ಕಾರವಾರದಲ್ಲಿ ಸಾಲು ಸಾಲು ಉತ್ಸವ, ಭರ್ಜರಿ ಮನೋರಂಜನೆಗೆ ನೀವೂ ಬನ್ನಿ
ಕಾರವಾರ, ನವೆಂಬರ್ 1: ಜಿಲ್ಲಾಮಟ್ಟದ ಕರಾವಳಿ ಉತ್ಸವವನ್ನು ಡಿಸೆಂಬರ್ 8, 9 ಹಾಗೂ 10ರಂದು ಕಾರವಾರದಲ್ಲಿ ನಡೆಸುವುದಾಗಿ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ. ಜಿಲ್ಲಾಡಳಿತವು ವಿವಿಧ ಇಲಾಖೆ ಹಾಗೂ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಈ ಉತ್ಸವ ನಡೆಸಲಿದೆ.
ಕಾರವಾರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಉತ್ಸವದಲ್ಲಿ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಅವಕಾಶ ನೀಡಲಾಗುತ್ತದೆ. ಎರಡು ದಿನ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕಲಾವಿದರಿಗೆ ಅವಕಾಶ ನೀಡಲಾಗುವುದು ಎಂದರು.
"ಉತ್ಸವದ ಅಂಗವಾಗಿ ಕುಸ್ತಿ ಪಂದ್ಯ, ಬೀಚ್ ಕಬಡ್ಡಿ, ಗಾಳಿಪಟ ಸ್ಪರ್ಧೆ, ದೋಣಿ ಸ್ಪರ್ಧೆಯನ್ನು ಏರ್ಪಡಿಸಲಾಗುವುದು. ಕಾರ್ಯಕ್ರಮ ವೀಕ್ಷಣೆಗೆ ಬರುವ ತಾಲೂಕಿನ ಗ್ರಾಮೀಣ ಭಾಗದ ಜನರಿಗೆ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು," ಎಂದು ತಿಳಿಸಿದರು.

ನವೆಂಬರ್ 24ರಿಂದ ವೈನ್ ಫೆಸ್ಟಿವಲ್
ಕಾರವಾರದ ಕಾಳಿ ಸಂಗಮದಲ್ಲಿ ನವೆಂಬರ್ 24ರಿಂದ 26ರವರೆಗೆ ದ್ರಾಕ್ಷಾರಸ ಉತ್ಸವ ನಡೆಯಲಿದೆ. ತೋಟಗಾರಿಕಾ ಇಲಾಖೆ, ಕರ್ನಾಟಕ ದ್ರಾಕ್ಷಾರಸ ಮಂಡಳಿ ಹಾಗೂ ಉತ್ತರ ಕನ್ನಡ ಜಿಲ್ಲಾಡಳಿತ ಕಾಳಿ ರಿವರ್ ಗಾರ್ಡನ್ ನಲ್ಲಿ ಈ ಉತ್ಸವ ನಡೆಸಲಿದೆ.

ರಿಯಾಯಿತಿ ದರದಲ್ಲಿ ವೈನ್ ಮಾರಾಟ
ಶೇ 10ರ ರಿಯಾಯತಿ ದರದಲ್ಲಿ ವೈನ್ ಗಳ ಮಾರಾಟ ನಡೆಸಲು ನಿರ್ಧರಿಸಲಾಗಿದೆ. 20 ರೂ. ಪ್ರವೇಶ ಶುಲ್ಕ ಇರಿಸಲಾಗಿದ್ದು, 21 ವರ್ಷ ಮೇಲ್ಪಟ್ಟವರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ ಎಂದೂ ಸಚಿವರು ತಿಳಿಸಿದರು.

ಜನವರಿಯಲ್ಲಿ ಸ್ಕೂಬಾ ಉತ್ಸವ
ಇಲ್ಲಿನ ಭಟ್ಕಳ ಸಮೀಪದ ಮುರ್ಡೇಶ್ವರದ ನೇತ್ರಾಣಿಯಲ್ಲಿ ಸ್ಕೂಬಾ ಡೈವಿಂಗ್ ಉತ್ಸವವನ್ನು ಜನವರಿ 6 ಮತ್ತು 7ರಂದು ಎರಡು ದಿನಗಳ ಕಾಲ ನಡೆಸಲಾಗುವುದು. ಪ್ರವಾಸೋದ್ಯಮ ಬೆಳವಣಿಗೆಗೆ ಪೂರಕವಾಗಿ ಈ ಉತ್ಸವ ನಡೆಸಲಾಗುತ್ತಿದ್ದು, ಅಂತರಾಷ್ಟ್ರೀಯ ಹಾಗೂ ಪರಿಣಿತ ಸ್ಕೂಬಾ ಡೈವಿಂಗ್ ತಂಡವನ್ನು ಉತ್ಸವಕ್ಕೆ ಆಮಂತ್ರಿಸಬೇಕು ಎಂದು ಅಧಿಕಾರಿಗಳಿಗೆ ಸಚಿವರು ಸಲಹೆ ನೀಡಿದರು.

ಜನವರಿ 27ರಿಂದ ಹಾರ್ನ್ ಬಿಲ್ ಉತ್ಸವ
ಪಕ್ಷಿ ವೀಕ್ಷಣೆಗೆ ಅನುಕೂಲವಾಗಿರುವ ದಾಂಡೇಲಿಯಲ್ಲಿ ಹಾರ್ನ್ ಬಿಲ್ ಉತ್ಸವ ನಡೆಸಲು ಜಿಲ್ಲಾಡಳಿತ ಸಿದ್ದತೆ ನಡೆಸಿದೆ. ಜನವರಿ 27 ಹಾಗೂ 28ರಂದು ಈ ಉತ್ಸವ ನಡೆಯುವ ಸಾಧ್ಯತೆ ಇದ್ದು, ಈ ಬಗ್ಗೆಯೂ ಸಚಿವರು ಚರ್ಚೆ ನಡೆಸಿದ್ದಾರೆ.












Click it and Unblock the Notifications