ಯುವನಿಧಿ ನೋಂದಣಿಗೆ ಯವ ಸಮೂಹ ಹಿಂದೇಟು ಕಾರಣವೇನು ?
Yuva Nidhi Scheme: ಯುವನಿಧಿ ಯೋಜನೆಗೆ ನೋಂದಣಿ ಮಾಡಿಕೊಳ್ಳುವುದಕ್ಕೆ ರಾಜ್ಯದ ಯುವಕ ಹಾಗೂ ಯುವತಿಯರು ಹಿಂದೇಟು ಹಾಕುತ್ತಿದ್ದಾರೆ. ರಾಜ್ಯದಲ್ಲಿ ನಿರುದ್ಯೋಗಿ ಅಥವಾ ಉದ್ಯೋಗ ಹುಡುಕುತ್ತಿರುವವರಿಗಾಗಿ ಈ ಯೋಜನೆಯನ್ನು ಪರಿಚಯಿಸಲಾಗಿದೆ. ಆದರೆ, ಈ ಯೋಜನೆಗೆ ಉಳಿದ ಗ್ಯಾರಂಟಿ ಯೋಜನೆಗಳನ್ನು ಡಿಮ್ಯಾಂಡ್ ಬರುತ್ತಿಲ್ಲ ಎನ್ನಲಾಗಿದೆ. ಕರ್ನಾಟಕ ಕಾಂಗ್ರೆಸ್ ಸರ್ಕಾರವು ರಾಜ್ಯದಲ್ಲಿ ಐದು ಪ್ರಮುಖ ಗ್ಯಾರಂಟಿ ಯೋಜನೆಗಳನ್ನು ಪರಿಚಯಿಸಿತ್ತು. ಅದರಲ್ಲಿ ಯುವನಿಧಿ ಯೋಜನೆಯೂ ಒಂದಾಗಿದೆ. ರಾಜ್ಯ ಸರ್ಕಾರ ಯುವ ನಿಧಿ ಯೋಜನೆಗೆ ವಿಧಿಸಿರುವ ಕೆಲವು ಷರತ್ತುಗಳು ಸಹ ಈ ಯೋಜನೆಯಿಂದ ಯುವ ಸಮೂಹ ಹಿಂದುಳಿಯುವುದಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ ಎಂದೂ ಹೇಳಲಾಗಿದೆ.
ರಾಜ್ಯದ ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಯುವನಿಧಿ ಯೋಜನೆಯಲ್ಲಿ ಮಹತ್ವದ ಅಪ್‌ಡೇಟ್‌ವೊಂದು ಆಗಿದೆ. ಯುವನಿಧಿ ನೋಂದಣಿ ಮಾಡಿಸುವುದಕ್ಕೆ ವಿಶೇಷ ಅಭಿಯಾನವನ್ನು ನಡೆಸಲಾಗುತ್ತಿದೆ. ನಿರುದ್ಯೋಗ ಯುವಕ ಹಾಗೂ ಯುವತಿಯರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಯುವನಿಧಿ ಯೋಜನೆಯನ್ನು ಜಾರಿ ಮಾಡಲಾಗಿದೆ. ಈ ಯೋಜನೆಯ ಸಮಗ್ರ ಜಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚನೆ ಕೊಟ್ಟಿದ್ದಾರೆ. ಕರ್ನಾಟಕದ ಎಲ್ಲಾ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖಾ ವ್ಯಾಪ್ತಿಗಳಲ್ಲಿ ಜನವರಿ 20ರವರೆಗೆ ಯುವನಿಧಿ ವಿಶೇಷ ನೋಂದಣಿ ಅಭಿಯಾನ ನಡೆಸುವುದಕ್ಕೆ ನಿರ್ಧರಿಸಲಾಗಿದೆ. ಈ ನಿಟ್ಟಿನಲ್ಲಿ ಕಾಲೇಜು ಶಿಕ್ಷಣ ಇಲಾಖೆ ಸುತ್ತೋಲೆ ಆದೇಶ ಹೊರಡಿಸಿದೆ. ಆದರೆ, ಈ ರೀತಿ ಸುತ್ತೋಲೆ ಹೊರಡಿಸುವುದಕ್ಕೆ ಮುಖ್ಯ ಕಾರಣ ಉದ್ದೇಶಿತ ಯೋಜನೆಗೆ ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಆಗದೆ ಇರುವುದು.

ಯುವ ನಿಧಿಗೆ ದಾಖಲೆ: ಯುವ ನಿಧಿಗೆ ಪ್ರತಿ ತಿಂಗಳೂ ಅರ್ಜಿ ಸಲ್ಲಿಸಬೇಕು ಎನ್ನುವ ನಿಯಮಗಳಿವೆ. ಅಲ್ಲದೆ ಯಾವುದೇ ಪದವಿಯನ್ನು ಮುಗಿಸಿ ಆರು ತಿಂಗಳಾದರೂ ಉದ್ಯೋಗ ಸಿಗದೆ ಇದ್ದವರಿಗೆ ಈ ಯೋಜನೆ ಜಾರಿಯಾಗಲಿದೆ. ಆದರೆ, ಸರ್ಕಾರ ಇದೀಗ ಕಾಲೇಜುಗಳಲ್ಲೇ ನೋಂದಣಿಗೆ ಅವಕಾಶ ಮಾಡುತ್ತಿರುವುದಾಗಿ ಹೇಳಿದೆ. ಇನ್ನು ಈ ಯೋಜನೆಗೆ ಪ್ರತಿ ತಿಂಗಳೂ ದಾಖಲೆ ಸಲ್ಲಿಸಬೇಕು. ಉದ್ಯೋಗ ಇಲ್ಲ ಎನ್ನುವುದಕ್ಕೆ ದಾಖಲೆ ಕೊಡಬೇಕು ಹಾಗೂ ಉದ್ಯೋಗ ಸಿಕ್ಕ ಮೇಲೆ ಉದ್ಯೋಗ ಸಿಕ್ಕಿದೆ ಎನ್ನುವುದಕ್ಕೆ ದಾಖಲೆ ಸಲ್ಲಿಕೆ ಮಾಡಬೇಕು ಎನ್ನುವುದು ಸೇರಿದಂತೆ ಹಲವು ಷರತ್ತುಗಳಿವೆ. ಹೀಗಾಗಿ, ಈ ಯೋಜನೆಗೆ ನೋಂದಣಿ ಆಗಲು ಯುವಕರು ಹಿಂದೇಟು ಹಾಕುತ್ತಿದ್ದಾರೆ ಎಂದು ಹೇಳಲಾಗಿದೆ.
ಇದು ಕರ್ನಾಟಕ ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿದೆ. ಇದೀಗ 2022 -23 ಹಾಗೂ 2023-24ನೇ ಸಾಲಿನಲ್ಲಿ ಸ್ನಾತಕ ಪದವಿ, ಸ್ನಾತಕೋತ್ತರ ಪದವಿ ಹಾಗೂ ಡಿಪ್ಲೋಮಾ ಪದವಿ ಉತ್ತೀರ್ಣರಾಗಿರುವ, ಉದ್ಯೋಗ ಸಿಗದೆ ಇರುವ ಅರ್ಹ ಅಭ್ಯರ್ಥಿಗಳು ಸೇವಾಸಿಂಧು ಪೋರ್ಟಲ್‌ನ ಲಿಂಕ್ https://sevasindhugs.Karnataka.gov.inನಲ್ಲಿ ನೊಂದಾಯಿಸಿಕೊಳ್ಳುವುದಕ್ಕೆ ಜನವರಿ 6 ರಿಂದ 20ರ ವರೆಗೆ ವಿಶೇಷ ನೋಂದಣಿ ಅಭಿಯಾನವನ್ನು ಪ್ರಾರಂಭಿಸಲಾಗಿದೆ. ಅರ್ಹ ವಿದ್ಯಾರ್ಥಿಗಳು ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.

ಈ ಹಿಂದೆಯೇ ಈ ಯೋಜನೆ ನೋಂದಣಿಗೆ ಅವಕಾಶ ಕಲ್ಪಿಸಲಾಗಿತ್ತು. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ನೋಂದಣಿ ನಡೆದಿಲ್ಲ. ಹೀಗಾಗಿ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ ಎಂದು ಕಾಲೇಜು ಶಿಕ್ಷಣ ಇಲಾಖೆ ಹೇಳಿದೆ. ಪದವಿ ಉತ್ತೀರ್ಣರಾಗಿ 180 ದಿನವಾದರೂ ಉದ್ಯೋಗ ಸಿಗದೆ ಇರುವ ಹಾಗೂ ಉನ್ನತ ಶಿಕ್ಷಣಕ್ಕೆ ದಾಖಲಾಗದೆ ಇರುವವರು ಮತ್ತು ಸ್ವಯಂ ಉದ್ಯೋಗ ಇಲ್ಲದೆ ಇರುವ ಅಭ್ಯರ್ಥಿಗಳು ಇದಕ್ಕೆ ನೋಂದಾಯಿಸಿಕೊಳ್ಳಲು ಅವಕಾಶ ಕೊಡಲಾಗಿದೆ.
ಇನ್ನು ಯುವನಿಧಿ ಯೋಜನೆಯಲ್ಲಿ ನೋಂದಣಿಯಾಗುವ ನಿರುದ್ಯೋಗಿ ಪದವೀಧರ ಹಾಗೂ ಸ್ನಾತಕೋತ್ತರ ಪದವೀಧರರಿಗೆ ತಲಾ 3,000 ರೂ., ಡಿಪ್ಲೋಮಾ ತೇರ್ಗಡೆ ಆಗಿರುವವರಿಗೆ 1,500 ರೂಪಾಯಿ ಮಾಸಿಕ ಭತ್ಯೆ ಕೊಡಲಾಗುತ್ತದೆ ಎಂದು ರಾಜ್ಯ ಸರ್ಕಾರವು ತಿಳಿಸಿದೆ.












Click it and Unblock the Notifications