ಉತ್ತರ ಕನ್ನಡ: ಗೋವಾ ಗಡಿ ಬಂದ್, ವಾರಗಳ ಕಾಲ ನಿಷೇಧಾಜ್ಞೆ
ಕಾರವಾರ, ಮಾರ್ಚ್ 22: ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆ ನೀಡಿರುವ 'ಜನತಾ ಕರ್ಫ್ಯೂ' ಹಿನ್ನೆಲೆಯಲ್ಲಿ ಇಡೀ ಉತ್ತರ ಕನ್ನಡ ಜಿಲ್ಲೆ ಸ್ತಬ್ಧಗೊಂಡಿದೆ.
ಹೆದ್ದಾರಿ ಸೇರಿದಂತೆ ಸದಾ ಜನರಿಂದ ಗಿಜಿಗುಡುತ್ತಿದ್ದ ಪ್ರಮುಖ ಬೀದಿಗಳು ಸಹ ವಾಹನ, ಜನ ಸಂಚಾರವಿಲ್ಲದೇ ಬಿಕೋ ಎನ್ನುತ್ತಿವೆ. ಭಟ್ಕಳ, ಕಾರವಾರ ಸೇರಿದಂತೆ ವಿವಿಧೆಡೆ ನಡೆಯಬೇಕಿದ್ದ ಭಾನುವಾರದ ಸಂತೆ ರದ್ದಾಗಿದೆ. ಪ್ರಧಾನಿ ಮೋದಿ ಕರೆಯ ಮೇರೆಗೆ ಉತ್ತರ ಕನ್ನಡ ಜಿಲ್ಲಾಡಳಿತ ಕೂಡ 'ಜನತಾ ಕರ್ಫ್ಯೂ'ನಲ್ಲಿ ಸಾರ್ವಜನಿಕರು ಭಾಗಿಯಾಗುವಂತೆ ಕೋರಿಕೊಂಡಿದ್ದರಿಂದ, ಯಾರೂ ಮನೆಯಿಂದ ಹೊರ ಬಂದಿಲ್ಲ.
ಏನಿದು ಜನತಾ ಕರ್ಫ್ಯೂ? ವೈರಸ್ ಭೀತಿ ನಡುವೆ ಹೇಗೆ ವರ್ಕ್ ಆಗುತ್ತೆ?
ಗೋವಾ ಗಡಿ ಬಂದ್
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಆದೇಶದ ಮೇರೆಗೆ ಇಂದಿನಿಂದ ಗೋವಾ- ಕರ್ನಾಟಕ ಗಡಿಯನ್ನು ಬಂದ್ ಮಾಡಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಆದೇಶ ನೀಡಿದ್ದು, ಮುಂದಿನ ಆದೇಶದವರೆಗೆ ಗಡಿಯಿಂದ ಉತ್ತರ ಕನ್ನಡ ಜಿಲ್ಲೆಗೆ ಯಾರಿಗೂ ಪ್ರವೇಶ ನೀಡದೇ ನಿರ್ಬಂಧಿಸಲು ಪೊಲೀಸ್ ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಜಿಲ್ಲೆಯಾದ್ಯಂತ ಒಂದು ವಾರ ನಿಷೇಧಾಜ್ಞೆ
ಉತ್ತರ ಕನ್ನಡ ಜಿಲ್ಲೆಯಾದ್ಯಂತ ಮಾ.24ರ ಬೆಳಿಗ್ಗೆ 6ರಿಂದ 30ರ ಮಧ್ಯರಾತ್ರಿ 12 ಗಂಟೆಯವರೆಗೆ ಸೆಕ್ಷನ್ 144 ಅಡಿ ನಿಷೇಧಾಜ್ಞೆ ಜಾರಿಯಲ್ಲಿರಲಿದೆ. ಈ ಅವಧಿಯಲ್ಲಿ ಐದಕ್ಕಿಂತ ಹೆಚ್ಚು ಜನ ಗುಂಪು ಸೇರುವುದು, ಓಡಾಡುವುದು ಅಥವಾ ಇನ್ನಿತರ ಚಟುವಟಿಕೆ ನಡೆಸುವುದನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.