Heavy rain: ಉತ್ತರಕನ್ನಡ ಜಿಲ್ಲೆಯ ಶಾಲಾ, ಕಾಲೇಜು, ಅಂಗನವಾಡಿಗಳಿಗೆ ರಜೆ ಘೋಷಣೆ, ಪ್ರಮುಖ ಸಂದೇಶಗಳು ಇಲ್ಲಿವೆ

ಕಾರವಾರ, ಜುಲೈ, 24: ಭಾರೀ ಮಳೆ ಹಿನ್ನೆಲೆ ಉತ್ತರಕನ್ನಡ ಜಿಲ್ಲೆಯ ಎಲ್ಲ ನದಿಗಳು ತುಂಬಿ ಅಪಾಯದ ಮಟ್ಟದಲ್ಲಿ ಹರಿಯಲಾರಂಭಿಸಿವೆ. ಆದ್ದರಿಂದ ಮುಂಜಾಗೃತಾ ಕ್ರಮವಾಗಿ ಜಿಲ್ಲೆಯ ಶಾಲಾ, ಕಾಲೇಜು, ಅಂಗನವಾಡಿಗಳಿಗೆ ಸೋಮವಾರ ರಜೆ ಘೋಷಣೆ ಮಾಡಲಾಗಿದೆ.

ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ವ್ಯಾಪಕವಾಗಿ ಸುರಿಯುತ್ತಿರುವ ಮಳೆ ಮುಂದುವರೆದಿದೆ. ಇಂದು ಕೂಡ ಭಾರೀ ಮಳೆಯಾಗುವ ಬಗ್ಗೆ ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅಲ್ಲದೆ ಹಳ್ಳ, ಹೊಳೆ, ನದಿಗಳು ಉಕ್ಕಿ ಹರಿಯುತ್ತಿರುವ ಕಾರಣ ಸೇತುವೆಗಳು ಮುಳುಗಡೆಯಾಗಿದ್ದರಿಂದ ಹಲವು ಹಳ್ಳಿಗಳ ಸಂಪರ್ಕ ಕಡಿತಗೊಂಡಿದೆ. ಈ ಕಾರಣದಿಂದ ಮುಂಜಾಗ್ರತಾ ಕ್ರಮವಾಗಿ ಅಂಗನವಾಡಿ, ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಆದೇಶ ಹೊರಡಿಸಿದ್ದಾರೆ.

Heavy rain: Holiday declared for school, colleges, Anganwadis in Uttara Kannada district

ಹೊನ್ನಾವರದಲ್ಲಿ ಹಳ್ಳಗಳಿಂದ ಪ್ರವಾಹ ಸೃಷ್ಟಿ

ಹೊನ್ನಾವರ ಹಾಗೂ ಘಟ್ಟದ ಮೇಲ್ಭಾಗದ ಸಿದ್ದಾಪುರ ಭಾಗದಲ್ಲಿ ವ್ಯಾಪಕವಾಗಿ‌ ಮಳೆಯಾದ ಕಾರಣ ಶರಾವತಿ ಉಪ ನದಿಗಳಾದ ಭಾಸ್ಕೇರಿ ಹಾಗೂ ಗುಂಡಬಾಳ ಹಳ್ಳಗಳು ತುಂಬಿ ಇದೀಗ ಈ ಪ್ರದೇಶದಲ್ಲಿ ನೆರೆ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ನದಿ ಪಾತ್ರದ 10ಕ್ಕೂ ಹೆಚ್ಚು ಕುಟುಂಬಗಳ ಜನರನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರ ಮಾಡಲಾಗಿದೆ.

ಜನರಿಗೆ ಎದುರಾದ ನೆರೆ ಆತಂಕ

ಇನ್ನು ಕಾಳಿ, ಗಂಗಾವಳಿ, ಅಘನಾಶಿನಿ, ಶರಾವತಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಕಾರಣ ತಗ್ಗು ಪ್ರದೇಶಗಳಿಗೆ ನೀರು ನುಗ್ಗತೊಡಗಿದೆ. ಇದೇ ರೀತಿ ಮಳೆ ಮುಂದುವರೆದರೆ ಅಂಕೋಲಾ, ಹೊನ್ನಾವರ, ಕಾರವಾರದ ಅಸ್ನೋಟಿ, ಕದ್ರಾ ಭಾಗದಲ್ಲಿ ಮನೆಗಳಿಗೆ ನೆರೆ ಬರುವ ಆತಂಕ ಇದೀಗ ಸ್ಥಳೀಯರಿಗೆ ಎದುರಾಗಿದೆ. ಅಲ್ಲದೆ ಈಗಾಗಲೇ ಯಲ್ಲಾಪುರದಲ್ಲಿ ಗಂಗಾವಳಿ ನದಿ ನೀರಿನಿಂದ ಪಣಸಗುಳಿ ಸೇತುವೆ ಜಲಾವೃತಗೊಂಡಿದೆ. ಇದರಿಂದ ಹೆಗ್ಗಾರ- ಗುಳ್ಳಾಪುರ ಗ್ರಾಮದ ಸಂಪರ್ಕ ಕಡಿತಗೊಂಡಿದೆ.

ಹಳಿಯಾಳ ತಾಲೂಕಿನಲ್ಲಿ ಧಾರಾಕಾರ ಮಳೆಯಾದ ಹಿನ್ನೆಲೆಯಲ್ಲಿ ಹಳಿಯಾಳ-ಚಬ್ಬಲಗೇರಿ ಸಂಪರ್ಕ ಸೇತುವೆ ತುಂಬಿ ಮುಳುಗಡೆಯಾಗಿದೆ. ಪರಿಣಾಮ ಈ ಮಾರ್ಗದ ಸಂಚಾರ ಸಂಪರ್ಕ ಕಡಿತವಾಗಿದೆ. ಇಲ್ಲಿನ ಜನರು ಖಾಮಡೊಳ್ಳಿ ಮಾರ್ಗವಾಗಿ ಸಂಚಾರ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಕದ್ರಾ ಜಲಾಶಯದಿಂದ ನಿರಂತರವಾಗಿ ನೀರು ಹೊರಕ್ಕೆ

ಇನ್ನು ಕಾಳಿ ನದಿ ಪ್ರದೇಶ ವ್ಯಾಪ್ತಿಯಲ್ಲಿಯೂ ವ್ಯಾಪಕವಾಗಿ ಮಳೆಯಾದ ಕಾರಣ ಕದ್ರಾ ಜಲಾಶಯದಿಂದ ಮೂರನೇ ದಿನವೂ 79 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿದೆ. ಇದರಿಂದ ನದಿ ತೀರ ಪ್ರದೇಶದಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಈಗಾಗಲೇ ಕದ್ರಾದ ಮಹಮಾಯ ದೇವಿ ದೇವಾಲಯ ಜಲಾವೃತಗೊಂಡಿದ್ದು, ಇನ್ನು ತಗ್ಗು ಪ್ರದೇಶದ ಜಮೀನುಗಳು ಕೂಡ ಜಲಾವೃತಗೊಂಡು ಜನ ಪ್ರವಾಹದ ಭೀತಿ ಎದುರಿಸುವಂತಾಗಿದೆ.

ಮುಂಜಾಗ್ರತಾ ಕ್ರಮಕ್ಕೆ ಸೂಚನೆ

ಇನ್ನು ನೆರೆ ಹಾನಿ ತಪ್ಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಜಲಾಶಯಗಳಲ್ಲಿ ಹೆಚ್ಚು ನೀರು ಸಂಗ್ರಹಿಸಿ ಒಮ್ಮೆಲೆ ಬಿಡದಂತೆ ಎಚ್ಚರಿಕೆ ನೀಡಿದೆ. ಈಗಾಗಲೇ ಆಯಾ ಜಲಾಶಯಗಳಿಗೆ ಗುರಿ ನೀಡಿ ಗರಿಷ್ಠ ಮಟ್ಟ ತಲುಪುವ ಮುನ್ನವೇ ನಿಧಾನವಾಗಿ ನದಿಗೆ ನೀರು ಹರಿ ಬಿಟ್ಟು ಪ್ರವಾಹ ಎದುರಾಗದಂತೆ ತಡೆಯಲು ಸೂಚನೆ ನೀಡಲಾಗಿದೆ.

ಈ ಸಂಬಂಧ ಶಾಸಕ ಸತೀಶ್ ಸೈಲ್ ಕೂಡ ಕದ್ರಾದ ಕೆಪಿಸಿಎಲ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಈ‌ ಭಾರಿ ಪ್ರವಾಹವಾಗದಂತೆ ತಡೆಯಲು ಕಟ್ಟು ನಿಟ್ಟಿನ ಸೂಚನೆ ನೀಡಿದ್ದಾರೆ. ಪ್ರವಾಹ ಎದುರಾದಲ್ಲಿ ಪರಿಹಾರೋಪಾಯವಾಗಿ ದೋಣಿ ಹಾಗೂ ರಕ್ಷಣಾ ಸಿಬ್ಬಂದಿ, ನಿರಾಶ್ರಿತರಿಗೆ ಕಾಳಜಿ ಕೇಂದ್ರದ ವ್ಯವಸ್ಥೆ ಕಲ್ಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ತಿಳಿಸಿದರು.

ಜಿಲ್ಲೆಯ ಹಲವೆಡೆ ಅಪಾರ ಹಾನಿ

ಇನ್ನು ಜಿಲ್ಲೆಯಲ್ಲಿ ಮಳೆಯಿಂದಾಗಿ ಹಲವೆಡೆ ರಸ್ತೆ, ಮನೆ, ವಿದ್ಯುತ್ ಕಂಬಗಳ ಮೇಲೆ ಮರಗಳು ಬಿದ್ದ ಪರಿಣಾಮ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಭಾರೀ ಮಳೆಯಿಂದಾಗಿ ಕೆಲವೆಡೆ ವಿದ್ಯುತ್, ಇಂಟರ್‌ನೆಟ್ ಕೂಡ ಸ್ಥಗಿತಗೊಂಡಿದೆ. ಶಿರಸಿಯಲ್ಲಿ 1 ಮನೆ ಪೂರ್ಣ, ಹಳಿಯಾಳ, ಕುಮಟಾದಲ್ಲಿ ತಲಾ 1 ಮನೆ ಭಾಗಶಃ ಹಾಗೂ ವಿವಿಧ ತಾಲೂಕುಗಳಲ್ಲಿ 17 ಮನೆಗಳಿಗೆ ಸಣ್ಣಪುಟ್ಟ ಹಾನಿಯಾಗಿದೆ.

ಒಟ್ಟಾರೆ ಜಿಲ್ಲೆಯಲ್ಲಿ ಮಳೆ ಆರ್ಭಟ ನಿರಂತರವಾಗಿ ಮುಂದುವರೆದಿದ್ದು, ನದಿಗಳು ಕೂಡ ಉಕ್ಕಿ ಹರಿಯಲಾರಂಭಿಸಿವೆ. ಪರಿಣಾಮ ನದಿ ತೀರದ ಜನರಿಗೆ ಈ ಬಾರಿಯೂ ಪ್ರವಾಹದ ಭೀತಿ ಎದುರಾಗಿದೆ. ಇದರ ನಡುವೆ ಗಾಳಿ ಅಬ್ಬರಕ್ಕೆ ವಿದ್ಯುತ್ ಕಂಬ ಹಾಗೂ ಮರಗಳು ಧರೆಗುರುಳಿ ಸಾಕಷ್ಟು ಹಾನಿಯಾಗಿದೆ. ಹಾಗೆಯೇ ಇನ್ನು ಎರಡು ದಿನಗಳ ಕಾಲ ಭಾರೀ ಮಳೆಯಾಗಿವ ಬಗ್ಗೆ ಹವಮಾನ ಇಲಾಖೆ ಎಚ್ಚರಿಕೆ ಸಂದೇಶವನ್ನು ಸಹ ರವಾನಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+