ಕೆ.ಸಿ.ವೇಣುಗೋಪಾಲ್ ಜೊತೆ ಜಮೀರ್ ರಹಸ್ಯ ಮಾತುಕತೆ!
ಬೆಂಗಳೂರು, ಡಿಸೆಂಬರ್ 07 : ಜೆಡಿಎಸ್ ಬಂಡಾಯ ಶಾಸಕ ಜಮೀರ್ ಅಹಮದ್ ಖಾನ್ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರನ್ನು ಭೇಟಿ ಮಾಡಿದರು. ಬಂಡಾಯ ಶಾಸಕರು ಕಾಂಗ್ರೆಸ್ ಪಕ್ಷ ಸೇರುವ ದಿನಾಂಕ ಬಹುತೇಕ ಅಂತಿಮವಾಗಿದೆ.
ಎರಡು ದಿನಗಳಿಂದ ಕೆ.ಸಿ.ವೇಣುಗೋಪಾಲ್ ಅವರು ಕೆಪಿಸಿಸಿ ಕಚೇರಿಯಲ್ಲಿ ಚುನಾವಣೆ ಸಿದ್ಧತೆಗಳ ಕುರಿತು ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ. ಬುಧವಾರ ರಾತ್ರಿ ಜಮೀರ್ ಅಹಮದ್ ಖಾನ್ ಕುಮಾರಕೃಪಾ ಅತಿಥಿ ಗೃಹದಲ್ಲಿ ವೇಣುಗೋಪಾಲ್ ಅವರನ್ನು ಭೇಟಿ ಮಾಡಿದರು.
ಕೆ.ಸಿ.ವೇಣುಗೋಪಾಲ್ ಅವರ ಸೂಚನೆಯಂತೆಯೇ ಜಮೀರ್ ಅಹಮದ್ ಖಾನ್ ಅವರು ಭೇಟಿ ಮಾಡಿದ್ದರು. ಈ ಭೇಟಿಯ ಸಮಯದಲ್ಲಿ ಜೆಡಿಎಸ್ ಪಕ್ಷದಿಂದ ಅಮಾನತುಗೊಂಡ ಶಾಸಕರು ಕಾಂಗ್ರೆಸ್ ಸೇರುವ ದಿನಾಂಕದ ಬಗ್ಗೆ ಚರ್ಚೆಯಾಗಿದೆ. ಶೀಘ್ರದಲ್ಲೇ ಬಂಡಾಯ ಶಾಸಕರು ದಿನಾಂಕ ಘೋಷಣೆ ಮಾಡುವ ಸಾಧ್ಯತೆ ಇದೆ.
ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿಸಿದ ಕಾರಣಕ್ಕೆ ಜೆಡಿಎಸ್ ಶಾಸಕರನ್ನು ಅಮಾನತು ಮಾಡಿತ್ತು. ಈ ಶಾಸಕರು ಈಗ ಕಾಂಗ್ರೆಸ್ ಸೇರಿ ಮುಂದಿನ ಚುನಾವಣೆಗೆ ಅದೇ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ...

ಅಪರೇಷನ್ ಕಮಲದ ಭೀತಿ
ಜೆಡಿಎಸ್ ಪಕ್ಷದಿಂದ ಅಮಾನತುಗೊಂಡಿರುವ ಶಾಸಕರು ಕಾಂಗ್ರೆಸ್ ಸೇರುವುದು ತಡವಾದರೆ ಬಿಜೆಪಿ ಅವರನ್ನು ಸೆಳೆಯಬಹುದು ಎಂಬ ಸೂಚನೆ ಹಿನ್ನಲೆಯಲ್ಲಿ ಕೆ.ಸಿ.ವೇಣುಗೋಪಾಲ್ ಅವರು ಜಮೀರ್ ಅಹಮದ್ ಖಾನ್ ಜೊತೆ ಮಾತುಕತೆ ನಡೆಸಿದ್ದಾರೆ.

ಸಿ.ಪಿ.ಯೋಗೇಶ್ವರ ನೇತೃತ್ವ
ಚನ್ನಪಟ್ಟಣದ ಶಾಸಕ ಸಿ.ಪಿ.ಯೋಗೇಶ್ವರ ಅವರು ಈಗಾಗಲೇ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾರೆ. ಅಕ್ಕ-ಪಕ್ಕದ ಶ್ರೀರಂಗಪಟ್ಟಣ (ರಮೇಶ್ ಬಂಡಿಸಿದ್ದೇಗೌಡ), ಮಾಗಡಿ (ಬಾಲಕೃಷ್ಣ) ಅವರನ್ನು ಯೋಗೇಶ್ವರ ಅವರು ಬಿಜೆಪಿಗೆ ಸೆಳೆಯಬಹುದು ಎಂಬ ಸುದ್ದಿ ಹಿನ್ನಲೆಯಲ್ಲಿ ಈ ಭೇಟಿ ನಡೆಸಿದೆ.

ಚೆಲುವರಾಯಸ್ವಾಮಿ ಹೇಳುವುದೇನು?
ನಾಗಮಂಗಲ ಶಾಸಕ ಎನ್.ಚೆಲುವರಾಯಸ್ವಾಮಿ ಅವರು ಎರಡು ದಿನಗಳ ಹಿಂದೆ, 'ಬಂಡಾಯ ಶಾಸಕರು ಕಾಂಗ್ರೆಸ್ ಸೇರುವುದು ಖಚಿತ. ರಾಹುಲ್ ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್ ಸೇರುತ್ತೇವೆ. ಆದರೆ, ದಿನಾಂಕ ಇನ್ನೂ ನಿಗದಿಯಾಗಿಲ್ಲ' ಎಂದು ಹೇಳಿದ್ದರು.

ಯಾವ-ಯಾವ ಶಾಸಕರು?
ಕಾಂಗ್ರೆಸ್ ಸೇರಲಿರುವ ಶಾಸಕರು ರಮೇಶ ಬಂಡಿಸಿದ್ದೇಗೌಡ (ಶ್ರೀರಂಗಪಟ್ಟಣ), ಜಮೀರ್ ಅಹಮದ್ ಖಾನ್ (ಚಾಮರಾಜಪೇಟೆ), ಎಚ್.ಸಿ.ಬಾಲಕೃಷ್ಣ (ಮಾಗಡಿ), ಚೆಲುವರಾಯಸ್ವಾಮಿ (ನಾಗಮಂಗಲ), ಇಕ್ಬಾಲ್ ಅನ್ಸಾರಿ (ಗಂಗಾವತಿ), ಅಖಂಡ ಶ್ರೀನಿವಾಸಮೂರ್ತಿ (ಪುಲಿಕೇಶಿ ನಗರ, ಬೆಂಗಳೂರು) ಶಾಸಕ ಭೀಮಾ ನಾಯಕ್ (ಹಗರಿಬೊಮ್ಮನಹಳ್ಳಿ).












Click it and Unblock the Notifications