಕೆ. ಹಳದನಕರ ಕಾರವಾರ ಅಬಕಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಅಕ್ರಮ ಸಾಗಾಟದಾರರಿಗೆ ಗಡಿಭಾಗದಲ್ಲಿ ಕಟ್ಟುನಿಟ್ಟಿನ ನಿಗಾ ಇರಿಸಿರುವ ಸಂದೇಶ ರವಾನಿಸಿದ್ದಾರೆ.
ಹಾಗೆಯೇ ಯಾವುದೇ ಪಾಸ್ ಪರ್ಮಿಟ್ ಹೊಂದಿರದೇ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಲಾರಿಯನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಹೊನ್ನಾವರ ತಾಲೂಕಿನ ಹಳದಿಪುರದ ರಾಷ್ಟ್ರೀಯ ಹೆದ್ದಾರಿ 66ರ ಅಗ್ರಹಾರ ಗಣಪತಿ ದೇವಸ್ಥಾನ ಎದುರಿಗೆ ನಡೆದಿದೆ. ಬೈಂದೂರಿನಿಂದ ಪೂನಾ ಕಡೆಗೆ ಜಾನುವಾರು ಸಾಗಿಸುತ್ತಿದ್ದರು ಎನ್ನಲಾಗಿದೆ.
ಸರಿಯಾದ ಗಾಳಿ, ಬೆಳಕು ಇರುವ ಕಂಪಾರ್ಟ್‌ಮೆಂಟ್‌ನ ವ್ಯವಸ್ಥೆ ಮಾಡದೆ ಹಾಗೂ ಜಾನುವಾರುಗಳಿಗೆ ಆಹಾರ ಮತ್ತು ನೀರಿನ ವ್ಯವಸ್ಥೆ ಮಾಡದೇ, ಹಿಂಸಾತ್ಮಕವಾಗಿ ಲಾರಿಯಲ್ಲಿ ತುಂಬಿಕೊಂಡು ಸಾಗಾಟ ಮಾಡುತ್ತಿದ್ದರು ಎನ್ನಲಾಗಿದೆ.
ಲಾರಿಯಲ್ಲಿ 4 ಆಕಳು, 7 ಕಾರು ಸೇರಿ ಒಟ್ಟು 11 ಜಾನುವಾರುಗಳಿದ್ದವು. ಆರೋಪಿತರಾದ ಧಾರವಾಡ ಜಿಲ್ಲೆಯ ರಾಜೀವಗಾಂಧಿ ನಗರದ 2ನೇ ಕ್ರಾಸ್‌ನ ನಿವಾಸಿ ಸಂತೋಷ್ ಮಂಟೂರ್, ಇನ್ನೋರ್ವ ಬೈಂದೂರು ತಾಲೂಕಿನ ಶಿರೂರು ನಿವಾಸಿ, ಕೊರಿಯರ್ ಕೆಲಸ ನಿರ್ವಹಿಸುತ್ತಿರುವ ನಾಗರಾಜ ಮೊಗೇರ, ಧಾರವಾಡ ಜಿಲ್ಲೆಯ ಜೊಡ ಕ್ರಾಸ್ ನಿವಾಸಿ, ಕ್ಲೀನರ್ ಕೆಲಸದಲ್ಲಿರುವ ಮಣಿಕಂಠ ದೇಸಾಯಿಪಟ್ಟಿ ಎನ್ನುವವರ ಮೇಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮದ್ಯದಂಗಡಿಗಳು ಬಂದ್
ಭಟ್ಕಳ ತಾಲೂಕಿನಲ್ಲಿ ಶ್ರೀಚನ್ನಪಟ್ಟಣ ಮಾರುತಿ ದೇವರ ಜಾತ್ರಾ ಮಹೋತ್ಸವ ನಿಮಿತ್ತ ಮಾರ್ಚ್ 30ರಂದು ರಾತ್ರಿ 12 ಗಂಟೆಯವರೆಗೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಎಲ್ಲಾ ರೀತಿಯ ಮದ್ಯದ ಅಂಗಡಿ, ವೈನ್ ಶಾಪ್ ಮತ್ತು ಬಾರ್‌ಗಳನ್ನು ಬಂದ್ ಮಾಡಿಸಲಾಗಿದೆ. ಹಾಗೆಯೇ ಎಲ್ಲಾ ರೀತಿಯ ಮದ್ಯ ಮಾರಾಟ ಮತ್ತು ಸಾಗಾಟವನ್ನು ನಿಷೇಧಿಸಲಾಗಿದೆ.
ಭಟ್ಕಳ ನಗರವು ಮತೀಯ ದೃಷ್ಟಿಯಿಂದ ಅತೀ ಸೂಕ್ಷ್ಮ ಪ್ರದೇಶವಾಗಿದ್ದು, ರಥೋತ್ಸವ ವೇಳೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಿಕೊಳ್ಳುವ ದೃಷ್ಟಿಯಿಂದ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ಈ ಆದೇಶವನ್ನು ಹೊರಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ತಿಳಿಸಿದ್ದಾರೆ.












Click it and Unblock the Notifications