ಉತ್ತರ ಕನ್ನಡ ಜಿ.ಪಂ ಅಭಿಲೇಖಾಲಯ ಕಟ್ಟಡಕ್ಕೆ ಬೆಂಕಿ: ಕೆ-ಸ್ವಾನ್ ಕೊಠಡಿ ಭಸ್ಮ
ಕಾರವಾರ, ಜೂನ್ 5: ಉತ್ತರ ಕನ್ನಡ ಜಿಲ್ಲಾ ಪಂಚಾಯತಿ ಕಚೇರಿ ಆವರಣದಲ್ಲಿನ ಅಭಿಲೇಖಾಲಯ ಕಚೇರಿ ಕಟ್ಟಡದೊಳಗೆ ಶನಿವಾರ ಬೆಳಿಗ್ಗೆ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಅವಘಡ ಸಂಭವಿಸಿದೆ.
ಶನಿವಾರ ಬೆಳಿಗ್ಗೆ 8.30ರ ಸುಮಾರಿಗೆ ಇದ್ದಕ್ಕಿದ್ದಂತೆ ಕಟ್ಟಡದೊಳಗೆ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲಿ ಎರಡು ಅಂತಸ್ತಿನವರೆಗೂ ವ್ಯಾಪಿಸಿತು. ತಕ್ಷಣವೇ ಸ್ಥಳೀಯರ ಮಾಹಿತಿಯ ಮೇರೆಗೆ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಶ್ರಮಪಟ್ಟರು. ಒಂದು ವಾಹನದ ಟ್ಯಾಂಕ್ ನೀರು ಖಾಲಿಯಾದರೂ ಬೆಂಕಿ ಮಾತ್ರ ನಂದಿರಲಿಲ್ಲ. ಮತ್ತಿನ್ನೊಂದು ವಾಹನವನ್ನು ಸ್ಥಳಕ್ಕೆ ಕರೆಯಿಸಿ ನಂದಿಸುವ ಕಾರ್ಯ ಮಾಡಲಾಗಿದೆ.
ಕಟ್ಟಡದ ನೆಲ ಅಂತಸ್ತಿನಲ್ಲಿ (ಗ್ರೌಂಡ್ ಫ್ಲೋರ್) ಕೆಸ್ವಾನ್ ವಿಡಿಯೋ ಕಾನ್ಫರೆನ್ಸ್ ಹಾಲ್ ಇದ್ದು, ಈ ಸಭಾಂಗಣ ಸಂಪೂರ್ಣ ಫ್ಲೈವುಡ್‌ನಿಂದ ಕೂಡಿದ್ದಾಗಿದೆ. ಈ ಕಾರಣದಿಂದಾಗಿ ಬೆಂಕಿ ಹೆಚ್ಚಿನ ಪ್ರಮಾಣದಲ್ಲಿ ಹೊತ್ತಿಕೊಂಡಿದೆ.

ಮೊದಲ ಅಂತಸ್ತಿನಲ್ಲಿ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಕಚೇರಿ ಹಾಗೂ ಅಕ್ಷರ ದಾಸೋಹ ಕಚೇರಿ ಇದ್ದು, ಮೂರನೇ ಅಂತಸ್ತಿನಲ್ಲಿ ದಾಖಲೆಗಳ ಕೊಠಡಿ ಇದೆ. ಪ್ರಾಥಮಿಕ ಮಾಹಿತಿ ಪ್ರಕಾರ ಮೂರು ಅಂತಸ್ತಿಗೂ ಬೆಂಕಿಯ ಜ್ವಾಲೆ ಆವರಿಸಿದೆಯಾದರೂ ರೆಕಾರ್ಡ್ಸ್ ರೂಮಿಗೆ ಬೆಂಕಿ ತಗುಲಿಲ್ಲ ಎನ್ನಲಾಗಿದೆ.

Recommended Video
ಸುಮಾರು ಮೂರು ವರ್ಷಗಳ ಹಿಂದೆ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯ ಕೊಠಡಿಯಲ್ಲೂ ಬೆಂಕಿ ಅವಘಡ ಸಂಭವಿಸಿತ್ತು. ಸ್ಥಳಕ್ಕೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಿಯಾಂಗಾ ಎಂ. ಭೇಟಿ ನೀಡಿ ಪರಿಶೀಲಿಸಿದ್ದಾರೆ.












Click it and Unblock the Notifications