ಶಿವನ ಸನ್ನಿಧಿ ಗೋಕರ್ಣ ಬಸ್ ನಿಲ್ದಾಣದಲ್ಲಿ ಸಮಸ್ಯೆಗಳ ಸರಮಾಲೆ
ಗೋಕರ್ಣ, ಕರ್ನಾಟಕದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದು. ಅರಬ್ಬಿ ಸಮುದ್ರ ತಟದಲ್ಲಿರುವ ಈ ಸುಂದರ ಊರು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಶಿವನ ಆತ್ಮಲಿಂಗ ಇರುವ ಸ್ಥಳ ಎಂದು ಪುರಾಣಗಳು ಹೇಳುತ್ತವೆ. ಇಲ್ಲಿನ ಮಹಾಬಲೇಶ್ವರ ದೇವಾಲಯ ಶಿವನ ಭಕ್ತರಿಗೆ ಅಚ್ಚುಮೆಚ್ಚು. ಆದ್ದರಿಂದಲೇ ಇದನ್ನು ದಕ್ಷಿಣ ಕಾಶಿ ಅಥವಾ ದಕ್ಷಿಣ ಭಾರತದ ಕಾಶಿ ಎಂದೂ ಕರೆಯುತ್ತಾರೆ.
ಇಂತಹ ಗೋಕರ್ಣಕ್ಕೆ ಪ್ರತಿನಿತ್ಯ ಸಾವಿರಾರು ಭಕ್ತರು, ಪ್ರವಾಸಿಗರು ಭೇಟಿ ನೀಡುತ್ತಾರೆ. ಕರ್ನಾಟಕ ಮಾತ್ರವಲ್ಲದೇ ತಮಿಳುನಾಡು, ಕೇರಳ, ಆಂಧ್ರ ಪ್ರದೇಶ, ತೆಲಂಗಾಣದಿಂದ ಕೂಡ ಪ್ರವಾಸಿಗರು ಆಗಮಿಸುತ್ತಾರೆ. ಇಲ್ಲಿಗೆ ಸಮೀಪದಲ್ಲೇ ಇರುವ ಓಂ ಬೀಚ್ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ವಿದೇಶಿಯರು ಕೂಡ ಇಲ್ಲಿ ಬಂದು ತಂಗುತ್ತಾರೆ.

ಸಾವಿರಾರು ಜನ ಭೇಟಿ ಕೊಡುವ ಗೋಕರ್ಣದಲ್ಲಿ ಬಸ್ ನಿಲ್ದಾಣದ್ದೇ ಪ್ರಮುಖ ಸಮಸ್ಯೆಯಾಗಿದೆ. ಇಲ್ಲಿ ಸಮರ್ಪಕವಾದ ಬಸ್ ನಿಲ್ದಾಣವಿಲ್ಲ, ಇರುವ ಬಸ್ ನಿಲ್ದಾಣವನ್ನು ಸರಿಯಾಗಿ ನಿರ್ವಹಣೆ ಮಾಡದೇ ಇರುವ ಕಾರಣ ಹಲವು ಸಮಸ್ಯೆಗಳನ್ನು ನೋಡಬಹುದು.
ಸೋರುತಿಹುದು ನಿಲ್ದಾಣದ ಮಾಳಿಗೆ!
ಮಳೆಗಾಲದಲ್ಲಿ ಇಲ್ಲಿನ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಸರಿಯಾಗಿ ಕುಳಿತುಕೊಳ್ಳಲು ಸ್ಥಳವಿಲ್ಲದಂತಾಗಿದೆ. ಮಳೆ ಬರುವಾಗ ನಿಲ್ದಾಣ ಸೋರುವ ಕಾರಣ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ. ಹಲವು ವರ್ಷಗಳಿಂದ ಕೂಡ ಇದೇ ಸಮಸ್ಯೆಯಿದ್ದರೂ ಅಧಿಕಾರಿಗಳು ಈ ಬಗ್ಗೆ ಗಂಭೀರವಾಗಿ ಪರಿಗಣಿಸದೇ ಇರುವುದು ದುರಂತ.

ಇನ್ನು ಬಸ್ ನಿಲ್ದಾಣದಲ್ಲಿ ಸಮರ್ಪಕವಾದ ಶೌಚಾಲಯ ವ್ಯವಸ್ಥೆ ಇಲ್ಲ, ಇಲ್ಲಿರುವ ಶೌಚಾಲಯ ಸಾಕಷ್ಟು ಗಲೀಜಾಗಿದ್ದು, ಅಲ್ಲಿ ಶುಚಿತ್ವ ಮಾಯವಾಗಿದೆ. ಶೌಚಾಲಯ ಬಳಸುವವರು ಅನಿವಾರ್ಯವಾಗಿ ಮೂಗು ಮುಚ್ಚಿಕೊಂಡು ಹೋಗಬೇಕಾದ ಪರಿಸ್ಥಿತಿ ಇದೆ.
ವಾರಾಂತ್ಯದಲ್ಲಿ ಹೆಚ್ಚಿನ ಪ್ರಯಾಣಿಕರು ಇಲ್ಲಿಗೆ ಆಗಮಿಸುತ್ತಾರೆ. ಬಸ್‌ಗಳನ್ನು ಸೀಟು ಕಾದಿರಿಸುವ ವ್ಯವಸ್ಥೆ ಕೂಡ ಇಲ್ಲಿ ಮಾಯವಾಗಿದೆ. ಅಡ್ವಾನ್ಸ್ ಬುಕಿಂಗ್ ಮಾಡಬೇಕು ಎಂದರೆ ಕಳೆದ 15 ದಿನಗಳಿಂದ ಕಂಪ್ಯೂಟರ್, ಪ್ರಿಂಟರ್ ಕೆಟ್ಟಿದೆ ಮೊಬೈಲ್‌ನಲ್ಲೇ ಬುಕಿಂಗ್ ಮಾಡಿಕೊಳ್ಳಿ ಎನ್ನುತ್ತಾರೆ ಇಲ್ಲಿನ ಸಿಬ್ಬಂದಿ.
ಪ್ರಿಂಟರ್ ಇಲ್ಲದ ಕಾರಣ ಬುಕ್ಕಿಂಗ್ ಶೀಟ್ ಇಲ್ಲದೆ ಸಾರಿಗೆ ಸಿಬ್ಬಂದಿ ಮತ್ತು ಪ್ರಯಾಣಿಕರು ಇಬ್ಬರೂ ಕೂಡ ಪರದಾಡುವಂತಾಗಿದೆ. ಇನ್ನು ಇಲ್ಲಿ ವಿದ್ಯುತ್ ಹೋದರೆ ಸರಿಯಾದ ಪರ್ಯಾಯ ವ್ಯವಸ್ಥೆ ಕೂಡ ಇಲ್ಲ. ಇಡೀ ನಿಲ್ದಾಣಕ್ಕೆ ಕತ್ತಲು ಆವರಿಸುತ್ತದೆ.

ಸಾರಿಗೆ ಸಿಬ್ಬಂದಿಗೂ ಇಲ್ಲ ಮೂಲಭೂತ ಸೌಲಭ್ಯ
ಇಲ್ಲಿನ ಸಾರಿಗೆ ಸಿಬ್ಬಂದಿಗೂ ಕೂಡ ಇಲ್ಲ ಸರಿಯಾದ ವ್ಯವಸ್ಥೆ ಇಲ್ಲ. ಬೆಂಗಳೂರು ಸೇರಿದಂತೆ ದೂರದ ಊರುಗಳಿಂದ ಬರುವ ಸಾರಿಗೆ ಸಂಸ್ಥೆಯ ಬಸ್ ಗಳು ಸಂಜೆಗೆ ಅಲ್ಲಿಂದ ವಾಪಸ್ ಹೊರಡುತ್ತವೆ. ಅದುವರೆಗೂ ಸಿಬ್ಬಂದಿಗೆ ಉಳಿದುಕೊಳ್ಳಲು ಇಲ್ಲಿ ವಿಶ್ರಾಂತಿ ಕೊಠಡಿ ಕೂಡ ಇಲ್ಲ. ಅನಿವಾರ್ಯವಾಗಿ ಬಸ್‌ನಲ್ಲೇ ಮಲಗಿಕೊಂಡು ನಂತರ ಸಂಜೆಗೆ ಅಲ್ಲಿಂದ ವಿವಿಧ ಊರುಗಳಿಗೆ ಹೋಗಬೇಕಾಗಿದೆ.
ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಪ್ರಯಾಣಿಕರು ಮತ್ತು ಸಾರಿಗೆ ಸಿಬ್ಬಂದಿಗೆ ಆಗುತ್ತಿರುವ ತೊಂದರೆಯನ್ನು ನಿವಾರಿಸಬೇಕಿದೆ.












Click it and Unblock the Notifications