ಐಎನ್ಎಸ್ ವಿಕ್ರಮಾದಿತ್ಯದಲ್ಲಿ ಬೆಂಕಿ, ಪ್ರಾಣ ಹಾನಿ ಇಲ್ಲ ಎಂದ ನೌಕಾಪಡೆ
ಕಾರವಾರ, ಜುಲೈ 21; ಕಾರವಾರ ವ್ಯಾಪ್ತಿಯ ಅರಬ್ಬೀ ಸಮುದ್ರದಲ್ಲಿ ದುರಸ್ಥಿಗೊಂಡ ಬಳಿಕ ಕಡಲ ಪ್ರಯೋಗದಲ್ಲಿದ್ದ ದೇಶದ ಪ್ರತಿಷ್ಠಿತ ಯುದ್ದ ವಿಮಾನವಾಹಕ ನೌಕೆ ಐಎನ್ಎಸ್ ವಿಕ್ರಮಾದಿತ್ಯದಲ್ಲಿ ಅಗ್ನಿ ಅವಘಡ ಸಂಭವಿಸಿದೆ.
ಬುಧವಾರ ರಾತ್ರಿ ನಡೆದಿರುವ ಈ ಘಟನೆ ಬಗ್ಗೆ ಭಾರತೀಯ ನೌಕಾಪಡೆ ಮಾಹಿತಿ ನೀಡಿದೆ.
ಕಳೆದ ಕೆಲ ತಿಂಗಳುಗಳಿಂದ ಐಎನ್ಎಸ್ ಕದಂಬ ನೌಕಾನೆಲೆಯಲ್ಲಿದ್ದ ನೌಕೆಯಲ್ಲಿ ದುರಸ್ತಿ ಕಾರ್ಯ ಕೈಗೊಳ್ಳಲಾಗಿತ್ತು. ಇದರಿಂದ ನೌಕೆಯೂ ಎಲ್ಲಿಗೂ ತೆರಳಿರಲಿಲ್ಲ.
ಆದರೆ ಬುಧವಾರ ಯುದ್ಧನೌಕೆಯಲ್ಲಿ ಪ್ರಾಯೋಗಿಕ ಕಾರ್ಯಾಚಣೆ ನಡೆಸುವಾಗ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ಇದರಿಂದ ಆತಂಕಗೊಂಡ ಸಿಬ್ಬಂದಿ ತಕ್ಷಣ ನೌಕೆಯಲ್ಲಿ ಅಳವಡಿಸಲಾದ ಅಗ್ನಿಶಾಮಕ ವ್ಯವಸ್ಥೆಯ ಸಹಕಾರದಿಂದ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.

ಅವಘಡದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ನೌಕಾಪಡೆ ತಿಳಿಸಿದೆ.
47,000 ಟನ್ ತೂಕದ ಐಎನ್ಎಸ್ ವಿಕ್ರಮಾದಿತ್ಯ ಯುದ್ಧನೌಕೆ, ಅದರ ಮರುಹೊಂದಾಣಿಕೆ ಕಾರ್ಯದ ನಂತರ ಸಮುದ್ರದಲ್ಲಿ ನಿಗದಿತ ಕಾರ್ಯಾಚರಣೆಯನ್ನು ಕೈಗೊಂಡಿತ್ತು. ಈ ವೇಳೆ ಸಮುದ್ರದಲ್ಲಿ ಕೆಲವೊಂದು ಪ್ರಯೋಗಗಳನ್ನು ಕೈಗೊಳ್ಳುತ್ತಿದ್ದಾಗ ಈ ಅಗ್ನಿ ಅವಘಡ ಉಂಟಾಗಿದೆ ಎಂದು ನೌಕಾಪಡೆ ತಿಳಿಸಿದೆ.
ತನಿಖೆಗೆ ಆದೇಶ; ವಿಕ್ರಮಾದಿತ್ಯ ಯುದ್ಧ ನೌಕೆಯಲ್ಲಿ ಬೆಂಕಿ ಅವಘಡ ಸಂಭವಿಸಿದ ಕುರಿತು ಸೂಕ್ತ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ತನಿಖಾ ಸಮಿತಿಗೆ ನೌಕಾಪಡೆ ಆದೇಶಿಸಿದ್ದು, ಈ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದೆ.
ವಿಕ್ರಮಾದಿತ್ಯ ಇನ್ನೂ ಆಳ ಸಮುದ್ರದಲ್ಲಿದ್ದು, ಗುರುವಾರ ಕಾರವಾರದ ಸೀಬರ್ಡ್ ನೌಕಾನೆಲೆಯ ಜಟ್ಟಿಗೆ ತರಲಾಗುತ್ತದೆ. ಅಗ್ನಿ ಅವಘಡದಿಂದಾದ ಹಾನಿಯ ನಿಖರವಾದ ಪ್ರಮಾಣ ಇನ್ನೂ ತಿಳಿದುಬಂದಿಲ್ಲ. ಐಎನ್ಎಸ್ ವಿಕ್ರಮಾದಿತ್ಯವನ್ನು ಕ್ಯಾಪ್ಟನ್ ಸುಶೀಲ್ ಮೆನನ್ ಮುನ್ನಡೆಸುತ್ತಿದ್ದರು.
ಈ ಹಿಂದಿನ ಘಟನೆ; 2019ರ ಏಪ್ರಿಲ್ 26ರಂದು ಬೆಳಗ್ಗೆ ಐಎನ್ಎಸ್ ವಿಕ್ರಮಾದಿತ್ಯದಲ್ಲಿ ಅಗ್ನಿ ಅವಘಡ ಸಂಭವಿಸಿತ್ತು. ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿತ್ತು. ಆದರೆ ಯುದ್ಧ ನೌಕೆಯ ಕಾಂಬಟ್ ಕೆಪಾಬಲಿಟಿ ವಿಭಾಗಕ್ಕೆ ಹಾನಿಯಾಗಿತ್ತು. ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದ ಕೆಲವು ಸಿಬ್ಭಂದಿಗಳಿಗೆ ಹೊಗೆಯ ಕಾರಣ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಿತ್ತು. ಅವರನ್ನು ಆಸ್ಪತ್ರೆ ದಾಖಲು ಮಾಡಲಾಗಿತ್ತು.
ಇದಾದ ಬಳಿಕ 2021ರಲ್ಲೂ ಇಂತಹ ಘಟನೆ ಮರುಕಳಿಸಿತ್ತು. ಆದರೆ ಯಾವುದೇ ಸಾವು ನೋವುಗಳು ವರದಿಯಾಗಿರಲಿಲ್ಲ. ಈ ಎರಡೂ ಪ್ರಕರಣವನ್ನು ಅಂದು ಕೂಡ ನೌಕಾಪಡೆ ತನಿಖೆಗೆ ಆದೇಶಿಸಿತ್ತು. ಆದರೂ ಇಂದು ಮತ್ತೆ ಇದೇ ಘಟನೆ ಮರುಕಳಿಸಿರುವುದು ಆತಂಕಕಾರಿಯಾಗಿದೆ.
ಏಷ್ಯಾದಲ್ಲಿಯೇ ಅತಿದೊಡ್ಡ ವಿಮಾನ ವಾಹಕ ಯುದ್ಧ ನೌಕೆಯಾದ ವಿಕ್ರಮಾದಿತ್ಯ, 284 ಮೀಟರ್ ಉದ್ದ, 60 ಮೀಟರ್ ಎತ್ತರ ಇದೆ. 34 ಯುದ್ಧ ವಿಮಾನ ಹಾಗೂ ಹೆಲಿಕಾಪ್ಟರ್‌ಗಳನ್ನು ಏಕಕಾಲದಲ್ಲಿ ಹೊರುವ ಸಾಮರ್ಥ್ಯ ಇದಕ್ಕಿದೆ. ರಷ್ಯಾದೊಂದಿಗೆ $2.33 ಬಿಲಿಯನ್‌ಗೆ ನಡೆದ ಒಪ್ಪಂದದಂತೆ ಭಾರತ ವಿಕ್ರಮಾದಿತ್ಯವನ್ನ ಖರೀದಿಸಿ, 2013ರ ನವೆಂಬರ್‌ನಲ್ಲಿ ಭಾರತೀಯ ನೌಕಾಪಡೆ ಸೇವೆಗೆ ಸೇರ್ಪಡೆಗೊಳಿಸಲಾಗಿತ್ತು.
ವಿಕ್ರಮಾದಿತ್ಯ, ಭಾರತ ಇದುವರೆಗೆ ಖರೀದಿಸಿದ ಅತ್ಯಂತ ದುಬಾರಿ ಏಕಶಸ್ತ್ರಾಸ್ತ್ರ ಸಾಧನ. ಖರೀದಿಯಷ್ಟೇ ಅಲ್ಲ, ಖರೀದಿಯ ಬಳಿಕವೂ ರಕ್ಷಣಾ ಇಲಾಖೆಗೆ ಇದು ಒಂದು ರೀತಿಯ ಬಿಳಿಯ ಆನೆಯಂತಾಗಿದೆ. ವಿಕ್ರಮಾದಿತ್ಯದ ನಿರ್ವಹಣೆ, ದುರಸ್ತಿ ಕಾರ್ಯಕ್ಕೆ ಪ್ರತಿವರ್ಷವೂ ಸಾಕಷ್ಟು ಹಣವನ್ನು ಇಲಾಖೆ ವ್ಯಯಿಸುತ್ತಿದೆ.
ಹೀಗಾಗಿ ಸ್ವದೇಶಿ ನಿರ್ಮಿತ, ಎರಡನೇ ಯುದ್ಧವಿಮಾನ ವಾಹಕ ನೌಕೆ, 40,000 ಟನ್ ಐಎನ್‌ಎಸ್ ವಿಕ್ರಾಂತ್ ಮೇಲೆ ಸದ್ಯ ಎಲ್ಲರ ದೃಷ್ಟಿ ನೆಟ್ಟಿದ್ದು, ಆಗಸ್ಟ್ ಒಳಗೇ ಕಾರ್ಯಾಚರಣೆಗೆ ಇಳಿಯುವ ಸಾಧ್ಯತೆ ಇದೆ. ವಿಕ್ರಾಂತ್ ಬಂದ ಬಳಿಕ ವಿಕ್ರಮಾದಿತ್ಯದ ಮೇಲಿನ ಅವಲಂಬನೆಯನ್ನ ಕೂಡ ನೌಕಾಪಡೆ ಕಡಿಮೆ ಮಾಡುವ ಸಾಧ್ಯತೆಯೂ ಇದೆ.












Click it and Unblock the Notifications