ಕಾರವಾರ: ಉಕ್ಕಿ ಹರಿಯುತ್ತಿರುವ ಗಂಗಾವಳಿ ನದಿ, ಅಂಕೋಲಾದಲ್ಲಿ ಹೆಚ್ಚಿದ ಪ್ರವಾಹ ಭೀತಿ
ಕಾರವಾರ, ಜುಲೈ, 25: ಭಾರೀ ಮಳೆಯಿಂದಾಗಿ ಗಂಗಾವಳಿ ನದಿ ಉಕ್ಕಿ ಹರಿಯುತ್ತಿರುವ ಹಿನ್ನೆಲೆ ಅಂಕೋಲಾದ ಜನತೆಗೆ ಪ್ರವಾದ ಭೀತಿ ಎದುರಾಗಿದೆ. ಮಂಗಳವಾರ ಕೂಡ ಇಲ್ಲಿನ ಮನೆಯಂಗಳದವರೆಗೆ ಗಂಗೆ ಪ್ರವೇಶ ಮಾಡಿದೆ. ಇದರಿಂದ ಕಳೆದ ನಾಲ್ಕು ವರ್ಷದಿಂದ ನಿರಂತರವಾಗಿ ಪ್ರವಾಹ ಎದುರಿಸಿ ಸೋತಿರುವ ಜನ ಮತ್ತೊಮ್ಮೆ ಸಂಕಷ್ಟ ಎದುರಿಸುವ ಸ್ಥಿತಿ ನಿರ್ಮಾಣವಾಗಿದೆ.
ಉತ್ತರಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ವ್ಯಾಪಕವಾಗಿ ಮಳೆಯಾಗುತ್ತಿರುವ ಕಾರಣ ಜಿಲ್ಲೆಯ ನದಿಗಳು ತುಂಬಿ ಹರಿಯುತ್ತಿವೆ. ಅದರಲ್ಲಿಯೂ ಗಂಗಾವಳಿ ನದಿ ಉಕ್ಕಿ ಪ್ರವಾಹದ ಮಟ್ಟ ಮೀರಿದ್ದು, ನದಿ ತೀರದ ಪ್ರದೇಶಗಳು ಜಲಾವೃತಗೊಳ್ಳುತ್ತಿವೆ. ಹೊನ್ನೆಬೈಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಳಿಹೋಯ್ಗೆ ಗ್ರಾಮದಲ್ಲಿ ಕಳೆದ ಮೂರು ದಿನಗಳಿಂದ ಮನೆಯಂಗಳದಲ್ಲಿದ್ದ ಗಂಗೆ ಸೋಮವಾರ ಮನೆ ಒಳಭಾಗಗಳಿಗೂ ಪ್ರವೇಶ ಮಾಡಿದೆ.

ಸಾಮಗ್ರಿಗಳ ಸ್ಥಳಾಂತರ
ಇದರಿಂದ ನೆರೆ ಮುನ್ಸೂಚನೆಯರಿತ ಈ ಭಾಗದ ಜನ ಮನೆಯಲ್ಲಿನ ಸಾಮಗ್ರಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಿದ್ದಾರೆ. ಟಿವಿ, ಪ್ರೀಡ್ಜ್, ಅಕ್ಕಿ ಹೀಗೆ ಎಲ್ಲವನ್ನು ಜೋಪಾನ ಮಾಡತೊಡಗಿದ್ದಾರೆ. ಸ್ಥಳೀಯ ಗ್ರಾಮ ಪಂಚಾಯಿತಿಯಿಂದ ಶಾಲೆಯಲ್ಲಿ ಕಾಳಜಿ ಕೇಂದ್ರ ತೆರೆಯಲು ಸಿದ್ಧತೆಯನ್ನು ಕೂಡ ಮಾಡಿಕೊಳ್ಳಲಾಗಿದೆ. ಆದರೆ ಕೇವಲ ಸಾಮಗ್ರಿಗಳನ್ನು ಸಾಗಿಸಿಕೊಂಡು ಕಾದು ಕೂತಿರುವ ಜನ ನೆರೆ ಇಷ್ಟಕ್ಕೆ ಇಳಿದುಹೋಗಲಿ ಎಂದು ಪ್ರಾರ್ಥಿಸತೊಡಗಿದ್ದಾರೆ.
ಗಂಗಾವಳಿ ನದಿ ಎಷ್ಟೇ ತುಂಬಿ ಹರಿದರು ಕೂಡ ಇಷ್ಟೋಂದು ಪ್ರವಾಹ ಬರುತ್ತಿರಲಿಲ್ಲ. ಆದರೆ ದಂಡೆಭಾಗ ಪ್ರದೇಶದಲ್ಲಿ ಖಾರ್ಲ್ಯಾಂಡ್ ಒಡ್ಡು ಒಡೆದಿರುವ ಕಾರಣ ಗಂಗಾವಳಿಯಲ್ಲಿ ಬರುವ ನೀರು ಉಕ್ಕಿ ನೇರವಾಗಿ ಗ್ರಾಮಕ್ಕೆ ನುಗ್ಗುತ್ತಿದೆ. ಇದರಿಂದಲೇ ಕಳೆದ ನಾಲ್ಕು ವರ್ಷದಿಂದ ಪ್ರತಿ ವರ್ಷವೂ ಮನೆಗಳಿಗೆ ನೀರು ನುಗ್ಗಲಾರಂಭಿಸಿದೆ.
ಶಾಶ್ವತ ಪರಿಹಾರ ಕಲ್ಪಿಸುವಂತೆ ಆಗ್ರಹ
ಇದರಿಂದ ಮನೆಯನ್ನು ಪ್ರತಿ ವರ್ಷಕ್ಕೊಮ್ಮೆ ಖಾಲಿ ಮಾಡಬೇಕು. ನೆರೆ ಕಡಿಮೆಯಾದ ಬಳಿಕ ಮತ್ತೆ ಸ್ವಚ್ಚಮಾಡಿ ಮನೆ ಸೇರುವಷ್ಟರಲ್ಲಿ ಹೈರಾಣಾಗುತ್ತಿದ್ದೇವೆ. ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸುವ ಕೆಲಸವಾಗಬೇಕು ಎಂದು ಗ್ರಾಮ ಗಣೇಶ ಹರಿಕಂತ್ರ ಅವರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಇನ್ನು ಈ ಭಾಗದಲ್ಲಿ ನೂರಾರು ಹೆಕ್ಟೇರ್ ಗದ್ದೆ ಇದ್ದರೂ ಕೃಷಿ ಮಾಡಲಾಗದ ಸ್ಥಿತಿ ಗ್ರಾಮಸ್ಥರದ್ದಾಗಿದೆ. ಮಳೆಗಾಲದಲ್ಲಿ ನೆರೆಕಾಟವಾದರೆ, ಬೆಸಿಗೆ ವೇಳೆ ಉಪ್ಪು ನೀರು ನುಗ್ಗುತ್ತಿದೆ. ಇದರಿಂದ ಎಲ್ಲ ಕೃಷಿ ಭೂಮಿ ಪಾಳುಬಿಟ್ಟು ಗೋವಾ, ಮಂಗಳೂರು ಹೀಗೆ ಬೆರೆಡೆಗೆ ಕೆಲಸಕ್ಕೆ ತೆರಳುತ್ತಿದ್ದಾರೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ನೆರೆ ನೀರು ನುಗ್ಗದಂತೆ ಕ್ರಮವಹಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಇನ್ನು ಕಳೆದ ನಾಲ್ಕು ವರ್ಷದಿಂದ ಪ್ರವಾಹದ ಭೀತಿ ಎದುರಾಗಿದೆ. ಇಷ್ಟುವರ್ಷ ಬಾರದ ಪ್ರವಾಹ ಇದೀಗ ಖರ್ಲ್ಯಾಂಡ್ ಒಡೆದ ಕಾರಣ ಪ್ರತಿ ವರ್ಷವೂ ಮಳೆಗಾಲದಲ್ಲಿ ನೆರೆ ಬರುವ ಕಾರಣ ಮನೆ ಖಾಲಿ ಮಾಡಬೇಕಾಗಿದೆ. ನೆರೆ ಬರುತ್ತಿದ್ದರೂ ಈವರೆಗೂ ಯಾವ ಶಾಸಕರೂ ಇತ್ತ ಬಂದಿಲ್ಲ. ಪ್ರತಿ ವರ್ಷವೂ ಬಿಡಿಗಾಸಿನ ಪರಿಹಾರ ನೀಡುತ್ತಾರೆ. ಆದರೆ ಆ ಪರಿಹಾರಕ್ಕಿಂತಲೂ ಹಲವು ಪಟ್ಟು ನಷ್ಟವಾಗುತ್ತದೆ. ನಮಗೆ ಶಾಸ್ವತ ಪರಿಹಾರ ಕಲ್ಪಿಸುವ ಮೂಲಕ ನೆರೆ ಬಾರದಂತೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರಾದ ದೇವರಾಜ ಹರಿಕಂತ್ರ ಆಗ್ರಹಿಸಿದ್ದಾರೆ.












Click it and Unblock the Notifications