ಆನ್‌ಲೈನ್ ಬ್ಯುಸಿನೆಸ್, ಗಿಫ್ಟ್, ಕೆಲಸದ ಆಫರ್: 2 ವರ್ಷದಲ್ಲಿ 1.64 ಕೋಟಿ ಕಳೆದುಕೊಂಡ ಉತ್ತರ ಕನ್ನಡದ ಜನರು
ಕಾರವಾರ, ಅಕ್ಟೋಬರ್ 23: ಇತ್ತಿಚಿಗೆ ಸೈಬರ್ ಕ್ರೈಂ ಪ್ರಕರಣ ಹೆಚ್ಚುತ್ತಲೇ ಇದೆ. ಪೊಲೀಸ್ ಇಲಾಖೆ ಎಷ್ಟೇ ಎಚ್ಚರಿಕೆ ಮೂಡಿಸಿದರು ಜನರು ವಂಚನೆಗೊಳಗಾವುದು ಮಾತ್ರ ಕಡಿಮೆಯಾಗುತ್ತಿಲ್ಲ. ಕಳೆದ ಎರಡು ವರ್ಷದಲ್ಲಿ ಜಿಲ್ಲೆಯಲ್ಲಿ ಸುಮಾರು 1.64 ಕೋಟಿ ರೂಪಾಯಿಗೂ ಅಧಿಕ ಹಣ ಜನರು ಸೈಬರ್ ವಂಚನೆಯಿಂದ ಕಳೆದುಕೊಂಡಿದ್ದಾರೆ.
ಸೈಬರ್ ಕ್ರೈಂ ಇತ್ತಿಚ್ಚಿನ ದಿನದಲ್ಲಿ ಪೊಲೀಸರಿಗೆ ದೊಡ್ಡ ತಲೆ ನೋವಾಗಿರುವ ವಿಚಾರವಾಗಿದೆ. ಪ್ರತಿ ದಿನ ಒಂದಲ್ಲಾ ಒಂದು ಸೈಬರ್ ವಂಚನೆ ಪ್ರಕರಣ ಬೆಳಕಿಗೆ ಬರುತ್ತಲೇ ಇದೆ. ಜಿಲ್ಲೆಯಲ್ಲಿ ಸಹ ಸೈಬರ್ ವಂಚನೆ ಪ್ರಕರಣ ಹೆಚ್ಚಾಗಿದ್ದು 2022 ನೇ ಸಾಲಿಗಿಂದ 2023ರಲ್ಲಿ ಜನ ಹಣ ಕಳೆದುಕೊಂಡ ಮೊತ್ತ ಹೆಚ್ಚಾಗಿದೆ.

ಮೊಬೈಲ್‌ನಲ್ಲಿ ಓಟಿಪಿ ಕಳಿಸಿ ವಿವಿಧ ವಿಚಾರದಲ್ಲಿ ವಿಚಾರಣೆ ಮಾಡಿ ಓಟಿಪಿ ಪಡೆದು ವಂಚನೆಯನ್ನ ಮಾಡಲಾಗುತ್ತದೆ. ಅಲ್ಲದೇ ಎಟಿಎಂ ಕಾರ್ಡ್ ಹಾಳಾಗಿದೆ ಎಂದು ಸಹ ವಂಚಿಸುವ ಪ್ರಕರಣ ನಡೆಯುತ್ತದೆ. ಇದಲ್ಲದೇ ಜಾಬ್ ಕೊಡಿಸಲಾಗುವುದು, ಗಿಫ್ಟ್ ಬಂದಿದ್ದು ಪಡೆಯುವಂತೆ ಹೇಳಿ ಹಣ ಪಡೆಯುವುದು.
ಆನ್‌ಲೈನ್ ಬ್ಯುಸಿನೆಸ್ ಅಂತಾ ಹಣ ವಂಚಿಸುವುದು. ಕೆವೈಸಿ ಅಪ್ ಡೇಟ್ ಎಂದು ಅಕೌಂಡ್ ಡಿಟೈಲ್ ಪಡೆದು ವಂಚಿಸುವುದು ಹೀಗೆ ಒಂದಲ್ಲಾ ಎರಡಲ್ಲ ನಾನಾ ಬಗೆಯ ವಂಚನೆಗಳು ನಡೆಯುತ್ತಿದೆ.
ಜಿಲ್ಲೆಯಲ್ಲಿ 2022ನೇ ಸಾಲಿನಲ್ಲಿ ಸಿಇಎನ್ ಪೊಲೀಸ್ ಠಾಣೆಯಲ್ಲಿ ಜನರು ವಿವಿಧ ವಂಚನೆ ಪ್ರಕರಣದಲ್ಲಿ ಸುಮಾರು 43 ಲಕ್ಷ ಹಣ ಕಳೆದುಕೊಂಡಿದ್ದಾರೆ. ಇನ್ನು 2023ನೇ ಸಾಲಿನಲ್ಲಿ ಅಕ್ಟೋಬರ್ ತಿಂಗಳ ವರೆಗೆ ಸುಮಾರು 1.21 ಕೋಟಿ ರೂಪಾಯಿ ಹಣವನ್ನ ಜನರು ವಿವಿಧ ಪ್ರಕರಣದಲ್ಲಿ ಕಳೆದುಕೊಂಡಿದ್ದು ಒಂದೇ ವರ್ಷದಲ್ಲಿ ದುಪ್ಪಟ್ಟು ಹಣ ಕಳೆದುಕೊಂಡಿದ್ದಾರೆ.

ಇನ್ನು ಸೈಬರ್ ವಂಚನೆಗೊಳಗಾದ ಪ್ರಕರಣದಲ್ಲಿ ಯುವಕರೇ ಹೆಚ್ಚಾಗಿದ್ದು ಸಿಇಎನ್ ಪೊಲೀಸ್ ಠಾಣೆಯೊಂದರಲ್ಲಿ ಕೋಟಿಗೂ ಅಧಿಕ ಹಣ ಕಳೆದುಕೊಂಡರೇ ಇತರೇ ಪೊಲೀಸ್ ಠಾಣೆಗಳಲ್ಲಿ ಹಾಗೂ ಆನ್ ಲೈನ್ ಮೂಲಕ ದಾಖಲಾದ ದೂರುಗಳೆಲ್ಲಾ ಸೇರಿ ಜಿಲ್ಲೆಯಲ್ಲಿ 2 ಕೋಟಿಗೂ ಅಧಿಕ ಹಣ ಜನರು ಆನ್‌ಲೈನ್ ವಂಚನೆ ಮಾಡಿದ್ದಾರೆ.
ಜಿಲ್ಲೆಯಲ್ಲಿ ಇತರೇ ಕ್ರೈಂ ಪ್ರಕರಣಗಳಿಗೆ ಹೋಲಿಸಿದರೆ ಇತ್ತಿಚ್ಚಿಗೆ ಸೈಬರ್ ಕ್ರೈಂ ಗಳು ಸಹ ಸಾಕಷ್ಟು ಸಂಖ್ಯೆಯಲ್ಲಿ ಪ್ರಕರಣಗಳು ದಾಖಲಾಗುತ್ತಿದೆ. ಜಿಲ್ಲೆಯ ಜನರಲ್ಲಿ ಎಷ್ಟೇ ಜಾಗೃತಿ ಮೂಡಿಸಿದರು ಹಣ ಒಂದಲ್ಲಾ ಒಂದು ಮಾರ್ಗದಲ್ಲಿ ಜನರಿಂದ ವಂಚಕರು ವಂಚನೆ ಮಾಡುತ್ತಿರುವುದು ಪೊಲೀಸರಿಗೆ ತಲೆ ನೋವಾದ ವಿಚಾರವಾಗಿದೆ.
ಮುನ್ನಚರಿಕೆ ಕ್ರಮ ಕೈಗೊಳ್ಳಿ
ಸೈಬರ್ ಕ್ರೈಂ ಪ್ರಕರಣದಲ್ಲಿ ಮುನ್ನಚ್ಚರಿಕೆ ಕ್ರಮ ಅತ್ಯಗತ್ಯ ಎನ್ನುವುದು ಸಿ.ಇ.ಎನ್ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಆನಂದ ಮೂರ್ತಿ ಅವರ ಅಭಿಪ್ರಾಯವಾಗಿದೆ. ಯಾವುದೇ ಫ್ರಾಡ್ ಆದರೆ ತಕ್ಷಣ 1930 ಟಾಲ್ ಫ್ರೀ ನಂಬರ್‌ಗೆ ಕರೆ ಮಾಡಿ ದೂರು ದಾಖಲು ಮಾಡಬೇಕು. ನಂತರ ಸೈಬರ್ ಕ್ರೈಂ ಪೊಲೀಸರು ವಾಟ್ಸಪ್ ಮೂಲಕ ಬ್ಯಾಂಕ್ ಸ್ಟೇಟ್‌ಮೆಂಟ್ ಹಾಗೂ ಆಧಾರ್ ಖಾರ್ಡ್ಅನ್ನು ಪಡೆಯುತ್ತಾರೆ. ಇದಾದ ನಂತರ ವಂಚನೆಗೊಳಗಾದ ಹಣವನ್ನ ಬೇರೆ ಅಕೌಂಟ್‌ಗೆ ವರ್ಗಾವಣೆ ಆಗದಂತೆ ತಡೆಹಿಡಿಯುತ್ತಾರೆ.
ಇನ್ನು ಎಲ್ಲರೂ ಪೊಲೀಸ್ ಠಾಣೆಗೆ ಹೋಗಿ ದೂರು ಕೊಡಲು ಸಾಧ್ಯವಾಗುವುದಿಲ್ಲ. ಅಂತವರು ಎನ್ ಸಿ.ಸಿ.ಆರ್ ಪೋರ್ಟಲ್ ಮೂಲಕ ಆನ್‌ಲೈನ್ ಮೂಲಕವೇ ದೂರು ಕೊಡಬಹುದು. ಅಲ್ಲದೇ cybercrime.gov.in ಪೊರ್ಟಲ್ ಓಪನ್ ಮಾಡಿ ದೂರು ಸಲ್ಲಿಸಬಹುದು. ಇದಲ್ಲದೇ ಸೈಬರ್ ಕ್ರೈಂ ಒಳಗಾದರೆ ಎಲ್ಲರೂ ಸಿಇಎನ್ ಪೊಲೀಸ್ ಠಾಣೆಗೆ ಹೋಗಿ ದೂರು ಕೊಡುವ ಅಗತ್ಯವಿಲ್ಲ. ಸ್ಥಳೀಯ ಯಾವುದೇ ಪೊಲೀಸ್ ಠಾಣೆಗೆ ಹೋಗಿ ದೂರು ಮಾಡಬಹದು ಎಂದು ಇನ್ಸ್‌ಪೆಕ್ಟರ್ ಆನಂದ ಮೂರ್ತಿ ತಿಳಿಸಿದ್ದಾರೆ.
ವಿದ್ಯಾವಂತರೇ ಹಣ ಕಳೆದುಕೊಳ್ಳುತ್ತಿದ್ದಾರೆ: ಜಯಕುಮಾರ್
ಸೈಬರ್ ಅಪರಾಧಕ್ಕೆ ಹೆಚ್ಚಾಗಿ ಅವಿದ್ಯಾವಂತರಿಗಿಂತ ವಿದ್ಯಾವಂತರೇ ಹೆಚ್ಚಾಗಿ ಹಣ ಕಳೆದುಕೊಳ್ಳುತ್ತಿದ್ದಾರೆ. ಸೈಬರ್ ಅಪರಾಧದಲ್ಲಿ ವಿಕ್ಟಿಮ್ ಸಹಾಯ ಇಲ್ಲದೇ ಅಪರಾದ ಮಾಡಲು ಸಾಧ್ಯವೇ ಇಲ್ಲ. ಓಟಿಪಿ ಶೇರ್ ಮಾಡದೇ ಲಿಂಕ್ ಕ್ಲಿಕ್ ಮಾಡದೇ ಇದ್ದರೇ ಅಪರಾಧ ಮಾಡಲು ಸಾಧ್ಯವೇ ಇಲ್ಲ. ಎಂದು ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಜಯಕುಮಾರ್ ತಿಳಿಸಿದ್ದಾರೆ.
ಜನರು ಕೆಲ ಅನಧಿಕೃತ ಆಪ್‌ಗಳನ್ನು ಡೌನ್ ಲೋಡ್ ಮಾಡದೇ ಇರಬೇಕು. ಒಂದೊಮ್ಮೆ ಅಂತಹ ಆಪ್ ಡೌನ್ ಲೋಡ್ ಮಾಡಿದರೆ ನಮ್ಮ ಎಲ್ಲಾ ಮಾಹಿತಿ ಅವರಿಗೆ ಸೋರಿಕೆ ಆಗಬಹುದು. ಕೆಲಸ ಕೊಡುವ, ನೆಪದಲ್ಲಿ ವಂಚನೆ ಹೆಚ್ಚಾಗಿದೆ. ಪರಿಚಯ ಇಲ್ಲದ ವ್ಯಕ್ತಿಗಳ ಜೊತೆ ಫೇಸ್‌ಬುಕ್‌ನಲ್ಲಿ ಸ್ನೇಹಿತರಾಗುವ ಆಗುವ ಮುನ್ನ ಎಚ್ಚರಿಕೆ ವಹಿಸಬೇಕು ಎಂದು ಜಯಕುಮಾರ್ ತಿಳಿಸಿದ್ದಾರೆ.












Click it and Unblock the Notifications