ಬಿಜೆಪಿ ಶಾಸಕಿ ರೂಪಾಲಿ ನಾಯ್ಕ ಇಬ್ಬಗೆ ನೀತಿಗೆ ಟೀಕೆಗಳ ಸುರಿಮಳೆ
ಕಾರವಾರ, ಜೂನ್ 27; ವಿಮಾನ ನಿಲ್ದಾಣಕ್ಕೆ ಭೂಮಿ ಒತ್ತುವರಿ ಆಗುವ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಅಲಗೇರಿ ಗ್ರಾಮಕ್ಕಿಂತ, ನಿರಾಶ್ರಿತರಿಗೆ ಭೂಮಿ ನೀಡಲು ಮುಂದಾಗಲಿದ್ದಾರೆ ಎನ್ನಲಾದ ಬಾಸಗೋಡು ಗ್ರಾಮದ ಮೇಲೆ ಶಾಸಕಿ ರೂಪಾಲಿ ನಾಯ್ಕ ಹೆಚ್ಚಿನ ಕಾಳಜಿ ತೋರುತ್ತಿದ್ದಾರೆಂದು ಸಾಮಾಜಿಕ ಜಾಲತಾಣದಲ್ಲಿ ಟೀಕೆ ವ್ಯಕ್ತವಾಗಿದೆ.
ಅಲಗೇರಿ ಗ್ರಾಮದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ವಿಮಾನ ನಿಲ್ದಾಣದಿಂದ ಭೂಮಿ ಕಳೆದುಕೊಂಡು ನಿರಾಶ್ರಿತರಾಗುವವರಿಗೆ ಬಾಸಗೋಡು ಗ್ರಾಮದ ನಡುಬೇಣ ಮೈದಾನ ಜಾಗದಲ್ಲಿ ಭೂಮಿ ನೀಡಲು ಚಿಂತನೆ ನಡೆಸಲಾಗಿದೆ ಎನ್ನುವ ಸುದ್ದಿ ಹರಡಿತ್ತು.
ಇನ್ನು ನಿರಾಶ್ರಿತರಿಗೆ ಕೊಡಲು ಉದ್ದೇಶಿಸಿರುವ ನಡುಬೇಣ ಮೈದಾನ ಸಾಕಷ್ಟು ಐತಿಹಾಸಿಕ ಹಿನ್ನಲೆಯಿರುವ ಜಾಗ. ಮೈದಾನದಲ್ಲಿ ನಿರಾಶ್ರಿತರಿಗೆ ಭೂಮಿ ಕೊಟ್ಟರೆ ಸುತ್ತಮುತ್ತಲಿನ ಪರಿಸರ, ಕೃಷಿ, ಕ್ರೀಡೆ ಬಳಕೆಗೆ ಇದ್ದ ಜಾಗ ಹಾಗೂ ಐತಿಹಾಸಿಕ ಸಂಗತಿಗಳು ಮರೆಯಾಗಲಿದ್ದು, ಯಾವುದೇ ಕಾರಣಕ್ಕೂ ನಡುಬೇಣ ಜಾಗದಲ್ಲಿ ಪುನರ್ವಸತಿ ಬೇಡ, ಬೇರೆ ಕಡೆ ಕೊಡುವಂತೆ ಒತ್ತಾಯ ಕೇಳಿ ಬಂದಿತ್ತು.

ಇನ್ನು ಬಿಜೆಪಿ ಪಕ್ಷದ ಕೆಲ ನಾಯಕರೇ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಧ್ವನಿ ಎತ್ತಿದ್ದು, ಶಾಸಕಿ ರೂಪಾಲಿ ನಾಯ್ಕ ತಕ್ಷಣ ಇದಕ್ಕೆ ಸ್ಪಂದಿಸಿ ಪತ್ರಿಕಾ ಹೇಳಿಕೆಗಳನ್ನು ನೀಡುವ ಮೂಲಕ ಯಾವುದೇ ಕಾರಣಕ್ಕೂ ನಡುಬೇಣದಲ್ಲಿ ನಿರಾಶ್ರಿತರಿಗೆ ಭೂಮಿ ನೀಡುವುದಿಲ್ಲ ಎಂದಿದ್ದರು. ಅಲ್ಲದೇ ಸ್ಥಳಕ್ಕೆ ಅಧಿಕಾರಿಗಳ ಜೊತೆ ಭೇಟಿ ನೀಡಿ ಜನರನ್ನ ಉದ್ದೇಶಿಸಿ ಮಾತನಾಡಿದ್ದ ಅವರು, "ನಡುಬೇಣ ಜಾಗ ಹಿಂದಿನಂತೆ ಉಳಿಯಲಿದೆ. ಸ್ವಾತಂತ್ರ‍್ಯ ಹೋರಾಟಗಾರರ ಭೂಮಿಗೆ ಯಾವುದೇ ಕಾರಣಕ್ಕೂ ಹಾನಿ ಮಾಡುವುದಿಲ್ಲ" ಎಂದು ಹೇಳಿಕೆ ನೀಡಿದ್ದರು.
ಆದರೆ ಶಾಸಕರ ಈ ನಡೆಗೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತವಾಗಿದೆ. ಬಾಸಗೋಡದ ಕುರಿತು ಒಂದೇ ದಿನದಲ್ಲಿ ಶಾಸಕಿ ತೆಗೆದುಕೊಂಡ ಆಸಕ್ತಿ, ನಿರ್ಣಯಗಳು ಅಲಗೇರಿ ಗ್ರಾಮದ ಮೇಲೆ ಏಕಿಲ್ಲ?. ಸ್ವಾತಂತ್ರ‍್ಯ ಹೋರಾಟಗಾರರ ತವರು, ಉತ್ತರ ಕನ್ನಡ ಜಿಲ್ಲೆಯ ಶೈಕ್ಷಣಿಕ ಹರಿಕಾರ, ಸ್ವಾತಂತ್ರ್ಯದ ಸೇನಾನಿ, ಅಕ್ಷರ ಸಂತ, ಸಾಹಿತ್ಯ ಲೋಕದ ಚುಟುಕು ಬ್ರಹ್ಮ ದಿನಕರ ದೇಸಾಯಿಯವರ ಹುಟ್ಟೂರನ್ನು ಕಡಗಣಿಸಿದ್ದಾದರು ಏಕೆ?, ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಎನ್ನುವ ನಡೆ ಶಾಸಕರದ್ದು ಎಂದು ವಿರೋಧಿಸಲಾಗಿದೆ.

ವಿಮಾನ ನಿಲ್ದಾಣದಿಂದ ಮತ್ತೊಮ್ಮೆ ನಿರಾಶ್ರಿತರಾಗುವ ಅಲಗೇರಿ, ಭಾವಿಕೇರಿ, ಬೆಲೇಕೇರಿ ಹಾಗೂ ಬಡಗೇರಿ ಜನತೆ ಸಾಕಷ್ಟು ವಿರೋಧ ಮಾಡಿದ್ದರೂ ಶಾಸಕರು ಸ್ಪಂದಿಸಿರಲಿಲ್ಲ. ಅಂಕೋಲಾ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಬಡವರ ಹೊಟ್ಟೆ ಮೇಲೆ ಹೊಡೆಯಬೇಡಿ ಎಂದು ಒತ್ತಾಯಿಸಿದ್ದರೂ ಜಾಣ ಕುರುಡುತನ ಪ್ರದರ್ಶಿಸಿದ್ದರು. ಈಗ ಕೇವಲ ರಾಜಕೀಯ ಓಲೈಕೆಗಾಗಿ ಬಾಸಗೋಡಿನ ಬಗ್ಗೆ ಧ್ವನಿ ಎತ್ತಲಾಗಿದೆ ಎನ್ನುವುದು ಖೇದಕರ ಎಂಬ ಬರಹವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಇನ್ನು, ಶಾಸಕಿ ವಿಮಾನ ನಿಲ್ದಾಣಕ್ಕೆ ಸ್ವಾಗತ ಎನ್ನುವಾಗ ಅಲಗೇರಿಯ ಸ್ವಾತಂತ್ರ್ಯ ಹೋರಾಟಗಾರರ ಭೂಮಿ ಕಾಣಲಿಲ್ಲ, ಈಗ ಮಾತ್ರ ಕಾಣುತ್ತಿದೆಯೇ? ಅಲಗೇರಿ, ಭಾವಿಕೇರಿ ಹಾಗೂ ಬೆಲೇಕೇರಿ ಸುತ್ತಮುತ್ತಲ ಪ್ರದೇಶದಲ್ಲೂ ನೂರಾರು ಎಕರೆ ಕೃಷಿ ಭೂಮಿ, ಮನೆ- ಮಠದ ಜೊತೆಗೆ ಹತ್ತಾರು ಎಕರೆ ಗೋಮಾಳ ಜಾಗ ಹೋಗುವುದು ಶಾಸಕರ ಗಮನಕ್ಕೆ ಬರಲಿಲ್ಲವೇ? ಎಂದು ಪ್ರಶ್ನಿಸಲಾಗಿದೆ.
ದುಡಿಮೆಯನ್ನೇ ನಂಬಿ ಬದುಕುವ ಹಾಲಕ್ಕಿ ಜನಾಂಗದ ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮು ಗೌಡ ವಿಮಾನ ನಿಲ್ದಾಣ ಯೋಜನೆಯನ್ನು ವಿರೋಧಿಸಿ ಪ್ರತಿಭಟಿಸಿದರೂ, ಅವರ ಧ್ವನಿಯನ್ನು ಗುರುತಿಸದ ಶಾಸಕಿಯ ನಡೆ ತೀವ್ರ ಖಂಡನೀಯವಾದದ್ದು ಎಂದು ಬರಹದಲ್ಲಿ ಉಲ್ಲೇಖಿಸಲಾಗಿದೆ.












Click it and Unblock the Notifications