ಹೊನ್ನಾವರ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್-ಕಾರಣ ಏನು?
Heavy Rains: ಈಗಾಗಲೇ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಭಾರೀ ಮಳೆಯಿಂದ ಹಳ್ಳ-ಕೊಳ್ಳಗಳು, ಕೆರೆ, ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಅಲ್ಲದೆ ಹಲವೆಡೆ ರಸ್ತೆಗಳು ಚರಂಡಿಯಂತೆ ಮಾರ್ಪಟ್ಟಿವೆ. ಹಾಗೆಯೇ ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಗುಡ್ಡ ಕುಸಿತದ ಹಿನ್ನೆಲೆ ಹಲವೆಡೆ ರಸ್ತೆಗಳು ಬಂದ್ ಆಗಿರುವ ಘಟನೆಗಳು ನಡೆದಿವೆ.
ಭಾರೀ ಮಳೆ ಸುರಿದಿರುವ ಹಿನ್ನೆಲೆ ರಸ್ತೆ ಮೇಲೆ ಗುಡ್ಡ ಕುಸಿದ ಪರಿಣಾಮ ಹೊನ್ನಾವರ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-206 ಬಂದ್ ಮಾಡಲಾಗಿದೆ. ವರ್ನಕೇರಿ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ದಿಢೀರ್ ಗುಡ್ಡ ಕುಸಿದಿದ್ದು, ಇದರಿಂದ ರಾಷ್ಟ್ರೀಯ ಹೆದ್ದಾರಿ ಮೇಲೆ ದೊಡ್ಡ ಮರ ಹಾಗೂ ಮಣ್ಣು ಬಿದ್ದು ವಾಹನ ಸವಾರರು ಪರದಾಡಿದ ಘಟನೆ ನಡೆದಿದೆ. ಇನ್ನು ಸ್ಥಳಕ್ಕೆ ಹೊನ್ನಾವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಬಳಿಕ ಈ ಮಾರ್ಗವನ್ನು ಬಂದ್ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹೊನ್ನೆತಾಳು ಗ್ರಾಮದಲ್ಲಿ ಭಾರಿ ಮಳೆಯಾಗುತ್ತಿದ್ದು, ಪರಿಣಾಮ ಹೊನ್ನೆತಾಳು ಗ್ರಾಮದ ಯಕ್ಷಗಾನ ಕಲಾವಿದ ನಂದನ್ ಶೆಟ್ಟಿ ಅವರ ಮನೆ ಕುಸಿದು ಬಿದ್ದಿದೆ. ನಂದನ ಶೆಟ್ಟಿ ಮಂದಾರ್ತಿ ಮೇಳದಲ್ಲಿ ಯಕ್ಷಗಾನ ಕಲಾವಿದರಾಗಿದ್ದಾರೆ. ಇನ್ನು ಮನೆ ಕುಸಿಯುವ ವೇಳೆ ಅದೃಷ್ಟ ವಶಾತ್ ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದು, ಈ ಕುಟುಂಬವು ಪರಿಹಾರದ ನಿರೀಕ್ಷೆಯಲ್ಲಿದೆ.
ಮಹಾರಾಷ್ಟ್ರ ಫಾಲ್ಸ್ ದುರಂತದ ಬೆನ್ನೆಲ್ಲೇ ಪ್ರವಾಸಿ ತಾಣಗಳ ಬಗ್ಗೆ ಕೊಡಗು ಜಿಲ್ಲಾಡಳಿತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಪ್ರವಾಸಿಗರು ಜಲಪಾತಗಳು, ನದಿಗಳಿಗೆ ಇಳಿಯದಂತೆ ಜಿಲ್ಲಾಡಳಿತ ನಿರ್ಬಂಧ ಹೇರಿದೆ. ನೀರಿನಲ್ಲಿ ಇಳಿದು ಕ್ರೀಡೆ, ಫೋಟೋ ತೆಗೆಯುವ ದುಸ್ಸಾಹಕ್ಕೆ ಕಡಿವಾಣ ಹಾಕಲಾಗಿದೆ.
ಇದೀಗ ಸುರಿಯುತ್ತಿರುವ ಭಾರೀ ಮಳೆ ಅವಾಂತರಗಳನ್ನೇ ಸೃಷ್ಟಿಸಿದೆ. ಈ ಹಿನ್ನೆಲೆ ಮುಂಜಾಜ್ರತಾ ಕ್ರಮವಾಗಿ ಈ ಕ್ರಮಗಳನ್ನು ಜಿಲ್ಲಾಡಳಿತ ಕೈಗೊಂಡಿದೆ. ಇನ್ನು ಈ ಆದೇಶವನ್ನು ಉಲ್ಲಂಘನೆ ಮಾಡಿದವರ ವಿರುದ್ಧ ಕಠಿಣ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ವೆಂಕಟರಾಜ ಮಾಹಿತಿ ನೀಡಿದ್ದಾರೆ.
ಉತ್ತರ ಕನ್ನಡ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆ ಹೊಳೆ-ಹಳ್ಳಗಳು ತುಂಬಿ ಹರಿಯುತ್ತಿವೆ. ಜಲಪಾತಗಳು ಧುಮ್ಮಿಕ್ಕುತ್ತಿವೆ. ಆದ್ದರಿಂದ ಮುಂಜಾಗ್ರತಾ ಕ್ರಮವಾಗಿ ಜಲಪಾತಗಳತ್ತ ಹೋಗದಂತೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ಬೆಟ್ಟಗುಡ್ಡಗಳಿಗೆ ಟ್ರೆಕ್ಕಿಂಗ್ ಹೋಗುವವರಿಗೂ ಮುಂದಿನ ಸೂಚನೆ ಸಿಗುವವರೆಗೂ ಮುಂದುವರೆಯದಂತೆ ಸೂಚನೆ ನೀಡಲಾಗಿದೆ.
ಹಾಗೆಯೇ ಯಲ್ಲಾಪುರ ತಾಲೂಕಿನಾದ್ಯಂತ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆ ಜಲಪಾತ ಮೈದುಂಬಿ ಧುಮ್ಮಿಕ್ಕುತ್ತಿದೆ. ಇನ್ನೂ ಮುಂಜಾಗ್ರತಾ ಕ್ರಮವಾಗಿ ಉತ್ತರ ಕನ್ನಡ ಜಿಲ್ಲೆಯ ಹಲವು ಜಲಪಾತಗಳಿಗೆ ವೀಕ್ಷಣೆಗೆ ನಿರ್ಬಂಧ ಹೇರಲಾಗಿದೆ.












Click it and Unblock the Notifications