ಉತ್ತರ ಕನ್ನಡದಲ್ಲಿ ಚುರುಕಾದ ರಾಜಕೀಯ: ಬಿಜೆಪಿ ಹೊಲದಲ್ಲಿ ತೆನೆ ತೆಗೆಯಲು ಮುಂದಾದ ಜೆಡಿಎಸ್ ನಾಯಕರು!
ಕಾರವಾರ, ನವೆಂಬರ್ 22: ಲೋಕಸಭಾ ಚುನಾವಣೆಗೆ ಇನ್ನೇನು ಕೆಲವೇ ತಿಂಗಳು ಬಾಕಿ ಉಳಿದಿದೆ. ರಾಜ್ಯದಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿಯಾಗಿದ್ದು, ಹಂಚಿಕೆಯಾಗುವ ಟಿಕೆಟ್‌ಗಾಗಿ ಬಾರಿ ಪೈಪೋಟಿ ಕೂಡ ಶುರುವಾಗಿದೆ. ಆದರೆ ಉತ್ತರ ಕನ್ನಡದಲ್ಲಿ ಅಸ್ತಿತ್ವಕ್ಕೂ ಪರದಾಡುತ್ತಿರುವ ಜೆಡಿಎಸ್ ಪಕ್ಷದ ಮೂಲಕ ಮೈತ್ರಿ ಟಿಕೆಟ್ ಗಿಟ್ಟಿಸಿಕ್ಕೊಳ್ಳಲು ಪಕ್ಷದ ನಾಯಕರುಗಳಲ್ಲಿ ಭಾರೀ ಪೈಪೋಟಿ ಶುರುವಾಗಿದೆ.
ರಾಜ್ಯದಲ್ಲಿ ಲೋಕಸಭಾ ಚುನಾವಣೆ ಕಾವು ಜೋರಾದಂತೆ ಉತ್ತರಕನ್ನಡದಲ್ಲಿಯೂ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿದೆ. ಚುನಾವಣೆ ಸಮೀಪಿಸುತ್ತಿದ್ದಂತೆ ಹೆಚ್ಚಾಗಿ ಕಾಣಿಸಿಕ್ಕೊಳ್ಳುವ ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಇದೀಗ ತಾವು ಜೆಡಿಎಸ್‌ನಲ್ಲಿಯೇ ಮುಂದುವರಿಯ್ಯುತ್ತಿರುವುದಾಗಿ ಹೇಳಿ ಮುಂದೆಬಂದಿದ್ದಾರೆ.

ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ವಿರುದ್ಧ, ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸಿದ್ದರು. ಆದರೆ ಇದೀಗ ತಾವು ಜೆಡಿಎಸ್-ಬಿಜೆಪಿ ಮೈತ್ರಿಯಲ್ಲಿ ತಾವು ಕೂಡ ಆಕಾಂಕ್ಷಿ ಎಂದು ಹೇಳಿಕೊಂಡಿದ್ದಾರೆ.
ಕಾರವಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಆನಂದ್ ಅಸ್ನೋಟಿಕರ್ ತಾನು ಮೋದಿ ಅಭಿಮಾನಿ. ದೇಶದಲ್ಲಿ ಮತ್ತೊಮ್ಮೆ ಮೋದಿ ಪ್ರಧಾನಿಯಾಗಬೇಕು. ಬಿಜೆಪಿಯಿಂದ ಸಂಸದ ಅನಂತಕುಮಾರ್ ಹೆಗಡೆ ನಿಲ್ಲದೆ ಇದ್ದಲ್ಲಿ ಮೈತ್ರಿ ಅಭ್ಯರ್ಥಿಯಾಗಿ ತಾನೂ ಕೂಡ ಆಕಾಂಕ್ಷಿಯಾಗಿದ್ದೇನೆ. ಅಲ್ಲದೆ ಟಿಕಟ್ ನೀಡಿದ್ದಲ್ಲಿ ಅತಿ ಹೆಚ್ಚು ಮತಗಳಿಂದಲೂ ಜಯ ಗಳಿಸುವುದಾಗಿ ಹೇಳಿಕೊಂಡಿದ್ದಾರೆ.

ಇನ್ನು 2019ರ ಲೋಕಸಭಾ ಚುನಾವಣೆ ವೇಳೆ ಅನಂತ ಕುಮಾರ್ ಹೆಗಡೆ ವಿರುದ್ಧವೇ ಸ್ಪರ್ಧೆ ಮಾಡಿದ್ದ ಆನಂದ್ ಅಸ್ನೋಟಿಕರ್ ಇದೀಗ ಅನಂತಕುಮಾರ್ ಹಾಗೂ ತಮ್ಮ ನಡುವಿನ ಸಂಬಂಧ ಉತ್ತಮವಾಗಿದೆ. ಅನಂತ ಕುಮಾರ್ ಸ್ಪರ್ಧೆ ಮಾಡಿದಲ್ಲಿ ಅವರಿಗೆ ಬೆಂಬಲ ಮಾಡುವುದಾಗಿ ತಿಳಿಸಿದ್ದಾರೆ. ಅಲ್ಲದೆ ಕಳೆದ ಲೋಕಸಭಾ ಚುನಾವಣೆ ವೇಳೆ ಒಂದು ತಿಂಗಳು ಇರುವಾಗ ಟಿಕೆಟ್ ನೀಡಿದ್ದರು. ಸಿದ್ಧತೆ ಮಾಡಿಕೊಳ್ಳಲು ಸಾಧ್ಯವಾಗಿರಲಿಲ್ಲ. ಆದರೆ ಇದೀಗ ಸಮಯವಕಾಶವಿದ್ದು ಅಲ್ಲದೆ ಬಿಜೆಪಿ ಜೆಡಿಎಸ್ ಮೈತ್ರಿ ಆಗಿರುವುದರಿಂದ ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲುವುದಾಗಿ ತಿಳಿಸಿದ್ದಾರೆ.
ಇನ್ನು ಇನ್ನೋರ್ವ ಜೆಡಿಎಸ್ ಮುಖಂಡ ಸೂರಜ್ ನಾಯ್ಕ ಸೋನಿ ಕೂಡ ಟಿಕೆಟ್ ನೀಡಿದ್ದಲ್ಲಿ ತಾನೂ ಕೂಡ ಲೋಕಸಭಾ ಚುನಾವಣೆ ಆಕಾಂಕ್ಷಿಯಾಗಲು ಸಿದ್ದರಿರುವುದಾಗಿ ಹೇಳಿಕೊಂಡಿದ್ದಾರೆ. ಕಳೆದ ವಿಧಾನಸಭಾ ಚುನಾವಣೆ ವೇಳೆ ಕೆಲವೇ ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ವಿರುದ್ಧ ಸೋಲು ಕಂಡಿದ್ದರು. ನಾನು ಹಿಂದೆ ಬಿಜೆಪಿಯಿಂದ ಅನ್ಯಾಯಕ್ಕೊಳಗಾಗಿ ಬಂದವನು. ಆದರೆ ರಾಜಕಾರಣದಲ್ಲಿ ಶತ್ರುಗಳಾಗಲು ಸಾಧ್ಯವಿಲ್ಲ. ಅಲ್ಲದೆ ತಾನು ಪ್ರಬಲ ಸಮುದಾಯದ ನಾಯಕನಾಗಿರುವ ಕಾರಣ ಅವಕಾಶ ಸಿಕ್ಕರೆ ಮುಂದಿನ ಲೋಕಸಭಾ ಚುನಾವಣೆ ಸ್ಪರ್ಧೆ ಮಾಡುವುದಾಗಿ ತಿಳಿಸಿದ್ದಾರೆ.
ಒಟ್ಟಾರೆ ಲೋಕಸಭಾ ಚುನಾವಣೆಗೆ ಜೆಡಿಎಸ್ ಬಿಜೆಪಿ ಮೈತ್ರಿ ಬೆನ್ನಲ್ಲೆ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು ಸದ್ಯ ಜೆಡಿಎಸ್ ನಾಯಕರು ಬಿಜೆಪಿ ಹೊಲದಲ್ಲಿ ತೆನೆಕೀಳಲು ಮುಂದಾಗಿರುವುದು ಕೂತುಹಲ ಹೆಚ್ಚಿಸುವಂತೆ ಮಾಡಿದೆ.












Click it and Unblock the Notifications