ಕುಮಟಾ, ಹೊನ್ನಾವರ ಕ್ಷೇತ್ರದಲ್ಲಿ ಕಾಂಗ್ರೆಸ್ ಭಿನ್ನಮತ: ಯುವ ಕಾಂಗ್ರೆಸ್ ಅಧ್ಯಕ್ಷ ವಜಾ
ಕಾರವಾರ, ಏಪ್ರಿಲ್ 4: ಉತ್ತರ ಕನ್ನಡ ಜಿಲ್ಲೆಯ ಕುಮಟಾ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಘೋಷಣೆಗೂ ಮೊದಲೇ ಕಾರ್ಯಕರ್ತರಲ್ಲಿ ಅಸಮಾಧಾನ ಸ್ಫೋಟಗೊಂಡಿದೆ. ಯಾವ ಕಾರಣಕ್ಕೂ ನಿವೇದಿತ್ ಆಳ್ವಾ ಅವರಿಗೆ ಟಿಕೆಟ್ ಕೊಡಬಾರದು, ಕೊಟ್ಟರೆ ಬಂಡಾಯ ಗ್ಯಾರಂಟಿ ಎಂದು ಯುವ ಕಾಂಗ್ರೆಸ್ ಮತ್ತು ಮಹಿಳಾ ಕಾಂಗ್ರೆಸ್ ಸದಸ್ಯರು ಎಚ್ಚರಿಕೆ ನೀಡಿದ್ದಾರೆ.
ಮಾಜಿ ರಾಜ್ಯಪಾಲರು, ಹಿರಿಯ ಕಾಂಗ್ರೆಸ್ ನಾಯಕಿಯೂ ಆಗಿರುವ ಮಾರ್ಗರೆಟ್ ಆಳ್ವಾ ಅವರ ಪುತ್ರನಾಗಿರುವ ನಿವೇದಿತ್ ಆಳ್ವಾ ಅವರಿಗೆ ಕುಮಟಾ ಟಿಕೆಟ್ ನೀಡುವ ಪ್ರಸ್ತಾವನೆ ಇದೆ ಎಂಬುದು ತಿಳಿಯುತ್ತಲೇ ಯುವ ಕಾಂಗ್ರೆಸ್ ಮತ್ತು ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಸೇರಿ ಜಂಟಿ ಪತ್ರಿಕಾಗೋಷ್ಠಿ ನಡೆಸಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಹಳದಿಪುರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಸಂದೇಶ್ ಶೆಟ್ಟಿ, 'ಕ್ಷೇತ್ರಕ್ಕೆ ಟಿಕೆಟ್ ಬಯಸಿ ಅರ್ಜಿ ಹಾಕದೆ ಇರುವ ಹೊರಗಿನವರಿಗೆ ಟಿಕೆಟ್ ನೀಡಿದರೆ, ಕಾಂಗ್ರೆಸ್ ಪಕ್ಷಕ್ಕೆ ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಕ್ಷೇತ್ರದಲ್ಲಿಯೂ ಮುಟ್ಟಿ ನೋಡಿಕೊಳ್ಳುವಂತೆ ಉತ್ತರ ಕೊಡುತ್ತೇವೆ' ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ಯುವ ಕಾಂಗ್ರೆಸ್ ಅಧ್ಯಕ್ಷ ಬೇಕೇ ಹೊರತು ನನಗೆ ಹುದ್ದೆ, ಪಕ್ಷ ಬೇಕೆಂದಿಲ್ಲ. ಅಧ್ಯಕ್ಷ ಹುದ್ದೆಯಿಂದ ತೆಗೆಯುತ್ತಾರೆ ಎನ್ನುವ ಮಾತು ಕೇಳಿ ಬರುತ್ತಿದ್ದು, ರಾಜೀನಾಮೆ ಪತ್ರ ಕಿಸೆಯಲ್ಲಿಟ್ಟು ತಿರುಗಾಡುತ್ತಿದ್ದೇನೆ. ಅಂತಹ ಸಂದರ್ಭ ಬಂದರೆ ನಾನು ಒಬ್ಬನೇ ರಾಜೀನಾಮೆ ಕೊಡುವುದಿಲ್ಲ. ನನ್ನ ಜೊತೆ ಇರುವ ಎಲ್ಲಾ ಸಮೂಹದವರು ರಾಜೀನಾಮೆ ಕೊಡುತ್ತಾರೆ ಎಂದರು.

ಇದನ್ನೆಲ್ಲಾ ವಿರೋಧಿಸಿದರೆ ನಮ್ಮನ್ನು ಪಕ್ಷದಿಂದ ಉಚ್ಚಾಟನೆ ಮಾಡಬೇಕು ಎನ್ನುವ, ಬೆದರಿಕೆ ಕರೆಗಳು ಬರುತ್ತಿದೆ. ನಾವು ಪಕ್ಷವನ್ನು ಯಾವತ್ತೂ ವಿರೋಧ ಮಾಡುವುದಿಲ್ಲ. ಆದರೆ ಪಕ್ಷ ಶಿಸ್ತನ್ನು ಬಿಟ್ಟು ಹೊರಗಿನವರಿಗೆ ಟಿಕೆಟ್ ಕೊಟ್ಟರೆ ನಾವು ಪಕ್ಷದ ವಿರುದ್ಧ ಕೆಲಸ ಮಾಡಬೇಕಾಗುತ್ತದೆ ಎಂದು ಹೇಳಿದರು.
ಗಣಪತಿ ಮೇಸ್ತ ಅವರು, ಪರೇಶ್ ಮೇಸ್ತ ಹತ್ಯೆಯಾದಾಗ ಈ ಕೃತ್ಯದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನು ಕೊಲೆಗಡುಕರಂತೆ ಬಿಂಬಿಸಿದಾಗ ಧೈರ್ಯದಿಂದ ಎದುರಿಸಿದ್ದು ನಾವು. ಅಂತಹ ಸಂದರ್ಭದಲ್ಲೂ ನಾವು ಎಲ್ಲಾ ಕಾರ್ಯಕರ್ತರು ಪಕ್ಷದ ಪರವಾಗಿ ನಿಂತಿದ್ದೇವೆ. ಯಾವೊಬ್ಬ ರಾಜ್ಯ ನಾಯಕರು, ರಾಷ್ಟ್ರ ನಾಯಕರು ಕೂಡ ಇಲ್ಲಿ ಬರಲಿಲ್ಲ. ಇದೀಗ ಹೊರಗಿನವರಿಗೆ ಟಿಕೆಟ್ ನೀಡಿವ ಬಗ್ಗೆ ಬಲವಾದ ವಿರೋಧವಿದೆ ಎಂದರು.
ಚಂದಾವರ ಗ್ರಾಮ ಪಂಚಾಯತಿ ಸದಸ್ಯ ಇಮಾಮ್ ಗಣಿ ಸಾಬ ಮಾತನಾಡಿ, 'ಬಿಜೆಪಿ ವೈಫಲ್ಯಗಳು ಹಾಗು ನಮ್ಮ ಪಕ್ಷದ ಹಿರಿಯರು ಕೊಟ್ಟಂತಹ ಜನರ ಅಭಿಪ್ರಾಯ ನೋಡಿದಾಗ ನಾವು ನೂರಕ್ಕೆ ನೂರು ಈ ಬಾರಿ ಪಕ್ಷವನ್ನು ಗೆಲ್ಲಿಸಬಹುದು ಎಂಬಂತೆ ಕಾಣುತ್ತಿದೆ. ಐದು ವರ್ಷದಿಂದ ನಮ್ಮ ಹಿರಿಯರು ಟಿಕೆಟ್ ಆಕಾಂಕ್ಷಿಗಳು ಜನರ ಸಮಸ್ಯೆಯನ್ನು ಕುಂದು ಕೊರತೆಯನ್ನು ಹಾಗು ನೊಂದವರ ಕಣ್ಣೀರು ಒರೆಸುವ ಕೆಲಸ ಮಾಡುತ್ತಿದ್ದಾರೆ. ಅಂತವರಿಗೆ ಪಕ್ಷ ಟಿಕೆಟ್ ಕೊಡಬೇಕು. ಕ್ಷೇತ್ರದ ಹೊರಗಿನವರಿಗೆ ಟಿಕೆಟ್ ಕೊಟ್ಟಾಗ ಕಾರ್ಯಕರ್ತರು ಬೇಸರವಾಗುವುದು ಸಹಜ' ಎಂದರು.

ಪಕ್ಷ ವಿರೋಧಿ ಹೇಳಿಕೆ: ಹೊನ್ನಾವರ ಯುವ ಕಾಂಗ್ರೆಸ್ ಅಧ್ಯಕ್ಷ ವಜಾ
ಇನ್ನು ಹೊನ್ನಾವರ ತಾಲೂಕಿನ ಯುವ ಕಾಂಗ್ರೆಸ್ ಅಧ್ಯಕ್ಷ ಸಂದೇಶ ಶೆಟ್ಟಿ ಅವರನ್ನು ಸ್ಥಾನದಿಂದ ವಜಾಗೊಳಿಸಿ ಕೆಪಿಸಿಸಿ ಯುವ ಕಾಂಗ್ರೆಸ್ ಉಪಾಧ್ಯಕ್ಷ ಸಿರಿಲ್ ಪ್ರಭು ಆದೇಶ ಹೊರಡಿಸಿದ್ದಾರೆ.
ಕುಮಟಾ ಕ್ಷೇತ್ರದ ಪಕ್ಷದ ಟಿಕೆಟ್ ಹಂಚಿಕೆಯ ಸಂಬಂಧ ನಡೆದ ಘಟನಾವಳಿಯಲ್ಲಿ ಪಕ್ಷದ ನಿಷ್ಠಾವಂತ ಸ್ಥಳಿಯ ಕಾರ್ಯಕರ್ತರಿಗೆ ಟಿಕೆಟ್ ನೀಡಬೇಕು. ಪಕ್ಷದ ನಿಯಮಾನುಸಾರ 2 ಲಕ್ಷ ರೂಪಾಯಿ ಮುಂಗಡ ಹಣ ನೀಡಿ ಅರ್ಜಿ ಹಾಕಿದವರನ್ನೇ ಈ ಬಾರಿ ಪಕ್ಷದ ಟಿಕೆಟ್ ನೀಡುವಂತೆ ಸಾಮಾಜಿಕ ಜಾಲತಾಣ ಮತ್ತು ಪತ್ರಕಾಗೋಷ್ಠಿಯ ಮೂಲಕ ಅವರು ಕಾರ್ಯಕರ್ತರನ್ನೊಡಗೂಡಿ ಒತ್ತಾಯಿಸಿದ ಬೆನ್ನಲ್ಲೇ ಇದನ್ನು ಗಂಭೀರವಾಗಿ ಪರಿಗಣಿಸಿ ಈ ನಿರ್ಧಾರ ಕೈಗೊಂಡಿದೆ ಎನ್ನುವ ಅಭಿಪ್ರಾಯ ಪಕ್ಷದ ಕಾರ್ಯಕರ್ತರಿಂದ ಕೇಳಿ ಬರುತ್ತಿದ್ದು, ಈ ಘಟನೆಗೆ ಯುವಕರು ಪಕ್ಷದ ವಿರುದ್ಧ ಬಹಿರಂಗವಾಗಿ ತಿರುಗಿ ಬಿದ್ದಿದ್ದಾರೆ.
ಕಾಂಗ್ರೆಸ್ ಪಕ್ಷ ದತ್ತ ಯುವ ಕಾರ್ಯಕರ್ತರ ಬೆಂಬಲ ಇತರೆ ಪಕ್ಷಗಳಿಗೆ ಹೋಲಿಸಿದರೆ ಕಡಿಮೆ ಇದ್ದು, ಈ ಮಧ್ಯೆ ಇಂತಹ ಘಟನೆಯಿಂದ ಪಕ್ಷಕ್ಕೆ ಹಿನ್ನಡೆಯಾಗಲಿದೆ. ಸಂದೇಶ ಶೆಟ್ಟಿ ಯೂಥ್ ಕಾಂಗ್ರೆಸ್ ಅಧ್ಯಕ್ಷರಾದ ಬಳಿಕ ಯುವಕರನ್ನು ಒಗ್ಗೂಡಿಸುವ ಮೂಲಕ ಪಕ್ಷ ಸಂಘಟನೆಗೆ ಮುಂದಾಗಿದ್ದರು.
ಹೊನ್ನಾವರ ಪಟ್ಟಣ, ಮುಗ್ವಾ ಹೊಸಾಕುಳಿ, ಸಾಲ್ಕೋಡ್, ಕರ್ಕಿ, ಹಳದೀಪುರ, ಚಂದಾವರ, ಕಡತೋಕಾ, ಕಡ್ಲೆ ಗ್ರಾ.ಪಂ. ವ್ಯಾಪ್ತಿಯಲ್ಲಿ ನೂರಾರು ಕಾರ್ಯಕರ್ತರನ್ನು ಪಕ್ಷಕ್ಕೆ ಸೇರಿಸುತ್ತಾ ಪಕ್ಷ ಬಲವರ್ಧನೆಗೊಳಿಸಿದ್ದರು. ಈ ಭಾಗದಲ್ಲಿ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಪ್ರೋತ್ಸಾಹಿಸುವ ಜೊತೆ ಪಕ್ಷದ ಮುಖಂಡರಾದ ಶಿವಾನಂದ ಹೆಗಡೆ, ಮಂಜುನಾಥ ನಾಯ್ಕ, ರವಿಕುಮಾರ ಶೆಟ್ಟಿ, ಅಕ್ಷಯ ನಾಯ್ಕ ಇವರನ್ನು ಸಂಪರ್ಕಿಸಿ ಕಾರ್ಯಕ್ರಮಕ್ಕೆ ಸಹಕಾರ ನೀಡಲು ಪ್ರೇರೆಪಿಸುತ್ತಾ ಬಂದಿರುವುದರಿಂದ ಯುವ ಪಡೆ ಇವರ ಬೆನ್ನಿಗೆ ನಿಂತಿದೆ.
ಇದಲ್ಲದೇ ಬೆಲೆ ಏರಿಕೆಯ ವಿರುದ್ಧ ಪಕ್ಷದ ಯುವ ಕಾರ್ಯಕರ್ತರ ಒಗ್ಗೂಡಿಸಿ ಪ್ರತಿಭಟಿಸುವ ಜೊತೆಗೆ, ಪಕ್ಷದ ಕಾರ್ಯಕ್ರಮವಾದ ಭಾರತ್ ಜೋಡಫ, ಸಿದ್ದರಾಮೋತ್ಸವ, ಜನಜಾಗೃತಿ ಸಭೆ, ಬೂತ್ ಮಟ್ಟದ ಸಭೆಯಲ್ಲಿ ಹೆಚ್ಚಿನ ಯುವಕರನ್ನು ಕರೆತರುವ ಮೂಲಕ ಪಕ್ಷದ ಕಾರ್ಯಕ್ರಮ ಅನುಷ್ಠಾನದಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದರು.
ಚುನಾವಣೆ ಸಮಯದಲ್ಲಿ ಪಕ್ಷದ ಈ ನಿರ್ಧಾರದಿಂದ ಯುವ ಕಾರ್ಯಕರ್ತರ ಮತಗಳು ಅನ್ಯ ಪಕ್ಷದ ಕಡೆ ಪಾಲಾಗುದರಲ್ಲಿ ಅನುಮಾನವಿಲ್ಲ. ಈಗಾಗಲೇ ತಾಲೂಕಿನ ಅರೇಅಂಗಡಿ ಸೇರಿದಂತೆ ವಿವಿಧ ಭಾಗದಲ್ಲಿ ಪಕ್ಷದ ಈ ನಿರ್ಧಾರಕ್ಕೆ ಯುವ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಪಕ್ಷದ ರಾಜ್ಯ ಮತ್ತು ರಾಷ್ಟ್ರ ನಾಯಕರು ಹೊನ್ನಾವರ ಕುಮಟಾ ಭಾಗಕ್ಕೆ ಬಂದಾಗ ಕಪ್ಪು ಬಾವುಟ ಪ್ರದರ್ಶನ ಮಾಡುದಲ್ಲದೇ ಯುವ ಕಾರ್ಯಕರ್ತರು ನೋಟಾ ಚಲಾವಣೆ ಮಾಡೋಣ ಎನ್ನುವ ಒಕ್ಕೂರಲ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಬೆಳವಣೆಗೆಯಿಂದ ಕುಮಟಾ ಹೊನ್ನಾವರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗುವ ಸಾಧ್ಯತೆ ಇದೆ.












Click it and Unblock the Notifications