ಯುವ ಸಮುದಾಯಕ್ಕೆ ಕಾಂಗ್ರೆಸ್ ಕೊಡುಗೆಗಳು; ಬಿಜೆಪಿಯ ಪಟ್ಟಿ!
ಬೆಂಗಳೂರು, ಡಿಸೆಂಬರ್ 26; ಕರ್ನಾಟಕದ ಕಾಂಗ್ರೆಸ್ ಸರ್ಕಾರ ನೀಡಿದ್ದ 5ನೇ ಗ್ಯಾರಂಟಿ ಯೋಜನೆ 'ಯುವನಿಧಿ'ಗೆ ಮಂಗಳವಾರ ಚಾಲನೆ ಸಿಕ್ಕಿದೆ. ಪದವೀಧರ ಹಾಗೂ ಡಿಪ್ಲೋಮಾ ಪದವೀಧರ ನಿರುದ್ಯೋಗಿ ಯುವಜನರಿಗೆ ಮಾಸಿಕ ನಿರುದ್ಯೋಗ ಭತ್ಯೆಯ ನೆರವು ನೀಡುವ ಯೋಜನೆ ಇದಾಗಿದೆ.
ಕಾಂಗ್ರೆಸ್ ಸರ್ಕಾರದ 5ನೇ ಗ್ಯಾರಂಟಿ 'ಯುವನಿಧಿ' ಯೋಜನೆಯ ನೋಂದಣಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಚಿವರು ಚಾಲನೆ ನೀಡಿದ್ದಾರೆ. ಇಂತಹ ಸಂದರ್ಭದಲ್ಲಿಯೇ ಪ್ರತಿಪಕ್ಷ ಬಿಜೆಪಿ ಟ್ವೀಟ್ ಬಾಣ ಬಿಟ್ಟಿದೆ.

ಬಿಜೆಪಿ ಟ್ವೀಟ್
ಕರ್ನಾಟಕದ ಪ್ರತಿಪಕ್ಷ ಬಿಜೆಪಿ ಟ್ವೀಟ್ ಮಾಡಿದ್ದು, 'ರಾಜ್ಯದ ಯುವ ಸಮುದಾಯಕ್ಕೆ ಕಾಂಗ್ರೆಸ್ ಸರ್ಕಾರ ನೀಡಿರುವ ಅಭೂತಪೂರ್ವ ಕೊಡುಗೆಗಳು' ಎಂಬ ಪಟ್ಟಿಯೊಂದನ್ನು ನೀಡಿದೆ.
* ನಿರುದ್ಯೋಗ ಸೃಷ್ಟಿಗೆ ಕೈಗಾರಿಕೆಗಳ ಎತ್ತಂಗಡಿ.
* ಹೊಸ ಹೂಡಿಕೆ ಉದ್ಯೋಗ ಸೃಷ್ಟಿಗಿಲ್ಲ ಅವಕಾಶ.
* ಕೃಷಿ ವಲಯದಲ್ಲಿ 7 ತಿಂಗಳಿಗೆ ಶೇ. 57% ಉದ್ಯೋಗ ಕಡಿತ.
* ಉದ್ಯೋಗ ಸಿಗದೆ ರೈತರು, ಯುವಕರು ಹೊರ ರಾಜ್ಯಕ್ಕೆ ಗುಳೆ.
* ವೇತನ ಸಿಗದೆ ನಿರುದ್ಯೋಗಿಯಾದ ಅತಿಥಿ ಉಪನ್ಯಾಸಕರು.
ಉದ್ಯೋಗ ಸೃಷ್ಟಿಗೆ ಬದಲಾಗಿ #ATMSarkara ನಿರುದ್ಯೋಗ ಸೃಷ್ಟಿ ಮಾಡುತ್ತಿದೆ. ದೇಶದ ಅತಿ ಹಿರಿಯ ಯುವಕ ರಾಹುಲ್ ಗಾಂಧಿ ಅವರು ಖಾಲಿ ಕೂರುವುದು ಬಿಟ್ಟು ಉದ್ಯೋಗಕ್ಕೆ ಸೇರಿಕೊಂಡರೆ ಕಾಂಗ್ರೆಸ್ಸಿನ ಬಹುದೊಡ್ಡ ಸಮಸ್ಯೆಯೇ ಬಗೆಹರಿಯುತ್ತದೆ ಎಂದು ಬಿಜೆಪಿ ಟ್ವೀಟ್ ಮಾಡಿದೆ. ಅಲ್ಲದೇ #CongressFailsKarnataka ಎಂಬ ಹ್ಯಾಷ್‌ಟ್ಯಾಗ್ ಬಳಕೆ ಮಾಡಿದೆ.
ಯುವನಿಧಿ ಯೋಜನೆ ಕುರಿತು; ಕಾಂಗ್ರೆಸ್ ಸರ್ಕಾರದ 5ನೇ ಗ್ಯಾರಂಟಿ ಯುವನಿಧಿ ನೋಂದಣಿಗೆ ಚಾಲನೆ ಸಿಕ್ಕಿದೆ. 2022-23ನೇ ಸಾಲಿನಲ್ಲಿ ಪದವಿ ಪಡೆದು ಆರು ತಿಂಗಳಾದರೂ ಉದ್ಯೋಗ ಸಿಗದ ನಿರುದ್ಯೋಗಿ ಯುವಜನರ ಮೇಲಿನ ಆರ್ಥಿಕ ಒತ್ತಡವನ್ನು ತಗ್ಗಿಸಿ, ಇಷ್ಟದ ಉದ್ಯೋಗ ಪಡೆಯಲು ನೆರವಾಗುವ ಉದ್ದೇಶದೊಂದಿಗೆ ರೂಪಿಸಿರುವ ಯೋಜನೆಯೇ ಯುವನಿಧಿ ಆಗಿದೆ.
ಈ ಯೋಜನೆಯಡಿ 2023ರಲ್ಲಿ ತೇರ್ಗಡೆಯಾದ ಎಲ್ಲಾ ಪದವೀಧರರು ಹಾಗೂ ಡಿಪ್ಲೋಮಾ ಉತ್ತೀರ್ಣರಾದವರು ಕನಿಷ್ಠ 6 ತಿಂಗಳವರೆಗಿನ ಉದ್ಯೋಗ ದೊರೆಯದೆ ಇದ್ದಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಕರ್ನಾಟಕದಲ್ಲಿ ವಾಸವಿರುವವರು, ಸ್ವಯಂ ಉದ್ಯೋಗ ಹೊಂದಿಲ್ಲದವರು ಮತ್ತು ಉನ್ನತ ವಿದ್ಯಾಭ್ಯಾಸ ಮುಂದುವರಿಸದೆ ಇರುವವರಿಗೆ ಈ ಯೋಜನೆ ಅನ್ವಯವಾಗಲಿದ್ದು, ಕರ್ನಾಟಕ ಒನ್, ಬೆಂಗಳೂರು ಒನ್, ಗ್ರಾಮ ಒನ್ ಹಾಗೂ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಇಂದಿನಿಂದ ಉಚಿತವಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಯುವನಿಧಿ ಯೋಜನೆಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, "ಪದವೀಧರ ಹಾಗೂ ಡಿಪ್ಲೊಮಾ ಪದವೀಧರ ನಿರುದ್ಯೋಗಿ ಯುವಜನರಿಗೆ ಮಾಸಿಕ ನಿರುದ್ಯೋಗ ಭತ್ಯೆಯ ನೆರವು ನೀಡುವ ನಮ್ಮ ಸರ್ಕಾರದ 5ನೇ ಗ್ಯಾರಂಟಿ ಯುವನಿಧಿ ಯೋಜನೆಯ ನೋಂದಣಿ ಪ್ರಕ್ರಿಯೆ ಇಂದಿನಿಂದ ಆರಂಭಗೊಳ್ಳಲಿದೆ. ಆರ್ಥಿಕ ಸಂಕಷ್ಟದ ನಡುವೆ ಕನಸಿನ ಉದ್ಯೋಗದ ಹುಡುಕಾಟದಲ್ಲಿರುವ ನಿರುದ್ಯೋಗಿ ಯುವಜನರು ಯೋಜನೆಗೆ ನೋಂದಾಯಿಸಿಕೊಳ್ಳುವ ಮೂಲಕ ಸದುಪಯೋಗ ಪಡೆಯಬೇಕು ಎಂದು ಮನವಿ ಮಾಡುತ್ತೇನೆ" ಎಂದು ಹೇಳಿದ್ದಾರೆ.












Click it and Unblock the Notifications