ಇಸ್ರೇಲ್‌ನಲ್ಲಿ ಸಿಲುಕಿದ ಕನ್ನಡಿಗರು: ಯುದ್ಧ ನೆಲದ ಪರಿಸ್ಥಿತಿ ವಿವರಿಸಿದ ಭಟ್ಕಳದ ಸಹೋದರರು
ಕಾರವಾರ, ಅಕ್ಟೋಬರ್ 10: ಇಸ್ರೇಲ್‌ನಲ್ಲಿ ಯುದ್ಧ ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಿಂದ ವ್ಯಾಪಾರ, ಶಿಕ್ಷಣ, ಉದ್ಯೋಗ ಹಾಗೂ ಇತರ ಉದ್ದೇಶಗಳಿಗೆ ತೆರಳಿದವರ ಮಾಹಿತಿಗಾಗಿ ಉತ್ತರ ಕನ್ನಡ ಜಿಲ್ಲಾಡಳಿತ ಸಹಾಯವಾಣಿಯನ್ನು ತೆರೆದಿದೆ.
ಉತ್ತರ ಕನ್ನಡ ಜಿಲ್ಲೆಗೆ ಸಂಬಂಧಪಟ್ಟ ಭಾರತದ ಪ್ರಜೆಗಳಿದ್ದಲ್ಲಿ ಅವರ ಬಗ್ಗೆ ಮಾಹಿತಿಯನ್ನು ಉತ್ತರ ಕನ್ನಡ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ತರದಿರುವ ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ:1077, 08382-229857, ಮೊ ನಂ. 9483511015ಕ್ಕೆ ಕರೆಮಾಡಿ ಕೂಡಲೇ ಮಾಹಿತಿ ನೀಡುವಂತೆ ಕೋರಲಾಗಿದೆ. ಅಥವಾ ರಾಜ್ಯ ಸರ್ಕಾರದ ತುರ್ತು ಸಂಖ್ಯೆ: 080- 22340676, 080-22253707ಕ್ಕೂ ಮಾಹಿತಿ ನೀಡುವಂತೆ ತಿಳಿಸಲಾಗಿದೆ.

ಇನ್ನು ಉದ್ಯೋಗದ ನಿಮಿತ್ತ ಇಸ್ರೇಲಿನಲ್ಲಿ ನೆಲೆಸಿರುವ ಭಟ್ಕಳದ 40ಕ್ಕೂ ಅಧಿಕ ಮಂದಿ ಭಾರತೀಯ ರಾಯಭಾರ ಕಚೇರಿಯಿಂದ ಸಂಪರ್ಕಕ್ಕೆ ಸಿಕ್ಕಿದ್ದು, ಸದ್ಯ ಎಲ್ಲರೂ ಕುಟುಂಬದವರೊಂದಿಗೆ ನಿರಂತರ ಸಂಪರ್ಕದಲ್ಲಿರುವುದು ಮನೆಮಂದಿ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಭಟ್ಕಳದ ಮುಂಡಳ್ಳಿಯ 12 ಮಂದಿ ಹಾಗೂ ಮುರುಡೇಶ್ವರ ಬಸ್ತಿ ಚರ್ಚ್ ಕ್ರಾಸ್ ಬಳಿಯ 29 ಮಂದಿ ಇಸ್ರೇಲಿನಲ್ಲಿ ನೆಲೆಸಿರುವ ಮಾಹಿತಿ ದೊರೆತಿದೆ.
ಇನ್ನು ಘಟನೆಯ ಬಗ್ಗೆ ವಿಡಿಯೋ ಕಾಲ್‌ನಲ್ಲಿ ಭಟ್ಕಳದ ಸಹೋದರರು ವಿವರಿಸಿದ್ದಾರೆ. 'ಘಟನೆ ನಡೆದ ದಿನದಂದು ನಾವು ಜೀವ ಭಯದಲ್ಲಿಯೇ ಬದುಕಿದ್ದೆವು. ಘಟನೆ ನಡೆದ ಜಾಗದ ಸಮೀಪದಲ್ಲಿಯೇ ನಾವು ಕೆಲಸಕ್ಕಾಗಿ ನೆಲೆಸಿದ್ದ ಪ್ರದೇಶವಿದ್ದು, ಯಾವ ಸಂದರ್ಭದಲ್ಲಿ ಪರಿಸ್ಥಿತಿ ಏನಾಗಲಿದೆ ಎಂಬ ಭಯ ನಮ್ಮಲ್ಲಿದೆ. ಆದರೆ ಭಾರತೀಯ ರಾಯಭಾರ ಕಛೇರಿಯಿಂದ ಭಾರತೀಯರನ್ನು ಸಂಪರ್ಕಿಸುವ ಕಾರ್ಯ ಆರಂಭವಾಗಿದ್ದು, ನಮ್ಮಿಬ್ಬರನ್ನೂ ಸಹ ಕಛೇರಿಯ ಸಿಬ್ಬಂದಿ ಸಂಪರ್ಕಿಸಿ ನಮ್ಮ ಸುರಕ್ಷತೆಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ' ಎಂದು ಸುನೀಲ್ ಗೋಮ್ಸ್ ತಿಳಿಸಿದ್ದಾರೆ.
'ಇನ್ನು ಅನಾವಶ್ಯಕವಾಗಿ ಯಾರು ಸಹ ಓಡಾಟ ಮಾಡಬಾರದು ಎಂಬ ಕಠಿಣ ಆದೇಶವಿದ್ದು, ಅವಶ್ಯಕತೆಯಿದ್ದಲ್ಲಿ ಮಾತ್ರ ಓಡಾಡಲು ಅನುಮತಿ ನೀಡಿದ್ದಾರೆ. ಕೆಲವೊಂದು ಪ್ರದೇಶದಲ್ಲಿ ಅಂಗಡಿ- ಮುಂಗಟ್ಟುಗಳು ತೆರೆದಿಡಲಾಗಿದ್ದು, ಆಹಾರ ಹಾಗೂ ಇನ್ನಿತರ ವಸ್ತುಗಳ ಖರೀದಿಗೆ ತೆರಳಬಹುದಾಗಿದೆ.
ಸಮಸ್ಯೆಯಿದ್ದಲ್ಲಿ ರಾಯಭಾರ ಕಛೇರಿಗೆ ಮಾಹಿತಿ ತಿಳಿಸಿದ್ದಲ್ಲಿ ನಿಮ್ಮನ್ನು ಸಂಪರ್ಕಿಸಲಿದ್ದೇವೆಂದು ತಿಳಿಸಿದ್ದಾರೆ. ಸೈರನ್ ಮೂಲಕ ಜನರು ಸುರಕ್ಷಿತ ಪ್ರದೇಶದಲ್ಲಿ ಇರುವಂತೆ ಮುಂಜಾಗೃತೆಗಾಗಿ ವ್ಯವಸ್ಥೆ ಮಾಡಲಾಗಿದ್ದು, ಜನರು ಸರಕಾರದ ಆದೇಶ ಪಾಲನೆ ಮಾಡಬೇಕಾಗಿದೆ' ಎಂದು ವಿವರಿಸಿದರು.
'ಇಸ್ರೇಲಿನಲ್ಲಿರುವ ನಮ್ಮ ರಕ್ಷಣೆಗೆ, ಸುರಕ್ಷತೆಗಾಗಿ ಭಾರತೀಯ ರಾಯಭಾರ ಕಛೇರಿಯು ನಿರಂತರ ಸಂಪರ್ಕದಲ್ಲಿದ್ದು, ಅವರಿಗೆ ನಾವೆಲ್ಲರು ಚಿರಋಣಿಯಾಗಿದ್ದೇವೆ. ಸದ್ಯ ಕನ್ನಡಿಗರೆಲ್ಲರು ಒಂದು ವಾಟ್ಸಾಪ್ ಗ್ರೂಪ್ ಮಾಡಿದ್ದೇವೆ' ಎಂದು ತಿಳಿಸಿದ್ದಾರೆ.
ಇನ್ನು 'ಇಸ್ರೇಲ್‌ನಲ್ಲಿ ನಡೆದ ರಾಕೆಟ್ ದಾಳಿಯ ಬಗ್ಗೆ ತಿಳಿದು ಒಂದು ಕ್ಷಣಕ್ಕೆ ನಮ್ಮ ಮಕ್ಕಳ ಪರಿಸ್ಥಿತಿಯ ಬಗ್ಗೆ ಭಯ ಉಂಟಾಯಿತು. ಆ ತಕ್ಷಣಕ್ಕೆ ಅವರನ್ನು ವಿಡಿಯೋ ಕಾಲ್ ಮೂಲಕ ಅವರನ್ನು ಸಂಪರ್ಕಿಸಿದಾಗ ನಾವಿಬ್ಬರು ಸುರಕ್ಷಿತವಾಗಿದ್ದೇವೆ ಎಂದು ತಿಳಿಸಿ ಬಳಿಕ ನಮಗೆ ಸಮಾಧಾನವಾಯಿತು. ಅಲ್ಲಿಂದ ಇಲ್ಲಿಯ ತನಕ ನಾವು ನಿರಂತರ ಅವರಿಗೆ ವಿಡಿಯೋ ಕಾಲ್ ಮಾಡಿ ಅವರ ಪರಿಸ್ಥೀತಿ ಬಗ್ಗೆ ಕೇಳುತ್ತಿದ್ದೇವೆ. ಸ್ಥಳೀಯ ಪೊಲೀಸರು ಸಹ ನಮ್ಮನ್ನು ಹಾಗೂ ಕುಟುಂಬದವರನ್ನು ನಿತ್ಯವೂ ಸಂಪರ್ಕಿಸುತ್ತಿದ್ದು, ಭಾರತೀಯ ರಾಯಭಾರ ಕಛೇರಿಗೆ ನಾವೆಲ್ಲರು ಧನ್ಯವಾದ ತಿಳಿಸಲಿದ್ದೇವೆ' ಎಂದು ಇಸ್ರೇಲ್‌ನಲ್ಲಿ ನೆಲೆಸಿರುವ ಸುನೀಲ ಮತ್ತು ಡಾಲ್ಪಿ ತಾಯಿ ಹೇಲಿನ್ ಗೋಮ್ಸ್ ತಿಳಿಸಿದ್ದಾರೆ.












Click it and Unblock the Notifications