ಕಾರವಾರ: ಸಮಯಕ್ಕೆ ಸರಿಯಾಗಿ ಸಿಗದ ವೆಂಟಿಲೇಟರ್, 3 ತಿಂಗಳ ಮಗು ಸಾವು, ಆಕ್ರಂದನ
ಕಾರವಾರ, ಜುಲೈ, 20: ವೆಂಟಿಲೇಟರ್, ಆಂಬ್ಯುಲೆನ್ಸ್ ಸಮಯಕ್ಕೆ ಸರಿಯಾಗಿ ಸಿಗದ ಹಿನ್ನೆಲೆ ಮೂರು ತಿಂಗಳ ಹಸುಗೂಸೊಂದು ಸಾವನ್ನಪ್ಪಿರುವ ಮನಕಲಕುವ ಘಟನೆ ಕಾರವಾರ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದಿದೆ.
ಸಮಯಕ್ಕೆ ಸರಿಯಾಗಿ ವೆಂಟಿಲೇಟರ್ ಸಿಗದ ಹಿನ್ನೆಲೆ ಉತ್ತರ ಕನ್ನಡ ಜಿಲ್ಲೆಯ ಕಿನ್ನರ ಮೂಲದ ರಾಜೇಶ್ ಎನ್ನುವವರ ಮಗು ಸಾವನ್ನಪ್ಪಿದೆ. ಐದು ವರ್ಷದ ನಂತರ ಇವರಿಗೆ ಮಗು ಜನನವಾಗಿದ್ದು, ಕಫಾ ಹಿನ್ನೆಲೆಯಲ್ಲಿ ಈ ಮಗುವನ್ನು ಕಾರವಾರ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ನಂತರ ಇಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸೂಚಿಸಲಾಗಿತ್ತು. ಈ ವೇಳೆ ಉಡುಪಿಯ ಖಾಸಗಿ ಆಸ್ಪತ್ರೆಗೆ ಸಾಗಿಸಲು ವೆಂಟಿಲೇಟರ್, ಅಂಬ್ಯುಲೆನ್ಸ್ ಅಭಾವ ಎದುರಾಗಿದೆ.

ನಂತರ ಮಗುವಿನ ಪೊಷಕರು ಉಡುಪಿಯಿಂದ ವೆಂಟಿಲೇಟರ್ ತರಿಸಲು ಮುಂದಾಗಿದ್ದಾರೆ. ಆದರೆ ಅಂಬ್ಯುಲೆನ್ಸ್ ಬರುವ ಮುನ್ನ ಪುಟ್ಟ ಕಂದಮ್ಮ ಮೃತಪಟ್ಟಿದ್ದು, ಇದೀಗ ಆಸ್ಪತ್ರೆ ಮುಂದೆ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನು ಸ್ಥಳಕ್ಕೆ ಕಾರವಾರ ನಗರ ಠಾಣಾ ಪೊಲೀಸರು ಭೇಟಿ ನೀಡಿ ಘಟನೆ ಬಗ್ಗೆ ಮಾಹಿತಿ ಕಲೆಹಾಕಿದ್ದಾರೆ.
ಸೂಕ್ತ ಪರಿಹಾರ ನೀಡುವಂತೆ ಸೂಚನೆ
ಹಾಗೆಯೇ ಇತ್ತೀಚೆಗಷ್ಟೇ ದೇವದುರ್ಗ ತಾಲೂಕಿನ ರೇಖಲಮರಡಿ ಬಳಿಯ ಗೊರೆಬಾಳ ಗ್ರಾಮದಲ್ಲಿ ಕಲುಷಿತ ನೀರು ಕುಡಿದು ಅಸ್ವಸ್ಥಗೊಂಡವರಿಗೆ ಸೂಕ್ತ ಚಿಕಿತ್ಸೆ ಕೊಡಿಸಿ. ಹಾಗೂ ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆದೇಶಿಸಿದ್ದರು.
ತಕ್ಷಣ ಘಟನಾ ಸ್ಥಳಕ್ಕೆ ಭೇಟಿ ನೀಡಿ ಸಮಗ್ರ ಪರಿಶೀಲನೆ ಮಾಡಿ, ನೀರಿನ ಸ್ಯಾಂಪಲ್‌ಗಳನ್ನು ಲ್ಯಾಬ್‌ಗೆ ಕಳುಹಿಸಿ ವರದಿ ತರಿಸಿಕೊಳ್ಳಬೇಕು. ವರದಿಯ ಆಧಾರದ ಮೇರೆಗೆ ಗ್ರಾಮಸ್ಥರ ಆರೋಗ್ಯ ತಪಾಸಣೆ ನಡೆಸಿ ಅಗತ್ಯ ಚಿಕಿತ್ಸೆಗೆ ಕ್ರಮವಹಿಸಬೇಕು. ಹಾಗೆಯೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಿ, ವಿಷಪೂರಿತ ನೀರಿನ ಮೂಲಗಳನ್ನು ಬಂದ್ ಮಾಡಬೇಕು. ಇನ್ನು ಅಧಿಕಾರಿಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಮೂಲಕ ಇಂತಹ ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದ್ದರು.
ದೇವದುರ್ಗ ತಾಲೂಕಿನ ರೇಖಲಮರಡಿ ಗ್ರಾಮದಲ್ಲಿ ಕಲುಷಿತ ನೀರು ಕುಡಿದು ಗ್ರಾಮದ ಜನರಿಗೆ ಎರಡು ದಿನದಿಂದ ವಾಂತಿ-ಭೇದಿ ಕಾಣಿಸಿಕೊಂಡಿದ್ದು, ಹಲವರು ಅಸ್ವಸ್ಥರಾಗಿದ್ದರು. ಆರೋಗ್ಯ ಪರೀಕ್ಷೆಗಾಗಿ ವೈದ್ಯರ ತಂಡ ಶುಕ್ರವಾರ ಮತ್ತು ಶನಿವಾರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶೇಷ ತುರ್ತು ಚಿಕಿತ್ಸಾ ಘಟಕ ಸ್ಥಾಪಿಸಿ, ಕಳೆದು ಎರಡು ದಿನದಿಂದ ಅಲ್ಲಿಯೇ ಬೀಡು ಬಿಟ್ಟಿತ್ತು.
ಗ್ರಾಮದಲ್ಲಿ ಪಂಚಾಯಿತಿ ರಚನೆಯ ನಂತರ ಇಲ್ಲಿನ ಸಿಬ್ಬಂದಿ ಗ್ರಾಮದಲ್ಲಿನ ಯಾವುದೇ ಚರಂಡಿಗಳ ಹೂಳೆತ್ತುವ ಕಾರ್ಯಕ್ಕೆ ಮುಂದಾಗಿಲ್ಲ. ಮೂರು ವರ್ಷದ ಹಿಂದೆ ಗ್ರಾಮದ ಯುವಕರು ಹೂಳೆತ್ತುವಂತೆ ಪಿಡಿಓಗೆ ದೂರು ಸಹ ನೀಡಿದ್ದಾರೆ. ಆದರೂ ಗ್ರಾಮದಲ್ಲಿ ನೀರು ಸರಬರಾಜು ಮಾಡುತ್ತಿದ್ದ ಬೆಟ್ಟದ ಮೇಲಿನ ನೀರಿನ ಟ್ಯಾಂಕ್ ಕಳೆದ ನಾಲ್ಕು ವರ್ಷದಿಂದ ಕ್ಲೀನ್ ಮಾಡಿಸಿಲ್ಲ ಎನ್ನುವ ಆರೋಪಗಳು ಕೇಳಿಬಂದಿದ್ದವು.
ಕಡೆ ಪಕ್ಷ ಗಬ್ಬು ನಾರುತ್ತಿದ್ದ ಚರಂಡಿಗಳು, ನೀರಿನ ಟ್ಯಾಂಕ್‌ಗಳಿಗೆ ಬ್ಲಿಚಿಂಗ್ ಪೌಡರ್ ಕೂಡ ಹಾಕಿಲ್ಲ. ಕುಡಿಯುವ ನೀರಿನ ಪೈಪ್‌ಲೈನ್ ಹೊಡೆದು ಚರಂಡಿ ನೀರು ಸೇರುತ್ತಿರುವ ಬಗ್ಗೆ ಪಿಡಿಓ ಗಮನಕ್ಕೆ ತಂದರೂ ನಿರ್ಲಕ್ಷ ವಹಿಸಿದ್ದರು. ಇದರಿಂದ ಗ್ರಾಮದ ಜನರು ಸಾವು ಬದುಕಿನ ಮಧ್ಯೆ ಹೋರಾಡುವ ಪರಿಸ್ಥಿತಿ ನಿರ್ಮಿಸಿದ್ದಾರೆ ಎಂದು ಗ್ರಾಮಸ್ಥರು ಗ್ರಾಮ ಪಂಚಾಯಿತಿಯ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.












Click it and Unblock the Notifications