ಭಾರೀ ಮಳೆ; ಕುಮಟಾ, ಹೊನ್ನಾವರದ ಕೆಲ ಗ್ರಾಮಗಳಿಗೆ ನುಗ್ಗಿದ ನೆರೆ!
ಕಾರವಾರ, ಜುಲೈ 17; ಉತ್ತರ ಕನ್ನಡ ಜಿಲ್ಲೆಯಾದ್ಯಂತ ಸುರಿದ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಅದರಲ್ಲಿಯೂ ಜಿಲ್ಲೆಯ ಕರಾವಳಿ ಭಾಗದ ಹೊನ್ನಾವರ ಹಾಗೂ ಕುಮಟಾ ತಾಲೂಕಿನ ಹಲವು ಗ್ರಾಮದಲ್ಲಿ ನೆರೆ ಸೃಷ್ಟಿಯಾಗಿದ್ದರೆ, ಇತ್ತ ಕಾಳಿ ನದಿಗೆ ಹೆಚ್ಚಿನ ನೀರು ಹರಿದುಬರುತ್ತಿರುವ ಕಾರಣ ಕದ್ರಾ ಜಲಾಶಯದಿಂದ ನೀರು ಹೊರಬಿಡಲಾಗುತ್ತಿದ್ದು, ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.
ಹೌದು ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಹಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಜನರು ಹೈರಾಣಾಗಿದ್ದಾರೆ. ಕಳೆದ ವಾರ ಜಿಲ್ಲೆಯಲ್ಲಿ ಬಿಟ್ಟು ಬಿಡದೇ ಸುರಿದ ಮಳೆಗೆ ಹಲವೆಡೆ ನೆರೆ ಸೃಷ್ಟಿಯಾಗಿತ್ತು.
ಆದರೆ ಕಳೆದ ಮೂರ್ನಾಲ್ಕು ದಿನಗಳಿಂದ ಮಳೆ ಪ್ರಮಾಣ ಕಡಿಮೆಯಾಗಿತ್ತು. ಇದರಿಂದ ಜನ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ಆದರೆ ಶುಕ್ರವಾರ ರಾತ್ರಿಯಿಂದ ಸುರಿಯುತ್ತಿರುವ ಮಳೆಗೆ ಜಿಲ್ಲೆಯ ಕರಾವಳಿ ಭಾಗ ಅದರಲ್ಲೂ ಹೊನ್ನಾವರ ಮತ್ತು ಕುಮಟಾ ತಾಲೂಕಿನ ಹಲವು ಗ್ರಾಮಗಳಲ್ಲಿ ನೆರೆ ಎದುರಾಗಿದೆ.
ಕಾರವಾರ-ಬೆಳಗಾವಿ ಸಂಪರ್ಕಿಸುವ ರಾಜ್ಯ ಹೆದ್ದಾರಿ 34ರ ಅಣಶಿ ಘಟ್ಟದಲ್ಲಿ ಪದೇ ಪದೇ ಗುಡ್ಡಕುಸಿತವಾಗುತ್ತಿದ್ದ ಕಾರಣ ಬಂದ್ ಮಾಡಲಾಗಿದ್ದ ರಾಜ್ಯ ಹೆದ್ದಾರಿಯನ್ನು ಜಿಲ್ಲಾಧಿಕಾರಿ ಮುಲ್ಲೆ ಮುಗಿಲನ್ ನೇತೃತ್ವದ ತಂಡ ಪರಿಶೀಲಿಸಿತು. ಕೆಲ ಮುಂಜಾಗೃತಾ ಕ್ರಮದೊಂದಿಗೆ ಪುನಃ ಸಂಚಾರ ಆರಂಭಿಸಲು ಸೂಚಿಸಲಾಗಿದೆ.

350 ಕ್ಕೂ ಹೆಚ್ಚು ಜನರ ಸ್ಥಳಾಂತರ
ಇನ್ನೂ ಶರಾವತಿ ನದಿ ಹಾಗೂ ಗುಂಡಬಾಳ ಹೊಳೆ ಉಕ್ಕಿ ಹರಿದ ಪರಿಣಾಮ ಸಾಲ್ಕೋಡ, ಕಡತೋಕ, ಭಾಸ್ಕೇರಿ, ಕೆಕ್ಕಾರ, ಮುರೂರು, ಊರಕೇರಿ ಸೇರಿದಂತೆ ಹಲವು ಗ್ರಾಮಗಳು ಜಲಾವೃತವಾಗಿದೆ. ನದಿಯ ನೀರು ಮನೆ ಹಾಗೂ ತೋಟ, ಗದ್ದೆಗಳಿಗೆ ನುಗ್ಗಿದ್ದು ತಕ್ಷಣ ಮನೆಯಲ್ಲಿದ್ದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
ಅಲ್ಲದೆ ಎಲ್ಲೆಡೇ ನೆರೆ ಸೃಷ್ಟಿಯಾದ ಕಾರಣ ಕುಮಟಾದಲ್ಲಿ 3 ಹಾಗೂ ಹೊನ್ನಾವರದಲ್ಲಿ 11 ಸೇರಿ ಒಟ್ಟು 14 ಗ್ರಾಮದ 334 ಜನರನ್ನು ಈಗಾಗಲೇ ಕಾಳಜಿ ಕೇಂದ್ರಕ್ಕೆ ರವಾನೆ ಮಾಡಲಾಗಿದೆ. ಮಳೆಯ ಪ್ರಮಾಣ ಹೀಗೆ ಮುಂದುವರೆದರೆ ಅಂಕೋಲಾ ಹಾಗೂ ಕಾರವಾರ ತಾಲೂಕಿನಲ್ಲೂ ನೆರೆ ಸೃಷ್ಟಿಯಾಗಿ ಹಲವೆಡೆ ಹಾನಿ ಸಂಭವಿಸುವ ಸಾಧ್ಯತೆ ಇದೆ.

ಪ್ರವಾಹಕ್ಕೆ ಸಿಲುಕಿದವರ ಬೋಟ್ ಮೂಲಕ ರಕ್ಷಣೆ
ಜಿಲ್ಲೆಯ ಕರಾವಳಿ ಹಾಗೂ ಘಟ್ಟದ ತಾಲ್ಲೂಕುಗಳಲ್ಲಿ ಎಡಬಿಡದೆ ಮಳೆಯಾಗುತ್ತಿದೆ. ಪರಿಣಾಮ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿದ್ದು, ನದಿಗಳು ಅಪಾಯದ ಮಟ್ಟ ತಲುಪುತ್ತಿವೆ.
ಹೊನ್ನಾವರದಲ್ಲಿ ಎಸ್‌ಡಿಆರ್‌ಎಫ್ ತಂಡ ಬೀಡು ಬಿಟ್ಟಿದ್ದು ಪ್ರವಾಹದಲ್ಲಿ ಸಿಲುಕಿದ ಜನರನ್ನು ಬೋಟ್ ಮೂಲಕ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡುತ್ತಿದೆ. ಇದಲ್ಲದೇ ಪೊಲೀಸರು, ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದು, ನೀರು ನುಗ್ಗಬಹುದಾದ ಸ್ಥಳಗಳಿಂದಲೂ ಜನರನ್ನು ಸ್ಥಳಾಂತರಿಸಲಾಗುತ್ತಿದೆ.

ಜಲಾಶಯದಿಂದ ನೀರು ಕಡಿಮೆ ಮಾಡಲು ಸೂಚನೆ
ಇನ್ನು ಗೇರುಸೊಪ್ಪ ಜಲಾಶಯದಿಂದ ವಿದ್ಯುತ್ ಉತ್ಪಾದನೆ ಮಾಡಿ ಹೊರ ಬಿಡುವ ನೀರಿನ ಜೊತೆಗೆ ಸಿದ್ದಾಪುರ ಭಾಗದಲ್ಲಿ ವ್ಯಾಪಕ ಮಳೆಯಾಗುತ್ತಿರುವುದರಿಂದ ಹಳ್ಳಗಳಿಗೆ ಹೆಚ್ಚಿನ ನೀರು ಹರಿದುಬರುತ್ತಿದೆ. ಇದರಿಂದ ಹೊನ್ನಾವರ ಭಾಗದಲ್ಲಿ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಈಗಾಗಲೇ ಎಸ್‌ಡಿಆರ್‌ಫ್ ತಂಡ ಹಾಗೂ ಅಧಿಕಾರಿಗಳು ಸ್ಥಳದಲ್ಲಿದ್ದು ಪರಿಹಾರ ಕಾರ್ಯಾಚರಣೆ ನಡೆಸಿದ್ದಾರೆ.
ಅಲ್ಲದೆ ಗೇರುಸೊಪ್ಪ ಜಲಾಶಯದಿಂದ ಬಿಡುಗಡೆ ಮಾಡುತ್ತಿದ್ದ ನೀರಿನ ಪ್ರಮಾಣವನ್ನು ಕಡಿಮೆ ಮಾಡಲು ಈಗಾಗಲೇ ಅಲ್ಲಿನ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.
ಇನ್ನು ಭಾರೀ ಮಳೆಯಿಂದಾಗಿ ಜಿಲ್ಲಾ ಆಸ್ಪತ್ರೆಯ ಡಯಾಲಿಸಿಸ್ ಕೇಂದ್ರಕ್ಕೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು. ಡಯಾಲಿಸಿಸ್ ಕೇಂದ್ರದ ಹೊರ ಭಾಗದಲ್ಲಿ ಸುಮಾರು ಒಂದೂವರೆ ಅಡಿಯಷ್ಟು ನಿಂತ ನೀರು ಮಳೆ ಜೋರಾಗಿದ್ದರಿಂದ ಆಸ್ಪತ್ರೆ ಒಳಭಾಗಕ್ಕೆ ನುಗ್ಗಿದೆ. ಇದರಿಂದ ಡಯಾಲಿಸಿಸ್‌ಗೆ ಆಗಮಿಸಿದವರು ಪರದಾಡುವಂತಾಗಿತ್ತು. ಬಳಿಕ ನೀರನ್ನು ಮೋಟಾರ್ ಪಂಪ್ ಬಳಸಿ ಹೊರಕ್ಕೆ ಪೈಪ್ ಮೂಲಕ ಬಿಡಲಾಯಿತು.

ಅಣಶಿ ಘಟ್ಟದಲ್ಲಿ ಸಂಚಾರ ಪ್ರಾರಂಭ
ಕಾರವಾರ-ಬೆಳಗಾವಿ ಸಂಪರ್ಕಿಸುವ ರಾಜ್ಯ ಹೆದ್ದಾರಿ34 ರ ಅಣಶಿ ಘಟ್ಟದಲ್ಲಿ ಪದೇ ಪದೇ ಗುಡ್ಡಕುಸಿತವಾಗುತ್ತಿದ್ದ ಕಾರಣ ಬಂದ್ ಮಾಡಲಾಗಿದ್ದ ರಾಜ್ಯ ಹೆದ್ದಾರಿಯನ್ನು ಜಿಲ್ಲಾಧಿಕಾರಿಗಳು ಪರಿಶೀಲಿಸಿದರು. ಕೆಲ ಮುಂಜಾಗೃತಾ ಕ್ರಮದೊಂದಿಗೆ ಸಂಚಾರ ಪುನಃ ಪ್ರಾರಂಭಕ್ಕೆ ಸೂಚಿಸಿದ್ದಾರೆ.
ಕಂದಾಯ, ಆರಕ್ಷಕ, ಅರಣ್ಯ ಮತ್ತು ಲೊಕೋಪಯೋಗಿ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ಸಮೀಕ್ಷಾ ತಂಡ ರಚಿಸಿದ್ದು, ತಂಡವು ಅಣಶಿ ಘಟ್ಟದ ನಿಖರವಾದ ಸಮೀಕ್ಷೆ ಕೈಗೊಂಡು ಪ್ರತಿಯೊಂದು ಸೂಕ್ಷ್ಮ ಪ್ರದೇಶ ಗುರುತಿಸಿ ಸೂಕ್ತ ಯೋಜನೆ ರೂಪಿಸಲು ಸೂಚಿಸಲಾಗಿದೆ.
ಬೆಳಗ್ಗೆ 7 ರಿಂದ ಸಂಜೆ ತನಕ ಮಾತ್ರ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಅಣಶಿ ಘಟ್ಟಕ್ಕೆ ಪ್ರತ್ಯೇಕ ಎರಡು ಗಸ್ತು ತಂಡಗಳನ್ನು ರಚಿಸಿ ಸಂಚಾರಕ್ಕೆ ಮುಕ್ತವಿರುವ ಬಗ್ಗೆ ಖಚಿತಪಡಿಸಿಕೊಂಡು ತನಿಖಾ ಠಾಣೆಗಳಿಗೆ ಮಾಹಿತಿ ನೀಡಿದ ಬಳಿಕ ಮಾತ್ರ ವಾಹನಗಳನ್ನು ಬಿಡುವ ಬಗ್ಗೆ ಮತ್ತು ಪ್ರತಿದಿನ ಅಣಶಿ-ಜೋಯಡಾಕ್ಕೆ ತೆರಳುವ ಸಾರ್ವಜನಿಕರ ಅನುಕೂಲಕ್ಕಾಗಿ ಸಾರಿಗೆ ಸಂಸ್ಥೆಯ ಮಿನಿ ಬಸ್ಸುಗಳನ್ನು ಬಿಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ.

ಸಾಗರ ಹಾಗೂ ಹೊನ್ನಾವರ ಹೆದ್ದಾರಿ ಬಂದ್
ಇನ್ನು ನಿರಂತರ ಮಳೆಯಿಂದ ಹೊನ್ನಾವರ ತಾಲೂಕಿನ ಗೆರುಸೊಪ್ಪ ಬಳಿಯ ಸೂಳೆಮುರ್ಖಿ ಬಳಿ ರಾಷ್ಟ್ರೀಯ ಹೆದ್ದಾರಿ 69ರಲ್ಲಿ ರಸ್ತೆ ಕುಸಿದು ಬಿದ್ದಿದೆ. ಸಾಗರ ಹಾಗೂ ಹೊನ್ನಾವರ ನಡುವಿನ ರಸ್ತೆ ಇದಾಗಿದ್ದು, ವಾಹನ ಸಂಚಾರವನ್ನು ಜಿಲ್ಲಾಡಳಿತ ಬಂದ್ ಮಾಡಿದ್ದು ಪರ್ಯಾಯ ಮಾರ್ಗವಾಗಿ ಕುಮಟಾ-ಸಂತೆಗುಳಿ- ಸಿದ್ದಾಪುರ ಮಾರ್ಗವಾಗಿ ತೆರಳಲು ಸೂಚನೆ ನೀಡಲಾಗಿದೆ.
ಇನ್ನೊಂದೆಡೆ ಜಿಲ್ಲೆಯ ಘಟ್ಟದ ಮೇಲಿನ ತಾಲೂಕಿನಲ್ಲೂ ಮಳೆ ಹೆಚ್ಚಾಗಿದ್ದು ಕಾಳಿ ನದಿಯಲ್ಲಿ ನೀರು ಉಕ್ಕಿ ಹರಿಯುತ್ತಿರುವ ಪರಿಣಾಮ ನದಿಗೆ ಅಡ್ಡಲಾಗಿ ಕಟ್ಟಿರುವ ಜಲಾಶಯ ಭರ್ತಿಯಾಗುತ್ತಿದೆ. ಕಾರವಾರ ತಾಲೂಕಿನ ಕದ್ರಾ ಜಲಾಶಯದಲ್ಲಿ ಒಳ ಹರಿವಿನ ಪ್ರಮಾಣ ಹೆಚ್ಚಾಗಿದ್ದು ಜಲಾಶಯದ 8 ಗೇಟ್ ಗಳನ್ನು ತೆರೆದು ಸುಮಾರು 40 ಸಾವಿರ ಕ್ಯುಸೆಕ್ಸ್ ನೀರನ್ನು ಹೊರಬಿಡುತ್ತಿದ್ದು ಕಾರವಾರ ತಾಲೂಕಿನ ಕಾಳಿ ನದಿ ಪಾತ್ರದ ಜನರಲ್ಲಿ ಪ್ರವಾಹ ಭೀತಿ ಎದುರಾಗಿದೆ.












Click it and Unblock the Notifications