Karnataka Election: ಮಲ್ಲಿಕಾರ್ಜುನ ಖರ್ಗೆ 'ವಿಷದ ಸರ್ಪ'ದ ಹೇಳಿಕೆ ಕಾಂಗ್ರೆಸ್‌ಗೇ ಕಚ್ಚಲಿದೆ; ಝೀ ನ್ಯೂಸ್ ಸಮೀಕ್ಷೆ
ಝೀ ನ್ಯೂಸ್-ಮ್ಯಾಟ್ರಿಜ್ ಬಿಡುಗಡೆ ಮಾಡಿರುವ ಅಭಿಪ್ರಾಯ ಸಂಗ್ರಹದಲ್ಲಿ ಮುಂಬರುವ 2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷ ಸ್ಪಷ್ಟ ಬಹುಮತ ಪಡೆಯದಿದ್ದರೂ, ಆಡಳಿತಾರೂಢ ಬಿಜೆಪಿ ಪಕ್ಷ 103ರಿಂದ 115 ಸ್ಥಾನಗಳೊಂದಿಗೆ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ತಿಳಿದುಬಂದಿದೆ.
ಝೀ ನ್ಯೂಸ್-ಮ್ಯಾಟ್ರಿಜ್ ಸಮೀಕ್ಷೆ ಪ್ರಕಾರ, ವಿಪಕ್ಷ ಕಾಂಗ್ರೆಸ್ 79ರಿಂದ 91 ಸ್ಥಾನಗಳನ್ನು ಪಡೆಯಲಿದೆ. ಇನ್ನು ಈ ಸಮೀಕ್ಷೆಯಲ್ಲಿ ಜನತಾ ದಳ (ಜಾತ್ಯತೀತ) 26ರಿಂದ 36 ಸ್ಥಾನಗಳೊಂದಿಗೆ ಕಿಂಗ್ ಮೇಕರ್ ಆಗಿ ಹೊರಹೊಮ್ಮಲಿದೆ ಎಂದು ತಿಳಿಸಿದೆ.

ಝೀ ನ್ಯೂಸ್-ಮ್ಯಾಟ್ರಿಜ್ ಸಮೀಕ್ಷೆಯಲ್ಲಿ ಕರ್ನಾಟಕ ಜನರು ಭಾರತೀಯ ಜನತಾ ಪಕ್ಷಕ್ಕೆ ಶೇ.42ರಷ್ಟು ಮತಗಳನ್ನು ನೀಡಿದರೆ, ಕಾಂಗ್ರೆಸ್‌ಗೆ ಸುಮಾರು ಶೇ.40ರಷ್ಟು ನೀಡಲಿದ್ದಾರೆ. ಇದೇ ವೇಳೆ ಜೆಡಿಎಸ್ ಶೇ.15ರಷ್ಟು ಮತಗಳನ್ನು ಗಳಿಸುವ ಸಾಧ್ಯತೆಯಿದ್ದು, ಇತರರು ಸುಮಾರು ಶೇ.3ರಷ್ಟು ಮತಗಳನ್ನು ಪಡೆಯಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಪ್ರಚಾರ ಮತ್ತು ಆಡಳಿತ ಈ ಚುನಾವಣೆಯಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದು ಸಮೀಕ್ಷೆ ಹೇಳಿದ್ದರೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯು ಕಾಂಗ್ರೆಸ್ ಪಕ್ಷದ ಕಾರ್ಯಕ್ಷಮತೆಯ ಮೇಲೆ ಹೆಚ್ಚು ಪ್ರಭಾವ ಬೀರುವುದಿಲ್ಲ ಎಂದು ತಿಳಿಸಿದೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನರೇಂದ್ರ ಮೋದಿಯವರ ಬಗ್ಗೆ ಹೇಳಿರುವ ವಿಷದ ಹಾವು ಹೇಳಿಕೆ ಬಿಜೆಪಿಗೆ ಲಾಭ ತಂದುಕೊಡಲಿದೆ ಎಂದು ಝೀ ನ್ಯೂಸ್-ಮ್ಯಾಟ್ರಿಜ್ ಸಮೀಕ್ಷೆ ಸೂಚಿಸಿದೆ. ಇತ್ತೀಚಿಗೆ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರಧಾನಿ ನರೇಂದ್ರ ಮೋದಿಗೆ ನಾಲಾಯಕ್ ಮಗ ಎಂದು ಟೀಕಿಸಿದ್ದಾರೆ.
ಇನ್ನು ಬಿಜೆಪಿ ಪಕ್ಷದಿಂದ ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜನರ ಆದ್ಯತೆಯ ಅಭ್ಯರ್ಥಿಯಾಗಿದ್ದರೆ, ನಂತರದ ಸ್ಥಾನದಲ್ಲಿ ಕಾಂಗ್ರೆಸ್‌ನ ಸಿದ್ದರಾಮಯ್ಯ ಇದ್ದರೆ, ಜೆಡಿಎಸ್‌ನ ಎಚ್.ಡಿ. ಕುಮಾರಸ್ವಾಮಿ ಮತ್ತು ಕಾಂಗ್ರೆಸ್‌ನ ಡಿ.ಕೆ. ಶಿವಕುಮಾರ್ ನಂತರದ ಸ್ಥಾನದಲ್ಲಿದ್ದಾರೆ ಎಂದು ಝೀ ನ್ಯೂಸ್-ಮ್ಯಾಟ್ರಿಜ್ ಅಭಿಪ್ರಾಯ ಸಂಗ್ರಹಣೆ ಹೇಳಿದೆ.

ಝೀ ನ್ಯೂಸ್-ಮ್ಯಾಟ್ರಿಜ್ ಸಮೀಕ್ಷೆಯಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳಿಂದ 1.80 ಲಕ್ಷ ಪುರುಷರು ಮತ್ತು 1.12 ಲಕ್ಷ ಮಹಿಳೆಯರಿಂದ ಅಭಿಪ್ರಾಯ ಸಂಗ್ರಹಿಸಿದೆ. ಸಮೀಕ್ಷೆಯ ಫಲಿತಾಂಶಗಳಲ್ಲಿ ಸಂಭವನೀಯ ಶೇ.5ರಷ್ಟು ದೋಷವನ್ನು ಸಮೀಕ್ಷೆದಾರರು ಒಪ್ಪಿಕೊಂಡಿದ್ದಾರೆ.
2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಈಗಾಗಲೇ ನಾಮಪತ್ರ ಸಲ್ಲಿಕೆ, ಪರಿಶೀಲನೆ ಮತ್ತು ನಾಮಪತ್ರ ವಾಪಸ್ ಪ್ರಕ್ರಿಯೆ ಕೊನೆಗೊಂಡಿದೆ. ಮೇ 10ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದರೆ, ಮೇ 13ರಂದು ಫಲಿತಾಂಶ ಪ್ರಕಟವಾಗಲಿದ್ದು, ಬಳಿಕ ಯಾವ ಪಕ್ಷ ರಾಜ್ಯದಲ್ಲಿ ಸರ್ಕಾರ ರಚಿಸಲಿದೆ ಎಂಬ ಕುತೂಹಲ ಮೂಡಿದೆ.












Click it and Unblock the Notifications