ಕರಾವಳಿಯಲ್ಲಿ ರಣ ಬಿಸಿಲು: ಕಾರವಾರದಲ್ಲಿ ಅತ್ಯಧಿಕ ಉಷ್ಣಾಂಶ ದಾಖಲು
ಕಾರವಾರ, ಮಾರ್ಚ್ 17: ಈ ಬಾರಿ ಬೇಸಿಗೆ ಈಗಾಗಲೇ ಆರಂಭವಾಗಿದ್ದು, ಬಿಸಿಲಿನ ಝಳಕ್ಕೆ ಜನ ಹೈರಾಣಾಗುತ್ತಿದ್ದಾರೆ. ಕರಾವಳಿ ಜಿಲ್ಲೆಗಳಲ್ಲಿ ಬಿಸಿ ಗಾಳಿ ಅಥವಾ ಉಷ್ಣ ಅಲೆ ಬೀಸುತ್ತಿದೆ. ಈ ವರ್ಷ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡದಲ್ಲಿ ಬಿಲಿಸಿ ಝಳ ಗರಿಷ್ಟ ಮಟ್ಟದಲ್ಲಿ ಹೆಚ್ಚಾಗುತ್ತಿದ್ದು ಜನ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕಾಗಿದೆ.
ಕರಾವಳಿ ಜಿಲ್ಲೆಯಾದ ಉತ್ತರ ಕನ್ನಡದಲ್ಲಿ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಏರಿಕೆಯಾಗಿದ್ದು, ಕಾರವಾರದ ಸಾವಂತವಾಡದಲ್ಲಿ ಮತ್ತೆ ರಾಜ್ಯದಲ್ಲಿಯೇ ಗರಿಷ್ಠ 42.9 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರದ ಇತ್ತೀಚಿನ ವರದಿಯಂತೆ ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಹಲವು ಸ್ಥಳಗಳು ಮತ್ತು ಉಡುಪಿ ಮತ್ತು ಕೊಡಗು ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಗರಿಷ್ಠ 38 ರಿಂದ 40 ಡಿ.ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

ಉತ್ತರ ಕನ್ನಡದ ದಾಂಡೇಲಿ, ಕಿನ್ನರ, ಘಾಡಸಾಯಿ, ಮಿರ್ಜಾನ್, ಪಾಳಾ, ಉಂಬ್ಳಮನೆ, ಸಾಂಬ್ರಾಣಿ, ಮುರ್ಕವಾಡ, ಭಟ್ಕಳ, ಅಂಕೋಲಾ, ಬೇಲೆಕೇರಿ, ಬೆಳಲೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ 11 ಸ್ಥಳಗಳಲ್ಲಿ, ಉಡುಪಿಯ ಜಿಲ್ಲೆಯ 2 ಸ್ಥಳಗಳಲ್ಲಿ ಹಾಗೂ ಕೊಡಗಿನ 1 ಸ್ಥಳದಲ್ಲಿ 38-40 ಡಿ.ಸೆ. ತಾಪಮಾನ ದಾಖಲಾಗುತ್ತಿದೆ. ಇನ್ನು ಕರಾವಳಿಯಲ್ಲಿ ಬಿಸಿ ಮತ್ತು ಆರ್ದ್ರ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ. ಗರಿಷ್ಠ ತಾಪಮಾನದಲ್ಲಿ ಯಾವುದೇ ದೊಡ್ಡ ಬದಲಾವಣೆಯಿಲ್ಲ. ನಂತರ ಉತ್ತರ ಒಳನಾಡಿನಲ್ಲಿ 2-3 ಡಿ.ಸೆ. ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಈಗಾಗಲೇ ಎಚ್ಚರಿಕೆ ನೀಡಿದೆ.
ಬೇಸಿಗೆ ಬಿಸಿಲು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕರಾವಳಿಯ ಜನ ಆರೋಗ್ಯದ ಬಗ್ಗೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕಾಗಿದೆ. ಮಧ್ಯಾಹ್ನ ಹೊತ್ತು ಹೊರಗೆ ಹೋಗುವುದನ್ನು ಆದಷ್ಟು ತಪ್ಪಿಸುವುದು ಒಳ್ಳೆಯದು. ಸಾಧ್ಯವಾದಷ್ಟು ತಂಪಾದ ಸ್ಥಳಗಳಲ್ಲಿ ಇದ್ದು, ತೀವ್ರ ಅಗತ್ಯವಾಗಿ ಬಿಸಿಲಿಗೆ ಹೋಗುವಾಗ ಕೊಡೆಗಳನ್ನು ಬಳಸುವುದು ಉತ್ತಮ. ಬೇಸಿಯಲ್ಲಿ ಹೆಚ್ಚಾಗಿ ಹತ್ತಿಯ ಉಡುಪುಗಳನ್ನು ಬಳಸಿ ಹಾಗೂ ಹೆಚ್ಚಾಗಿ ಹಣ್ಣಿನ ರಸ, ಮಜ್ಜಿಗೆ, ನೀರು ಕುಡಿಯುವ ಮೂಲಕ ದೇಹವನ್ನು ನಿರ್ಜಲೀಕರಣವಾಗದಂತೆ ನೋಡಿಕೊಳ್ಳಿ. ಇನ್ನು ಮುಂದಿನ ದಿನಗಳಲ್ಲಿ ಬಿಸಿಲು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದ್ದು, ಜನರು ಆರೋಗ್ಯದ ಬಗ್ಗೆ ಎಚ್ಚರವಹಿಸುವುದು ಅಗತ್ಯವಾಗಿದೆ.












Click it and Unblock the Notifications