Just in: ಇಡಿಗೆ ಹೊಸ ವ್ಯಾಖ್ಯಾನ ನೀಡಿದ ಬಿ. ಕೆ. ಹರಿಪ್ರಸಾದ್
ಶಿರಸಿ, ಜುಲೈ 22: "ಪ್ರಧಾನಿ ನರೇಂದ್ರ ಮೋದಿಯವರಿಗೆ ನಮ್ಮ ನಾಯಕಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯನ್ನು ಎದುರಿಸಲು ಸಾಧ್ಯವಾಗದೇ ಭಯ ಶುರುವಾಗಿದೆ. ಆದ್ದರಿಂದ ಜಾರಿ ನಿರ್ದೇಶನಾಲಯ ಮೂಲಕ ಬೆದರಿಸಲು ಹೊರಟಿದ್ದಾರೆ. ಇಡಿ ಇಲಾಖೆ ಬಿಜೆಪಿಯ ಎಲೆಕ್ಷನ್ ಡಿಪಾರ್ಟ್‌ಮೆಂಟ್ ಆಗಿ ಕೆಲಸ ಮಾಡುತ್ತಿದೆ" ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಬಿ. ಕೆ. ಹರಿಪ್ರಸಾದ್ ಟೀಕಿಸಿದರು.
ಶಿರಸಿಯಲ್ಲಿ ಶುಕ್ರವಾರ ಮಾತನಾಡಿದ ಅವರು, "ಸುಪ್ರೀಂಕೋರ್ಟ್ ಕ್ಲೀನ್‌ಚಿಟ್ ಕೊಟ್ಟಿರುವ ಪ್ರಕರಣವನ್ನು ಮತ್ತೆ ತನಿಖೆ ನಡೆಸುತ್ತಿರುವುದು ಬಿಜೆಪಿ ಸರ್ಕಾರದ ನೀಚತನಕ್ಕೆ ಸಾಕ್ಷಿ. ಬಿಜೆಪಿ ಸಂಸದ ಸುಬ್ರಹ್ಮಣ್ಯ ಸ್ವಾಮಿ ಕೊಟ್ಟ ದೂರಿನ ಮೇಲೆ ತನಿಖೆ ನಡೆಸುವುದಾದರೆ, ಈಗ ಇದೇ ಸಂಸದ ಅಮಿತ್ ಶಾ ಮಗ ಜಯ ಶಾ ಮೇಲೂ ಗಂಭೀರ ಆರೋಪ ಮಾಡಿದ್ದಾರೆ" ಎಂದರು.
"50 ಲಕ್ಷ ಇದ್ದ ಜಯ್ ಶಾ ಆದಾಯ ಇಂದು ನೂರಾರು ಕೋಟಿಯಾಗಿದೆ. ಅದರ ಮೂಲದ ಬಗ್ಗೆ ಯಾಕೆ ಇಡಿ ಇಲಾಖೆ ತನಿಖೆ ನಡೆಸುತ್ತಿಲ್ಲ?. ಅಧಿಕಾರಿಗಳಿಗೆ ಧೈರ್ಯ ಇದ್ದರೆ ಅಮಿತ್ ಶಾ ಮಗನ ಮೇಲೂ ತನಿಖೆ ನಡೆಸಲಿ" ಎಂದು ಬಿ. ಕೆ. ಹರಿಪ್ರಸಾದ್ ಸವಾಲು ಎಸೆದರು.

ಅಮಿತ್ ಶಾ ಪುತ್ರನ ವಿರುದ್ಧ ವಾಗ್ದಾಳಿ
ಕಾಂಗ್ರೆಸ್ ನಾಯಕ ಬಿ. ಕೆ. ಹರಿಪ್ರಸಾದ್ ಕೇಂದ್ರ ಗೃಹ ಸಚಿವ ಅಮಿತ್ ಶಾ ಪುತ್ರ ಜೈ ಶಾ ವಿರುದ್ಧ ವಾಗ್ದಾಳಿ ನಡೆಸಿದರು. "ಐಪಿಎಲ್ ನಲ್ಲಿ ಸಾವಿರಾರು ಕೋಟಿ ಅವ್ಯವಹಾರ ನಡೆದಿದೆ ಎಂಬ ಆರೋಪಗಳಿಗೆ ಉತ್ತರವಿಲ್ಲ, ಅವರಿಗಿಂತ ದೊಡ್ಡ ಕ್ರಿಕೆಟರ್ ಜಗತ್ತಿನಲ್ಲೇ ಯಾರೂ ಇಲ್ಲ ಹೀಗಾಗಿ ಆತನನ್ನು ಬಿಸಿಸಿಐ ಸೆಕ್ರೆಟರಿ ಮಾಡಿದ್ದಾರೆ" ಎಂದು ವ್ಯಂಗ್ಯವಾಡಿದರು.

ಈಶ್ವರಪ್ಪಗೆ ಕ್ಲೀನ್ ಚೀಟ್
"ಮಾಜಿ ಸಚಿವ ಈಶ್ವರಪ್ಪಗೆ ಕ್ಲೀನ್ ಚೀಟ್ ಕೊಡುತ್ತಾರೆ ಅಂತಾ ನಮಗೆ ಮೊದಲೇ ನಿರೀಕ್ಷೆ ಇತ್ತು. ಸಂತೋಷ್ ಪಾಟೀಲ್ ತಮ್ಮ ಡೆತ್ ನೋಟ್‌ನಲ್ಲಿ ಈಶ್ವರಪ್ಪನೇ ಕಾರಣ ಎಂದು ಬರೆದುಕೊಂಡಿದ್ದಾರೆ. ಅವರ ಪತ್ನಿ ಕೂಡ ಮಾಜಿ ಸಚಿವ ಈಶ್ವರಪ್ಪ ಕಾರಣ ಅಂತಲೇ ಹೇಳಿದ್ದಾರೆ. ಆದರೆ, ಸಿಎಂ ಹಾಗೂ ಗೃಹ ಸಚಿವರು ತನಿಖೆಗೂ ಮೊದಲೇ ಕ್ಲಿನ್ ಚೀಟ್ ಕೊಟ್ಟಿದ್ದರು. ಈಗ ಅಧಿಕೃತವಾಗಿ ಪೊಲೀಸ್ ಇಲಾಖೆಯಿಂದ ತನಿಖೆ ನಡೆಸದೇ ರಿಪೋರ್ಟ್ ಕೊಟ್ಟಿದ್ದಾರೆ" ಎಂದು ಹರಿಪ್ರಸಾದ್ ದೂರಿದರು.
"ಈಶ್ವರಪ್ಪ ಮಾಡಿರುವ ಅನಾಹುತಗಳಿಗೆ ಪರಪ್ಪನ ಅಗ್ರಹಾರವಲ್ಲ, ಕಾಲಾಪಾನಿ ಕುಡಿಸಬೇಕು. ದೇಶದಲ್ಲಿ ಅತ್ಯಂತ ಭ್ರಷ್ಟ ರಾಜಕಾರಣಿ, ಕ್ರಿಮಿನಲ್ ರಾಜಕಾರಣಿ, ಗಲಾಟೆ ದೊಂಬಿ ನಡೆಸುವ ರಾಜಕಾರಣಿ ಇದ್ದರೆ ಅದು ಈಶ್ವರಪ್ಪ. ಅಂತವರು ಸಾರ್ವಜನಿಕ ಜೀವನದಲ್ಲಿ ಇರೋದಕ್ಕೆ ಅರ್ಹರಲ್ಲ" ಎಂದು ಟೀಕಿಸಿದರು.

ರಾಜ್ಯ ಕಾಂಗ್ರೆಸ್‌ನಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ
"ರಾಜ್ಯದ ಕಾಂಗ್ರೆಸ್‌ನಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಸಿಎಂ ಆಗುವವರು ಯಾರು? ಅಂತಾ ಡಿಕೆಶಿ ಹಾಗೂ ಸಿದ್ದರಾಮಯ್ಯಗೆ ತುಂಬಾ ಚೆನ್ನಾಗಿ ಗೊತ್ತಿದೆ. ಶಾಸಕರ ಅಭಿಪ್ರಾಯದ ಮೇಲೆ ಹೈಕಮಾಂಡ್ ಹಾಗೂ ಸೋನಿಯಾ ಗಾಂಧಿಯವರೇ ನಿರ್ಧಾರ ಮಾಡುತ್ತಾರೆ. ಮಾಧ್ಯಮಗಳಲ್ಲಿ ಸೃಷ್ಟಿ ಮಾಡಿರುವ ಹಾಗೆ ಡಿಕೆಶಿ ಮತ್ತು ಸಿದ್ದರಾಮಯ್ಯ ನಡುವೆ ವೈಮನಸ್ಸಿಲ್ಲ. ಅವರು ನಾಟಿ ಕೋಟಿ, ಮುದ್ದೆ ಸಾರು ಜೊತೆಯಲ್ಲೇ ತಿನ್ನುತ್ತಾರೆ. ಡಿಸೆಂಬರ್ ಅಂತ್ಯಕ್ಕೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುತ್ತದೆ. ಆ ನಿಟ್ಟಿನಲ್ಲಿ ನಾವು ಚುನಾವಣೆ ಎದುರಿಸಲು ಸಿದ್ದರಾಗಿದ್ದೇವೆ. ಕಾಂಗ್ರೆಸ್ ಸಾಮೂಹಿಕ ನಾಯಕತ್ವದಲ್ಲೇ ಚುನಾವಣೆ ಎದುರಿಸುತ್ತೇವೆ" ಎಂದರು.

ಮೃತದೇಹದ ಮೇಲೂ ಜಿಎಸ್‌ಟಿ ಬರಬಹುದು
"ಜನ ಸಾಮಾನ್ಯರು ಬಳಸುವ ದಿನಸಿ ಪದಾರ್ಥಗಳ ಮೇಲೆ ಜಿಎಸ್‌ಟಿ ಹಾಕುವ ಮೂಲಕ ಕೇಂದ್ರ ಸರ್ಕಾರ ಗಾಯದ ಮೇಲೆ ಬರೆ ಎಳೆದಿದೆ. ಶವಾಗಾರ ನಿರ್ಮಾಣ ಸೇರಿದಂತೆ ಇನ್ನಿತರೆ ವಸ್ತುಗಳ ಮೇಲೆ ಜಿಎಸ್‌ಟಿ ವಿಧಿಸಿದೆ. ಮುಂದಿನ ದಿನಗಳಲ್ಲಿ ಶವದ ಮೇಲೂ ಜಿಎಸ್‌ಟಿ ತರಬಹುದು, ಅದರಲ್ಲಿ ಯಾವುದೇ ಅನುಮಾನವಿಲ್ಲ. ಮೋದಿ ನೇತೃತ್ವದ ಸರ್ಕಾರದಲ್ಲಿ ಈಗ ಬದುಕಿರುವವರು ಯಾರು ಸಂತೋಷವಾಗಿಲ್ಲ, ಮೃತದೇಹ ಮಾತ್ರ ಸಂತೋಷವಾಗಿದೆ. ಮುಂದೆ ಶವದ ಮೇಲೂ ಜಿಎಸ್‌ಟಿ ತರುವ ಕಾಲ ಬರಲಿದೆ" ಎಂದು ಕೇಂದ್ರದ ವಿರುದ್ಧ ಕಿಡಿಕಾರಿದರು.












Click it and Unblock the Notifications