ಪಹಲ್ಗಾಮ್ ದಾಳಿ: ಉತ್ತರ ಕನ್ನಡದ ಪ್ರವಾಸಿ ತಾಣಗಳಲ್ಲಿ ಕಟ್ಟೆಚ್ಚರ
ಕಾರವಾರ, ಏಪ್ರಿಲ್ 30: ನಮ್ಮ ದೇಶದ ಮುಕುಟ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಕಳೆದ ವಾರ ಉಗ್ರರು ಅಟ್ಟಹಾಸ ಮೆರೆದಿದ್ದು, ಇಬ್ಬರು ಕನ್ನಡಿಗರು ಸೇರಿದಂತೆ ಸುಮಾರು ಇಪ್ಪತ್ತೈದಕ್ಕೂ ಹೆಚ್ಚು ಪ್ರವಾಸಿಗರು ಉಗ್ರರ ದಾಳಿಗೆ ಸಾವನ್ನಪ್ಪಿದ್ದಾರೆ. ಕಳೆದ ಕೆಲವು ಸಮಯದಿಂದ ಶಾಂತವಾಗಿದ್ದ ಜಮ್ಮು ಮತ್ತು ಕಾಶ್ಮೀರ ಈಗ ಬೂದಿ ಮುಚ್ಚಿದ ಕೆಂಡದಂತಿದ್ದು, ದೇಶದ ಪ್ರತಿಯೊಬ್ಬರು ಕೂಡ ಉಗ್ರರ ವಿರುದ್ಧ ಪ್ರತಿಕಾರಕ್ಕೆ ಕಾಯುತ್ತಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ಈ ದಾಳಿಯಿಂದ ಸಂಪೂರ್ಣ ದೇಶವೇ ತಲ್ಲಣಿಸಿ ಹೋಗಿದೆ. ಈ ಹಿನ್ನೆಲೆಯಲ್ಲಿ ದೇಶದ ಮೂಲೆ ಮೂಲೆಯಲ್ಲೂ ಕಟ್ಟೆಚ್ಚರ ವಹಿಸಲಾಗುತ್ತಿದೆ. ಅದರಲ್ಲೂ ಬೇಸಿಗೆ ರಜೆಯ ಕಾರಣ ತುಂಬಿ ತುಳುಕುತ್ತಿರುವ ಪ್ರವಾಸಿ ತಾಣಗಳಲ್ಲಿ ಬಿಗಿ ಬಂದೋ ಬಸ್ತ್ ಮಾಡಲಾಗುತ್ತಿದೆ.

ಭಾರತದ ಉತ್ತರ ಭಾಗವಷ್ಟೇ ಅಲ್ಲದೇ ದಕ್ಷಿಣದ ಕೆಲವು ಪ್ರವಾಸಿ ತಾಣಗಳಲ್ಲೂ ಕಟ್ಟೆಚ್ಚರ ವಹಿಸಲಾಗುತ್ತಿದ್ದು, ಈ ಪೈಕಿ ಕರಾವಳಿ ತೀರಗಳ ಮೇಲೆ ರಕ್ಷಣಾ ಪಡೆ ಹದ್ದಿನ ಕಣ್ಣಿಟ್ಟಿದೆ. ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಮಂಗಳೂರಿನಂತಹ ಸ್ಥಳಗಳಲ್ಲಿ ಬಿಗಿ ಬಂದೋ ಬಸ್ತ್ ಮಾಡಲಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಕಟ್ಟೆಚ್ಚರ
ಕರಾವಳಿ ಭಾಗವಾದ ಉತ್ತರ ಕನ್ನಡ ಜಿಲ್ಲೆಯ ಪ್ರವಾಸಿ ಸ್ಥಳಗಳ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಬೇಸಿಗೆ ರಜೆ ಹಿನ್ನೆಲೆಯಲ್ಲಿ ಲಕ್ಷಾಂತರ ಪ್ರವಾಸಿಗರು ಜಿಲ್ಲೆಗೆ ಭೇಟಿ ನೀಡುತ್ತಿದ್ದು, ಜನಸಂದಣಿಯ ಸ್ಥಳಗಳಲ್ಲಿ ಯಾವುದೇ ಅಹಿತಕಾರಿ ಘಟನೆಗಳು ಸಂಭವಿಸಿದಂತೆ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇನ್ನು ಪ್ರವಾಸಿಗರು ಹೆಚ್ಚು ಭೇಟಿ ನೀಡುವ ಮುರುಡೇಶ್ವರ, ಗೋಕರ್ಣ, ಯಾನ, ಇಡುಗುಂಜಿ ದೇವಸ್ಥಾನ ಸೇರಿದಂತೆ ಉತ್ತರ ಕನ್ನಡದ ಎಲ್ಲಾ ಪ್ರವಾಸಿ ತಾಣಗಳಲ್ಲಿಯೂ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ.

ಇನ್ನು ವಿದೇಶಿ ಪ್ರವಾಸಿಗರೇ ಈ ಸ್ಥಳಕ್ಕೆ ಹೆಚ್ಚಾಗಿ ಬರುವ ಕಾರಣ ಪ್ರವಾಸಿ ತಾಣಗಳ ಸಮೀಪ ಇರುವ ಹೋಮ್ಸ್ಟೇ, ರೆಸಾರ್ಟ್, ಹೋಟೆಲ್, ರೆಸ್ಟೋರೆಂಟ್‌ಗಳ ಮೇಲೂ ನಿಗಾವಹಿಸಲಾಗಿದ್ದು, ಭೇಟಿ ನೀಡುವ ಹಾಗೂ ತಂಗುವ ಪ್ರವಾಸಿಗರ ಇಂಚಿಂಚು ಮಾಹಿತಿಯನ್ನು ದಾಖಲಿಸಲಾಗುತ್ತಿದೆ.
ಹೊರ ರಾಜ್ಯ ಹಾಗೂ ವಿದೇಶಿ ಪ್ರವಾಸಿಗರ ಬಗ್ಗೆ ಹೆಚ್ಚಿನ ನಿಗಾ ವಹಿಸುವಂತೆ ಹಾಗೂ ಅವರ ಮಾಹಿತಿಯನ್ನು ಸಂಪೂರ್ಣ ಪಡೆದು ದಾಖಲೆಗಳನ್ನು ಪಡೆದು ವಾಸ್ತವ್ಯಕ್ಕೆ ಅವಕಾಶ ನೀಡುವಂತೆ ಹೋಮ್ಸ್ಟೇ, ರೆಸಾರ್ಟ್, ಹೋಟೆಲ್ ಮಾಲೀಕರಿಗೆ ಖಡಕ್ ಸೂಚನೆ ನೀಡಲಾಗಿದೆ. ಅಲ್ಲದೇ ಕರಾವಳಿ ಸಮುದ್ರ ಭಾಗದಲ್ಲಿ ಕೂಡ ಕಟ್ಟೆಚ್ಚರ ವಹಿಸಲಾಗಿದೆ.












Click it and Unblock the Notifications