ಹುಷಾರ್..! ಕಾರವಾರದಲ್ಲಿ ಚಲಾವಣೆಯಾಗುತ್ತಿವೆ ಕಲರ್ ಕಲರ್ ನೋಟು
ಕಾರವಾರ, ಜನವರಿ 21: ದೇಶದಲ್ಲಿ ಅಧಿಕವಾಗಿ ಹರಿದಾಡುತ್ತಿದ್ದ ಖೋಟಾ ನೋಟುಗಳನ್ನು ತಡೆಯಲು ಕೇಂದ್ರ ಸರ್ಕಾರ ನೋಟು ಬದಲಾವಣೆಯಂತಹ ಪ್ರಮುಖ ನಿರ್ಧಾರವನ್ನು ಕೈಗೆತ್ತಿಕೊಂಡಿತ್ತು. ಆದರೂ ಖೋಟಾ ನೋಟುಗಳ ಚಲಾವಣೆ ಅಲ್ಲಲ್ಲಿ ಕಂಡುಬರುತ್ತಿದೆ.
ಹತ್ತು ರುಪಾಯಿಯಿಂದ ಹಿಡಿದು ಎರಡು ಸಾವಿರ ರುಪಾಯಿಯವರೆಗೆ ಹೊಸ ನೋಟುಗಳನ್ನು ಮುದ್ರಿಸಿ, ಚಲಾವಣೆಗೆ ತರಲಾಗಿದೆ. ಆದರೆ, ಕೆಲವು ಕಿಡಿಗೇಡಿಗಳು ನೂರು ರುಪಾಯಿ ಹೊಸ ನೋಟುಗಳನ್ನೇ ನಕಲಿ ಮಾಡಿ ಕಾರವಾರ ನಗರದಲ್ಲಿ ಹರಿಬಿಟ್ಟಿರುವ ಘಟನೆ ಬೆಳಕಿಗೆ ಬಂದಿದೆ. ನೂರು ರೂಪಾಯಿ ಹೊಸ ನೋಟು ಪಡೆಯುವ ಸಾರ್ವಜನಿಕರು ಎಚ್ಚರಿಕೆಯಿಂದ ವ್ಯವಹರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಕಳೆದ ಎರಡು ದಿನದ ಹಿಂದೆ ಕಾರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಯೊಬ್ಬರು, ನಗರದ ಪ್ರತಿಷ್ಠಿತ ಹೋಟೆಲ್ ನಲ್ಲಿ ಊಟ ಮಾಡಿ ಐದು ನೂರು ರುಪಾಯಿ ನೋಟನ್ನು ಕೊಟ್ಟಿದ್ದರು.

ಚಿಲ್ಲರೆಯಾಗಿ ಹೋಟೆಲ್ ನಲ್ಲಿ ಕೊಟ್ಟ ನೋಟಿನಲ್ಲಿ ನೂರು ರೂಪಾಯಿ ಹೊಸ ನೋಟಿದ್ದು, ಅದು ಖೋಟಾ ನೋಟಾಗಿತ್ತು. ಕ್ಯಾಂಟೀನ್ ಒಂದರಲ್ಲಿ ತಿಂಡಿ ತಿಂದು ನೂರು ರೂಪಾಯಿಯನ್ನ ಕೊಟ್ಟಾಗ ಅದು ಖೋಟಾ ನೋಟು ಎಂದು ಕ್ಯಾಂಟೀನ್ ಮಾಲಿಕ ತಿಳಿಸಿದ್ದಾನೆ.
ಕಾರವಾರ ನಗರದಲ್ಲಿ ಇದೇ ರೀತಿ ಹಲವರಿಗೆ ಅನುಭವವಾಗಿದ್ದು, ನೂರು ರೂಪಾಯಿಯಾದ ಕಾರಣ ಯಾರೂ ಹೆಚ್ಚಾಗಿ ತಲೆ ಕೆಡೆಸಿಕೊಳ್ಳದೇ ದೂರು ಕೊಡಲು ಮುಂದಾಗುತ್ತಿಲ್ಲ. ನೂರು ರೂಪಾಯಿ ಹೊಸ ನೋಟು ನೇರಳೆ ಬಣ್ಣದ್ದಾಗಿದ್ದು ಕಿಡಿಗೇಡಿಗಳು ನೂರು ರೂಪಾಯಿ ಅಸಲಿ ನೋಟಿನ ಮಾದರಿಯಲ್ಲಿಯೇ ಕಲರ್ ಝೇರಾಕ್ಸ್ ಮಾಡಿಸಿ ಹರಿಬಿಟ್ಟಿದ್ದಾರೆ.
ನೋಟಿನ ಮೇಲಿರುವ ಸೆಕ್ಯೂರಿಟಿ ಥ್ರೆಡ್ ಮಾದರಿಯನ್ನ ಸಹ ನಕಲು ಮಾಡಿದ್ದು ಒಮ್ಮೆಲೆ ನೋಟನ್ನು ತೆಗೆದುಕೊಂಡಾಗ ಯಾರಿಗೂ ಅಸಲಿಯೋ ಅಥವಾ ನಕಲಿಯೋ ಎಂದು ತಿಳಿಯದ ರೀತಿಯಲ್ಲಿ ಖೋಟಾ ನೋಟನ್ನು ಮಾಡಿದ್ದಾರೆ.

ನೂರು ರೂಪಾಯಿಯ ಐದಾರು ನೋಟಿನ ಮಧ್ಯೆ ನಕಲಿ ನೋಟನ್ನ ಇಟ್ಟುಕೊಟ್ಟರೆ ಯಾರಿಗೂ ತಿಳಿಯದ ಹಿನ್ನಲೆಯಲ್ಲಿ ನಗರದಲ್ಲಿ ಖೋಟಾ ನೋಟನ್ನು ಚಲಾವಣೆ ಮಾಡಿದ್ದು ಹೊಸ ನೋಟಿನ ಕಲ್ಪನೆ ಇನ್ನೂ ಸಹ ಇರದೆ ಇರುವವರು ಕೋಟಾ ನೋಟನ್ನ ತೆಗೆದುಕೊಂಡು ವಂಚನೆಗೆ ಒಳಗಾಗುತ್ತಿದ್ದಾರೆ.
ನೂರು ರೂಪಾಯಿ ಮಾದರಿಯಲ್ಲಿಯೇ ಎರಡು ನೂರು, ಐದು ನೂರು ಹಾಗೂ ಎರಡು ಸಾವಿರ ರೂಪಾಯಿ ನೋಟುಗಳನ್ನ ಸಹ ಕಲರ್ ಝೇರಾಕ್ಸ್ ಮಾಡಿ ನಕಲಿ ನೋಟುಗಳನ್ನ ಮಾಡಿ ಹರಿಬಿಟ್ಟಿದ್ದಾರೆನ್ನಲಾಗಿದ್ದು, ಜನರು ಮಾರುಕಟ್ಟೆಯಲ್ಲಿ ವ್ಯವಹರಿಸುವಾಗ ಎಚ್ಚರಿಕೆಯಿಂದ ನೋಟಗಳನ್ನು ಗಮನಿಸಿ ಪಡೆಯಬೇಕಾಗಿದೆ.
''ಹೊಸ ನೋಟನ್ನು ಕಲರ್ ಝೆರಾಕ್ಸ್ ಮಾಡಿಸಿ ಖೋಟಾ ನೋಟು ಚಲಾವಣೆ ಮಾಡುತ್ತಿರುವ ಪ್ರಕರಣ ಗಮನಕ್ಕೆ ಬಂದಿದೆ. ಯಾರ ಬಳಿಯೇ ಇಂತಹ ಖೋಟಾ ನೋಟು ಬಂದರೆ ಠಾಣೆಯಲ್ಲಿ ಬಂದು ದೂರನ್ನು ಕೊಡಬಹುದು. ನೋಟುಗಳನ್ನು ಕಲರ್ ಝೆರಾಕ್ಸ್ ಮಾಡಿ ಕೊಡುವುದು ತಿಳಿದು ಬಂದರೆ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಲಾಗುವುದು'' ಎಂದು ಕಾರವಾರ ಡಿವೈಎಸ್ಪಿ ಅರವಿಂದ ಕಲಗುಜ್ಜಿ ಹೇಳಿದ್ದಾರೆ.












Click it and Unblock the Notifications