ಅಂಕೋಲಾ: ಅರಬ್ಬೀ ಸಮುದ್ರದಲ್ಲಿ ಮುಳುಗುತ್ತಿದ್ದ ಬೋಟ್‌ನಿಂದ 12 ಮೀನುಗಾರರ ರಕ್ಷಣೆ
ಕಾರವಾರ, ಮೇ, 23: ಗಾಳಿಯ ಅಬ್ಬರಕ್ಕೆ ಮುಳುಗುತ್ತಿದ್ದ ಬೋಟ್‌ನಿಂದ 12 ಮೀನುಗಾರರನ್ನು ಇನ್ನೊಂದು ಬೋಟ್ ಮೀನುಗಾರರು ರಕ್ಷಣೆ ಮಾಡಿರುವ ಘಟನೆ ಅಂಕೋಲಾ ತಾಲೂಕಿನ ಬೆಳಾಂಬರ ಬಳಿ ಸಮುದ್ರಲ್ಲಿ ಮಂಗಳವಾರ ನಡೆದಿದೆ.
ಅಂಕೋಲಾ ತಾಲೂಕಿನ ಚಂದ್ರಾವತಿ ಸುಭಾಸ್ ಖಾರ್ವಿ ಎಂಬುವವರಿಗೆ ಸೇರಿದ ಪರ್ಸಿಯನ್ ಬೋಟ್ ಆಳಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿತ್ತು. ಆದರೆ ಬೋಟ್ ಮೀನುಗಾರಿಕೆಗೆ ತೆರಳಿದ ಬಳಿಕ ಗಾಳಿ, ಮಳೆ ಆರ್ಭಟ ಜೋರಾಗಿ ಅಲೆಗಳ ಅಬ್ಬರ ಹೆಚ್ಚಾಗಿತ್ತು. ಅಲೆಗಳ ಹೊಡೆತಕ್ಕೆ ಬೋಟ್‌ನ ತಳಭಾಗದ ಫೈಬರ್‌ಗೆ ಹಾನಿಯಾಗಿ ಬೋಟ್‌ನೊಳಗೆ ನೀರು ನುಗ್ಗಲಾರಂಭಿಸಿತ್ತು. ತಕ್ಷಣ ಮೀನುಗಾರರು ಸಮೀಪದಲ್ಲಿದ್ದ ಜೈಶ್ರೀರಾಮ್ ಹೆಸರಿನ ಬೋಟ್‌ಗೆ ಮಾಹಿತಿ ರವಾನಿಸಿದ್ದು, ಆ ಬೋಟ್‌ನಲ್ಲಿದ್ದ ಮೀನುಗಾರರು ಅಪಾಯದಲ್ಲಿ 12 ಮಂದಿಯನ್ನು ರಕ್ಷಣೆ ಮಾಡಿದ್ದಾರೆ.

ಬೋಟ್‌ನಲ್ಲಿ ನೀರು ತುಂಬಿಕೊಂಡ ಕಾರಣ ಮೀನು ಬಲೆ, ಎಂಜಿನ್ ಸೇರಿದಂತೆ ಒಂದು ಕೋಟಿಗೂ ಹೆಚ್ಚು ಹಾನಿಯಾಗಿದೆ ಎಂದು ಮೀನುಗಾರರು ಮಾಹಿತಿ ನೀಡಿದ್ದಾರೆ. ಬಳಿಕ ನೀರಿನಲ್ಲು ಮುಳುಗುತ್ತಿದ್ದ ಬೋಟ್ ಅನ್ನು ಇನ್ನೊಂದು ಬೋಟ್ ಸಹಾಯದಿಂದ ಎಳೆದು ತರಲಾಗಿದೆ.
ಹೊನ್ನಾವರದಲ್ಲಿ ಗ್ಯಾಸ್ ಟ್ಯಾಂಕರ್ ಫಲ್ಟಿ
ಮತ್ತೊಂದೆಡೆ ಚಲಿಸುತ್ತಿದ್ದ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿ ಅನಿಲ ಸೋರಿಕೆಯಾಗುತ್ತಿರುವ ಘಟನೆ ಹೊನ್ನಾವರ ಪಟ್ಟಣದ ಶರಾವತಿ ಸರ್ಕಲ್ ಬಳಿ ನಡೆದಿದೆ.
ಮಂಗಳೂರು ಕಡೆಯಿಂದ ಹುಬ್ಬಳ್ಳಿ ಕಡೆ ಚಲಿಸುತ್ತಿದ್ದ ಗ್ಯಾಸ್ ಟ್ಯಾಂಕರ್ ಎದುರಿಗೆ ಬಂದ ಬೈಕ್ ತಪ್ಪಿಸಲು ಮುಂದಾದಾಗ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಘಟನೆಯಲ್ಲಿ ಚಾಲಕ ಗಂಭೀರ ಗಾಯಗೊಂಡಿದ್ದಾನೆ. ಅಲ್ಲದೆ ಅನಿಲ ತುಂಬಿದ್ದ ಕಾರಣ ಫಲ್ಟಿಯಾದಾಗ ಸಣ್ಣ ಪ್ರಮಾಣದಲ್ಲಿ ಅನಿಲ ಸೋರಿಕೆಯಾಗತೊಡಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಸದ್ಯ ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಹಾಗೂ ಪೊಲೀಸರು ಆಗಮಿಸಿ ಮುನ್ನೆಚ್ಚರಿಕೆ ವಹಿಸಿದ್ದಾರೆ. ಸುತ್ತಮುತ್ತಲಿನ ಮನೆಗಳಿಗೆ ಬೆಂಕಿ ಉರಿಸದಂತೆ ಎಚ್ಚರಿಕೆ ನೀಡಲಾಗಿದೆ. ಅಲ್ಲದೆ ಅನಿಲ ಸೋರಿಕೆ ತಡೆಗಟ್ಟಲು ಪ್ರಯತ್ನಿಸಲಾಗಿದ್ದು, ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ತಡೆಹಿಡಿಯಲಾಗಿದೆ. ಇನ್ನು ಈ ಘಟನೆಯಿಂದ ಸ್ಥಳೀಯರು ಆತಂಕಕ್ಕೆ ಒಳಗಾಗುವಂತೆ ಆಗಿದೆ.
ಅನುಮಾನಸ್ಪದವಾಗಿ ಸಾವನ್ನಪ್ಪಿದ ಜಿಂಕೆ
ಇನ್ನು ನೀರು ಅರಸಿ ಬಂದ ಜಿಂಕೆಯೊಂದು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಮುಂಡಗೋಡದ ಸನವಳ್ಳಿ ಜಲಾಶಯದ ಬಳಿ ನಡೆದಿದೆ. ಬೀರು ಬೇಸಿಗೆಯಿಂದಾಗಿ ಎಲ್ಲೆಡೆ ನೀರಿಗೆ ಹಾಹಾಕಾರ ಶುರುವಾಗಿದೆ. ಅದರಲ್ಲಿಯೂ ಕಾಡು ಪ್ರಾಣಿಗಳಿಗೆ ಇದ್ದ ಜಲಮೂಲಗಳು ಭತ್ತಿದ ಕಾರಣ ನೀರು ಅರಸಿ ನಾಡಿನ ಕಡೆ ಹೆಜ್ಜೆ ಹಾಕುವಂತಾಗಿದೆ.
ಇದೇ ರಿತಿ ಮುಂಡಗೋಡದ ಸನವಳ್ಳಿ ಜಲಾಶಯಕ್ಕೆ ಆಗಮಿಸಿದ ಜಿಂಕೆಯೊಂದು ಕೆಲ ದಿನಗಳ ಹಿಂದೆ ಮೃತಪಟ್ಟಿದೆ. ಜಿಂಕೆ ಹೂಳಿನಲ್ಲಿ ಸಿಲುಕಿ ಸಾವನ್ನಪ್ಪಿದೆಯೋ ಅಥವಾ ಇನ್ನಾವುದೇ ಕಾರಣದಿಂದ ಸಾವನ್ನಪ್ಪಿದೆಯೋ ಇನ್ನು ಗೊತ್ತಾಗಬೇಕಿದೆ.
ಆದರೆ ಮೃತದೇಹ ಕಂಡ ಸ್ಥಳೀಯರಾದ ರಾಜು ಗುಬ್ಬಕ್ಕನವರ ಜಿಂಕೆ ಮೃತಪಟ್ಟಿರುವ ಬಗ್ಗೆ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿ ಜಿಂಕೆ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದಾರೆ. ಈ ವೇಳೆ ಅರಣ್ಯ ರಕ್ಷಕ ರಾಜು, ಸಿಬ್ಬಂದಿಗಳಾದ ಕೃಷ್ಣಾ ದೊಡ್ಡಮನಿ, ಫಕೀರಪ್ಪ ಬಾಳೆಗಡ್ಡಿ ಮಠ ಸೇರಿದಂತೆ ಮತ್ತತರು ಉಪಸ್ಥಿತರಿದ್ದರು.












Click it and Unblock the Notifications