ಕಾರವಾರದಲ್ಲಿ ಹಿಂದೂ ಮುಖಂಡ ಸೂರಜ್ ನಾಯ್ಕ ಸೋನಿ ಜೆಡಿಎಸ್ ಸೇರ್ಪಡೆ
ಕಾರವಾರ, ಏಪ್ರಿಲ್ 05: ಹಿಂದೂ ಮುಖಂಡ ಸೂರಜ್ ನಾಯ್ಕ ಸೋನಿ ಗುರುವಾರ (ಏ.04) ಜೆಡಿಎಸ್ ಸೇರ್ಪಡೆಗೊಂಡರು. ಕಾರವಾರದ ಮಾಲಾದೇವಿ ಮೈದಾನದಲ್ಲಿ ನಡೆದ ಸಮಾವೇಶದಲ್ಲಿ ಸಿಎಂ ಕುಮಾರಸ್ವಾಮಿ ಸೂರಜ್ ನಾಯ್ಕ ಸೋನಿಗೆ ಶಾಲು ಹಾಕಿ ಪಕ್ಷಕ್ಕೆ ಸ್ವಾಗತಿಸಿಕೊಂಡರು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ನಂತರ ಬಗ್ಗೋಣದ ಸೂರಜ್ ನಾಯ್ಕ ಸೋನಿ ಅವರ ಮನೆಗೆ ಭೇಟಿ ನೀಡಿದ ಕುಮಾರಸ್ವಾಮಿ ಸೂರಜ್ ಕುಟುಂಬ ಸದಸ್ಯರ ಜೊತೆ ಕೆಲ ಹತ್ತು ಮಾತನಾಡಿದರು. ಸೂರಜ್ ತಂದೆ ತಾಯಿ ಕುಶಲೋಪರಿ ವಿಚಾರಿಸಿದ ಕುಮಾರಸ್ವಾಮಿ ಎಲ್ಲರಿಗೂ ಶುಭವಾಗಲಿ ಎಂದು ಹಾರೈಸಿದರು.

ನಂತರ ಮಾತನಾಡಿದ ಕುಮಾರಸ್ವಾಮಿ ಅವರು, ಕುಮಟಾದಲ್ಲಿ ಜೆಡಿಎಸ್ ಗೆ ಬಲವಿದೆ. ಸೂರಜ್ ಸೇರ್ಪಡೆಯಿಂದ ಪಕ್ಷ ಸಂಘಟನೆಗೆ ಬಲ ಬರಲಿದೆ. ಪ್ರದೀಪ್ ನಾಯಕ ಮತ್ತು ಸೂರಜ್ ಅಣ್ಣ ತಮ್ಮಂದಿರಂತೆ. ಇಬ್ಬರೂ ಜೊತೆಗೂಡಿ ಈ ಕ್ಷೇತ್ರದಲ್ಲಿ ಸಂಘಟನೆ ಬಲಪಡಿಸಲಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಸಹ ಇಬ್ಬರೂ ಸೇರಿ ಕಾಂಗ್ರೆಸ್ ಜೊತೆಗೂಡಿ ಪಕ್ಷದ ಅಭ್ಯರ್ಥಿ ಆನಂದ ಅಸ್ನೋಟಿಕರ್ ಗೆಲುವಿಗೆ ಶ್ರಮಿಸಲಿದ್ದಾರೆ ಎಂದರು.
ದೇಶಪಾಂಡೆ ಈ ಹಿಂದೆ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ದ ಅಭ್ಯರ್ಥಿ ಸೋಲಿಗೆ ಕಾರಣರಾಗಿದ್ದರೆಂಬ ಆರೋಪ ಇದೆ. ಹೀಗಿರುವಾಗ ಜೆಡಿಎಸ್ ಅಭ್ಯರ್ಥಿ ಗೆಲುವಿಗೆ ಅವರು ಹೇಗೆ ಪ್ರಯತ್ನಿಸುವರು ಎಂಬ ಪ್ರಶ್ನೆಗೆ ಕಾದು ನೋಡಿ ಎಂದು ಮುಖ್ಯಮಂತ್ರಿಗಳು ಹೇಳಿದರು.

ಸೂರಜ್ ಬೆಂಬಲಿಗರಾದ ನೂರಾರು ಕಾರ್ಯಕರ್ತರು ಜೆಡಿಎಸ್ ಗೆ ಸೇರ್ಪಡೆಗೊಂಡರು. ಶಂಭು ಗೌಡ ಗುಣವಂತೆ, ಗಣಪೆ ಗೌಡ, ಜೆಡಿಎಸ್ ಜಿಲಾಧ್ಯಕ್ಷ ಬಿ.ಆರ್.ನಾಯ್ಕ, ಸತೀಶ ನಾಯ್ಕ, ಗಜು ನಾಯ್ಕ ಅಳ್ವೆಕೋಡಿ, ಭಾಸ್ಕರ ಪಟಗಾರ, ಡಿ.ಎಚ್.ಪಟಗಾರ, ಧೀರೂ ಶಾನಭಾಗ, ಬಿ.ಎಂ.ಮಲ್ಲಿಕ್ ಮೊದಲಾದವರು ಉಪಸ್ಥಿತರಿದ್ದರು.












Click it and Unblock the Notifications