ಕಾರವಾರದ ಅರಬ್ಬೀ ಸಮುದ್ರದಲ್ಲಿ ಬೆಲೆಗೆ ಬಿದ್ದ ಬೃಹತ್ ಗಾತ್ರದ ಬಂಗುಡೆ ಮೀನು, ತೂಕ ಎಷ್ಟು ಗೊತ್ತಾ?, ಇಲ್ಲಿದೆ ವಿವರ
ಕಾರವಾರ, ಆಗಸ್ಟ್, 29: 48 ಸೆ.ಮೀಟರ್ ಉದ್ದದ ಬೃಹತ್ ಬಂಗುಡೆ ಮೀನೊಂದು ಕಾರವಾರದ ಮೀನುಗಾರರಿಗೆ ಸಿಕ್ಕಿದ್ದು, ದೇಶದಲ್ಲಿಯೇ ಈವರೆಗೆ ಸಿಕ್ಕಿರುವ ಬಂಗುಡೆ ಮೀನುಗಳ ಪೈಕಿ ಇದು ಅತೀ ದೊಡ್ಡ ಮೀನಾಗಿದೆ.
ಭಾರತದಲ್ಲಿ ಇದುವರೆಗೆ ಪತ್ತೆಯಾದ ಬಂಗಡೆಗಳಲ್ಲೇ ಅತೀ ದೊಡ್ಡದಾದ ಹಾಗೂ ಉದ್ದವಾದ ಬಂಗಡೆ ಇದಾಗಿದೆ. ಕಾರವಾರದ ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಆನಂದು ರಾಮಾ ಹರಿಕಂತ್ರ ಅವರಿಗೆ ಸಂಬಂಧಪಟ್ಟ, ಎಂ.ಐ. ಇಂಜೀನ ಹೊಂದಿದ ಪಾತಿ ದೋಣಿಯ ಬೀಡು ಬಲೆಗೆ ಬಿದ್ದ ಮೀನುಗಳಲ್ಲಿ ಒಂದು ದೊಡ್ಡ ಗಾತ್ರದ ಬಂಗಡೆ ಮೀನು ದೊರೆತಿದೆ.

ಈ ಬಂಗುಡೆ 48 ಸೆಂಟಿ ಮೀಟರ್ ಉದ್ದವಿದ್ದು ಸುಮಾರು 12 ಸೆಂ.ಮೀ ಅಗಲವಿದೆ. ಅಲ್ಲದೇ ಬರೋಬ್ಬರಿ 1.2 ಕೆ.ಜಿ. ತೂಕವಿದ್ದು, ಪಶ್ಚಿಮ ಕರಾವಳಿ ಭಾಗದಲ್ಲಿ ಸಿಕ್ಕಿರುವುದರಲ್ಲಿ ಇದು ಅತೀ ಹೆಚ್ಚು ತೂಕದ್ದಾಗಿದೆ. ಈ ಹಿಂದೆ 36 ಸೆಂ.ಮೀ. ಗಂಡು ಬಾಂಗುಡೆ, 42 ಸೆಂ.ಮೀ. ಹೆಣ್ಣು ಬಂಗುಡೆ ಸಿಕ್ಕಿರುವುದು ದಾಖಲೆಯಾಗಿದ್ದು, ಈಗ ಸಿಕ್ಕಿರುವುದು ಅವೆರಡಕ್ಕಿಂತ ದೊಡ್ಡದಿದೆ. ಸಾಮಾನ್ಯವಾಗಿ ದೊಡ್ಡ ಬಂಗುಡೆ 25 ರಿಂದ 30 ಸೆಂ.ಮೀ ಮಾತ್ರ ಬೆಳೆಯುತ್ತದೆ. ಹೀಗಾಗಿ ಈಗ ಸಿಕ್ಕಿರುವ ಮೀನು ದಾಖಲೆಯಾಗಿದೆ.
ಇನ್ನು ಭಾರತದಲ್ಲಿ ದೊರೆತ ಬಂಗಡೆ ಮೀನುಗಳಲ್ಲಿ ಅತ್ಯಂತ ದೊಡ್ಡದಾದ ಬಂಗಡೆ ಮೀನು ಎಂಬ ಹೆಗ್ಗಳಿಕೆಗೆ ಪಾತ್ರವಾದ ಈ ಬಂಗಡೆ ಮೀನನ್ನು ಮಾರಾಟ ಮಾಡದೇ ವಿದ್ಯಾರ್ಥಿಗಳ ಅಧ್ಯಯನಕ್ಕೆ ಅನುಕೂಲವಾಗುವಂತೆ ಜಿಲ್ಲಾ ವಿಜ್ಞಾನ ಕೇಂದ್ರಕ್ಕೆ ನೀಡುವ ಶ್ಲಾಘನೀಯ ನಿರ್ಧಾರವನ್ನು ಮೀನುಗಾರರು ತೆಗೆದುಕೊಂಡಿದ್ದಾರೆ. ಈ ಬಂಗಡೆ ಮೀನನ್ನು ಕೋಲ್ಡ್ ಸ್ಟೋರೆಜ್‌ನಲ್ಲಿ ಇರಿಸಲಾಗಿತ್ತು. ಸೋಮವಾರ ಮರೈನ್ ಬಯೋಲಜಿ ವಿಭಾಗದ ಪ್ರಾಧ್ಯಾಪಕ ಶಿವಕುಮಾರ್ ಹರಗಿ ನೇತೃತ್ವದಲ್ಲಿ ವಿದ್ಯಾರ್ಥಿಗಳ ತಂಡ ಬೈತಖೋಲಕ್ಕೆ ಭೇಟಿ ನೀಡಿ ಮೀನನ್ನು ಪರಿಶೀಲಿಸಿ ಮಾಹಿತಿ ಪಡೆದುಕೊಂಡಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಶಿವಕುಮಾರ್ ಹರಗಿ, ವಿದ್ಯಾರ್ಥಿಗಳ ಹಾಗೂ ಸಾರ್ವಜನಿಕರ ವೀಕ್ಷಣೆಗೆ, ಅಧ್ಯಯನಕ್ಕೆ ಅನುಕೂಲವಾಗುವಂತೆ ಫಾರ್ಮಾಲಿನ್ ಹಾಕಿ ಈ ಬಂಗಡೆ ಮೀನನ್ನು ಸಂರಕ್ಷಿಸಿ ಇಡಲಾಗುವುದು. ಮೀನುಗಾರರೂ ಸಹ ಇಷ್ಟು ದೊಡ್ಡ ಬಂಗುಡೆ ಕಂಡು ಖುಷಿಯಾಗಿದ್ದು, ಇತರರಿಗೂ ನೋಡಲು ಅವಕಾಶ ಸಿಗಲಿ ಎನ್ನುವ ಉದ್ದೇಶದಿಂದ ಮರೈನ್ ಬಯೋಲಜಿ ವಿಭಾಗಕ್ಕೆ ಮೀನನ್ನು ಹಸ್ತಾಂತರಿಸಿದ್ದಾರೆ ಎಂದು ಮರೈನ್ ಬಯೋಲಜಿ ವಿಭಾಗದ ಪ್ರಾಧ್ಯಾಪಕ ಶಿವಕುಮಾರ್ ಹರಗಿ ತಿಳಿಸಿದ್ದಾರೆ.
ಬಲೆಗೆ ಬಿದ್ದ 56 ಕೆ.ಜಿ.ತೂಕದ ಬೃಹತ್ ಮೀನು
ಇನ್ನೂ ಇತ್ತೀಚೆಗಷ್ಟೇ ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ಭದ್ರಾ ಹಿನ್ನೀರಿನಲ್ಲಿ 56 ಕೆ.ಜಿ.ತೂಕದ ಬೃಹತ್ ಮೀನೊಂದು ಬಲೆಗೆ ಬಿದ್ದಿತ್ತು.
ಭದ್ರಾ ಹಿನ್ನೀರಿನಲ್ಲಿ ಸಿಕ್ಕ 56 ಕೆ.ಜಿ.ತೂಕದ ಕಾಟ್ಲಾ ಮೀನನ್ನು ಫೈರೋಜ್ ಎಂಬುವವರ ಅಂಗಡಿಗೆ ತರಲಾಗಿದ್ದು, ಇದನ್ನು 4 ಜನ ಸೇರಿ 12 ಸಾವಿರ ರೂಪಾಯಿಗೆ ಖರೀದಿ ಮಾಡಿದ್ದರು.
ಕಾಟ್ಲಾ ಮೀನಿನ ಊಟದಿಂದ ಆರೋಗ್ಯಕ್ಕಾಗುವ ಪ್ರಯೋಜನಗಳು
1. ಕಾಟ್ಲಾ ಮೀನು ಸೇವಿಸಿದರೆ ಕೊಬ್ಬು ಕಡಿಮೆ
2. ಕಾಟ್ಲಾ ಮೀನು ಸಂಧಿವಾತದ ಅಪಾಯವನ್ನು ಕಡಿಮೆ ಮಾಡುತ್ತದೆ. ಮತ್ತು ಕೀಲು ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ.
3. ವಿಟಮಿನ್ ಎ ಯ ಒಂದು ವಿಧವಾದ ರೆಟಿನಾಲ್ ಸಮೃದ್ಧವಾಗಿದೆ.
4. ಸೋರಿಯಾಸಿಸ್ ಸೇರಿ ಇತರ ಹಲವಾರು ಚರ್ಮದ ಕಾಯಿಲೆಗಳಿಂದ ರಕ್ಷಿಸುತ್ತದೆ.
5. ಕ್ಯಾಟ್ಲಾವು ಅಯೋಡಿನ್, ಸತು, ಸೆಲೆನಿಯಮ್ ಮತ್ತು ಪೊಟ್ಯಾಸಿಯಮ್‌ನಂತಹ ಹಲವಾರು ಅಂಶಗಳನ್ನು ಹೊಂದಿದೆ.
6. ಇದು ಆಸ್ತಮಾದ ಲಕ್ಷಣಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ.
7. ಕ್ಯಾಟ್ಲಾ ಮೀನಿನ ಎಣ್ಣೆಯು ಕೊಲೈಟಿಸ್ ಮತ್ತು ಕ್ರೋನ್ಸ್ ಕಾಯಿಲೆಯಂತಹ ಗಮನಾರ್ಹವಾದ ಉರಿಯೂತದ ಕರುಳಿನ ಅಸ್ವಸ್ಥತೆಗಳಿಂದ ನಮ್ಮನ್ನು ರಕ್ಷಿಸುತ್ತದೆ.
8. ಏಕಾಗ್ರತೆ, ಓದುವ ಕೌಶಲ್ಯಗಳನ್ನು ಹೆಚ್ಚಿಸುತ್ತದೆ. ಮತ್ತು ಮೆದುಳಿನ ಕಾರ್ಯವನ್ನು ಹೆಚ್ಚಿಸುತ್ತದೆ. ಈ ಮೂಲಕ ಮಕ್ಕಳು ಚುರುಕಾಗಿರಲು ಸಹಕಾರಿಯಾಗುತ್ತದೆ.
ಈ ಮೇಲಿನ ಎಲ್ಲಾ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಲು ರುಚಿಕರವಾದ ಕ್ಯಾಟ್ಲಾ ಮೀನು ಪಾಕ ವಿಧಾನಗಳನ್ನು ಇಲ್ಲಿ ತಿಳಿಯಿರಿ. ಮೊಸರು, ಶುಂಠಿ/ಬೆಳ್ಳುಳ್ಳಿ, ಈರುಳ್ಳಿ ಪೇಸ್ಟ್ ಮತ್ತು ಗೋಡಂಬಿಗಳ ಕೆನೆ ಗ್ರೇವಿಯೊಂದಿಗೆ ಮಾಡಿದ ಕಟ್ಲಾದ ರುಚಿಯನ್ನು ಸವಿಯಿರಿ.
ಮೀನಿನ ತುಂಡುಗಳನ್ನು ಸಾಸಿವೆ ಎಣ್ಣೆಯಲ್ಲಿ ಉಪ್ಪು ಮತ್ತು ಅರಿಶಿನದೊಂದಿಗೆ ಫ್ರೈ ಮಾಡಿ. ನಂತರ ಅದನ್ನು ಈರುಳ್ಳಿ, ಮೊಸರು, ಕೆಂಪು ಮೆಣಸಿನಕಾಯಿಯ ಗ್ರೇವಿಯಲ್ಲಿ ಕುದಿಸಿ ಕ್ಯಾಟ್ಲಾ ಕಾಲಿಯಾವನ್ನು ತಯಾರಿಸಿ. ಹಾಗೆಯೇ ಹುರಿದ ಹೂಕೋಸಿನ ಕೆಲವು ತುಂಡುಗಳನ್ನು ಸಹ ಇದರಲ್ಲಿ ಸೇರಿಸಬಹುದಾಗಿದೆ. ಇನ್ನು ಕಟ್ಲಾ ಮೀನು ಕುಳಂಬು ಅನ್ನು ಹುಣಸೆಹಣ್ಣು ಮತ್ತು ತೆಂಗಿನಕಾಯಿ ಮಿಶ್ರಣದಿಂದ ತಯಾರಿಸಲಾಗುತ್ತದೆ. ಇದಲ್ಲದೇ ಕ್ಯಾಟ್ಲಾ ಫಿಶ್ ಫ್ರೈ ಕೂಡ ಮಾಡಬಹುದಾಗಿದೆ.












Click it and Unblock the Notifications