ತನಗೆ ಇಷ್ಟವಿಲ್ಲದೇ ಪ್ರೀತಿಸಿ ಮದುವೆ: ಮಗಳನ್ನೇ ಅಪಹರಿಸಿದ ತಾಯಿ
ಕಾರವಾರ, ಡಿಸೆಂಬರ್ 26: ತನಗೆ ಇಷ್ಟವಿಲ್ಲದೇ ಪ್ರೀತಿಸಿ ಮದುವೆಯಾಗಿದ್ದಕ್ಕೆ ತಾಯಿಯೇ ಮಗಳನ್ನು ಅಪಹರಿಸಿ ಪರಾರಿಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಶನಿವಾರ ವರದಿಯಾಗಿದೆ.
ರುತಿಕಾ ಎಂಬ ಯುವತಿ ಶಿರಸಿಯ ಬಸವೇಶ್ವರ ನಗರದ ಮಣಿಕಂಠ ಎಂಬ ಯುವಕನ್ನು ಪ್ರೀತಿಸಿ ಕೆಲವು ದಿನದ ಹಿಂದೆ ವಿವಾಹವಾಗಿದ್ದಳು. ಈ ಬಗ್ಗೆ ಶಿರಸಿ ನಗರದಲ್ಲಿ ಬ್ಯೂಟಿಪಾರ್ಲರ್ ನಡೆಸುತಿದ್ದ ಆಕೆಯ ತಾಯಿ ರೂಪ ಶಿರ್ಸಿಕರ್ ಗೆ ಇಷ್ಟವಿರಲಿಲ್ಲ.
ಮಗಳು ತನ್ನ ಮಾತು ಕೇಳದೇ ಬೇರೆ ಯುವಕನನ್ನು ವಿವಾಹವಾಗಿದ್ದಕ್ಕೆ ಕುಪಿತಗೊಂಡ ಈಕೆ, ಶನಿವಾರ ಬೆಳಗ್ಗೆ ತನ್ನ ತಾಯಿ ಹಾಗೂ ಮೂರು ಜನ ಯುವಕರೊಂದಿಗೆ ಬಸವೇಶ್ವರ ನಗರದಲ್ಲಿದ್ದ ರುತಿಕಾ ಮನೆಗೆ ಏಕಾಏಕಿ ಧಾವಿಸಿದ್ದಾಳೆ. ಈ ವೇಳೆ ಮನೆಯಲ್ಲಿದ್ದ ಎಲ್ಲರಿಗೂ ಪೆಪ್ಪರ್ ಸ್ಪ್ರೇ ಯನ್ನು ಮುಖಕ್ಕೆ ಎರಚಿ, ಮಗಳನ್ನು ಆಕೆಯ ಗಂಡನ ಎದುರೇ ತಾನು ತಂದಿದ್ದ ಕಾರಿನಲ್ಲಿ ಅಪಹರಿಸಿ ಕರೆದೊಯ್ದಿದ್ದಾಳೆ.

ಈ ಘಟನೆ ಸಂಬಂಧ ಶಿರಸಿ ಮಾರುಕಟ್ಟೆ ಠಾಣೆಯಲ್ಲಿ ಯುವತಿ ಪತಿ ಮಣಿಕಂಠ ಅವರು, ಪತ್ನಿ ಅಪಹರಣದ ಬಗ್ಗೆ ದೂರು ನೀಡಿದ್ದಾರೆ. ಇನ್ನು ಅಪಹರಣ ಮಾಡಿದ ರೂಪ ಮೊಬೈಲ್ ಸ್ವಿಚ್ಡ್ ಆಫ್ ಮಾಡಿ ಕುಟುಂಬದೊಂದಿಗೆ ಪರಾರಿಯಾಗಿದ್ದು, ಈಕೆಯ ಹುಡುಕಾಟ ನಡೆಸಲಾಗುತ್ತಿದೆ.












Click it and Unblock the Notifications