ಹೊನ್ನಾವರದ ಕಲಾವಿದನ ಕೈಚಳಕ: 1,200 ಚಾಕಪೀಸ್‌ನಲ್ಲಿ ಅರಳಿದ ರಾಮ ಮಂದಿರ
ಕಾರವಾರ, ಜನವರಿ 19: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಯುವಕನೋರ್ವ 1200 ಚಾಕಪೀಸ್‌ನಲ್ಲಿ ರಾಮಮಂದಿರ ನಿರ್ಮಾಣ ಮಾಡಿದ್ದು, ಇದೀಗ ಎಲ್ಲರ ಗಮನ ಸೆಳೆಯುತ್ತಿದೆ.
ಹೊನ್ನಾವರ ತಾಲೂಕಿನ ಗೇರುಸೊಪ್ಪಾದ ಬಸಾಕುಳಿಯ ಚಂದ್ರಕಲಾ ಮತ್ತು ಮಂಜುನಾಥ ನಾಯ್ಕ ದಂಪತಿಯ ಪುತ್ರನಾದ ಪ್ರದೀಪ ನಾಯ್ಕ, ಚಿಕ್ಕಂದಿನಿಂದಲೂ ವಿವಿಧ ಕಲೆಯಲ್ಲಿ ಆಸಕ್ತಿಯನ್ನು ಹೊಂದಿ ಸಾಧನೆ ಮಾಡುತ್ತಾ ಬಂದಿದ್ದಾರೆ. ಚಿತ್ರಕಲೆ, ತಬಲಾ, ಸಂಗೀತ, ಚಾಕ್ ಪೀಸ್ ಆರ್ಟ್ ಹೀಗೆ ಹಲವು ರಂಗದಲ್ಲಿ ಸಾಧನೆ ಮಾಡಿದ್ದರು.

ಇದೀಗ ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಸರಿಸುಮಾರು 1200 ಚಾಕ್ ಪೀಸ್ ಬಳಸಿ 25 ದಿನಗಳ ಕಾಲ 250ಕ್ಕೂ ಹೆಚ್ಚು ಗಂಟೆಯ ನಿರಂತರ ಪ್ರಯತ್ನದ ಫಲವಾಗಿ ರಾಮ ಮಂದಿರದ ಮಾದರಿ ಕಲಾಕೃತಿಯನ್ನು ನಿರ್ಮಿಸಿದ್ದಾರೆ. ಜನವರಿ 22ರ ರಾಮಮಂದಿರದ ಉದ್ಘಾಟನೆಯ ದಿನವೇ ತಮ್ಮ ಕಲೆಯನ್ನು ಗೇರುಸೊಪ್ಪಾದ ಶ್ರೀ ಗುತ್ತಿಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ತಂದೆ ತಾಯಿ, ಗುರುಹಿರಿಯರ ಸಮ್ಮುಖದಲ್ಲಿ ಅನಾವರಣಗೊಳಿಸಲಿದ್ದಾರೆ.
2021ರ ಮೇ 22 ರಂದು 18 ಚಾಕ್ ಪೀಸ್ ನಲ್ಲಿ ರಾಷ್ಟ್ರಗೀತೆಯನ್ನು ಕೆತ್ತಿ ಇಂಡಿಯಾ ಮತ್ತು ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸಾಧನೆ ಮಾಡಿದ್ದ ಇವರು, ಬುದ್ಧ , ಗಾಂಧೀಜಿ , ಐಫೆಲ್ ಟವರ್, ಸೂರ್ಯ ನಮಸ್ಕಾರದ ಆಕೃತಿ ಹೀಗೆ ಹತ್ತು ಹಲವು ಆಕೃತಿಯನ್ನು ಮಾಡಿ ಎಲ್ಲರನ್ನು ಆಕರ್ಷಿಸಿದ್ದರು. ಪ್ರಸ್ತುತ ಅವರು ಸ್ನಾತಕೋತ್ತರ ಪದವಿಯನ್ನು ಧಾರವಾಡದ ವಿದ್ಯಾಗಿರಿ ಜೆ.ಎಸ್.ಎಸ್ ವಿದ್ಯಾಸಂಸ್ಥೆಯಲ್ಲಿ ಮಾಡುತ್ತಿದ್ದಾರೆ.

ಅಯೋಧ್ಯೆಯ ಅಲಂಕಾರಕ್ಕೆ ಹುಬ್ಬಳ್ಳಿಯ ಅಳಿಲು ಸೇವೆ
ಹುಬ್ಬಳ್ಳಿ: ಅಯೋಧ್ಯೆಯ ರೈಲು ನಿಲ್ದಾಣಕ್ಕೆ ಮಹತ್ವದ ರೂಪ ನೀಡಲು ಹುಬ್ಬಳ್ಳಿಯ ಕಲಾವಿದರು ಕೂಡ ಅಳಿಲು ಸೇವೆ ಮಾಡಿದ್ದಾರೆ. ರಾವಣನ ಸಂಹಾರಕ್ಕೆ ಲಂಕೆಗೆ ಹೊರಟ ಶ್ರೀರಾಮನಿಗೆ ಸಮುದ್ರದ ಮೇಲೆ ಸೇತುವೆ ಕಟ್ಟಲು ಸಣ್ಣ ಅಳಿಲು ಸಹ ಸಹಾಯ ಮಾಡಿದೆ ಎಂಬ ಉಲ್ಲೇಖ ರಾಮಾಯಣದಲ್ಲಿದೆ. ಅದೇ ಅಳಿಲಿನ ಬೃಹದಾಕಾರದ ಕಲಾಕೃತಿಯನ್ನು ಅಯೋಧ್ಯೆ ಧಾಮ ಜಂಕ್ಷನ್‌ನಲ್ಲಿ (ರೈಲ್ವೆ ನಿಲ್ದಾಣ) ನಿರ್ಮಿಸಲಾಗಿದ್ದು, 5 ಕಲಾಕೃತಿಯನ್ನು ಆರ್ಟ್‌ವಾಲೇ ಹುಬ್ಬಳ್ಳಿಯ ಇನ್ಪಾಸ್ಟ್ರಕ್ಟರ್) ಸಂಸ್ಥೆ ನಿರ್ಮಿಸಿರುವುದು ವಿಶೇಷವಾಗಿದೆ.
ಹುಬ್ಬಳ್ಳಿ ಕೊಪ್ಪಿಕರ್ ರಸ್ತೆಯ ಆರ್ಟ್ ವಾಲೇ ಸಂಸ್ಥೆಯ ಮುಖ್ಯ ವ್ಯವಸ್ಥಾಪಕ ನಿರ್ದೇಶಕರಾದ ಗೌತಮ್ ಓಸ್ತವಾಲ್ ಹಾಗೂ ಆರ್ಟ್ ಡೈರೆಕ್ಟರ್ ನಿಧಿ ಓಸ್ತವಾಲ್ ಅವರ ಮಾರ್ಗದರ್ಶನದಲ್ಲಿ ಈ ಕಲಾಕೃತಿಗಳನ್ನು ನಿರ್ಮಿಸಲಾಗಿದೆ. ಕಲಾಕೃತಿ ನಿರ್ಮಾಣದ ಪ್ರಾಜೆಕ್ಟ್ ಮುಖ್ಯಸ್ಥ (ಆರ್ಕಿಟೆಕ್ಟ್) ಸನತ್ ಪಾಟೀಲ, ಕಿರಿಯ ಆರ್ಕಿಟೆಕ್ಟ್ ವಿನಯಕುಮಾರ ಕುಂಬಾರ ಸೇರಿದಂತೆ ಒಟ್ಟು 20 ಜನ ಸಿಬ್ಬಂದಿ ಕೇವಲ 35 ದಿನಗಳಲ್ಲಿ ಕಲಾಕೃತಿ ಸಿದ್ಧಪಡಿಸಿದ್ದಾರೆ. ಅದೂ ಕೂಡ ಉಚಿತವಾಗಿ ಸೇವೆಯ ರೂಪದಲ್ಲಿ ಸಲ್ಲಿಸಿದ್ದಾರೆ.












Click it and Unblock the Notifications