ಅಂದು ಬೆಳ್ಳಿ ನಾಣ್ಯ ಮುಟ್ಟಲು ಬಿಡಲಿಲ್ಲ, ಇಂದು ವಸ್ತುಸಂಗ್ರಹಾಲಯಲ ನಿರ್ಮಾಣಕ್ಕೆ ಕಲ್ಲಬ್ಬೆಯ ಕೃಷಿಕ ಸಜ್ಜು
ಕಾರವಾರ, ಡಿಸೆಂಬರ್, 15: ಕುಮಟಾ ತಾಲೂಕಿನ ಕಲ್ಲಬ್ಬೆಯ ಚಿದಾನಂದ ಹೆಗಡೆ ಎಂಬ ಕೃಷಿಕ ತಿರಸ್ಕಾರವನ್ನೇ ಛಲವಾಗಿಸಿಕೊಂಡು ಇತರರಿಗೂ ಮಾದರಿ ಆಗಿದ್ದಾರೆ. ನಿತ್ಯ ಬದುಕಿನ ಕೆಲಸ ಕಾರ್ಯಗಳ ಜೊತೆ ಜೊತೆಗೆ ನಾಣ್ಯ, ಅಂಚೆ ಚೀಟಿ ಹಾಗೂ ಹಳೆಯ ವಸ್ತುಗಳ ಸಂಗ್ರಹಣೆಯ ಹವ್ಯಾಸವನ್ನು ಬೆಳಸಿಕೊಂಡಿದ್ದಾರೆ. ಇದೀಗ ಅವರ ಮನೆಯಲ್ಲಿ ಗತಕಾಲದ ವೈಭವವನ್ನೇ ತುಂಬಿಕೊಂಡು ಯುವ ಸಮುದಾಯಕ್ಕೆ ಮಾದರಿಯಾಗಿದ್ದಾರೆ.
ಕುಮಟಾ ತಾಲೂಕಿನ ಕಲ್ಲಬ್ಬೆಯ ಕೃಷಿಕ ಚಿದಾನಂದ ಹೆಗಡೆ ಇಂತಹದೊಂದು ವಿಶಿಷ್ಟ ಸಾಧನೆ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಶಾಲಾ ದಿನಗಳಲ್ಲಿ ಎನ್‌ಎಸ್‌ಎಸ್ ಶಿಬಿರದ ವೇಳೆ ಸಹಪಾಠಿಯೋರ್ವ ತಂದಿದ್ದ ಬೆಳ್ಳಿ ನಾಣ್ಯವನ್ನು ಮುಟ್ಟಲು ಬಿಟ್ಟಿರಲಿಲ್ಲ. ಆಗಿನಿಂದ ಇದನ್ನೇ ಛಲವಾಗಿ ಸ್ವೀಕರಿಸಿದ ಅವರು ಇದೀಗ ಗತಕಾಲದ ಬೆಳ್ಳಿ, ಬಂಗಾರ, ತಾಮ್ರವನ್ನೊಳಗೊಂಡ ವಿವಿಧ ಬಗೆಯ ಎರಡು ಸಾವಿರಕ್ಕೂ ಹೆಚ್ಚು ನಾಣ್ಯಗಳನ್ನು ಸಂಗ್ರಹಣೆ ಮಾಡಿದ್ದಾರೆ. ಈ ಮೂಲಕ ಅವಮಾನವನ್ನು ಮೆಟ್ಟಿ ನಿಲ್ಲುವ ಮೂಲಕ ಇತರರಿಗೂ ಮಾದರಿಯಾಗಿ ಹೊರಹೊಮ್ಮಿದ್ದಾರೆ.
ಕ್ರಿಸ್ತ ಶಕ 950ರ ಚೋಳರ ಕಾಲದ ಚಿನ್ನದ ಕಿರು ನಾಣ್ಯದಿಂದ ಹಿಡಿದು ವಿಜಯನಗರದ ಕಾಲದ ವರಹಗಳು, ಗಂಗರ, ಹೊಯ್ಸಳರ, ಈಸ್ಟ್ ಇಂಡಿಯಾ ಕಂಪನಿ ಬಿಡುಗಡೆ ಮಾಡಿದ್ದ ನಾಣ್ಯಗಳು, ಪೈಸೆಗಳೂ ಇವೆ. ಭಾರತೀಯ ನಾಣ್ಯಗಳ ಜೊತೆಗೆ ದೇಶ- ವಿದೇಶದ ನಾಣ್ಯಗಳೂ ಇವರ ಬಳಿ ಇವೆ. 5, 6ನೇ ಜಾರ್ಜ್ ಕಿಂಗ್ ಕಾಲದ ನಾಣ್ಯಗಳು, ವಿಕ್ಟೋರಿಯಾದ 1900ನೇ ಇಸವಿಯ ನಾಣ್ಯ, ಅಮೆರಿಕನ್ ಡಾಲರ್, ಜಪಾನ್, ಜರ್ಮನಿ, ನೈಜೀರಿಯಾ, ಸಿಂಗಾಪುರ್ ಹೀಗೆ ನೂರಾರು ದೇಶಗಳ ನಾಣ್ಯಗಳನ್ನು ಇವರು ಸಂಗ್ರಹಿಸಿಟ್ಟುಕ್ಕೊಂಡಿದ್ದಾರೆ.

ವಿದೇಶಿ ನೋಟುಗಳನ್ನು ಸಂಗ್ರಹಿಸಿದ ಕೃಷಿಕ
ಇನ್ನು ಕೇವಲ ನಾಣ್ಯಗಳು ಮಾತ್ರವಲ್ಲದೆ ಹಳೆ ಕಾಲದ ಭಾರತೀಯ ಹಾಗೂ ವಿದೇಶಿ ನೋಟುಗಳು, ಪೋಸ್ಟಲ್ ಸ್ಟಾಂಪ್ಸ್‌ಗಳನ್ನೂ ಸಂಗ್ರಹಿಸಿದ್ದಾರೆ. ಭಾರತದಲ್ಲಿ ಬಿಡುಗಡೆಯಾದ ಬಹುತೇಕ ಸ್ಟಾಂಪ್‌ಗಳನ್ನು ಇವರು ಸಂಗ್ರಹ ಮಾಡಿದ್ದು, ಇದೀಗ ಬಿಡುಗಡೆ ಮಾಡುತ್ತಿರುವ ಸ್ವಾಂಪ್‌ಗಳು ಕೂಡ ಮನೆ ಬಾಗಿಲಿಗೆ ಬರುವಂತೆ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಪೋಸ್ಟ್ ಆಫಿಸ್‌ನಲ್ಲಿ ಹಣವನ್ನು ಮುಂಗಡವಾಗಿ ಇಟ್ಟು ಇದಕ್ಕೆ ವ್ಯವಸ್ಥೆ ಮಾಡಿಕೊಂಡಿದ್ದಾರೆ.

ಕೃಷಿಕ ಚಿದಾನಂದ ಹೆಗಡೆ ಹೇಳಿದ್ದೇನು?
ಹಳೆಯ ಬೆಳ್ಳಿ, ಬಂಗಾರದ ನಾಣ್ಯಗಳು ಅಕ್ಕಸಾಲಿಗರ ಅಂಗಡಿಗಳಲ್ಲಿ ಸಿಗುವುದು ಗೊತ್ತಾಯಿತು. ಜನರು ಈ ನಾಣ್ಯಗಳನ್ನು ಮಾರಾಟ ಮಾಡುವ ಕಾರಣ ನಾವು ಅದರ ಬೆಲೆಯನ್ನು ಅಂಗಡಿಯವರಿಗೆ ಹೇಳಿ ಖರೀದಿಸಬೇಕಿತ್ತು. ಅಲ್ಲದೆ ಇಂತಹ ನಾಣ್ಯಗಳ ಬೆಳ್ಳಿ ಬಂಗಾರದ ಖಚಿತತೆ ಕೂಡ ಅಂಗಡಿಯಲ್ಲಿ ದೊರೆಯುತ್ತವೆ. ಆದ ಕಾರಣ ಸಾಕಷ್ಟು ನಾಣ್ಯಗಳನ್ನು ಅಲ್ಲಿಯೇ ಖರೀದಿ ಮಾಡಿದ್ದೇನೆ ಎಂದು ಚಿದಾನಂದ ಹೆಗಡೆ ಮಾಹಿತಿ ನೀಡಿದರು.

ಹಳೆ ಕಾಲದ ನಾಣ್ಯಗಳ ಉಚಿತ ಪ್ರದರ್ಶನ
ಇನ್ನು ಸಂಗ್ರಹಿಸಿದ ನಾಣ್ಯಗಳನ್ನು ಶಾಲಾ- ಕಾಲೇಜುಗಳಲ್ಲಿ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಿಗೆ ತೆರಳಿ, ಜನರಿಗೆ ಪ್ರದರ್ಶನದ ಮೂಲಕ ತೋರಿಸಲಾಗುವುದು. ನಾಣ್ಯಗಳ ಮಾಹಿತಿಗಳನ್ನು ಉಚಿತವಾಗಿ ಕೊಡುವ ಕಾರ್ಯವನ್ನು ಸಹ ಮಾಡುತ್ತಿದ್ದೆ. ಆದರೆ ಇದೀಗ ವಯಸ್ಸಾದ ಕಾರಣ ಹಾಗೂ ನಾಣ್ಯಗಳು ಹಾಳಾಗುವ ಮತ್ತು ಕದಿಯುವ ಆತಂಕ ಹೆಚ್ಚಾಗಿದೆ. ಹಾಗಾಗಿ ಶಾಲೆಗಳಿಂದ ಆಹ್ವಾನ ಬಂದರೆ ಮಾತ್ರ ಅಲ್ಲಿಗೆ ತೆರಳಿ ನಾಣ್ಯಗಳ ಪ್ರದರ್ಶನ ನೀಡಿ ಬರುತ್ತೇನೆ. ನನ್ನ ಬಳಿ ಪುರಾತನ ನಾಣ್ಯಗಳು ಇದ್ದು, ಇವುಗಳನ್ನು ನೋಡಲು ವಿದ್ಯಾರ್ಥಿಗಳಲ್ಲಿಯೂ ಕುತೂಹಲ ಹೆಚ್ಚಾಗಿರುತ್ತದೆ. ಆದ್ದರಿಂದ ವಿದ್ಯಾರ್ಥಿಗಳಿಗೆ ನಾಣ್ಯಗಳ ಉಚಿತ ಪ್ರದರ್ಶನ ಏರ್ಪಡಿಸಲಾಗುವುದು ಎಂದರು.

ಕೃಷಿಕನ ಬಳಿಯಿದೆ ದೇಶದ ಅತಿ ದೊಡ್ಡ ಅಡಿಕೆ
ಇನ್ನು ಚಿದಾನಂದ ಅವರ ತೋಟದಲ್ಲಿ ಬೆಳೆದ 10.6 ಸೆಂ.ಮೀ. ಸುತ್ತಳತೆಯ, 4 ಸೆಂ.ಮೀ. ಉದ್ದದ ಅಡಕೆಯೊಂದು ದೇಶದ ಅತಿದೊಡ್ಡ ಅಡಕೆ ಎಂಬ ಹೆಗ್ಗಳಿಕೆ ಪಡೆದಿದೆ. ಇದು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲಾಗಿದೆ. ಅಲ್ಲದೆ ಮೂರು ಕಣ್ಣಿನ ಅಡಿಕೆ ಕೂಡ ಇವರ ಬಳಿ ಇದ್ದು, 25 ವರ್ಷಗಳಿಂದ ಅದನ್ನು ಜೋಪಾನ ಮಾಡಿಕೊಂಡು ಬಂದಿರುವುದಾಗಿ ತಿಳಿಸಿದರು.

ಹಳೆಕಾಲದ ವಸ್ತುಗಳ ವಿವರ ಇಲ್ಲಿದೆ
ಇನ್ನು ಇದಲ್ಲದೆ ಇವರು ಸ್ವಾತಂತ್ರ್ಯ ಪೂರ್ವದ ಹಾಗೂ ಹಲವು ದಶಕಗಳ ಹಿಂದಿನ ಗೃಹಬಳಕೆಯ ಹಳೆಯ ವಸ್ತುಗಳನ್ನು ಸಂಗ್ರಹಿಸುವ ಹವ್ಯಾಸ ಕೂಡ ಬೆಳಸಿಕೊಂಡಿದ್ದಾರೆ. ವಸ್ತು ಸಂಗ್ರಹಾಲಯ ಮಾಡಲು ಸಿದ್ದತೆಯನ್ನೂ ನಡೆಸಿದ್ದಾರೆ. ಮರದ ನೇಗಿಲು, ಕುಕ್ಕೆ, ಸಾಂಬರ್ ಬಟ್ಟಲು, ಅಕ್ಕಿ ಹಾಳಾಗದಂತೆ ಬಳಸುತ್ತಿದ್ದ ಕುಡ್ತಿಗೆ, ದಡೆಬುಟ್ಟಿ ಸೇರಿದಂತೆ ಹಲವು ವಸ್ತುಗಳನ್ನು ಜೋಪಾನವಾಗಿಟ್ಟುಕೊಂಡು ಅದನ್ನು ವಸ್ತುಸಂಗ್ರಹಾಲಯದ ಮೂಲಕ ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ವಿಭಿನ್ನ ಪ್ರಯತ್ನಕ್ಕೆ ಮುಂದಾಗಿದ್ದಾರೆ.












Click it and Unblock the Notifications