ಡಿಸಿಎಂ ಸ್ಥಾನ ಕೊಟ್ಟರೆ ರೆಡಿ ಎಂದ ಜಮೀರ್, ಸಿಎಂ ಕುರ್ಚಿ ಬಗ್ಗೆ ಏನಂದ್ರು?
ರಾಜ್ಯ ಕಾಂಗ್ರೆಸ್‌ನಲ್ಲಿ ಸದ್ಯ ಸಿಎಂ ಬದಲಾವಣೆ, ಸಚಿವರ ಬದಲಾವಣೆಯದ್ದೇ ಬಿರುಸಿನ ಚರ್ಚೆಗಳು ನಡೆಯುತ್ತಿವೆ. ಸಿದ್ದರಾಮಯ್ಯ ಅವರು ನಾನೇ ಪೂರ್ಣಾವಧಿ ಸಿಎಂ ಎಂದು ಹಲವು ವೇದಿಕೆಗಳಲ್ಲಿ ಹೇಳುತ್ತಾ ಬಂದಿದ್ದಾರೆ. ಇತ್ತ ಡಿ.ಕೆ.ಶಿವಕುಮಾರ್ ಇದೇ ತಿಂಗಳಿನಲ್ಲಿ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸುವುದು ಫಿಕ್ಸ್ ಎಂಬ ಮಾತುಗಳು ಸಹ ಕೇಳಿಬರುತ್ತಿದೆ. ಮತ್ತೊಂದೆಡೆ ದಲಿತ ಮುಖ್ಯಮಂತ್ರಿ ಆಕಾಂಕ್ಷಿಗಳು ಕೂಡ ರೇಸ್‌ಗೆ ಇಳಿದಿದ್ದಾರೆ. ಈಗ ಡಿಸಿಎಂ ಕುರ್ಚಿಗೂ ಕಿತ್ತಾಟ ಶುರುವಾದಂತಿದ್ದು, ಈ ಬಗ್ಗೆ ಸಚಿವ ಜಮೀರ್ ಅಹ್ಮದ್ ಖಾನ್ ಅಚ್ಚರಿ ಹೇಳಿಕೆ ನೀಡಿದ್ದಾರೆ.
ಸಿಎಂ ಬದಲಾವಣೆ ವಿಚಾರ ಮಾಧ್ಯಮಗಳ ಸೃಷ್ಟಿ. 2028ರವರೆಗೆ ಸಿದ್ದರಾಮಯ್ಯ ಅವರೇ ಸಿಎಂ ಆಗಿರುತ್ತಾರೆ. ಇದನ್ನು ಈಗಾಗಲೇ ಹಲವು ಕಡೆ ನಾನು ಹೇಳಿದ್ದೇನೆ. 2028ರವರೆಗೆ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ. ಖಾಲಿ ಇದ್ದರೆ ಮಾತ್ರ ಅದರ ಬಗ್ಗೆ ಚರ್ಚೆ ಮಾಡಬೇಕು. ಇಲ್ಲಿ ಯಾವ ಒಪ್ಪಂದವೂ ನಡೆದಿಲ್ಲ. ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ನಮ್ಮದು ಹೈಕಮಾಂಡ್ ಪಕ್ಷ. ನಾವು ಪಕ್ಷದ ಶಿಸ್ತಿನ ಸಿಪಾಯಿಗಳು. ಹೈಕಮಾಂಡ್ ಹಾಕಿದ ಗೆರೆಯನ್ನ ನಾವು ಯಾರೂ ದಾಟಲ್ಲ. ನನಗೆ ಉಮುಖ್ಯಮಂತ್ರಿ ಸ್ಥಾನ ಕೊಡಬೇಕು ಎಂದು ಹಲವರು ಹೇಳುತ್ತಿದ್ದಾರೆ. ಈ ಬಗ್ಗೆ ಆಸೆಯೂ ಇಟ್ಟುಕೊಂಡಿದ್ದಾರೆ. ಇದೆಲ್ಲವೂ ಸಹಜ. ಆದರೆ ಅದನ್ನು ಮಾಡಬೇಕಿರುವುದು ಹೈಕಮಾಂಡ್ ಮಾತ್ರ. ಹೈಕಮಾಂಡ್ ಯಾವ ಸ್ಥಾನ ಕೊಟ್ಟರೂ ನಿಭಾಯಿಸುತ್ತೇನೆ ಎಂದು ಜಮೀರ್ ಡಿಸಿಎಂ ಆಸೆ ಬಿಚ್ಚಿಟ್ಟಿದ್ದಾರೆ.
ಸಚಿವ ಸ್ಥಾನ ಬಿಡೋಕೂ ರೆಡಿ
ನಾನು ಪಕ್ಷದ ಶಿಸ್ತಿನ ಸಿಪಾಯಿ. ಈಗಾಗಲೇ ಪಕ್ಷ ನನಗೆ ಎರಡೂವರೆ ವರ್ಷ ಮಂತ್ರಿಯಾಗಲು ಅವಕಾಶ ಮಾಡಿಕೊಟ್ಟಿದೆ. ನೀನು ಪಕ್ಷದ ಕೆಲಸ ಮಾಡು ಅಂತ ಹೈಕಮಾಂಡ್ ಹೇಳಿದ್ರೆ ನಾನು ಅದಕ್ಕೂ ಸಿದ್ಧ ಇದ್ದೇನೆ. ಸಚಿವ ಸ್ಥಾನದಿಂದ ಕೆಳಗಿಳಿದು ಪಕ್ಷದ ಕೆಲಸ ಮಾಡು ಅಂದ್ರೂ ಮಾಡ್ತೀನಿ ಎಂದು ಜಮೀರ್ ಹೇಳಿದ್ದಾರೆ.
ಇತ್ತೀಚೆಗೆ ಸುದ್ದಿಪತ್ರಿಕೆಯೊಂದರಲ್ಲಿ ಡಿ.ಕೆ.ಶಿವಕುಮಾರ್ ಅವರು ಇದೇ ತಿಂಗಳು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಾರೆ ಎಂದು ವರದಿ ಪ್ರಕಟಗೊಂಡಿತ್ತು. ಇದರಲ್ಲಿ ಪ್ರಮಾಣವಚನದ ದಿನಾಂಕ ಕೂಡ ರಿವೀಲ್ ಆಗಿತ್ತು. ಈಗಾಗಲೇ ಡಿಕೆ ಶಿವಕುಮಾರ್ ಅವರು ಹೈಕಮಾಂಡ್ ನಾಯಕರನ್ನ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಇದೇ ತಿಂಗಳು ಸಿಎಂ ಬದಲಾಗ್ತಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಈ ಸುದ್ದಿಯ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಕೂಡ ಆಗಿತ್ತು.
ಇತ್ತ ಕಾಂಗ್ರೆಸ್‌ನ ಪ್ರಬಲ ನಾಯಕರ ಬೆಂಬಲಿಗರು ತಮ್ಮ ನಾಯಕರನ್ನೇ ಮುಂದಿನ ಸಿಎಂ ಎಂದು ಘೋಷಣೆಗಳನ್ನು ಕೂಗಲು ಶುರು ಮಾಡಿದ್ದಾರೆ. ಕೆ.ಎಚ್.ಮುನಿಯಪ್ಪ, ಡಿಕೆ ಶಿವಕುಮಾರ್, ರಾಮಲಿಂಗಾರೆಡ್ಡಿ, ಎಂಬಿ ಪಾಟೀಲ್, ಸತೀಶ್ ಜಾರಕಿಹೊಳಿ, ಜಿ.ಪರಮೇಶ್ವರ್ ಸೇರಿದಂತೆ ಹಲವರು ಹೆಸರು ಸಿಎಂ ರೇಸ್‌ನಲ್ಲಿದೆ. ರಾಮಲಿಂಗಾರೆಡ್ಡಿ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಈ ಸುಳ್ಳು ಸುದ್ದಿಗಳನ್ನು ನಂಬಬೇಡಿ ಎಂದು ಗೊಂದಲಗಳಿಗೆ ತೆರೆ ಎಳೆದಿದ್ದಾರೆ.












Click it and Unblock the Notifications