ಗಂಡನ ಸಾವಿನ ಬೆನ್ನಲ್ಲೇ ಆಸ್ತಿಗಾಗಿ ಸೊಸೆ ಪಟ್ಟು: ನಾಲ್ವರ ಹತ್ಯೆ ನಡುವೆ ಮಕ್ಕಳು ಬದುಕಿದ್ದೇ ರೋಚಕ
ಭಟ್ಕಳ ತಾಲೂಕಿನ ಹಾಡವಳ್ಳಿ ಗ್ರಾಮದ ಸಮೀಪ ನಡೆದ ನಾಲ್ವರ ಭೀಕರ ಹತ್ಯೆ ವೇಳೆ ಇಬ್ಬರು ಮಕ್ಕಳು ಅದೃಷ್ಟವಶಾತ್ ಪಾರಾಗಿದ್ದಾರೆ. ಕೊಲೆಗಡುಕರಿಂದ ಮಕ್ಕಳು ಬದುಕಿದ್ದೇ ರೋಚಕವಾಗಿದೆ. ಈ ಪ್ರಕರಣದ ಸಂಪೂರ್ಣ ಮಾಹಿತಿ ಇಲ್ಲಿದೆ.
ಕಾರವಾರ, ಫೆಬ್ರವರಿ 25: ಆಸ್ತಿ ಹಂಚಿಕೆ ವಿಚಾರವಾಗಿ ಒಂದೇ ಕುಟುಂಬದ ನಾಲ್ವರನ್ನು ಕತ್ತಿಯಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಭಟ್ಕಳ ತಾಲೂಕಿನ ಹಾಡವಳ್ಳಿ ಗ್ರಾಮದ ಸಮೀಪ ಶುಕ್ರವಾರ ನಡೆದಿದ್ದು, ಅದೃಷ್ಟವಶಾತ್ ಇಬ್ಬರು ಮಕ್ಕಳು ಕೊಲೆಗಡುಕರಿಂದ ಪಾರಾಗಿದ್ದಾರೆ.
ಹಾಡುವಳ್ಳಿಯ ಓಣಿಬಾಗಿಲು ಗ್ರಾಮದಲ್ಲಿ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಮೃತರನ್ನು ಶಂಭು ಹೆಗಡೆ (71), ಅವರ ಪತ್ನಿ ಮಾದೇವಿ ಹೆಗಡೆ (60), ಅವರ ಮಗ ರಾಜೀವ್ ಹೆಗಡೆ (34) ಹಾಗೂ ಸೊಸೆ ಕುಸುಮಾ ಭಟ್(30) ಕೊಲೆಯಾದವರು ಎಂದು ಗುರುತಿಸಲಾಗಿದೆ.

ಇನ್ನು ಹಾಡುವಳ್ಳಿಯಲ್ಲಿ ನಡೆದ ಭೀಕರ ಹತ್ಯೆ ವೇಳೆ ಇಬ್ಬರು ಮಕ್ಕಳು ಅದೃಷ್ಟವಶಾತ್ ಪಾರಾಗಿದ್ದಾರೆ. ಶುಕ್ರವಾರ ಮಧ್ಯಾಹ್ನದ ವೇಳೆ ಕೃತ್ಯ ನಡೆದಿದೆ ಎನ್ನಲಾಗಿದ್ದು. ಈ ವೇಳೆ ಮೃತ ರಾಜೀವ್ ಅವರ ಮಗ ಮನೆ ಒಳಗಡೆ ಮಲಗಿದ್ದರಿಂದ ಹಾಗೂ ಹಿರಿಯ ಮಗಳು ಶಾಲೆ ತೆರಳಿ ಪಕ್ಕದ ಮನೆಯಲ್ಲಿಯೇ ಇದ್ದಿದ್ದರಿಂದ ಇಬ್ಬರು ಮಕ್ಕಳು ಕೊಲೆಗಡುಕರಿಂದ ಬಚಾವಾಗಿದ್ದಾರೆ.
ಕಳೆದ ಏಳು ತಿಂಗಳ ಹಿಂದೆ ಶಂಭು ಭಟ್ ಅವರ ಹಿರಿಯ ಮಗ ಶ್ರೀಧರ ಭಟ್ ಕ್ಯಾನ್ಸರ್ ಕಾಯಿಲೆಯಿಂದ ಮೃತಪಟ್ಟಿದ್ದರು. ಶ್ರೀಧರ ಭಟ್ ಸಾವಿನ ನಂತರ ಅವರ ಪತ್ನಿ ವಿದ್ಯಾ ಭಟ್ ಕುಟುಂಬದ ಆಸ್ತಿಯಲ್ಲಿ ಪಾಲು ಕೇಳಿ ಜಗಳ ಮಾಡಿಕೊಂಡಿದ್ದರು ಎನ್ನಲಾಗಿದೆ. ಹಲವು ದಿನಗಳವರೆಗೂ ವ್ಯಾಜ್ಯ ಮುಂದುವರಿದಿತ್ತು. ಕೊನೆ ಶಂಭು ಭಟ್ ಅವರು ತಮ್ಮ 6 ಎಕರೆ ಜಮೀನಿನ ಪೈಕಿ 1 ಎಕರೆ 9 ಗುಂಟೆಯನ್ನು ಸೊಸೆ ವಿದ್ಯಾಳಿಗೆ ಆಸ್ತಿಯಲ್ಲಿ ಪಾಲು ನೀಡಿದ್ದರು ಎನ್ನಲಾಗಿದೆ.

ಆಸ್ತಿಯಲ್ಲಿ ಸಮಪಾಲಿಗಾಗಿ ಬೀದಿಗಿಳಿದ ಸೊಸೆ
ಇನ್ನು ಆಸ್ತಿಯಲ್ಲಿ ಪಾಲಾಗಿದ್ದರೂ ಸಮಪಾಲು ಸಿಗದ ಹಿನ್ನಲೆಯಲ್ಲಿ ಸೊಸೆ ವಿದ್ಯಾ, ಆಕೆಯ ಸಹೋದರ ಮತ್ತು ತಂದೆ ಸೇರಿ ಶಂಭು ಭಟ್ ಅವರೊಂದಿಗೆ ಜಗಳವಾಡುತ್ತಿದ್ದರು. ಅದೇ ರೀತಿ ಶುಕ್ರವಾರ ಮಧ್ಯಾಹ್ನವೂ ಆಸ್ತಿ ವಿಚಾರವಾಗಿ ಜಗಳ ನಡೆದು ವಿದ್ಯಾಳ ಸಹೋದರ ಹಲ್ಯಾಣಿ ನಿವಾಸಿ ವಿನಯ ಶ್ರೀಧರ ಭಟ್ ಸೇರಿದಂತೆ ಇನ್ನಿತರರು ಸೇರಿ ನಾಲ್ವರನ್ನು ಕೊಲೆ ಮಾಡಿದ್ದಾರೆ ಎನ್ನುವುದು ಪ್ರಾಥಮಿಕ ತನಿಖೆ ವೇಳೆ ತಿಳಿದುಬಂದಿರುವುದಾಗಿ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಪತ್ತೆಗೆ ಭಟ್ಕಳ ಡಿವೈಎಸ್‌ಪಿ ಮತ್ತು ಸಿಪಿಐ ನೇತೃತ್ವದಲ್ಲಿ ಎರಡು ತಂಡ ರಚನೆ ಮಾಡಿದ್ದು, ಕೊಲೆ ಬಳಿಕ ಘಟನಾ ಸ್ಥಳದಲ್ಲಿರುವ ಪೊಲೀಸರು ಅಗತ್ಯ ಮಾಹಿತಿ ಮಹಜರು ನಡೆಸಿದ್ದಾರೆ. ಅಲ್ಲದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.












Click it and Unblock the Notifications