ಬೆಂಗಳೂರಿಗರಿಗೆ ಟ್ರಾಫಿಕ್ ಬಿಸಿ: ಶಿವಾಜಿನಗರದ ಕಾಮರಾಜ್ ರಸ್ತೆ 60 ದಿನ ಸಂಪೂರ್ಣ ಬಂದ್, ಬದಲಿ ಮಾರ್ಗ ಇಲ್ಲಿದೆ
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಈಗಾಗಲೇ ಟ್ರಾಫಿಕ್ ಕಿರಿಕಿರಿ ಅನುಭವಿಸುತ್ತಿರುವ ವಾಹನ ಸವಾರರಿಗೆ ಮತ್ತೊಂದು ಶಾಕ್ ಎದುರಾಗಿದೆ. ನಗರದ ಪ್ರಮುಖ ವ್ಯಾಪಾರ ಕೇಂದ್ರವಾಗಿರುವ ಶಿವಾಜಿನಗರದ ಸಮೀಪದ ಪ್ರಮುಖ ರಸ್ತೆಗಳಲ್ಲಿ ಒಂದಾದ ಕಾಮರಾಜ್ ರಸ್ತೆಯನ್ನು ಮುಂದಿನ 60 ದಿನಗಳ ಕಾಲ ವಾಹನ ಸಂಚಾರವನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ನಾಲಾ ಕ್ರಾಸ್ ಬಳಿ ಇರುವ ಹಳೆಯ ಕಲ್ಲಿನ ಕಲ್ವರ್ಟ್ ತೆರವುಗೊಳಿಸಿ, ಹೊಸದಾಗಿ ಆರ್‌ಸಿಸಿ ಕಲ್ವರ್ಟ್ ನಿರ್ಮಿಸುವ ಯೋಜನೆಯನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಕೈಗೆತ್ತಿಕೊಂಡಿದ್ದು, ಭಾನುವಾರದಿಂದಲೇ (ಮೇ 24) ಈ ನಿಯಮ ಜಾರಿಗೆ ಬಂದಿದೆ.
ಯಾವೆಲ್ಲಾ ರಸ್ತೆಗಳು ಬಂದ್ ಆಗಲಿವೆ?
ಮುಖ್ಯವಾಗಿ ಎರಡು ಮಾರ್ಗಗಳಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಮೊದಲನೆಯದಾಗಿ, ವಿಠೋಬ ದೇವಸ್ಥಾನದಿಂದ ನಾಲಾ ರಸ್ತೆಯವರೆಗಿನ ಕಾಮರಾಜ್ ರಸ್ತೆಯಲ್ಲಿ ಯಾವುದೇ ವಾಹನಗಳ ಪ್ರವೇಶಕ್ಕೆ ಅವಕಾಶವಿಲ್ಲ. ಎರಡನೆಯದಾಗಿ, ಕೆ.ಆರ್. ರಸ್ತೆ ಮತ್ತು ಕಬ್ಬನ್ ರಸ್ತೆ ಜಂಕ್ಷನ್‌ನಿಂದ ಡಿಕನ್ಸನ್ ಜಂಕ್ಷನ್ ಕಡೆಗೆ ಹೋಗುವ ಕಾಮರಾಜ್ ರಸ್ತೆಯ ಮಾರ್ಗವನ್ನೂ ಸಹ ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಪೂರ್ವ ವಿಭಾಗದ ಡಿಸಿಪಿ ಸಾಹಿಲ್ ಬಾಗ್ಲಾ ಅವರು ಈ ಕುರಿತು ಆದೇಶ ಹೊರಡಿಸಿದ್ದು, ಸಾರ್ವಜನಿಕರು ಬದಲಿ ಮಾರ್ಗಗಳನ್ನು ಬಳಸುವಂತೆ ಹಾಗೂ ಟ್ರಾಫಿಕ್ ಪೊಲೀಸರೊಂದಿಗೆ ಸಹಕರಿಸುವಂತೆ ಮನವಿ ಮಾಡಿದ್ದಾರೆ.

ಬದಲಿ ಮಾರ್ಗಗಳೇನು?
ವಾಹನ ಸವಾರರ ಅನುಕೂಲಕ್ಕಾಗಿ ಸಂಚಾರಿ ಪೊಲೀಸರು ಬದಲಿ ಮಾರ್ಗಗಳನ್ನು ಸೂಚಿಸಿದ್ದಾರೆ. ಕಮರ್ಷಿಯಲ್ ಸ್ಟ್ರೀಟ್ ಕಡೆಯಿಂದ ಪುಲಿಕೇಶಿನಗರ ಮತ್ತು ಬಾಣಸವಾಡಿ ಕಡೆಗೆ ಹೋಗುವವರು ವಿಠೋಬ ದೇವಸ್ಥಾನದ ಬಳಿ ಬಲಕ್ಕೆ ತಿರುಗಿ, ವೀರಪಿಳ್ಳೆ ಬೀದಿ ಮೂಲಕ ಸಾಗಿ ನಾಗಮ್ಮ ದೇವಸ್ಥಾನದ ಬಳಿ ಎಡಕ್ಕೆ ತಿರುಗಿ ಸೆಂಟ್ ಜಾನ್ಸ್ ರಸ್ತೆ ಮೂಲಕ ಸಂಚರಿಸಬಹುದು. ಅದೇ ರೀತಿ, ಕಬ್ಬನ್ ರಸ್ತೆ ಕಡೆಯಿಂದ ಬರುವ ವಾಹನಗಳು ಡಿಕನ್ಸನ್ ರಸ್ತೆ ಮತ್ತು ಸೆಂಟ್ ಜಾನ್ಸ್ ರಸ್ತೆ ಮೂಲಕ ಸಾಗಬಹುದಾಗಿದೆ. ಡಿಸ್ಪೆನ್ಸರಿ ರಸ್ತೆಯ (ಆಲಿಸ್ ಜಂಕ್ಷನ್) ಕಡೆಯಿಂದ ಬರುವವರು ಸಹ ಡಿಕನ್ಸನ್ ರಸ್ತೆಯ ಮಾರ್ಗವನ್ನೇ ಬಳಸಬೇಕು.
ಈಗಾಗಲೇ ಕಾಮರಾಜ್ ರಸ್ತೆ ಪದೇ ಪದೇ ಕಾಮಗಾರಿಗಳಿಂದಾಗಿ ಮುಚ್ಚಲ್ಪಡುತ್ತಿರುವುದು ಸ್ಥಳೀಯ ವ್ಯಾಪಾರಿಗಳ ವ್ಯಾಪಾರದ ಮೇಲೆ ತೀವ್ರ ಪರಿಣಾಮ ಬೀರಿದೆ. ನಿಯಮಗಳನ್ನು ಉಲ್ಲಂಘಿಸಿ ನಿರ್ಬಂಧಿತ ರಸ್ತೆಗಳಿಗೆ ಪ್ರವೇಶಿಸುವ ವಾಹನ ಸವಾರರಿಗೆ ದಂಡ ವಿಧಿಸಲಾಗುವುದು ಹಾಗೂ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಳ್ಳುವುದು ಗ್ಯಾರಂಟಿ ಎಂದು ಪೊಲೀಸರು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ, ಈ ಮಾರ್ಗದಲ್ಲಿ ಸಂಚರಿಸುವವರು ಮೊದಲೇ ತಮ್ಮ ಪ್ರಯಾಣದ ದಾರಿಯನ್ನು ಬದಲಾಯಿಸಿಕೊಳ್ಳುವುದು ಸೂಕ್ತ












Click it and Unblock the Notifications