ನೆನೆಗುದಿಗೆ ಬಿದ್ದಿದ್ದ ಅಂಕೋಲಾ-ಹುಬ್ಬಳ್ಳಿ ರೈಲ್ವೆ ಯೋಜನೆಗೆ ಮರುಜೀವ
ಕಾರವಾರ, ಸೆಪ್ಟೆಂಬರ್, 04: ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆಗೆ ಕೊನೆಗೂ ಗ್ರೀನ್ ಸಿಗ್ನಲ್ ಸಿಕ್ಕಿದೆ. ಯೋಜನೆ ವಿರುದ್ಧ ವೃಕ್ಷ ಫೌಂಡೇಶನ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಶಕ್ತಿ ಅರ್ಜಿಯನ್ನು ವಿಲೇವಾರಿಗೊಳಿಸಿದ ಪರಿಣಾಮ ಹಲವು ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಯೋಜನೆಗೆ ಕೊನೆಗೂ ಮರುಜೀವ ಬಂದಂತಾಗಿದೆ.
ಅಂಕೋಲಾ ಹುಬ್ಬಳ್ಳಿ ಯೋಜನೆಗೆ ಜವಹರಲಾಲ್ ನೆಹರು ಕಾಲದಿಂದಲೂ ಪ್ರಯತ್ನಿಸಲಾಗುತಿತ್ತಾದರೂ ಈವರೆಗೂ ಸಾಧ್ಯವಾಗಿಲ್ಲ. 1999ರ ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದ ವೇಳೆ ಅಂಕೋಲಾ- ಹುಬ್ಬಳ್ಳಿ ರೈಲ್ವೆ ಮಾರ್ಗಕ್ಕೆ ಶಂಕುಸ್ಥಾಪನೆ ನೆರವೇರಿಸಿ ಹುಬ್ಬಳ್ಳಿಯ ಕಲಘಟಕಿಯವರೆಗೂ ಹಳಿ ನಿರ್ಮಿಸಲಾಗಿತ್ತು. ಆದರೆ ಬಳಿಕ ಪರಿಸರವಾದಿಗಳು ಯೋಜನೆಗೆ ಒಂದಲ್ಲಾ ಒಂದು ರೀತಿಯಲ್ಲಿ ಅಡ್ಡಗಾಲು ಹಾಕುತ್ತಿದ್ದರು. 2001ರಲ್ಲಿ ಪಾಂಡುರಂಗ ಹೆಗಡೆ ಎನ್ನುವವರು ಪಿಐಎಲ್ ಸಲ್ಲಿಸಿದ್ದ ಕಾರಣ 19 ವರ್ಷಗಳ ಕಾಲ ಯೋಜನೆ ನೆನೆಗುದಿಗೆ ಬಿದ್ದಿತ್ತು.

ನಂತರ 2020ರಲ್ಲಿ ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ರಾಜ್ಯ ವನ್ಯಜೀವಿ ಮಂಡಳಿಯಿಂದ ಯೋಜನೆಗೆ ಕ್ಲಿಯರೆನ್ಸ್ ಸಿಗುತ್ತಿದ್ದಂತೆ ಬೆಂಗಳೂರಿನ ವೃಕ್ಷಫೌಂಡೇಶನ್ ಕುಂಟು ನೆಪಗಳನ್ನು ಒಡ್ಡಿ ಕೋರ್ಟ್‌ನಿಂದ ತಡೆಯಾಜ್ಞೆ ತಂದಿತ್ತು. ಇದರಿಂದ ಯೋಜನೆ ಮತ್ತಷ್ಟು ವಿಳಂಬವಾಗುವಂತಾಗಿತ್ತು. ಸದ್ಯ ಬೆಂಗಳೂರಿನ ವೃಕ್ಷ ಪೌಂಡೇಶನ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಶಕ್ತಿ ಅರ್ಜಿಯನ್ನು ಆಗಸ್ಟ್ 24ರಂದು ವಿಚಾರಣೆ ನಡೆಸಿದ ಹೈಕೋರ್ಟ್ ಅರ್ಜಿಯನ್ನು ವಿಲೇವಾರಿಗೊಳಿಸಿದೆ.
ರಾಜ್ಯ ವನ್ಯಜೀವಿ ಮಂಡಳಿ 14ನೇ ಸಭೆಯಲ್ಲಿ ಯೋಜನೆ ಜಾರಿ ಸಂಬಂಧ ಅನುಮೋದನೆ ನೀಡಿದ್ದ ಸಭೆಯನ್ನೇ ಅಕ್ರಮ ಎಂದು ವಾದಿಸಿದ್ದರು. ಕಾಳಿ ಹುಲಿ ಸಂರಕ್ಷಿತಾರಣ ಪ್ರದೇಶದ ಮಧ್ಯ ರೈಲ್ವೆ ಹಳಿ ಹಾದು ಹೋಗುವುದಾಗಿ ಮತ್ತು ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಹಾದು ಹೋಗುವುದಾಗಿ ವಾದ ಮಂಡಿಸಿದ್ದರು. ಆದರೆ ಜಿಲ್ಲೆಯವರೇ ಆದ ನ್ಯಾಯವಾದಿ ಆರ್.ಜಿ.ಕೊಲ್ಲೆ ಹಾಗೂ ಅಕ್ಷಯ ಕೊಲ್ಲೆ ಅವರು ಸಮರ್ಥವಾಗಿ ವಾದ ಮಂಡಿಸಿದ ಪರಿಣಾಮ ಅವರ ಅರ್ಜಿಯನ್ನು ವಜಾಗೊಳಿಸಿದೆ ಎಂದು ರೈಲ್ವೆ ಸೇವಾ ಸಮಿತಿ ಕಾರ್ಯಾಧ್ಯಕ್ಷ ರಾಜೀವ್ ಗಾಂವಕರ್ ತಿಳಿಸಿದ್ದಾರೆ.
ಇನ್ನು ರಾಷ್ಟ್ರೀಯ ವನ್ಯಜೀವಿ ಮಂಡಳಿ ಅಭಿಪ್ರಾಯದಂತೆ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗದ ಪರಿಷ್ಕೃತ ಯೋಜನೆ ಪ್ರಮಾಣ ಪತ್ರವನ್ನು ನೈರುತ್ಯ ರೈಲ್ವೆ ವಲಯ ಪುರಸ್ಕರಿದಂತಾಗಿದೆ. ಇದರಿಂದಾಗಿ ಕೇವಲ ಕರಾವಳಿ ಅಭಿವೃದ್ಧಿಗೆ ಮಾತ್ರ ಸೀಮಿತವಾಗದೆ ಜಿಲ್ಲೆಯಲ್ಲಿರುವ ಸೀಬರ್ಡ್, ಬಂದರು, ವಿಮಾನ ನಿಲ್ದಾಣಗಳಿಗೂ ಪೂರಕವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಕಳೆದ ಹಲವು ದಶಕಗಳಿಂದ ನಕಲಿ ಪರಿಸರವಾದಿಗಳ ವಿರುದ್ಧ ಹೋರಾಟ ನಡೆಸಿದ ಪರಿಣಾಮ ಇಂದು ಅಂಕೋಲಾ-ಹುಬ್ಬಳ್ಳಿ ರೈಲ್ವೆ ನಿರ್ಮಾಣಕ್ಕೆ ಹಸಿರು ನಿಶಾನೆ ಸಿಕ್ಕಿದಂತಾಗಿದೆ. ಈ ಯೋಜನೆ ಜಾರಿಯಿಂದಾಗಿ ಜಿಲ್ಲೆಯ ಅಭಿವೃದ್ಧಿ ಜೊತೆಗೆ, ಉದ್ಯೋಗ, ಕೈಗಾರಿಕೆ, ವ್ಯಾಪಾರಕ್ಕೆ ಸಾಕಷ್ಟು ಅನುಕೂಲವಾಗಲಿದೆ.
ಸುಳ್ಳು ಮಾಹಿತಿಗಳನ್ನು ನೀಡಿ ನ್ಯಾಯಾಲಯ ಹಾಗೂ ಸಾರ್ವಜನಿಕರ ದಾರಿ ತಪ್ಪಿಸುತ್ತಿದ್ದ ನಕಲಿ ಪರಿಸರವಾದಿಗಳ ವಿರುದ್ಧ ನ್ಯಾಯಾಲಯದಲ್ಲಿ ರಾಜೀವ್ ಗಾಂವಕರ್ ಅವರು ವಾಸ್ತವಿಕ ನಕ್ಷೆಯನ್ನು ಹಾಜರುಪಡಿಸಿದ್ದರು. ಇದರಿಂದ ಪರಿಸರ ಸೂಕ್ಷ್ಮ ವಲಯ ಪ್ರಸ್ತುತ ಯೋಜನೆಯಿಂದ 14 ಕಿ.ಮೀ. ದೂರ ಇರುವುದನ್ನು ಸಾಬೀತು ಪಡೆಸಲು ಸಹಕಾರಿ ಆಗುವಂತಾಗಿದೆ. ಮುಂದಿನ ದಿನಗಳಲ್ಲಿ ಯೋಜನೆ ಜಾರಿಯಾಗಲು ಎಲ್ಲರು ಸಹಕಾರ ನೀಡಬೇಕು ಎಂದು ರೈಲ್ವೆ ಸೇವಾ ಸಮಿತಿ ಅಧ್ಯಕ್ಷ ಜಾರ್ಜ್ ಫರ್ನಾಂಡಿಸ್ ಮನವಿ ಮಾಡಿದ್ದಾರೆ.












Click it and Unblock the Notifications